ನೆನಪಿನಂಗಳದಿಂದೆದ್ದು ಬಂದ ಕೊಂಡಜ್ಜಿ ಬಸಪ್ಪನವರ 108ನೇ ವರ್ಷದ ಜನ್ಮ ದಿನಕ್ಕೆ

ನೆನಪಿನಂಗಳದಿಂದೆದ್ದು ಬಂದ ಕೊಂಡಜ್ಜಿ ಬಸಪ್ಪನವರ 108ನೇ ವರ್ಷದ ಜನ್ಮ ದಿನಕ್ಕೆ

ಜನಜೀವನದಲ್ಲಿ ಸಹಕಾರಿ ಮನೋಭಾವವು ನಾಗರಿಕತೆಯ ಆರಂಭದಿಂದಲೇ ಒಂದು ಮೂಲಭೂತ ಸೂತ್ರವಾಗಿ ಮೂಡಿ ಬಂದಿದೆ. ಹಿಂದಿನಂತೆ, ಇಂದು-ನಾಳೆ ಎಲ್ಲವೂ ಇರುವುದಿಲ್ಲ. ಪ್ರಗತಿಯ ದೃಷ್ಟಿಯಿಂದ ಹಾಗೆ ಇರುವುದು ಸರಿಯೂ ಅಲ್ಲ. ನಿನ್ನೆಯದು-ಇಂದಾಗಿರುವುದಿಲ್ಲ; ಇಂದಿದ್ದುದು ನಾಳೆ ಇರುವುದಿಲ್ಲ. ಭವಿಷ್ಯತ್ತಿನ ಈ ಎಲ್ಲಾ ‘ನಾಳೆ’ಗಳು ಒಂದು ದಿನ ವರ್ತಮಾನವನ್ನು ದಾಟಿ ಭೂತದ ‘ನಿನ್ನೆ’ಗಳಾಗಿಯೇ ರೂಪ ತಾಳುತ್ತವೆ. ಹಾದಿ ತಪ್ಪಿದ ಜನ, ಗುರಿ ತಪ್ಪಿದ ಸಮಾಜ, ಮಾನವೀಯ ನಂದನವನವನ್ನು ಇದು ಹಳೆಯದು, ಅಲ್ಪ, ಯಾರದೋ, ಹುರುಳಿಲ್ಲದ್ದು, ಸತ್ವಹೀನ, ನಿಷ್ಪ್ರಯೋಜಕ, ಕತ್ತಲೆ, ಅಚೇತನ, ಗ್ರಾಮ್ಯ ಎಂದು ತಿಳಿಯುತ್ತಾ, ತುಳಿದು-ತುಳಿದು ನೆಲಸಮ ಮಾಡಿದ ಮೇಲೆ ಅಲ್ಲಿ ಏನನ್ನು ಬಿತ್ತಿದರೋ ಅದನ್ನು ಕಂಡಾಗ ಮಾತ್ರ ಸಜೀವತೆಯ ಸ್ಪರ್ಷ ಎಂಬ ಅರಿವಿನ ತಳಹದಿಯ ಮೇಲೆ ವ್ಯಕ್ತಿತ್ವವನ್ನು ಮೂರ್ತಗೊಳಿಸಿಕೊಂಡವರು ಶ್ರೀಯುತ ಕೊಂಡಜ್ಜಿ ಬಸಪ್ಪನವರು.

ಚಿತ್ರದುರ್ಗ ಜಿಲ್ಲೆ ಹರಿಹರ ತಾಲ್ಲೂಕಿಗೆ ಒಳಪಟ್ಟ ಕುಗ್ರಾಮ ಕೊಂಡಜ್ಜಿ. ಗುಡ್ಡ-ಮರಡಿಗಳನ್ನು, ದೊಡ್ಡ ಕೆರೆಯನ್ನು ಪಶ್ಚಿಮಕ್ಕೆ ತುಂಗಭದ್ರಾ ನದಿಯನ್ನು ಹೊಂದಿದೆ. ಇಲ್ಲಿ ದೊರೆತಿರುವ ಹನುಮಂತ ದೇವಾಲಯದ ಬಳಿ ಇರುವ ಶಾಸನ ಮತ್ತು ಮಲ್ಲಿಕಾರ್ಜುನ ದೇವಾಲಯದ ಮುಂಭಾಗದಲ್ಲಿರುವ ವೀರಗಲ್ಲು ಊರಿನ ಪ್ರಾಚೀನತೆಯನ್ನು, ಇತಿಹಾಸವನ್ನು ಬಿಂಬಿಸುತ್ತವೆ. ಇದು ಇಂದು ಪ್ರೇಕ್ಷಣೀಯ ಸ್ಥಳವೂ ಆಗಿದೆ. ಇವೆಲ್ಲದರಿಂದ ಊರು ಶ್ರೀಯುತರಿಗೆ ಅತ್ಯಂತ ಆತ್ಯಾಂತಿಕ ರನ್ನಗನ್ನಡಿಯಾಗಿದೆ. 

