ತಮಿಳುನಾಡಿನ ದ್ರಾವಿಡೀಯರ ವರಸೆ
ಡಿ.ಎಂ.ಕೆ.ಯ ಮಹಾನ್ ನಾಯಕರು ಹಿಂದುತ್ವವಾದಿಗಳು ಹಾಗೂ ಹಿಂದಿ ಭಾಷಿಗರ ಕುರಿತು ನೀಡುತ್ತಿರುವ ಹೇಳಿಕೆಗಳು ಇತ್ತೀಚೆಗೆ ವೈರಲ್ ಆಗುತ್ತಿವೆ. ಅದರ ಸಾಲಿಗೆ ಇತ್ತೀಚಿನ ಸೇರ್ಪಡೆ ಎಂದರೆ ಡಿ.ಎಂ.ಕೆ. ಸಂಸದ ದಯಾನಿಧಿ ಮಾರನ್.
ಹಿಂದಿ ಹಾಗೂ ಇಂಗ್ಲಿಷ್ ಭಾಷಾ ಸಾಮರ್ಥ್ಯವನ್ನು ಹೋಲಿಕೆ ಮಾಡಿದ್ದ ಅವರು, ಇಂಗ್ಲಿಷ್ ಕಲಿತವರು ಐ.ಟಿ. ಉದ್ಯೋಗಕ್ಕೆ ಹೋಗುತ್ತಾರೆ. ಹಿಂದಿ ಕಲಿತವರು ತಮಿಳುನಾಡಿನಲ್ಲಿ ಶೌಚಾಲಯ ಸ್ವಚ್ಛಗೊಳಿಸುತ್ತಾರೆ ಎಂದಿದ್ದರು. ಐದು ವರ್ಷಗಳ ಹಿಂದಿನದ್ದು ಎನ್ನಲಾದ ಈ ಹೇಳಿಕೆ ಈಗ ವೈರಲ್ ಆಗಿ ರಾಜಕೀಯ ಬಿಸಿ ಏರಿಸುತ್ತಿದೆ. ಇಂಗ್ಲಿಷ್ – ಹಿಂದಿ ಓಕೆ, ತಮಿಳಷ್ಟೇ ಕಲಿತವರು ಏನಾಗಿದ್ದಾರೆ ಎಂಬುದರ ಬಗ್ಗೆ ಮಾರನ್ ಅಭಿಪ್ರಾಯ ಏನೆಂಬುದು ಸ್ಪಷ್ಟವಾಗಿಲ್ಲ.
ಹಿಂದಿ ಹೇರಿಕೆ ವಿರೋಧಿಸುವುದು ತಮಿಳುನಾಡಿನ ರಾಜಕಾರಣಿಗಳಿಗೆ ಸದಾ ಫಲ ನೀಡುವ ಕಲ್ಪವೃಕ್ಷದಂತೆ. ಹಿಂದಿ ವಿರೋಧಿಸಿದಷ್ಟು ತಮಿಳುನಾಡಿನಲ್ಲಿ ವೋಟುಗಳ ಬೆಳೆ ಹೆಚ್ಚು. ಅದರ ಮುಂದುವರೆದ ಭಾಗವೇನೋ ಎಂಬಂತೆ ಹಿಂದಿ ಭಾಷಿಗರ ರಾಜ್ಯಗಳು ಹಾಗೂ ಅಲ್ಲಿನ ಜನರನ್ನೇ ಈಗ ಟೀಕಿಸಲಾಗುತ್ತಿದೆ. ಕೆಲವೇ ದಿನಗಳ ಹಿಂದಷ್ಟೇ, ಡಿ.ಎಂ.ಕೆ. ಸಂಸದ ಸೆಂತಿಲ್ ಕುಮಾರ್ ಅವರು ಹಿಂದಿ ನಾಡಿನ ರಾಜ್ಯಗಳನ್ನು ಗೋಮೂತ್ರ ರಾಜ್ಯಗಳು ಎಂದಿದ್ದರು.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಸುಪುತ್ರ ಉದಯನಿಧಿ ಅವರು ಸನಾತನ ಧರ್ಮವನ್ನು ರೋಗಗಳಿಗೆ ಹೋಲಿಸಿದ್ದರು. ಈ ಹೋಲಿಕೆಗೆ `ಪ್ರಗತಿಪರ ಚಿಂತನೆ’ಯ ಹಲವರು ಉತ್ಸಾಹದಿಂದ ಬೆಂಬಲಿಸಿದ್ದೂ ಉಂಟು. ಆದರೆ, ಹಿಂದಿ ಭಾಷಿಗರ ಇಡೀ ರಾಜ್ಯಗಳನ್ನು ಸಾರಾಸಗಟಾಗಿ ನಿಂದಿಸುವ ಹೇಳಿಕೆಗಳಿಗೆ ಪ್ರಗತಿಪರರಿಂದ ಅಂತಹ ಉತ್ಸಾಹದ ಸ್ಪಂದನೆಯೇನೂ ಸಿಕ್ಕಿಲ್ಲ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಉತ್ತರದ ರಾಜ್ಯಗಳಲ್ಲಿ ಗೆದ್ದು, ದಕ್ಷಿಣದ ತೆಲಂಗಾಣದಲ್ಲಿ ಸೋತ ನಂತರವಂತೂ ಉತ್ತರ ಭಾರತದವರನ್ನು ಟೀಕಿಸುವ ಕೆಲವರಲ್ಲಿ ಉತ್ಸಾಹ ಹೆಚ್ಚಾಗುತ್ತಿದೆ. ಇಂಥವರ ಪ್ರಕಾರ ದಕ್ಷಿಣದ ರಾಜ್ಯಗಳು ಪ್ರಗತಿಪರವಾಗಿದ್ದರೆ, ಉತ್ತರದ ರಾಜ್ಯಗಳು ಪ್ರಗತಿಹೀನವಾಗಿವೆ.
ಆದರೆ, ವಾಸ್ತವ ಪರಿಸ್ಥಿತಿ ಹೇಗಿದೆ? ಇತ್ತೀಚಿನ ವರದಿಗಳ ಪ್ರಕಾರ ತಮಿಳುನಾಡಿನ ತಲಾ ವರಮಾನ 3,08,020 ರೂಪಾಯಿ ಆಗಿದೆ. ಇಡೀ ದೇಶದಲ್ಲಿ ತಲಾ ವರಮಾನದಲ್ಲಿ ತಮಿಳುನಾಡು ಹತ್ತನೇ ಸ್ಥಾನದಲ್ಲಿದೆ!
ಕೇಂದ್ರ ಶಿಕ್ಷಣ ಸಚಿವಾಲಯದ ಪ್ರಕಾರ ದೇಶದಲ್ಲಿ ಶೈಕ್ಷಣಿಕವಾಗಿ ಹಿಂದುಳಿದ 374 ಜಿಲ್ಲೆಗಳಿವೆ. ಈ ವರದಿಯ ಪ್ರಕಾರ, ತಮಿಳುನಾಡಿನ 38 ಜಿಲ್ಲೆಗಳ ಪೈಕಿ 27 ಶೈಕ್ಷಣಿಕವಾಗಿ ಹಿಂದುಳಿದಿವೆ. ಇಷ್ಟಾದರೂ, ತಮಿಳುನಾಡಿನ ದ್ರಾವಿಡೀಯರು ತಮ್ಮ ರಾಜ್ಯ ಸುಖದ ಸುಪ್ಪತ್ತಿನಲ್ಲಿ ತೇಲುತ್ತಿದೆಯೇನೋ ಎಂಬಂತೆ ವರ್ತಿಸುತ್ತಿದ್ದಾರೆ.
ಇನ್ನು ಕರ್ನಾಟಕ ಐ.ಟಿ. ಸಾಧನೆಗಾಗಿ ಹೆಗ್ಗಳಿಕೆ ಪಡೆದಿದೆ. ಈ ರಾಜ್ಯದ ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಅತಿ ಹಿಂದುಳಿದ 371ಜೆ ಹಣೆಪಟ್ಟಿ ಪಡೆದಿವೆ. ಉತ್ತರ ಕರ್ನಾಟಕದ ಜಿಲ್ಲೆಗಳ ಹಿಂದುಳಿದಿರುವ ವ್ಯಥೆಯ ಬಗ್ಗೆ ವಿಧಾನಸಭೆಯಲ್ಲಿ ಇತ್ತೀಚೆಗಷ್ಟೇ ವಿವರವಾದ ಚರ್ಚೆಯೂ ನಡೆದಿದೆ.
