ಶಾಸಕ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ
ಬೆಳಗಾವಿ, ಡಿ. 15 – ವೈಜ್ಞಾನಿಕ ಹಾಗೂ ವಾಸ್ತವಾಂಶ ಆಧರಿಸಿ ಹೊಸ ದಾಗಿ ಜಾತಿ ಗಣತಿ ಮಾಡುವಂತೆ ಅಖಿಲ ಭಾರತ ವೀರಶೈವ ಲಿಂಗಾ ಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.
ಈ ಸಂದರ್ಭದಲ್ಲಿ ಸಚಿವರು ಗಳಾದ ಎಂ.ಬಿ. ಪಾಟೀಲ್, ಈಶ್ವರ್ ಖಂಡ್ರೆ, ಲಿಂಗಾಯತ ವೀರಶೈವ ಮಹಾಸಭಾ ಉಪಾಧ್ಯಕ್ಷರಾದ ಅಥಣಿ ವೀರಣ್ಣ, ಅಣಬೇರು ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.
8 ವರ್ಷಗಳ ಹಿಂದೆ ನಡೆಸಲಾದ ಕಾಂತರಾಜ್ ಆಯೋಗದ ಸಾಮಾ ಜಿಕ – ಆರ್ಥಿಕ ಸಮೀಕ್ಷೆ ಹಲವು ವೈರುಧ್ಯ ಹಾಗೂ ಲೋಪಗಳಿಂದ ಕೂಡಿದೆ. ಹೊಸದಾಗಿ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಬೇಕು. ನಾವು ಜಾತಿ ಗಣತಿಯ ವಿರೋಧಿಗಳಲ್ಲ ಎಂದು ಮನವಿಯಲ್ಲಿ ಹೇಳಲಾಗಿದೆ.
ಆರ್ಥಿಕ, ಸಾಮಾಜಿಕ ಸಮೀಕ್ಷೆ ನಡೆದಾಗ ನಮ್ಮ ವೀರಶೈವ ಲಿಂಗಾ ಯತ ಸಮುದಾಯದ ಬಹುಪಾಲು ಜನರು ತಮಗೆ ಲಭಿಸುವ ಮೀಸ ಲಾತಿಯಲ್ಲಿ ಅನ್ಯಾಯವಾಗುತ್ತದೆ ಎಂಬ ಭಯದಿಂದ ವೀರಶೈವ ಅಥ ವಾ ಲಿಂಗಾಯತ ಎಂದು ಬರೆಸದೆ ತಮ್ಮ ಒಳಪಂಗಡಗಳನ್ನು ನಮೂದಿಸಿ ದ್ದಾರೆ ಎಂದೂ ಮನವಿಯಲ್ಲಿ ಹೇಳಲಾಗಿದೆ.
ಕರ್ನಾಟಕದಲ್ಲಿರುವ ಹಲವರು ತಮ್ಮ ಜಾತಿಯ ಕುರಿತಂತೆ ಸ್ವಯಂ ಘೋಷಣೆ ಮಾಡಿಕೊಂಡಿದ್ದಾರೆ. ಆದರೆ , ನಿಜವಾಗಿಯೂ ಅವರು ಆ ಜಾತಿ, ಸಮುದಾಯಕ್ಕೆ ಸೇರಿದವರೇ ಎಂಬ ಸತ್ಯಾಸತ್ಯತೆ ಅರಿಯಲು ಯಾವುದೇ ಪರಿಶೀಲನೆ ಆಗಿಲ್ಲ. ಹೀಗಾಗಿ ಈ ಸಮೀಕ್ಷೆಯಲ್ಲಿ ಸಂಗ್ರಹಿಸಿರುವ ಮಾಹಿತಿಯಲ್ಲೇ ದೋಷವಿದೆ ಎಂದು ತಿಳಿಸಲಾಗಿದೆ.
ಪ್ರತಿ 10 ವರ್ಷಗಳಿಗೆ ಒಮ್ಮೆ ಜನಗಣತಿ ನಡೆಸಲಾಗುತ್ತದೆ. ಈಗಾಗಲೇ ರಾಜ್ಯದಲ್ಲಿ ನಡೆದಿರುವ ಸಾಮಾಜಿಕ, ಆರ್ಥಿಕ ಸ್ಥಿತಿಗತಿಯ ಸಮೀಕ್ಷೆ 8 ವರ್ಷದಷ್ಟು ಹಳೆಯದಾಗಿದೆ. ಇದನ್ನು ಯಥಾವತ್ ಅಂಗೀಕರಿಸುವುದು ಸೂಕ್ತವಲ್ಲ ಎಂದೂ ಮನವಿಯಲ್ಲಿ ಹೇಳಲಾಗಿದೆ.
ಸಮ ಸಮಾಜದ ಪರಿಕಲ್ಪನೆಯನ್ನು ಜಗತ್ತಿಗೆ ನೀಡಿದ್ದೇ ವೀರಶೈವ ಲಿಂಗಾಯತ ಸಮುದಾಯ. ನಾವು ಯಾರ ಹಕ್ಕನ್ನೂ ಕಸಿದುಕೊಳ್ಳುವವರಲ್ಲ. ಎಲ್ಲರಿಗೂ ಸಾಮಾಜಿಕ ನ್ಯಾಯ ದೊರೆಯಬೇಕು ಎಂಬುದು ನಮ್ಮ ತತ್ವ ಹಾಗೂ ಬದ್ಧತೆ. ಆದರೆ, ಈಗಾಗಲೇ ರಾಜ್ಯದಲ್ಲಿ ನಡೆದಿರುವ ಸಾಮಾಜಿಕ, ಆರ್ಥಿಕ ಸಮೀಕ್ಷೆ ಅಸಮರ್ಪಕವಾಗಿದೆ. ಇದನ್ನು ಅಂಗೀಕರಿಸಿದರೆ ಸಮುದಾಯಕ್ಕೆ ಅಷ್ಟೇ ಅಲ್ಲದೇ ಸಮಾಜದ ವಂಚಿತರು, ಶೋಷಿತರು, ಮಧ್ಯಮ ವರ್ಗದ ಆರ್ಥಿಕ ದುರ್ಬಲರಿಗೆ ಘೋರ ಅನ್ಯಾಯವಾಗುತ್ತದೆ ಎಂದು ತಿಳಿಸಲಾಗಿದೆ.
ವಿಧಾನಸಭಾ ಅಧಿವೇಶನ ನಡೆಯುವ ವೇಳೆಯೂ ಶಾಸಕ ಶಾಮನೂರು ಶಿವಶಂಕರಪ್ಪ ಅವರು ವೀರಶೈವ ಲಿಂಗಾಯತ ಸಮುದಾಯದ ಸಚಿವರು ಮತ್ತು ಶಾಸಕರಿಂದ ಸಹಿ ಸಂಗ್ರಹಿಸಿ, ಪತ್ರವನ್ನು ಮುಖ್ಯಮಂತ್ರಿಗೆ ನೀಡಿದ್ದಾರೆ.