ಹೊನ್ನೂರು ಗೊಲ್ಲರಹಟ್ಟಿ ಜನರಿಗೆ ಜ್ವರಬಾಧೆ : ಪರಿಶೀಲಿಸಿದ ಬಸವಂತಪ್ಪ

ಹೊನ್ನೂರು ಗೊಲ್ಲರಹಟ್ಟಿ ಜನರಿಗೆ  ಜ್ವರಬಾಧೆ : ಪರಿಶೀಲಿಸಿದ ಬಸವಂತಪ್ಪ

ದಾವಣಗೆರೆ, ಡಿ.20- ಶೀತ, ಜ್ವರದಿಂದ ಜನರು ಬಳಲುತ್ತಿದ್ದಾರೆ ಎಂಬ ವಿಷಯ ತಿಳಿದು, ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ತಾಲ್ಲೂಕಿನ ಹೊನ್ನೂರು ಗೊಲ್ಲರಹಟ್ಟಿಗೆ ಬುಧವಾರ ಭೇಟಿ ನೀಡಿ, ಪರಿಶೀಲನೆ ನಡೆಸಿ ಗ್ರಾಮಸ್ಥರ ಸಮಸ್ಯೆಯನ್ನು ಆಲಿಸಿದರು.

ಕೇರಳದಲ್ಲಿ ಕೊರೊನಾ ಉಪತಳಿ ಜೆಎನ್1 ಎಂಬ ಸೋಂಕು ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲೂ ಸರ್ಕಾರ ಸೋಂಕು ಹರಡದಂತೆ ಕಟ್ಟುನಿಟ್ಟಿನ ಆದೇಶ ನೀಡಿರುವುದರಿಂದ ಜಿಲ್ಲಾಡಳಿತ ಕೂಡ ಮುನ್ನೆಚ್ಚರಿಕೆ ಕ್ರಮ ವಹಿಸಿದೆ.

ಹೀಗಾಗಿ ಹೊನ್ನೂರು ಗೊಲ್ಲರಹಟ್ಟಿಯಲ್ಲಿ ಕೆಲವು ಜನರು ಜ್ವರದಿಂದ ಬಳಲುತ್ತಿರುವ ವಿಷಯ ತಿಳಿದೊಡನೆ ಶಾಸಕರು ದಿಢೀರ್ ಭೇಟಿ ನೀಡಿ ಗ್ರಾಮಸ್ಥರ ಬಳಿ ಮಾಹಿತಿ ಪಡೆದರು. ಜೊತೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡ ಗ್ರಾಮಕ್ಕೆ ದೌಡಾಯಿಸಿ ಜ್ವರದಿಂದ ಬಳಲುತ್ತಿರುವವರನ್ನು ಪರೀಕ್ಷೆಗೊಳ ಪಡಿಸಿದ್ದು, ಮೇಲ್ನೋಟಕ್ಕೆ ಚಿಕನ್‌ಗುನ್ಯಾ ಅಥವಾ ಡೆಂಗ್ಯೂ ಜ್ವರ ಇರಬಹುದೆಂದು ಶಂಕಿಸಲಾಗಿದೆ ಎಂದು ಪಿಡಿಒ ನಾಗರಾಜ್ ಶಾಸಕರಿಗೆ ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ, ಗ್ರಾಮ ಸ್ವಚ್ಛತೆ, ಆಗಿಂದಾಗ್ಗೆ ಸೊಳ್ಳೆಗಳು ಉತ್ಪತ್ತಿಯಾಗದಂತೆ ಫಾಗಿಂಗ್ ಮಾಡಿಸುವಂತೆ ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜೊತೆಗೆ ಗ್ರಾಮದಲ್ಲಿ ಜ್ವರದಿಂದ ಬಳಲುತ್ತಿರುವ ಜನರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ  ಗ್ರಾಪಂ ಪಿಡಿಒ ನಾಗರಾಜ್, ಗ್ರಾಪಂ ಸದಸ್ಯ ನಾಗರಾಜ್, ಮಾಯಕೊಂಡ ಯುವ ಕಾಂಗ್ರೆಸ್ ಉಪಾಧ್ಯಕ್ಷ ಲೋಕೇಶ್‌ನಾಯ್ಕ್, ಮಾಜಿ ಅಧ್ಯಕ್ಷ ಬಸವರಾಜ್ ಹೊನ್ನೂರು, ಕಾಂಗ್ರೆಸ್ ಮುಖಂಡ ವೀರೇಶ್, ಆಶಾ ಕಾರ್ಯಕರ್ತೆಯರು ಹಾಜರಿದ್ದರು.

ಶಾಲೆಗೆ ಭೇಟಿ: ಎಚ್.ಕಲ್ಪನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ದಿಢೀರ್ ಭೇಟಿ ನೀಡಿದ ಶಾಸಕ ಬಸವಂತಪ್ಪ, ಶಿಕ್ಷಕರು ಮತ್ತು ಮಕ್ಕಳ ಹಾಜರಾತಿ ಪರಿಶೀಲಿಸಿದರು. ಈ ವೇಳೆ ಹಾಜರಿ ಪುಸ್ತಕದಲ್ಲಿ ಶಿಕ್ಷಕರು ಬೆಳಗ್ಗೆ ಮತ್ತು ಮಧ್ಯಾಹ್ನ ಸಹಿ ಮಾಡುವ ಬದಲು ಎರಡನ್ನೂ ಬೆಳಿಗ್ಗೆಯೇ ಮಾಡಿರುವುದನ್ನು ಕಂಡು ತರಾಟೆಗೆ ತೆಗೆದುಕೊಂಡರು.

ಮಧ್ಯಾಹ್ನದ ಬಿಸಿಯೂಟಕ್ಕೆ ಬಳಸುವ ಕೊಳೆತ ತರಕಾರಿಯನ್ನು ಕಂಡು ಕೆಂಡಾಮಂಡಲರಾದರು. ಬಿಸಿಯೂಟ ನಿರ್ವಹಿಸುವ ಶಿಕ್ಷಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮೇಲಾಧಿಕಾರಿಗಳಿಗೆ ಸೂಚಿಸುವುದಾಗಿ ಎಚ್ಚರಿಕೆ ನೀಡಿದರು.

error: Content is protected !!