ಶಿಕ್ಷಣ, ಸಂಸ್ಕಾರದಿಂದ ಮಾತ್ರ ತಳಸಮುದಾಯದ ಏಳಿಗೆ ಸಾಧ್ಯ

ಶಿಕ್ಷಣ, ಸಂಸ್ಕಾರದಿಂದ ಮಾತ್ರ ತಳಸಮುದಾಯದ ಏಳಿಗೆ ಸಾಧ್ಯ

ಹರಪನಹಳ್ಳಿ, ಡಿ. 20 –  ತಳಸಮುದಾಯಗಳ ಏಳಿಗೆಯಾಗಬೇಕಾದರೆ ಶಿಕ್ಷಣ ಮತ್ತು ಉತ್ತಮ ಸಂಸ್ಕಾರದಿಂದ ಮಾತ್ರ ಸಾಧ್ಯ ಎಂದು ಚಿತ್ರದುರ್ಗದ  ಮಾದಾರ ಚನ್ನಯ್ಯ ಗುರುಪೀಠದ  ಶ್ರೀ  ಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ  ಹೇಳಿದರು.

ಪಟ್ಟಣದ ಹೊಸಪೇಟೆ ರಸ್ತೆ ಬಳಿ ಇರುವ ಸಮತಾ ರೆಸಾರ್ಟ್‌ನಲ್ಲಿ ಸಾಮೂಹಿಕ ಸಂಘಟನೆಗಳ ಹೋರಾಟ ಸಮಿತಿ  ವತಿಯಿಂದ ಜನಪರ ಚಳುವಳಿ ನೇತಾರ ದಿ. ಪುಣಬಗಟ್ಟ  ಎಸ್. ನಿಂಗಪ್ಪ ಅವರಿಗೆ ನುಡಿ ನಮನ ಕಾರ್ಯಕ್ರಮ ದ ದಿವ್ಯ ಸಾನ್ನಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ನಂಬಿದ ಸಿದ್ಧಾಂತಕ್ಕೆ ಅವರು ಗುಲಾಮರಾದವರಲ್ಲ. ಸ್ವವಿಮರ್ಶೆಯಿಲ್ಲದೆ ಯಾವುದನ್ನೂ ಅವರು ಸಮರ್ಥಿಸಲು ಹೋದವರಲ್ಲ. ನಿರಂತರ ಬದಲಾವಣೆಗಳಿಗೆ ಸೂಕ್ಷ್ಮವಾಗಿ ಸ್ಪಂದಿಸುತ್ತಲೇ ತನ್ನ ಲೋಕ ಗ್ರಹಿಕೆಯಲ್ಲಿ ತಿದ್ದುಪಡಿ ಮಾಡಿಕೊಳ್ಳುತ್ತಲಿದ್ದರೂ ಜೀವದಯೆಯನ್ನು ಬಿಟ್ಟವರಲ್ಲ. ತಿರುಚಬಹುದಾದ ಸಾಕ್ಷಿ ಮತ್ತು ಹಠಮಾರಿ ತರ್ಕಗಳನ್ನು ಮೀರಿದ ಮಾನವೀಯತೆ ನಿಂಗಪ್ಪ ಅವರ ಜೀವನ ದರ್ಶನವಾಗಿತ್ತು. ಪ್ರಬುದ್ಧತೆಯ ನಡುವೆ ಮುಗ್ಧತೆಯನ್ನು ಕಾಪಿಟ್ಟುಕೊಂಡಿದ್ದ ಅವರ ಪಾರದರ್ಶಕ ಒಳಗಣ್ಣಿಗೆ ಯಾರಿಗೂ ಕಾಣದ ಸತ್ಯ ಗೋಚರಿಸುತ್ತಿತ್ತು.

ನಿವೃತ್ತ ಪ್ರಾಂಶುಪಾಲ ಟಿ. ರಾಜಪ್ಪ ಮಾತನಾಡಿ, ಹೋರಾಟದ ಹಾದಿಯಲ್ಲಿ ಹೇಗಿರಬೇಕು? ಸಮಾಜದ ಕುರಿತು ಹೇಗೆ ಯೋಚಿಸಬೇಕು? ಮತ್ತು ಜನರ ನಡುವೆ ನಾವು ಹೇಗೆ ಇರಬೇಕು ಎಂಬುದಕ್ಕೆ  ನಿಂಗಪ್ಪನವರೇ ಸಾಕ್ಷಿ ಎಂದರು.

ಪ್ರಗತಿ ಪರ ಚಿಂತಕ ಕೋಡಿಹಳ್ಳಿ ಭೀಮಪ್ಪ   ಸಮಾರಂಭದ  ಅಧ್ಯಕ್ಷತೆ ವಹಿಸಿ ಮಾತನಾಡಿ, ಬುದ್ದ, ಬಸವ, ಗಾಂಧಿ, ಅಂಬೇಡ್ಕರ್, ರವರ ವಿಚಾರಗಳನ್ನು ಮೈಗೂಡಿಸಿಕೊಂಡಿದ್ದರೂ ಜಾತಿಗಿಂತ ನೀತಿ ಮುಖ್ಯ ಎನ್ನುವ ಆಲೋಚನೆಗಳು ನಿಂಗಪ್ಪನವರಲ್ಲಿ ಇದ್ದವು ಎಂದರು.

ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ವೈ.ಡಿ. ಅಣ್ಣಪ್ಪ, ಮುಖಂಡ ಕೆ.ಬಿ.ಕೊಟ್ರೇಶ್ ಹೋರಾಟಗಾರ ಆವರಗೆರೆಯ ರುದ್ರಮುನಿ, ಗುಡಿಹಳ್ಳಿ ಹಾಲೇಶ್ ಮಾತನಾಡಿದರು.

ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ಮಾಜಿ ಅಧ್ಯಕ್ಷ  ಡಿ. ರಾಮನಮಲಿ, ಸಾಹಿತಿ ಇಸ್ಮಾಯಿಲ್ ಎಲಿಗಾರ್  ಎನ್.ಜಿ.ಮನೋಹರ ಚಿಂತಕ ಮೋತಿನಾಯ್ಕ ಅರಸಿಕೇರೆ ಉಪನ್ಯಾಸಕ ದುರುಗೇಶ್ ಮುಖಂಡರಾದ ಕಂಭತ್ತಹಳ್ಳಿ  ಎ.ಕೆ. ಜಯಪ್ಪ, ರಾಮಚಂದ್ರಪ್ಪ, ಅಲಗಿಲವಾಡದ ವಿಶ್ವನಾಥ, ಹೊಸಹಳ್ಳಿ ಮಲ್ಲೇಶ, ಎನ್.ಜಿ. ಬಸವರಾಜ, ಗುಡಿಹಳ್ಳಿ ಹಾಲೇಶ್‌.ಹುಲಿಕಟ್ಟಿ ಚಂದ್ರಪ್ಪ, ಕಬ್ಬಳ್ಳಿ ಪರಸಪ್ಪ, ಗೌರಿಹಳ್ಳಿ ಮಂಜುನಾಥ, ಕೆ.ಡಿ.ಮರಿಯಪ್ಪ, ಕೆ.ಡಿ. ಅಂಜಿನಪ್ಪ, ಬಿ. ವಾಗೀಶ,  ನ್ಯಾಯವಾದಿ ರಾಜಪ್ಪ, ಹನುಮಂತಪ್ಪ, ಸೇರಿದಂತೆ ಇತರರು ಇದ್ದರು.

error: Content is protected !!