ಭಾರತವು ಮತ್ತೊಮ್ಮೆ ಸ್ವರ್ಣಿಮ ಭಾರತವಾಗಲಿದೆ

ಭಾರತವು ಮತ್ತೊಮ್ಮೆ ಸ್ವರ್ಣಿಮ ಭಾರತವಾಗಲಿದೆ

`ಶರಣರು ಕಂಡ ಶಿವ’ ಪ್ರವಚನ ಮಾಲೆಯಲ್ಲಿ ಬ್ರಹ್ಮಾಕುಮಾರ ಡಾ. ಬಸವರಾಜ ರಾಜಋಷಿ

ದಾವಣಗೆರೆ, ಡಿ.15- ಹಿಂಸೆ, ಭ್ರಷ್ಟಾಚಾರ, ಅಧರ್ಮ, ಅಪನಂಬಿಕೆ ಹೆಚ್ಚಾಗಿರುವ ಈ ಕಲಿಯುಗದಲ್ಲಿ ಮತ್ತೆ ಧರ್ಮ ಸ್ಥಾಪನೆಗಾಗಿ 1936ರಲ್ಲಿಯೇ ಪರಂಧಾಮದಿಂದ ಜ್ಯೋತಿರ್ಲಿಂಗ ಸ್ವರೂಪನಾದ ಪರಮಾತ್ಮ ಧರಣಿ ಮೇಲೆ ಅವತರಿಸಿದ್ದಾನೆ ಎಂದು  ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಹುಬ್ಬಳ್ಳಿ ಉಪ ವಲಯದ ನಿರ್ದೇಶಕ ರಾಜಯೋಗಿ ಬ್ರಹ್ಮಾಕುಮಾರ ಡಾ.ಬಸವರಾಜ ರಾಜಋಷಿ ತಿಳಿಸಿದರು.

ಇಲ್ಲಿನ ವಿದ್ಯಾನಗರದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಆವರಣದಲ್ಲಿ  ನಡೆಯುತ್ತಿರುವ `ಶರಣರು ಕಂಡ ಶಿವ’ ಪ್ರವಚನ ಮಾಲೆಯ 11ನೇ ದಿನವಾದ ಗುರುವಾರದ ಸಮಾರಂಭದಲ್ಲಿ ಅವರು ಪ್ರವಚನ ನೀಡಿದರು.

ಈಶ್ವರೀಯ ವಿಶ್ವವಿದ್ಯಾಲಯದ ಮೂಲಕ ಪರಮಾತ್ಮ ಶಿಕ್ಷಣ ನೀಡಿ ಮಾನವರನ್ನು ಪರಿವರ್ತಿಸುವ, ಸಂಸ್ಕಾರ ಕೊಡುವ ಕೆಲಸ ಮಾಡುತ್ತಿದ್ದಾನೆ. ಇನ್ನು ಕೇವಲ 13ರಿಂದ 15 ವರ್ಷದೊಳಗೆ ಅವನ ಕಾರ್ಯವೂ ಮುಗಿದು ಹೋಗುತ್ತದೆ ಎಂದು ಹೇಳಿದರು.

ಪರಮಾತ್ಮನ ಆಜ್ಞೆ ಪ್ರಕಾರ ಮಾನವರನ್ನು ದೇವತೆಗಳನ್ನಾಗಿ ಮಾಡುವ, ಕಲಿಯುಗವನ್ನು ಸತ್ಯಯುಗವನ್ನಾಗಿ ಮಾಡುವ ಶಿಕ್ಷಣವನ್ನು  ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ನೀಡಲಾಗುತ್ತಿದೆ. ತಾವೆಲ್ಲಾ ಪರಮಾತ್ಮನ ಮೇಲೆ ವಿಶ್ವಾಸವಿಟ್ಟು 108 ಗಂಟೆಗಳ ಸಮಯ ಮೀಸಲಿಟ್ಟು ಶಿಕ್ಷಣ ಪಡೆಯಿರಿ. ಆ ಮೂಲಕ ಪರಮಾತ್ಮನ ವಾಣಿಯನ್ನು ಕೇಳಿ ಅವನ ಅನುಭೂತಿ, ಅನುಭಾವ ಪಡೆಯೋಣ ಎಂದು ಕರೆ ನೀಡಿದರು.

