ಹಿರಿಯ ಹಾಸ್ಯ ಸಾಹಿತಿ ಕೋ.ಲ. ರಂಗನಾಥರಾವ್ ಕಿವಿ ಮಾತು
ದಾವಣಗೆರೆ, ಡಿ. 25- ನಗುವೇ ನಮ್ಮ ಆರೋಗ್ಯ. ಆರೋಗ್ಯವಂತರಾಗಿ ರಲು ಸದಾ ನಗುತ್ತಿರಬೇಕು ಎಂದು ನಾಡಿನ ಹಿರಿಯ ಹಾಸ್ಯ ಸಾಹಿತಿ ಕೋ.ಲ. ರಂಗನಾಥರಾವ್ ಹೇಳಿದರು.
ಸಿಹಿ ಪ್ರಕಾಶನ (ದಾವಣಗೆರೆ) ವತಿಯಿಂದ ವನಿತಾ ಸಮಾಜದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ 19ನೇ ವಾರ್ಷಿಕೋತ್ಸವ, ಕನ್ನಡ ರಾಜ್ಯೋತ್ಸವ ಹಾಗೂ ಸನ್ಮಾನ ಸಮಾ ರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಹಾಸ್ಯಕ್ಕೆ ನಲವತ್ತು ವರ್ಷಗಳ ಇತಿಹಾಸವಿದೆ. ನಗುವು ದಕ್ಕೆ ಕಾರಣಗಳನ್ನು ಹುಡುಕಬೇಕಿಲ್ಲ. ನಮ್ಮ ಸುತ್ತಮುತ್ತ ನಡೆಯುವ ಅನೇಕ ಘಟನೆಗಳೂ ಹಾಸ್ಯ ಹುಟ್ಟಿಸುತ್ತವೆ. ನಗು ಎಂಬುದು ಅಸಹಜ ಎಂದು ಹೇಳಿದರು.
ಮನುಷ್ಯ ನಗುತ್ತಿದ್ದರೆ ಮಾತ್ರ ಜೀವನಕ್ಕೆ ಅರ್ಥ. ನಗದೇ ದುಃಖಿಯಾಗಿದ್ದರೆ ಜೀವನ ವ್ಯರ್ಥ. ಸದಾ ನಗುತ್ತಿದ್ದರೆ ರಕ್ತದ ಒತ್ತಡ ಕಡಿಮೆಯಾಗುತ್ತದೆ. ಸಕ್ಕರೆ ಕಾಯಿಲೆ ನಿಯಂತ್ರಣ ದಲ್ಲಿರುತ್ತದೆ. ಜೀರ್ಣ ಶಕ್ತಿ ವೃದ್ಧಿಯಾಗುತ್ತದೆ. ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆ, ಔಷಧಿಗಳಿಗೆ ಹೆಚ್ಚು ಖರ್ಚು ಮಾಡುವ ಬದಲು ಖರ್ಚು ಇಲ್ಲದ ನಗುವಿನಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು.
ಮತ್ತೋರ್ವ ಹಿರಿಯ ಸಾಹಿತಿ ಎಸ್.ಎಸ್.ಪಡಶೆಟ್ಟಿ ಮಾತನಾಡಿ, ಮಕ್ಕಳಿ ಗೆ ಬಾಲ್ಯಾವಸ್ಥೆಯಲ್ಲಿಯೇ ಕನ್ನಡವನ್ನು ಕಲಿಸಬೇಕು. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ. ಇಲ್ಲಿ ಎಲ್ಲರೂ ಕನ್ನಡವನ್ನು ಹೆಚ್ಚಾಗಿ ಮಾತನಾಡಬೇಕು. ಕನ್ನಡದಲ್ಲಿ ಪದ ದೋಷದಿಂದ ಅಪಾರ್ಥಗಳು ಆಗುವುದರಿಂದ ಕನ್ನಡವನ್ನು ಸರಿಯಾಗಿ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.
