ಶರಣರಂತೆ ಶಿವಯೋಗ ಮಾಡಿದಾಗ ಶಿವಾನಂದ ಪ್ರಾಪ್ತಿ

ಶರಣರಂತೆ ಶಿವಯೋಗ ಮಾಡಿದಾಗ ಶಿವಾನಂದ ಪ್ರಾಪ್ತಿ

`ಶರಣರು ಕಂಡ ಶಿವ’ ಪ್ರವಚನದಲ್ಲಿ ಬ್ರಹ್ಮಾಕುಮಾರ ಡಾ.ಬಸವರಾಜ ರಾಜಋಷಿ ಆಶಯ

ದಾವಣಗೆರೆ, ಡಿ. 19 – ಪರಮಾತ್ಮ ಹೇಗಿದ್ದಾನೆ ಎಂಬುದನ್ನು ತಿಳಿಸುವ ಕುರುಹೇ ಇಷ್ಟಲಿಂಗ. ಪರಮಾತ್ಮನ ಚೈತನ್ಯ ಶಕ್ತಿಯನ್ನು ಅನುಭಾವ ಮಾಡಿ, ಮನ – ಭಾವ ತುಂಬಿ ಇಷ್ಟಲಿಂಗವನ್ನು ಉಪಾಸನೆ ಮಾಡಬೇಕು ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಹುಬ್ಬಳ್ಳಿ ಉಪ ವಲಯದ ನಿರ್ದೇಶಕ ರಾಜಯೋಗಿ ಬ್ರಹ್ಮಾಕುಮಾರ ಬಸವರಾಜ ರಾಜಋಷಿ  ಕರೆ ನೀಡಿದರು.

ಇಲ್ಲಿನ ವಿದ್ಯಾನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ `ಶರಣರು ಕಂಡ ಶಿವ’ ಪ್ರವಚನ ಮಾಲೆಯ 16ನೇ ದಿನವಾದ ಮಂಗಳವಾರದ ಸಮಾರಂಭದಲ್ಲಿ ಅವರು ಪ್ರವಚನ ನೀಡಿದರು.

ಪರಮಾತ್ಮ – ಜ್ಯೋತಿ ಸ್ವರೂಪ ಆಗಿದ್ದಾನೆ ಎಂಬುದರ ಕುರುಹಾಗಿ ಇಷ್ಟಲಿಂಗ ಇದೆ. ಇಷ್ಟ ಲಿಂಗದ ಮೂಲಕ ಪರಮ ಜ್ಯೋತಿರ್ಲಿಂಗ ಸ್ವರೂಪವಾದ ಪರಮಾತ್ಮನನ್ನು ಅರಿಯಬೇಕು. ಕೇವಲ ಇಷ್ಟಲಿಂಗ ಧರಿಸಿ ಪರಮಾತ್ಮನ ಅರುಹನ್ನೇ ತಿಳಿಯದಿದ್ದರೆ ತಿಳಿದವರಿಂದ ತಿಳಿಯುವ ಪ್ರಯತ್ನ ಮಾಡಬೇಕು ಎಂದವರು ಹೇಳಿದರು.

ಬದುಕಿನ ಜಂಜಾಟದ ಜಗದ್ಗುರುಗಳಾಗಿರುವ ನಾವು ಈ ಜಗತ್ತನ್ನು ಅರಿಯಲು ಇಷ್ಟಲಿಂಗ ಪೂಜಿಸಬೇಕು. ಅಂಗೈನಲ್ಲಿ ಲಿಂಗವಿಟ್ಟು ಆರಾಧಿಸುತ್ತಾ ಜ್ಯೋತಿರ್ಲಿಂಗ ಪರಮಾತ್ಮನ ಅರಿಯಬೇಕು. ಆಗ ಶರಣ ಸತಿ, ಲಿಂಗ ಪತಿಯ ಭಾವ ಮೂಡುತ್ತದೆ ಎಂದರು.

ಶರಣರು ಇದೇ ಭಾವದಿಂದ ಶಿವಯೋಗ ಮಾಡಿದ್ದಾರೆ. ಆ ಶಿವಯೋಗದಲ್ಲಿ ಚೈತನ್ಯ ಶಕ್ತಿಯ ಸಂಬಂಧವನ್ನು ಅನುಭಾವ ಮಾಡಿದ್ದಾರೆ. ಮನ ತುಂಬಿ, ಭಾವ ತುಂಬಿ ಅವರೆಲ್ಲರೂ ಶಿವಾನಂದ ಅನುಭವಿಸಿದ್ದರು ಎಂದು ತಿಳಿಸಿದರು.

ಇದೇ ಇಷ್ಟಲಿಂಗವನ್ನೂ ಪೂಜಿಸುವ ವಿಧಾನ. ಈ ಪರಮ ಸತ್ಯ ಅರಿತು ನಾವು ಶಿವನನ್ನು ಮನ ತುಂಬಿ, ಭಕ್ತಿ ಭಾವದಿಂದ ಹಾಡಬೇಕು. ಶರಣರು ಇಷ್ಟಲಿಂಗ ಪೂಜಿಸಿ, ಧ್ಯಾನಿಸಿದಂತೆ ವಚನಗಳನ್ನು ನಾವೆಲ್ಲ ಧ್ಯಾನಿಸಬೇಕು  ಎಂದು ಬಸವರಾಜ ರಾಜಋಷಿ ಹೇಳಿದರು.

ಈಶ್ವರೀಯ ವಿಶ್ವವಿದ್ಯಾಲಯದ ದಾವಣಗೆರೆ ಶಾಖೆಯ ಪ್ರಧಾನ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ನೇತೃತ್ವದಲ್ಲಿ ಸಂಸ್ಥೆಯ ವಿದ್ಯಾನಗರ ಶಾಖೆ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಗೀತಾಜಿ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. 

ನೇರ ಪ್ರಸಾರ : ಒಂದು ತಿಂಗಳ ಕಾಲ ಪ್ರತಿದಿನ ಸಂಜೆ 6.30 ರಿಂದ 7.30ರವರೆಗೆ ನಡೆಯುವ ಈ ಪ್ರವಚನವನ್ನು ಯು ಟ್ಯೂಬ್ ಚಾನಲ್ಲಾದ ರಾಜಯೋಗ ಟಿವಿ ಕನ್ನಡದಲ್ಲಿ (youtube/rajayogatvkannada)  ನೇರವಾಗಿ ವೀಕ್ಷಿಸಬಹುದು.

error: Content is protected !!