ಕೊಂಡಜ್ಜಿ ಬಸಪ್ಪನವರ ತಂದೆ: ನಿಂಗಪ್ಪ, ತಾಯಿ: ಹಾಲಮ್ಮನವರ ಸಾಮಾನ್ಯ ರೈತ ಕುಟುಂಬದಲ್ಲಿ ದಿನಾಂಕ: 11-12-1915 ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಕೊಂಡಜ್ಜಿಯಲ್ಲಿ, ಲೋಯರ್ ಸೆಕೆಂಡರಿಯನ್ನು ಮಲೇಬೆನ್ನೂರಿನ ಬೆಣ್ಣಿಹಳ್ಳಿ ಕುಟುಂಬದವರ ಸಹಾಯದಿಂದ ಮುಗಿಸಿದರು. ಪ್ರೌಢಶಾಲಾ ಶಿಕ್ಷಣಕ್ಕೆ ಆರ್ಥಿಕ ತೊಂದರೆಯಾದಾಗ ಈಚಘಟ್ಟದ ಬಸಪ್ಪ, ಹನುಮನಳ್ಳಿ ಪಟೇಲ್ ಮಹಾದೇವಪ್ಪನವರ ಸಹಾಯದಿಂದ ದಾವಣಗೆರೆಯಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದರು. ಮುಂದಿನ ಶಿಕ್ಷಣಕ್ಕೆ ದಾರಿ ತೋರದೆ ಕೆಲಸಕ್ಕೆ ಸೇರಿಕೊಂಡು, ಮನೆಗೆ ಆರ್ಥಿಕ ನೆರವಾಗಬೇಕೆಂಬ ವಿಚಾರದಲ್ಲಿದ್ದಾಗ ಡಾ|| ಮಹಾಂತಯ್ಯನವರ ಕೃಪೆಯಿಂದ, ಡಿ.ಹೆಚ್. ಚಂದ್ರಶೇಖರಯ್ಯನವರು ವಿದ್ಯಾರ್ಥಿ ವೇತನ ಕೊಡಿಸಿದ್ದರಿಂದ, ‘ವೀರಶೈವ ವಿದ್ಯಾವರ್ಧಕ ಸಂಘ’ದ ಸಹಕಾರದಿಂದ ಬೆಂಗಳೂರಿನ ಇಂಟರ್‍ಮೀಡಿಯೆಟ್ ಕಾಲೇಜಿಗೆ ಪ್ರವೇಶಾಕಾತಿಯನ್ನು ಪಡೆದು, ಪರೀಕ್ಷೆಯಲ್ಲಿ ತೇರ್ಗಡೆಯಾಗಿ, ಅದೇ ವರ್ಷ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್.ಸಿ. ಪದವಿಗೆ ಸೇರಿ 1932 ರಲ್ಲಿ ಪದವೀಧರರಾದದ್ದು ಸುಲಭೀಕರಣವಾಗಿರಲಿಲ್ಲ. ತದನಂತರ ಮುಂದಿನ ವಿದ್ಯಾಭ್ಯಾಸಕ್ಕೆ ಮತ್ತೆ ತೊಡರು-ತೊಡಕುಗಳೇ-ತೊಡವಾದಾಗ ವಿವಾಹವು ಕೂಡಿ ಬಂದಿದ್ದರ ಪ್ರಯುಕ್ತ ಕಂದಗಲ್ಲು ಗ್ರಾಮದ ಪಟೇಲ್ ಚನ್ನಬಸಪ್ಪನವರು ತಮ್ಮ ಪುತ್ರಿಯಾದ ಸರ್ವಮಂಗಳಮ್ಮನವರನ್ನು ಧಾರೆಯೆರೆದು ಕಾನೂನು ಶಿಕ್ಷಣ ಪಡೆಯಲು ಪೂನಾಕ್ಕೆ ಕಳುಹಿಸಿದರು. ಗಮನಾರ್ಹ ವಿಷಯವೇನೆಂದರೆ, ಜಿಲ್ಲಾಧಿಕಾರಿಯಾಗಿ, ಜನಪದ ತಜ್ಞರಾಗಿ ವಿಖ್ಯಾತರಾಗಿದ್ದ ಹೆಚ್.ಎಲ್. ನಾಗೇಗೌಡರು ಸಹಪಾಠಿಯಾದ ಸತ್ಪಾರ್ಥ ಮುಂದೆ ಸತ್ಪಥವಾಯಿತು. ಇವೆಲ್ಲದರ ಕ್ರೋಢೀಕೃಪದಿಂದ 1940 ರಲ್ಲಿ ಎಲ್.ಎಲ್.ಬಿ. ಪದವೀಧರರಾದರು. ಶ್ರೀಯುತರ ವಿದ್ಯಾಭ್ಯಾಸ ಸುಧಿರ್ಘ ಸಾಹಸ ಪ್ರವಾಸ (Odyssey in education field) ದಲ್ಲಿ ಸಂತುಷ್ಠಿಯಾಯಿತು. ಅಮೇರಿಕದ ವಿಜ್ಞಾನಿ ರಾಂಡಿ ಪಾಷನ್‍ನ ಅಂತಿಮ ಪ್ರಭಾಷಣ (The last Lecturer)  ‘ಎಲ್ಲರೂ ಕನಸು ಕಾಣಬೇಕು, ಅವುಗಳನ್ನು ನನಸು ಮಾಡಿಕೊಳ್ಳಬೇಕು’ ಎಂಬ ಸಂದೇಶ ಹಾಗೂ ಗೋಪಾಲಕೃಷ್ಣ ಅಡಿಗರ ‘ಬನ್ನಿ ಬನ್ನಿ ಕನಸುಗಳೇ ಮರಳಿ ಮನೆಗೆ ಬನ್ನಿ’ ಎಂಬ ವಾಕ್ಯಗಳ ಸಾರಾಗ್ರತೆ, ‘ನಾನೆಂಬುದು ನಾನಲ್ಲ’ (I am not what I am) ಎಂಬುದರಿಂದ ಸಿಡಿದೆದ್ದ ಚೈತನ್ಯ ‘ನಾನು ನಾನೇ ಇದ್ದೇನೆ’ (I am myself) ಎಂಬ ದಿಮ್ಮಿತ ಭಾವನೆಯಿಂದ ವ್ಯಕ್ತ್ಯಾತೀತ ವ್ಯಕ್ತಿತ್ವವನ್ನು ಬೆಳೆಸಿಕೊಂಡರು.

