ಸ್ವ (ಆತ್ಮ) ಧರ್ಮದಲ್ಲಿದ್ದಾಗಲೇ ತೃಪ್ತಿ ಸಾಧ್ಯ-`ಶರಣರು ಕಂಡ ಶಿವ’ ಪ್ರವಚನದಲ್ಲಿ ಬ್ರಹ್ಮಾಕುಮಾರ ಡಾ.ಬಸವರಾಜ ರಾಜಋಷಿ ಆಶಯ

ಸ್ವ (ಆತ್ಮ) ಧರ್ಮದಲ್ಲಿದ್ದಾಗಲೇ ತೃಪ್ತಿ ಸಾಧ್ಯ-`ಶರಣರು ಕಂಡ ಶಿವ’ ಪ್ರವಚನದಲ್ಲಿ ಬ್ರಹ್ಮಾಕುಮಾರ ಡಾ.ಬಸವರಾಜ ರಾಜಋಷಿ ಆಶಯ

ದಾವಣಗೆರೆ, ಡಿ. 18 – ಜ್ಞಾನ, ಶಾಂತಿ, ತೃಪ್ತಿ, ಆನಂದ ಹಾಗೂ ಪ್ರೀತಿಯ ಗುಣಗಳನ್ನು ಹೊಂದುವುದೇ ನಿಜವಾದ ಸ್ವ – ಧರ್ಮವಾಗಿದೆ. ಇಂತಹ ಸ್ವ – ಧರ್ಮದಿಂದಲೇ ಶಾಂತಿಯ ಜೀವನ ಸಾಧ್ಯ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವ ರೀಯ ವಿಶ್ವವಿದ್ಯಾಲಯ ಹುಬ್ಬಳ್ಳಿ ಉಪ ವಲಯದ ನಿರ್ದೇಶಕ ರಾಜಯೋಗಿ ಬ್ರಹ್ಮಾಕುಮಾರ ಬಸವರಾಜ ರಾಜಋಷಿ ಪ್ರತಿಪಾದಿಸಿದರು.

ಇಲ್ಲಿನ ವಿದ್ಯಾನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಆವರಣದಲ್ಲಿ ನಡೆಯುತ್ತಿರುವ `ಶರಣರು ಕಂಡ ಶಿವ’ ಪ್ರವಚನ ಮಾಲೆಯ 15ನೇ ದಿನವಾದ ಸೋಮವಾರದ ಸಮಾರಂಭದಲ್ಲಿ ಅವರು ಪ್ರವಚನ ನೀಡಿದರು.

ಭಗವದ್ಗೀತೆಯಲ್ಲಿ §ಸ್ವ – ಧರ್ಮೇ ನಿಧನಂ ಶ್ರೇಯಹ, ಪರ – ಧರ್ಮೋ ಭಯಾವಹಹ¬ ಎಂಬ ನುಡಿ ಇದೆ. ಜನರು ಸ್ವಂತ ಜಾತಿ ಇಲ್ಲವೇ ಧರ್ಮದಲ್ಲೇ ಇರಬೇಕು. ಮತಾಂತರ ಆಗಬಾರದು ಎಂದು ಕೆಲವರು ಈ ಸಾಲನ್ನು ಅರ್ಥೈಸುತ್ತಾರೆ. ಆದರೆ, §ಸ್ವ¬ ಎಂದರೆ ಸಂಸ್ಕೃತದಲ್ಲಿ ಆತ್ಮ ಎಂಬ ಅರ್ಥವಿದೆ. ಆತ್ಮವೂ ತನ್ನ ಸ್ವಧರ್ಮಗಳಾದ ಜ್ಞಾನ, ಶಾಂತಿ, ತೃಪ್ತಿ, ಆನಂದ ಪ್ರೀತಿಯಲ್ಲಿರಬೇಕು ಎಂಬುದೇ ಈ ಸಾಲಿನ ಅರ್ಥ ಎಂದು ಬಸವರಾಜ ರಾಜಋಷಿ ವಿಶ್ಲೇಷಿಸಿದರು.

ಜ್ಞಾನ, ಶಾಂತಿ, ತೃಪ್ತಿ, ಆನಂದ ಹಾಗೂ ಪ್ರೀತಿಯ ಗುಣಗಳು ಆತ್ಮಕ್ಕೆ ಸಹಜವಾಗಿವೆ. ಜ್ಞಾನ ಗುಣದಿಂದ ಅತಿ ಆಸೆಗೆ ಸಿಲುಕದೇ ಇದ್ದಾಗ ಆತ್ಮದಲ್ಲಿ ಶಾಂತಿ ಇರುತ್ತದೆ. ಇದು ತೃಪ್ತಿಗೆ ಕಾರಣವಾಗುತ್ತದೆ. ಆನಂದವೂ ಹುಟ್ಟುತ್ತದೆ ಹಾಗೂ ಪರರ ಬಗ್ಗೆ ಪ್ರೀತಿಯೂ ಇರುತ್ತದೆ. ಇದೇ ಆತ್ಮದ ಸ್ವ – ಧರ್ಮ. ಆದರೆ, ಈ ಸಹಜ ಗುಣಗಳನ್ನು ಬಿಟ್ಟು ಅತಿ ಆಸೆ ಹೊಂದಿದರೆ ಅದು ಕ್ರೋಧ, ಆವೇಶ ಹಾಗೂ ಮತಿಕ್ಲೇಷಗಳಿಗೆ ಕಾರಣವಾಗುತ್ತದೆ ಎಂದವರು ವಿವರಿಸಿದರು.

ದೇವರು ಹಾಗೂ ಅಸುರರ ದೇಹ ಸ್ವರೂಪ ಒಂದೇ ಆಗಿರುತ್ತದೆ. ಆದರೆ, ದೇವ ಪುರುಷರ ಆತ್ಮ ಸ್ವ – ಧರ್ಮದಲ್ಲಿದ್ದು ಶಾಂತವಾಗಿರುತ್ತದೆ. ಅಸುರರ ಆತ್ಮ ಸ್ವ – ಧರ್ಮದಿಂದ ದೂರವಾಗಿ ಕ್ರೋಧ, ಸಿಟ್ಟು, ಈರ್ಷೆ ಹಾಗೂ ದ್ವೇಷದಂತಹ ಗುಣಗಳನ್ನು ಪಡೆದಿರುತ್ತದೆ ಎಂದವರು ತಿಳಿಸಿದರು.

ಈಶ್ವರೀಯ ವಿಶ್ವವಿದ್ಯಾಲಯದ ದಾವಣಗೆರೆ ಶಾಖೆಯ ಪ್ರಧಾನ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ನೇತೃತ್ವದಲ್ಲಿ ಸಂಸ್ಥೆಯ ವಿದ್ಯಾನಗರ ಶಾಖೆ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಗೀತಾಜಿ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. 

ನೇರ ಪ್ರಸಾರ : ಒಂದು ತಿಂಗಳ ಕಾಲ ಪ್ರತಿದಿನ ಸಂಜೆ 6.30 ರಿಂದ 7.30ರವರೆಗೆ 1 ಗಂಟೆ ಸಮಯ ನಡೆಯುವ ಈ ಪ್ರವಚನವನ್ನು ಯೂ ಟ್ಯೂಬ್ ಚಾನಲ್ಲಾದ ರಾಜಯೋಗ ಟಿವಿ ಕನ್ನಡದಲ್ಲಿ (youtube/rajayogatvkannada) ನೇರವಾಗಿ ವೀಕ್ಷಿಸಬಹುದು.

error: Content is protected !!