ಸಂಸತ್ತಿನಲ್ಲಿ ಅಣುಕು ಮಾಡಿದ ಕಾಂಗ್ರೆಸ್ ನಡೆ ಖಂಡಿಸಿ ನಗರದಲ್ಲಿ ಬಿಜೆಪಿ ಪ್ರತಿಭಟನೆ

ಸಂಸತ್ತಿನಲ್ಲಿ ಅಣುಕು ಮಾಡಿದ ಕಾಂಗ್ರೆಸ್ ನಡೆ ಖಂಡಿಸಿ ನಗರದಲ್ಲಿ ಬಿಜೆಪಿ ಪ್ರತಿಭಟನೆ

ದಾವಣಗೆರೆ, ಡಿ. 21- ಸಂಸತ್ತಿನಲ್ಲಿ ಉಪ ರಾಷ್ಟ್ರಪತಿಯವರ ನಡವಳಿಕೆಗಳನ್ನು ಅಣುಕು ಮಾಡಿದ ಕಾಂಗ್ರೆಸ್ ಸಂಸದರ ನಡೆಯನ್ನು ಖಂಡಿಸಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಇಂದು ಪ್ರತಿಭಟನೆ ನಡೆಸಲಾಯಿತು.

ನಗರದ ಬಿಜೆಪಿ ಕಚೇರಿಯಿಂದ ಜಯದೇವ ವೃತ್ತದವರೆಗೆ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ವಿರೋಧ ಪಕ್ಷಗಳ ವಿರುದ್ಧ ಧಿಕ್ಕಾರ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಮಾತನಾಡಿ, ಸಂಸತ್ ಉಪ ಸಭಾಪತಿಗಳೂ, ಉಪರಾಷ್ಟ್ರಪತಿಗಳು ಆದ ಜಗದೀಪ್ ಧನಕರ್ ಅವರ ಹುದ್ದೆ ಸಾಂವಿಧಾನಿಕ ಹುದ್ದೆಯಾಗಿದ್ದು, ಸಂಸತ್ ಕಲಾಪ ನಡೆಯುವ ವೇಳೆ ಅವರು ಮಾತನಾಡಿದ ಮಾತುಗಳನ್ನೇ ಅವಮಾನಿಸುವ ರೀತಿಯಲ್ಲಿ ವಿಪಕ್ಷಗಳ ಸಂಸದರು ಅಣುಕು ಪ್ರದರ್ಶನ ಮಾಡಿದ್ದಾರೆ. ಇದು ಕೇವಲ ಉಪ ಸಭಾಪತಿಗಳಿಗೆ ಮಾಡಿದ ಅವಮಾನವಲ್ಲ. ನಮ್ಮ ದೇಶದ ಪವಿತ್ರ ಗ್ರಂಥವಾದ ಸಂವಿಧಾನ ಹಾಗೂ ದೇಶದ ಜನತೆಗೆ ಮಾಡಿದ ಅವಮಾನ. ಕಾರಣ ಕಾಂಗ್ರೆಸ್ ರಾಷ್ಟ್ರೀಯ ಮುಖಂಡ ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷಗಳ ಎಲ್ಲಾ ಸಂಸದರು ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಮಾಜಿ ಸಚೇತಕ ಡಾ. ಎ.ಹೆಚ್. ಶಿವಯೋಗಿಸ್ವಾಮಿ, ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಬಿ.ಎಸ್. ಜಗದೀಶ್, ಡಿ.ಎಸ್. ಶಿವಶಂಕರ್‌, ಎಸ್. ಮಂಜಾನಾಯ್ಕ, ಪ್ರಕಾಶ್ ಪಾಟೀಲ್ ಮುಂತಾದವರಿದ್ದರು.

error: Content is protected !!