ಯಾರನ್ನು ನಾವು ದೇವತೆಗಳು, ಮಹಾತ್ಮರು ಎಂದು ಪೂಜಿಸುತ್ತೇವೋ ಅವರೆಲ್ಲಾ ಸನಾತನ ಭಾರತದ ದೇವತೆಗಳು. ಅಂತಹ ದೇವತೆಗಳಿದ್ದ ಈ ನಾಡು ಸಮೃದ್ಧಿಯ ಬೀಡಾಗಿತ್ತು.

1250 ವರ್ಷಗಳ ಕಾಲ ಇದ್ದ ಆ ಸತ್ಯಯುಗದಲ್ಲಿ ದೇವತೆಗಳ ಆಯಸ್ಸು 150 ವರ್ಷ ಆಗಿತ್ತು. ಅವರು 8 ಜನ್ಮಗಳನ್ನು ಪಡೆದು, ನಂತರ ತ್ರೇತಾಯುಗದಲ್ಲಿ ಜನ್ಮ ಪಡೆಯುತ್ತಾರೆ. ಈ ಯುಗದಲ್ಲೂ ಆತ್ಮ ಸತ್ವ ಅವಸ್ಥೆಯಲ್ಲಿರುವುದರಿಂದ ಸಮೃದ್ಧ ಭಾರತದಲ್ಲಿ ನಾವಿರುತ್ತೇವೆ. ಅದಕ್ಕೆ ನಮ್ಮ ದೇವಾಲಗಳಲ್ಲಿರುವ ದೇವತೆಗಳ ಮೂರ್ತಿ ಹಾಗೂ  ಚಿತ್ರಗಳೇ ಸಾಕ್ಷಿ. ಅವರೆಲ್ಲಾ ಹಿಂದಿನ ಅವತಾರಿ ಪುರುಷ ದೇವತೆಗಳು ಎಂದು ವಿಶ್ಲೇಷಿಸಿದರು.

ಸತ್ಯಯುಗ ಹಾಗೂ ತ್ರೇತಾಯುಗಗಳಲ್ಲಿ ಯಾವ ಯುದ್ಧವೂ ಇರಲಿಲ್ಲ. ಯಾವ ಅನ್ಯ ಧರ್ಮಗಳೂ ಇರಲಿಲ್ಲ. ದೇವತೆಗಳನ್ನು ಪೂಜಿಸುವ ಅಗತ್ಯವೂ ಇರಲಿಲ್ಲ. ಅಂತಹ ಶ್ರೇಷ್ಠವಾದ ದೇವಲೋಕ ಈ ಭಾರತ ಭೂಮಿಯಲ್ಲಿತ್ತು ಹಾಗೂ ಅದು ಸಮೃದ್ಧಿಯಾಗಿತ್ತು. ಅದೇ  ಸನಾತನ ಹಾಗೂ ಪುರಾತನ ಭಾರತ ಎಂದು ಹೇಳಿದರು.

ಈ ಸತ್ಯ ಹಾಗೂ ತ್ರೇತಾಯುಗ ಮುಗಿದ ಮೇಲೆ ಭಾರತದಲ್ಲಿ ಭಕ್ತಿಯ ಮಾರ್ಗ ಪ್ರಾರಂಭವಾಯಿತು. ಆ ಸಮಯದಲ್ಲಿ ಸನಾತನ ಧರ್ಮದ ಆತ್ಮರೇ ಪುನಃ ಜನ್ಮ ಪಡೆದರು. ವಿಶ್ವದ ಬೇರೆ ಬೇರೆ ಸ್ಥಳಗಳಲ್ಲಿ ಅನೇಕ ಧರ್ಮಗಳು ಉಗಮವಾದವು. ಸತ್ಯಯುಗದಲ್ಲಿದ್ದ ದೇವತೆಗಳೇ ಅನ್ಯ ದೇಶಗಳಲ್ಲಿ ಉಪಸ್ಥಿತರಾದರು. ಸನಾತನ ದೇವೀ, ಧರ್ಮದ ವಂಶಸ್ಥರ ಉದರದಲ್ಲಿಯೇ ಜನ್ಮ ಪಡೆದರು. ಉದಾಹರಣೆಗೆ ಬುದ್ಧ, ಮಹಾವೀರ ಇತರರು. 

