ಪ್ರತಿಭಾ ಕಾರಂಜಿಗಳು ಒತ್ತಡ ಮುಕ್ತವನ್ನಾಗಿಸುತ್ತವೆ : ಶಾಸಕ ಹರೀಶ್‌

ಪ್ರತಿಭಾ ಕಾರಂಜಿಗಳು ಒತ್ತಡ ಮುಕ್ತವನ್ನಾಗಿಸುತ್ತವೆ : ಶಾಸಕ ಹರೀಶ್‌

ಪ್ರತಿಭಾ ಕಾರಂಜಿಗಳು ಒತ್ತಡ ಮುಕ್ತವನ್ನಾಗಿಸುತ್ತವೆ : ಶಾಸಕ ಹರೀಶ್‌ - Janathavani

ದಾವಣಗೆರೆ, ಡಿ.19- ಗ್ರಾಮೀಣ ಪ್ರದೇಶದ ಮಕ್ಕಳಲ್ಲಿರುವ ವಿಶೇಷ ಪ್ರತಿಭೆಯನ್ನು ರಾಜ್ಯ ಮಟ್ಟದವರೆಗೆ ಕೊಂಡೊಯ್ಯಲು ಪ್ರತಿಭಾ ಕಾರಂಜಿ ಸಹಕಾರಿಯಾಗಲಿದೆ ಎಂದು ಶಾಸಕ ಬಿ.ಪಿ ಹರೀಶ್ ಅಭಿಪ್ರಾಯಪಟ್ಟರು.

ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಶಾಮನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ನಡೆದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಿಕಸನದ ಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂತಹ ಕಾರ್ಯಕ್ರಮಗಳು ನಮ್ಮ ರಾಜಕೀಯ ಒತ್ತಡದ ನಡುವೆ ಮನಸ್ಸಿಗೆ ಸಮಾಧಾನ, ಸಂತೋಷವನ್ನುಂಟು ಮಾಡುತ್ತವೆ. ಮಕ್ಕಳಲ್ಲಿ ಒಂದಲ್ಲಾ ಒಂದು ರೀತಿಯ ಪ್ರತಿಭೆಗಳಿರುತ್ತವೆ. ಅವುಗಳನ್ನು ಇಂತಹ ಪ್ರತಿಭಾ ಕಾರಂಜಿಗಳಲ್ಲಿ ಹಾಗೂ ಉತ್ತಮ ವೇದಿಕೆಗಳಲ್ಲಿ ತೋರ್ಪಡಿಸಬೇಕು. 

ಈ ಕಲೋತ್ಸವದಲ್ಲಿ ಮಕ್ಕಳು ಅನೇಕ ವೇಷ ಭೂಷಣಗಳು ಹಾಗೂ ಸರಸ್ವತಿ, ಲಕ್ಷ್ಮಿ, ತಿರುಪತಿ ತಿಮ್ಮಪ್ಪನ ದೇವಸ್ಥಾನಗಳು ಪ್ರತಿಷ್ಠಾಪಿಸಿರುವುದು ಆಕರ್ಷ ಣೀಯವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ನಮ್ಮ ದೇಶದ ಹಳ್ಳಿ ಹಳ್ಳಿಗಳ ಮೂಲೆಗಳಲ್ಲೂ ಶೈಕ್ಷಣಿಕ ಮತ್ತು ಸಾಂಸ್ಕೃತಿಕವಾಗಿ ಅಭಿವೃದ್ಧಿ ಸಾಧಿಸಿದೆ. ಸಾಂಸ್ಕೃತಿಕ ಕಲೆಗಳನ್ನು ಕೆಲ ವಿದ್ಯಾರ್ಥಿಗಳು ತರಬೇತಿ ಮೂಲಕ ಹಾಗೂ ಮೊಬೈಲ್ ಮತ್ತು ದೂರದರ್ಶನಗಳ ಮುಖಾಂತರ ಕಲಿತು ವೇದಿಕೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದರು. 

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಜಿ. ಕೊಟ್ರೇಶ್ ಮಾತನಾಡಿ, ಮಕ್ಕಳು ಓದು – ಬರಹಕ್ಕೆ ಮಾತ್ರ ಸೀಮಿತಗೊಳ್ಳದೇ ಪ್ರತಿಭೆ, ಸೃಜನಶೀಲತೆಯನ್ನು ಹೊರತರುವಂತಹ ವಿಶೇಷ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. 

ಪ್ರತಿ ವಿದ್ಯಾರ್ಥಿಗಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಪ್ರತಿಭಾ ಕಾರಂಜಿಯು ಒಂದು ಉತ್ತಮ ವೇದಿಕೆಯಾಗಿದೆ ಎಂದರು. 

ಶಿಕ್ಷಣ ಇಲಾಖೆಯು ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡು ಮಕ್ಕಳನ್ನು ಹುರಿದುಂಬಿಸಿ ಹಾಗೂ ಅವರಲ್ಲಿರುವ ಸಂಕುಚಿತ ಮನೋಭಾವವನ್ನು ದೂರಮಾಡುವ ಮೂಲಕ ನಾಟಕ, ನೃತ್ಯ, ಲಾವಣಿ, ಸಂಗೀತ, ಕವ್ವಾಲಿ, ವೀರಗಾಸೆಯಂತಹ ಕಲೆಗಳನ್ನು ಪ್ರದರ್ಶಿಸುವುದೇ ಈ ಪ್ರತಿಭಾ ಕಾರಂಜಿಯ ಮೂಲ ಉದ್ದೇಶವಾಗಿದೆ ಎಂದು ಕೊಟ್ರೇಶ್ ತಿಳಿಸಿದರು.

ಜಿಲ್ಲೆಯಲ್ಲಿ 1202 ಸರ್ಕಾರಿ, 785 ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ, 35 ಸಮಾಜ ಕಲ್ಯಾಣ ಇಲಾಖೆ ಶಾಲೆಗಳು ಹಾಗೂ 2 ಕೇಂದ್ರೀಯ ಶಾಲೆಗಳಿದ್ದು, ಒಟ್ಟು 2,68,000 ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ತೊಡಗಿದ್ದಾರೆ. ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲೆಗಳು ಸೇರಿದಂತೆ ಒಟ್ಟು 10,150 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಮಹಾನಗರ ಪಾಲಿಕೆ ಸದಸ್ಯರಾದ ಕಲ್ಲಳ್ಳಿ ನಾಗರಾಜ್, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕರಾದ ಎಸ್.ಗೀತಾ, ಶಾಮನೂರು ಸರ್ಕಾರಿ ಪ್ರೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಜಿ.ಆರ್.ಮುದೇಗೌಡಪ್ಪ, ಕೆ.ಎನ್ ನಾಗರಾಜ್, ವೆಂಕಟೇಶ್, ಹಾಲುವರ್ತಿ ಕಲ್ಲೇಶ್, ಓಂಕಾರಪ್ಪ, ಕಲ್ಪನಾ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!