ಜಗಳೂರು, ಡಿ.17- ವಿನಯ ಮಾರ್ಗ ಟ್ರಸ್ಟ್ ವತಿಯಿಂದ ನಾಳೆ ದಿನಾಂಕ 18 ರ ಸೋಮವಾ ರದಿಂದ ಬರುವ ಜನವರಿ 12 ರವರೆಗೆ 25 ದಿನಗಳ ಕಾಲ ದಾವಣಗೆರೆ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಹಳ್ಳಿಗಳಲ್ಲಿ `ವಿನಯ್ ನಡಿಗೆ ಹಳ್ಳಿ ಕಡೆಗೆ’ ಎಂಬ ವಿನೂತನ ಬೃಹತ್ ಪಾದಯಾತ್ರೆ, ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿ ವಿನಯ್ಕುಮಾರ್ ಜಿ.ಬಿ. ತಿಳಿಸಿದ್ದಾರೆ.
ಪಟ್ಟಣದ ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಳೆ ಸೋಮವಾರ ಜಗಳೂರು ವಿಧಾನಸಭಾ ಕ್ಷೇತ್ರದ ಗಡಿ ಭಾಗವಾದ ಚಿಕ್ಕಉಜ್ಜನಿ ಗ್ರಾಮದಿಂದ ಬೆಳಿಗ್ಗೆ 9 ಗಂಟೆಗೆ ಪಾದಯಾತ್ರೆ ಪ್ರಾರಂಭವಾಗಲಿದೆ ಎಂದರು.
ಪಾದಯಾತ್ರೆ ಪ್ರಾರಂಭದ ದಿನದಿಂದ ಮುಕ್ತಾಯದವರೆಗೆ ಪ್ರತಿನಿತ್ಯ ವಾಸ್ತವ್ಯ ಮಾಡುವ ಹಳ್ಳಿಗಳಲ್ಲಿ ಆ ಗ್ರಾಮದ ಜನರೊಂದಿಗೆ ಗ್ರಾಮಗಳ ಮೂಲಭೂತ ಸಮಸ್ಯೆಗಳು, ಕ್ಷೇತ್ರದ ಅಭಿವೃದ್ಧಿ ಕುರಿತು ಸಮಾಲೋಚನೆ, ಸ್ಥಳೀಯ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿ, ಸಮಸ್ಯೆಗಳನ್ನು ಸಾಧ್ಯವಾದಷ್ಟು ಸ್ಥಳದಲ್ಲೇ ಬಗೆಹರಿಸುವ ಪ್ರಯತ್ನ ಮಾಡುವೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಯು.ಪಿ.ಎಸ್ಸಿ., ಕೆ.ಪಿ.ಎಸ್ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಿ ಕಾರ್ಯಾಗಾರಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಿಗೆ ಮನೋಸ್ಥೈರ್ಯ ತುಂಬಿ `ಪದವಿ ನಂತರ ಮುಂದೇನು’ ಹಾಗೂ `ಎಸ್.ಎಸ್.ಎಲ್.ಸಿ. ಆದ ನಂತರ’ ಮುಂದೇನು? ಎಂಬ ವಿಚಾರಗಳನ್ನು ಆಯಾ ಗ್ರಾಮಗಳ ವಾಸ್ತವ್ಯಗಳಲ್ಲಿ ಸಂವಾದ ನಡೆಸಲಾಗುವುದು ಎಂದು ವಿನಯ್ ಕುಮಾರ್ ತಿಳಿಸಿದರು.
ನಾಳೆ ದಿನಾಂಕ 18 ರಂದು ಚಿಕ್ಕಉಜ್ಜಿನಿ, ಗಡಿಮಾಕುಂಟೆ, ಲಕ್ಕಂಪುರ, ಗೌರಿಪುರ, ಕ್ಯಾಸೇನಹಳ್ಳಿ, ಗೌಡಗೊಂಡನಹಳ್ಳಿ ನಂತರ ತಮಲೇಹಳ್ಳಿಯಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗುವುದು. ನಾಡಿದ್ದು ದಿನಾಂಕ 19 ರಂದು ಹನುಮಂತಾಪುರ ಗೊಲ್ಲರಹಟ್ಟಿ, ಹನುಮಂತಾಪುರ, ಕಸವನಹಳ್ಳಿ, ಗೋಗುದ್ದು, ಉದ್ದಗಟ್ಟೆ, ಜಗಳೂರು ಗೊಲ್ಲರಹಟ್ಟಿ, ಮರೇನಹಳ್ಳಿ, ಜಮ್ಮಾಪುರ, ನಂತರ ರಾತ್ರಿ ಜಮ್ಮಾಪುರ ಗೊಲ್ಲರಹಟ್ಟಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ.
ಡಿ.20 ರಂದು ತೋರಣಗಟ್ಟೆ, ಕಟ್ಟಿಗೆಹಳ್ಳಿ, ನಿಬಗೂರು, ಬಿದರಕೆರೆ, ರಸ್ತೆಮಾ ಕುಂಟೆ, ಬಿದರಕೆರೆಗೊಲ್ಲರಹಟ್ಟಿ, ಕೊರಟಿಕೆರೆ ತಾಂಡಾ, ಕೊರಟಿಕೆರೆ, ಮೆದಗಿನಕೆರೆ ನಂತರ ದೇವಿಕೆರೆಯಲ್ಲಿ ಗ್ರಾಮ ವಾಸ್ತವ್ಯ. ಡಿ.21 ರಂದು ದೇವಿಕೆರೆ, ಸೂರಡ್ಡಿಹಳ್ಳಿ, ಮಿನಿಗರಹಳ್ಳಿ, ಪಾಲನಾಯಕನ ಕೋಟೆ, ಕಲ್ಲಹಳ್ಳಿ, ಪಲ್ಲಾಗಟ್ಟೆ, ದಿದ್ದಿಗಿ, ಅಸಗೋಡು, ರಾಮಘಟ್ಟ ತಾಂಡಾ, ರಾಮಘಟ್ಟ ತಾಂಡಾ-2, ರಾಮಘಟ್ಟ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ. ಡಿ.22 ರಂದು ರಾಮಘಟ್ಟ ಗ್ರಾಮ, ಚಟ್ನಿಹಳ್ಳಿ, ಉಚ್ಚಂಗಿದುರ್ಗ, ಕಂಬತ್ತಹಳ್ಳಿ ಕ್ರಾಸ್, ಅರಸಿಕೆರೆ, ಕಡಬಗೆರೆ, ಸಾಸ್ವೆಹಳ್ಳಿ ಗ್ರಾಮದಲ್ಲಿ ವಾಸ್ತವ್ಯ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಬದ್ರಿ, ನಾಗರಾಜು, ಶ್ರೀನಿವಾಸ್, ಮಲ್ಲಿಕಾರ್ಜುನ್, ಕಿರಣ್, ಧನ್ಯಕುಮಾರ್, ನಾಗಣ್ಣ, ಶರತ್ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.