ದ್ವಾಪರ ಯುಗದ ಆದಿಯಲ್ಲಿ ದೇವರನ್ನು ಹುಡುಕುವುದು ಆರಂಭವಾಯಿತು.  ಆಗ 12 ಜ್ಯೋತಿರ್ಲಿಂಗಗಳು  ಭಾರತದಲ್ಲಿ ಸ್ಥಾಪಿತವಾದವು. ಏಕೇಶ್ವರ ಉಪಾಸನೆ ಮಾಡುವ ಇತಿಹಾಸ ಭಾರತದಲ್ಲಿತ್ತು. 250 ವರ್ಷಗಳ ನಂತರ ಋಷಿಗಳು ಕಾವ್ಯಗಳನ್ನು ರಚಿಸಲಾರಂಭಿಸಿದರು.ಪುರಾಣ, ಧರ್ಮ ಗ್ರಂಥಗಳನ್ನು ರಚಿಸಿದರು. ಹಿಂದೆ ಯಾರು ಭಾರತ ಆಳಿದ್ದರೋ ಅಂತಹ ದೇವಾನು ದೇವತೆಗಳ ಬಗ್ಗೆ ಪುರಾಣ ಕಥೆಗಳನ್ನು ರಚಿಸಲಾಯಿತು ಎಂದು ತಿಳಿಸಿದರು.

ಈ ಯುಗದಲ್ಲಿ ಬಹುದೇವೋಪಾಸನೆ  ಆರಂಭವಾದರೂ ಭಾರತ ಅತ್ಯಂತ ಸಮೃದ್ಧಿಯಾಗಿತ್ತು. ಈ ಸಂಪತ್ತೆಲ್ಲಾ ಸತ್ಯಯುಗದಲ್ಲಿ ಸಂಪಾದನೆಯಾಗಿದ್ದುದು. ದ್ವಾಪರ ಯುಗ ಮುಗಿದ ಮೇಲೆ ಕಲಿಯುಗದ ಆದಿಯಲ್ಲಿ ಭಾರತದ ಸಂಪತ್ತೆಲ್ಲಾ ಲೂಟಿಯಾಯಿತು. ಇದಲ್ಲಾ ನಮಗೆ ಇತಿಹಾಸದಿಂದ ತಿಳಿದು ಬರುತ್ತದೆ.

ಕಲಿಯುಗದಲ್ಲಿ ಸತ್ಯ ಸತ್ತು ಹೋಗುತ್ತಿದೆ. ಅನಾಗರೀಕತೆ, ಅತ್ಯಾಚಾರ, ಹಗಲು ದರೋಡೆಗಳನ್ನು ನೋಡುತ್ತಿದ್ದೇವೆ. ತಮೋ ಪ್ರಧಾನ ಅವಸ್ಥೆಯಲ್ಲಿದ್ದೇವೆ. ಸನಾತನ ಪರಂಪರೆ, ಸಂಸ್ಕೃತಿ ಕಳೆದುಕೊಳ್ಳುತ್ತಿದ್ದೇವೆ. ಯಾವಾಗ ಧರ್ಮ ಅಧೋಗತಿಗೆ ಬರುತ್ತದೋ ಆ ವೇಳೆ ನಾನು ಮತ್ತೆ ಅವತರಿಸುತ್ತೇನೆ ಎಂದು ಭಗವಂತ ಆಶ್ವಾಸನೆ ನೀಡಿದ್ದಾನೆ. ಹಾಗಾಗಿಯೇ ಭಗವಂತನ ಅವತರಣೆಯಾಗಿದೆ ಎಂದು ಪ್ರತಿಪಾದಿಸಿದರು.

ಈಶ್ವರೀಯ ವಿಶ್ವವಿದ್ಯಾಲಯದ ದಾವಣಗೆರೆ ಶಾಖೆಯ ಪ್ರಧಾನ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ನೇತೃತ್ವದಲ್ಲಿ ಸಂಸ್ಥೆಯ ವಿದ್ಯಾನಗರ ಶಾಖೆ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಗೀತಾಜಿ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. 

ನೇರ ಪ್ರಸಾರ : ಸುದೀರ್ಘ ಒಂದು ತಿಂಗಳ ಕಾಲ ಪ್ರತಿದಿನ ಸಂಜೆ 6.30 ರಿಂದ 7.30ರವರೆಗೆ 1 ಗಂಟೆ ಸಮಯ ನಡೆಯುವ ಈ ಪ್ರವಚನವನ್ನು ನೇರ ಪ್ರಸಾರ ವೀಕ್ಷಿಸಲು ಯು ಟ್ಯೂಬ್ ಚಾನಲ್ಲಾದ ರಾಜಯೋಗ ಟಿವಿ ಕನ್ನಡದಲ್ಲಿ (youtube/rajayogatvkannada)  ವೀಕ್ಷಿಸಬಹುದು.

error: Content is protected !!