ಪ್ರಗತಿಪರ ಎಂದು ಹೇಳಲಾಗುವ ಕೇರಳ ಉದ್ಯಮಶೀಲತೆಯಲ್ಲಿ ಹಿಂದೆ ಬಿದ್ದಿದೆ. ಅಲ್ಲಿನವರು ಉದ್ಯೋಗ ಅರಸಿ ಬೇರೆ ಬೇರೆ ರಾಜ್ಯ ಹಾಗೂ ದೇಶಗಳಿಗೆ ತೆರಳುವುದು ಹಿಂದಿನಿಂದಲೂ ನಡೆಯುತ್ತಾ ಬಂದಿದೆ.
ಹೀಗೆ ಪ್ರಗತಿಪರ ಎನ್ನಲಾಗುವ ದಕ್ಷಿಣದ ರಾಜ್ಯಗಳು ತಮ್ಮದೇ ಆದ ವ್ಯಥೆಗಳನ್ನು ಹೊಂದಿವೆ. ಇಷ್ಟಾದರೂ, ಹಿಂದಿ ನಾಡಿನವರ ಟೀಕೆಗಾಗಿ ಅನುಚಿತ ಭಾಷೆ ಬಳಸಲು ಸೋ ಕಾಲ್ಡ್ ದ್ರಾವಿಡವಾದಿಗಳು ಹಿಂಜರಿಯುವುದಿಲ್ಲ.
ಯಾವುದೇ ಪ್ರಾಂತ್ಯ ಪ್ರಗತಿ ಕಾಣಲು ಹಲವಾರು ಐತಿಹಾಸಿಕ ಕಾರಣಗಳಿರುತ್ತವೆ. ಉದಾಹರಣೆಗೆ ಕರ್ನಾಟಕದ ದಕ್ಷಿಣ ಭಾಗ ಪ್ರಗತಿ ಕಾಣಲು ಮೈಸೂರು ರಾಜರು ಪ್ರಮುಖ ಕೊಡುಗೆ ನೀಡಿದ್ದಾರೆ. ರಾಜಧಾನಿ ಬೆಂಗಳೂರು ಇದೇ ಭಾಗದಲ್ಲಿರುವುದೂ ಮತ್ತೊಂದು ಕಾರಣ. ಉತ್ತರ ಕರ್ನಾಟಕ ಇಂತಹ ಅವಕಾಶದಿಂದ ವಂಚಿತವಾಗಿದೆ. ತಮಿಳುನಾಡಿನ ವೇಗದ ಬೆಳವಣಿಗೆಗೆ ಬ್ರಿಟಿಷರ ಕೃಪಾಕಟಾಕ್ಷ ಒಂದು ಕಾರಣ. ಪಂಜಾಬ್ ಬೆಳವಣಿಗೆಗೆ ಹಸಿರು ಕ್ರಾಂತಿ ನೆರವಾಗಿತ್ತು.
ಹಾಗೆಯೇ ಹಿಂದುಳಿದಿರುವಿಕೆಗೂ ಹಲವಾರು ಐತಿಹಾಸಿಕ ಕಾರಣಗಳಿವೆ. ಇದಕ್ಕಾಗಿ ಅಲ್ಲಿನ ಈಗಿನ ಜನರನ್ನು ಅವಹೇಳನ ಮಾಡುವುದು ಅದ್ಯಾವ ಸೀಮೆಯ ದ್ರಾವಿಡ ಪ್ರಗತಿಪರ ಚಿಂತನೆಯೋ ಗೊತ್ತಿಲ್ಲ. ಮತಬ್ಯಾಂಕಿಗಾಗಿ ತನ್ನ ಬಣ್ಣಿಸಿ ಇತರರ ಹಳಿಯುವ ಧೋರಣೆಯೇ ದ್ರಾವಿಡವಾದವೇ? ಗೊತ್ತಿಲ್ಲ. ಸದ್ಯಕ್ಕೆ ಇಂತಹ ದ್ರಾವಿಡೀಯರನ್ನು ಐ.ಎನ್.ಡಿ.ಐ.ಎ. ಸೆರಗಲ್ಲಿ ಕಟ್ಟಿಕೊಂಡಿದ್ದಕ್ಕೆ ಹಿಂದಿ ನಾಡಿನಲ್ಲಿ ಪ್ರಮುಖ ಬೇರು ಹೊಂದಿರುವ ಕಾಂಗ್ರೆಸ್ ಯಾವ ರೀತಿಯ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಮುಂಬರುವ ದಿನಗಳು ಹೇಳಲಿವೆ.
– ಎಸ್.ಎ. ಶ್ರೀನಿವಾಸ್