ಗಮನ ಸೆಳೆದ `ಪ್ರೇರಣಾ’ ಮಾರಾಟ ಮೇಳ

ಗಮನ ಸೆಳೆದ `ಪ್ರೇರಣಾ’ ಮಾರಾಟ ಮೇಳ

ದಾವಣಗೆರೆ, ಡಿ. 21- ಬಾಯಲ್ಲಿ ನಿರೂರಿಸುವ ಹಪ್ಪಳ, ಸಂಡಿಗೆ ಉಪ್ಪಿನಕಾಯಿ, ನೋಡಿದಾಕ್ಷಣ ತಿನ್ನಬೇಕೆನಿಸುವ ಪಾವ್‌ ಭಾಜಿ, ವಡಾ ಪಾವ್, ಸಾಬುದಾನ ವಡಾ, ರುಚಿಯ ಜೊತೆ ಆರೋಗ್ಯವನ್ನೂ ಚೆನ್ನಾಗಿಡಬಹುದಾದ ಅಂಟಿನ ಉಂಡ, ರಾಗಿ ಉಂಡೆ, ರಾಗಿ ಬಿಸ್ಕೇಟ್…!

ವನಿತಾ ಸಮಾಜದ ಅಂಗ ಸಂಸ್ಥೆಯಾದ `ಪ್ರೇರಣಾ’ ಜಿಲ್ಲಾ ಮಹಿಳಾ ಉದ್ಯಮಿಗಳ ಸಂಸ್ಥೆ ವತಿಯಿಂದ ವನಿತಾ ಸಮಾಜದ ಆವರಣದಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ `ಮಹಿಳೆಯರು ಉತ್ಪಾದಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ’ದಲ್ಲಿ ಕಂಡು ಬಂದಿದ್ದ ಖಾದ್ಯಗಳಿವು.

ಸಾಂಬಾರ ಪುಡಿ, ರಸಂ ಪೌಡರ್, ಖಾರದ ಪುಡಿ, ಬಗೆ ಬಗೆಯ ಚಟ್ನಿ ಪುಡಿ ಸೇರಿದಂತೆ ಅಡುಗೆಗೆ ಬೇಕಾದ ಹಲವಾರು ಪರಾರ್ಥಗಳಿ ದ್ದವು. ಕೆಲವನ್ನು ಸ್ಥಳೀಯರೇ ತಯಾರಿಸಿ ತಂದಿದ್ದರೆ, ಕೆಲವರು ತಮ್ಮ ಸಂಸ್ಥೆ ಪರವಾಗಿ ತಂದಿದ್ದರು.  ಇವುಗಳ ನಡುವೆ ಮೊಟ್ಟೆ ಹಾಕದೆ ತಯಾರಿಸಿದ್ದ ಹಲವು ಫ್ಲೇವರ್‌ಗಳ ಕೇಕ್ ಗಮನ ಸೆಳೆಯಿತು.  ಮಾರಾಟ ಮೇಳವು ಬೆಳಿಗ್ಗೆಯಿಂದ ರಾತ್ರಿ ವರೆಗೆ ನಡೆಯಿತು.

ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆ, ಮಹಿಳೆಯರು ಉತ್ಪಾದಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ, ಉತ್ತಮ ಮಹಿಳಾ ಉದ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಂಜೆ ಎಸ್.ಎಸ್.ಕೇರ್ ಟ್ರಸ್ಟ್‌ ಮುಖ್ಯಸ್ಥೆ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿ, ಮಹಿಳೆಯರೇ ಉತ್ಪಾದಿಸಿದ ವಸ್ತುಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸಿರಿಧಾನ್ಯ ಬೆಳೆದು ಯಶಸ್ವೀ ಉದ್ಯಮಿ ಗಳಾಗಿರುವ ಹರಿಹರದ ತಾಲ್ಲೂಕು ನಿಟ್ಟೂರಿನ  ಸರೋಜ ಪಾಟೀಲ್ ಅವರಿಗೆ ಉತ್ತಮ ಮಹಿಳಾ ಉದ್ಯಮಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ರಾಜ್ಯೋತ್ಸವ ಪುರಸ್ಕೃತ ಸಿ. ನಸೀರ್ ಅಹ್ಮದ್, ಲಯನ್ಸ್ ಕ್ಲಬ್ ಮಾಜಿ ಜಿಲ್ಲಾ ಗೌವರ್ನರ್  ಡಾ.ಬಿ.ಎಸ್. ನಾಗಪ್ರಕಾಶ್, ವನಿತಾ ಸಮಾಜ ಆಡಳಿತ ಮಂಡಳಿ ನಿರ್ದೇಶಕರಾದ ನಳಿನಿ ಅಚ್ಯುತ್ ಆಗಮಿಸಿದ್ದರು ಪ್ರೇರಣಾ ಸಂಸ್ಥೆಯ ಅಧ್ಯಕ್ಷೆ ಉಮಾ ನಾಗರಾಜ್, ಕಾರ್ಯದರ್ಶಿ ಸುಚಿತ್ರ ಮಾಗಾನಹಳ್ಳಿ ಉಪಸ್ಥಿತರಿದ್ದರು.

ಲತಿಕಾ ದಿನೇಶ್ ಶೆಟ್ಟಿ, ವಿಶ್ವೇಶ್ವರಯ್ಯನವರ ಕುರಿತು ಮಾತನಾಡಿದರು.  ಆಶಾ ಮಹಾಭಲೇಶ್ವರ ಗೌಡ್ರು ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿಕೊಟ್ಟರು. ಭಾವನಾ ಪತಂಗ ಪ್ರಾರ್ಥಿಸಿದರು. ನಾಗರತ್ನ ಜಗದೀಶ್ ಸ್ವಾಗತಿಸಿದರು. ಸುಚಿತ್ರ ಮಾಗಾನಹಳ್ಳಿ ವಂದಿಸಿದರು.  

error: Content is protected !!