15 ನಿಮಿಷದ ನಗು 2 ಗಂಟೆಗಳ ನಿದ್ರೆಗೆ ಸಮ. ಪ್ರತಿ ದಿನ 15 ಸೆಕೆಂಡ್ ನಗುತ್ತಿದ್ದರೆ 2 ದಿನದ ಆಯಸ್ಸು ಹೆಚ್ಚಾಗುತ್ತದೆ. ಹೀಗಾಗಿ ದಿನಕ್ಕೊಮ್ಮೆಯಾದರೂ ನಗಬೇಕು. ಪುಸ್ತಕ ಒದುವುದರಿಂದ ಹಾಗೂ ಮಾತುಗಾರಿಕೆಯಿಂದ ಹೇಗೆ ನೆನಪಿನ ಶಕ್ತಿ ಹೆಚ್ಚಾಗುತ್ತದೋ ಹಾಗೆಯೇ ನಗುವುದರಿಂದಲೂ ನೆನಪಿನ ಶಕ್ತಿ ಹೆಚ್ಚುತ್ತದೆ. ಹೃದಯ ಕಾಯಿಲೆಗೂ ನಗು ಸೂಕ್ತ ಮದ್ದು.
-ಕೋ.ಲ. ರಂಗನಾಥರಾವ್, ಹಾಸ್ಯ ಸಾಹಿತಿ, ಬೆಂಗಳೂರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಕವಯತ್ರಿ ಸತ್ಯಭಾಮ ಮಂಜುನಾಥ್, ಹಿರಿಯರನ್ನು ಗೌರವಿಸಿದರೆ ಮಾತ್ರ ಜೀವನದಲ್ಲಿ ಏಳಿಗೆ ಸಾಧ್ಯ. ಜೀವನದಲ್ಲಿ ಏಳುಬೀಳುಗಳನ್ನು ಕಂಡು, ಸುಖ-ದುಃಖಗಳನ್ನು ಅನುಭವಿಸಿದ ಹಿರಿಯರನ್ನು ಯುವಪೀಳಿಗೆ ಗೌರವದಿಂದ ಕಾಣಬೇಕು ಎಂದರು.
ಇದೇ ಸಂದರ್ಭದಲ್ಲಿ ಹಿರಿಯ ಸಾಹಿತಿ ಮಳಲಕೆರೆ ಗುರುಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ಅವರು, ಆತ್ಮಕ್ಕೆ ಸಂತೋಷವನ್ನುಂಟು ಮಾಡುವ ಕೆಲಸಗಳನ್ನು ಮಾಡಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ ಎಂದು ಹೇಳಿದರು.
ನಾವೆಲ್ಲಾ ವಿಧಿಯ ಹಿಡಿತದಲ್ಲಿದ್ದೇವೆ. ಧೀರ, ಬಲಶಾಲಿಯಾದ ಭೀಮನೂ ವಿಧಿಯ ಪ್ರಭಾವಕ್ಕೆ ಒಳಗಾಗಿ ಬಾಣಸಿಗನಾಗಿದ್ದ. ಮನುಷ್ಯನ ಆಯಸ್ಸು ಅತ್ಯಲ್ಪವಾದದ್ದು. ಇರುವಷ್ಟು ದಿನ ಎಲ್ಲರೊಂದಿಗೆ ಬೆರೆತು, ನಗುತ್ತಾ, ಉತ್ತಮ ನಡತೆಯಿಂದ ಬದುಕಬೇಕು. ಆಗ ಪರಮಾತ್ಮ ಮೆಚ್ಚುತ್ತಾನೆ ಎಂದು ಹಿತ ನುಡಿದರು.
ಹಿರಿಯ ಸಾಹಿತಿ ಪ್ರೊ.ಬಿ.ಬಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಉಮಾದೇವಿ ಪ್ರಾರ್ಥಿಸಿದರು. ಸಂಧ್ಯಾಸುರೇಶ್ ಸ್ವಾಗತಿಸಿದರು. ರಾಜೇಂದ್ರ ಪ್ರಸಾದ್ ನಿರೂಪಿಸಿದರು. ಸಿಹಿ ಪ್ರಕಾಶನ ಸಂಸ್ಥಾಪಕ ನೀಲಗುಂದ ರಾಜಂದ್ರ ಪ್ರಸಾದ್ ನಿರೂಪಿಸಿದರು.