ದಾವಣಗೆರೆ, ಡಿ. 20 – ನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಶ್ರಮಜೀವಿ ಕಾಂ. ಪಂಪಾಪತಿ ನಿಲ್ದಾಣವೆಂದು ನಾಮಕರಣ ಮಾಡುವ ಮೂಲಕ ಅವರ ಕಂಚಿನ ಪ್ರತಿಮೆ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿ ಎಐಟಿಯುಸಿ ಜಿಲ್ಲಾ ಸಮಿತಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರಿಗೆ ಮನವಿ ನೀಡಿ ಆಗ್ರಹಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಶಾಸಕ ಶಾಮನೂರು ಶಿವಶಂಕರಪ್ಪ ಅವರ ನಿವಾಸಕ್ಕೆ ನಿನ್ನೆ ತೆರಳಿದ್ದ ಎಐಟಿಯುಸಿ ನಿಯೋಗವು, ಪಂಪಾಪತಿ ಅವರು ತಮ್ಮ ಜೀವಿತಾವಧಿಯಲ್ಲಿ ಶ್ರಮಿಕರ ಅಳಲನ್ನು ನಿವಾರಣೆ ಮಾಡುತ್ತಾ ತಾವು ವಾಸ ಮಾಡಲಿಕ್ಕೆ ಸರಿಯಾದ ಸೂರನ್ನೂ ನಿರ್ಮಿಸಿಕೊಳ್ಳದೇ ಜೀವನ ನಡೆಸಿದ ಧೀಮಂತ ನಾಯಕ. ಅಲ್ಲದೇ ಕೆಎಸ್ಸಾರ್ಟಿಸಿ ಬಸ್ನಿಲ್ದಾಣಕ್ಕೆ ಕಾರಣರು. ಈ ನಿಟ್ಟಿನಲ್ಲಿ ನಗರದಲ್ಲಿ ನಿರ್ಮಾಣ ಆಗುತ್ತಿರುವ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಅವರ ಹೆಸರನ್ನಿಟ್ಟು, ಕಂಚಿನ ಪ್ರತಿಮೆ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು.
ಇದಲ್ಲದೇ, ನಗರದಲ್ಲಿರುವ ಆಶ್ರಯ ನಿರಾಶ್ರಿತರನ್ನು ಗುರುತಿಸಿ ಸರ್ಕಾರ ಮತ್ತು ಜಿಲ್ಲಾಡಳಿತ ಅವರಿಗೆ ಹಕ್ಕುಪತ್ರ ನೀಡಿ, ಮೂಲಭೂತ ಸೌಲಭ್ಯಗಳೊಂದಿಗೆ ಮನೆಗಳನ್ನು ನಿರ್ಮಾಣ ಮಾಡಿಕೊಡಬೇಕು. ನಗರವು ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದ್ದು, ಜನಸಂಖ್ಯೆಗೆ ಅನುಗುಣವಾಗಿ ನಿರಾಶ್ರಿತರಿಗೆ ಮನೆಗಳ ನಿರ್ಮಾಣ ಮಾಡಬೇಕು ಎಂದರು.
ಆವರಗೆರೆಯ ಗೋಮಾಳ ಸರ್ವೆ ನಂ.213 ಚಾಲ್ತಿ ಖಾತೆ ಸರ್ವೇ ನಂ.393ರಲ್ಲಿ ಸುಮಾರು 100 ಎಕರೆಗೂ ಅಧಿಕ ಜಮೀನು ಒತ್ತುವರಿಯಾಗಿದೆ. ತೋಳಹುಣಸೆ ಸರ್ವೇ ನಂ.62 ರಿಂದ 75ರವರೆಗೂ 133 ಎಕರೆ ಜಮೀನು ಇದ್ದು ಜನರು ವಾಸ ಮಾಡಲು ಯೋಗ್ಯ ಪ್ರದೇಶವಾಗಿದೆ.
ಅಲ್ಲದೇ, ದಾವಣಗೆರೆ ನಗರದಿಂದ 10-15 ಕಿ.ಮೀ.ವ್ಯಾಪ್ತಿಯಲ್ಲಿ 150 ರಿಂದ 200 ಎಕರೆ ಜಮೀನನ್ನು ರೈತರಿಂದ ನೇರವಾಗಿ ಖರೀದಿ ಮಾಡಬೇಕೆಂದು ಒತ್ತಾಯಿಸಿದರು.
ದಾವಣಗೆರೆ ತಾಲ್ಲೂಕು ಹಾಲುವರ್ತಿ ಮತ್ತು ಕೊಡಗನೂರು ಗ್ರಾಮದ ಸುತ್ತಮುತ್ತಲಿನಲ್ಲಿರುವ ಸೇಂದಿ ವನಗಳು ಹಾಳು ಬಿದ್ದಿದ್ದು ಸಂಬಂಧಿಸಿದಂತೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಆಶ್ರಯ ನಿರಾಶ್ರಿತರನ್ನು ಗುರುತಿಸಿ ಮೂಲ ಸೌಕರ್ಯಗಳೊಂದಿಗೆ ಮನೆ ನಿರ್ಮಾಣ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಈ ವೇಳೆ ಹೆಚ್.ಜಿ. ಉಮೇಶ್, ಆನಂದರಾಜ್, ರಾಘವೇಂದ್ರ ನಾಯರಿ, ವಿ. ಲಕ್ಷ್ಮಣ್, ಮುರುಗೇಶ್, ಆವರಗೆರೆ ಚಂದ್ರು, ವಾಸು, ಎಂ.ಬಿ. ಶಾರದಮ್ಮ, ಮಲ್ಲಮ್ಮ, ಐರಣಿ ಚಂದ್ರು, ಶಿವಕುಮಾರ್ ಡಿ.ಶೆಟ್ಟರ್, ಕನಗನಹಳ್ಳಿ ವೆಂಕಟೇಶ್, ತುಂಬಿಗೆರೆ ನಾಗಣ್ಣ, ಎ. ತಿಪ್ಪೇಶ್ ಆವರಗೆರೆ, ಹೆಚ್ಕೆಆರ್ ಸುರೇಶ್, ಮುದಹದಡಿ ಸುರೇಶ್, ನರೇಗಾ ರಂಗನಾಥ್, ಮೌನೇಶ್ ಇತರರು ಇದ್ದರು.