ಸರ್ಕಾರಿ ಕಚೇರಿಗಳಲ್ಲಿ ಪಾರದರ್ಶಕವಾಗಿ ಕಾರ್ಯನಿರ್ವಹಿಸಲು ಡಿಸಿ ಡಾ.ವೆಂಕಟೇಶ್‌ ಸೂಚನೆ

ಸರ್ಕಾರಿ ಕಚೇರಿಗಳಲ್ಲಿ ಪಾರದರ್ಶಕವಾಗಿ ಕಾರ್ಯನಿರ್ವಹಿಸಲು ಡಿಸಿ ಡಾ.ವೆಂಕಟೇಶ್‌ ಸೂಚನೆ

ದಾವಣಗೆರೆ, ಡಿ.15- ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಉತ್ತಮ ಹಾಗೂ ಪಾರದರ್ಶಕವಾಗಿ ಕಾರ್ಯ ನಿರ್ವಹಿಸುವುದರ ಜೊತೆಗೆ ಸಾರ್ವಜನಿಕ ಸ್ನೇಹ ಪರವಾಗಿ ಕೆಲಸ ಮಾಡಬೇಕೆಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ತಿಳಿಸಿದರು.

ಶುಕ್ರವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಜರುಗಿದ ಮಾಹಿತಿ ಹಕ್ಕು ಅಧಿನಿಯಮ 2005ರ ಕುರಿತ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶದಲ್ಲಿ ಮಾಹಿತಿ ಹಕ್ಕು 2005 ರಲ್ಲಿ ಹೊಸ ಕ್ರಾಂತಿಯೇ ಶುರು ಮಾಡಿದ್ದು, ಇದರ ಮೂಲ ಉದ್ದೇಶ ಮಾಹಿತಿ ಹಕ್ಕಿನ ಕಾಯ್ದೆಗಳನ್ನು ಜಾರಿಗೆ ತಂದು, ಸರ್ಕಾರಿ ಕಚೇರಿಗಳ ಆಡಳಿತದಲ್ಲಿ ಪಾರದರ್ಶಕತೆ ಯನ್ನು ಕಾಪಾಡಿಕೊಳ್ಳುವುದಾಗಿದೆ. ಯಾವುದೇ ಅಧಿಕಾರಿ, ಆರ್‍ಟಿಐ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಕಚೇರಿಗಳಿಗೆ ಬಂದು ಸಂಪೂರ್ಣ ಮಾಹಿತಿ ಕೇಳುವ ಮತ್ತು ಪಡೆದುಕೊಳ್ಳುವಂತಹ ಹಕ್ಕಿದೆ.

ಆರ್.ಟಿ.ಐ ಕಾರ್ಯಕರ್ತರು ಸರ್ಕಾರಿ ಕಚೇರಿಗಳಿಗೆ ಮಾಹಿತಿ ಪಡೆಯಲು ಬಂದಾಗ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ದವರು ಯಾವುದೇ ಆತಂಕಕ್ಕೆ  ಒಳಗಾಗದೇ ಇಲಾಖಾವಾರು ಸಮರ್ಪಕ ಮಾಹಿತಿಯನ್ನು ಒದಗಿಸಬೇಕು. ಕ್ರಮಬದ್ಧವಾಗಿ ತಮ್ಮ ಕಚೇರಿಗಳಲ್ಲಿ ಮಾಹಿತಿಯ ದಾಖಲೆಗಳನ್ನು ನಿರ್ವಹಿಸಬೇಕು.

ಅಧಿಕಾರಿಗಳು ತಮ್ಮ ಕಚೇರಿಗಳಲ್ಲಿ 4.1ಎ ನಲ್ಲಿ ಕ್ರಮಬದ್ಧವಾಗಿ ಯಾವ ದಾಖಲೆಗಳನ್ನು ಸಾರ್ವಜನಿಕರಿಗೆ ಒದಗಿಸಲು ಅವಕಾಶವಿರುತ್ತದೆ ಎಂಬುದನ್ನು ತಿಳಿದುಕೊಂಡು ಮಾಹಿತಿ ನೀಡಬೇಕಾಗುತ್ತದೆ ಎಂದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ವೆಂಕಟರಮಣಪ್ಪ.ಬಿ ಮಾಹಿತಿ ಹಕ್ಕು ಅಧಿನಿಯಮಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ವಿಚಾರ ವಿನಿಮಯ ಹಾಗೂ ಉಪನ್ಯಾಸ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್, ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ಮಲ್ಲಾನಾಯ್ಕ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ್, ಎಂ. ಸಂತೋಷ್, ಉಪ ವಿಭಾಗಾಧಿಕಾರಿ ದುರ್ಗಾಶ್ರೀ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!