ಶ್ರೀಯುತರು ಕಾನೂನು ಪದವೀಧರರಾದ ನಂತರ ವಕೀಲರಾಗುವ ಇಚ್ಛೆಯಿಂದ ಪ್ರಸಿದ್ಧರಾದ ಬೆಳಗುತ್ತಿ ಹೆಚ್. ಲಿಂಗಪ್ಪನವರ ಬಳಿಯಲ್ಲಿ ಒಂದು ವರ್ಷ ಶಿವಮೊಗ್ಗದಲ್ಲಿ ತರಬೇತಿ ಹೊಂದಿ, 1962 ರಲ್ಲಿ ಸ್ವತಂತ್ರ ವಕೀಲಿ ವೃತ್ತಿಯನ್ನು ದಾವಣಗೆರೆಯಲ್ಲಿ ಆರಂಭಿಸಿದರು. ಪ್ರಾರಂಭದಲ್ಲಿ ವೃತ್ತಿ ತೃಪ್ತಿಕರವಾಗದಿದ್ದರೂ, ಕಾಲಕ್ರಮೇಣ ಪರಿಣಿತಿಯನ್ನು ಹೊಂದಿ ದೊಡ್ಡ-ದೊಡ್ಡ ಮೊಕದ್ದಮೆಗಳಲ್ಲಿ ಜಯ ಗಳಿಸಿ ಪ್ರಗಲ್ಭರಾದರು. ತತ್ಸಮನಾಗಿ ಕಿರಿಯ ವಕೀಲರುಗಳಿಗೆ ಆಶ್ರಯವಿತ್ತು, ಔದಾರ್ಯದಿಂದ ಪ್ರೋತ್ಸಾಹಿಸಿ, ವೃತ್ತಿ ವಿಶ್ವಾಸ ಬೆಳೆಯುವಂತೆ ಮಾಡಿ, ಕಿರಿಯರು ಬೆಳೆದರೆ ತಾವೂ ಬೆಳೆದಂತೆ ಎಂಬ ಸತ್ಪ್ರೋತ್ಸಾಹ ಭಾವನೆ ಶ್ರೀಯುತರದ್ದಾಗಿತ್ತು.

ಕುಗ್ರಾಮದ ಒಂದು ರೈತ ಕುಟುಂಬದಲ್ಲಿ ಜನಿಸಿ ರಾಜಕೀಯ ಪ್ರವೇಶ ಅಷ್ಟು ಸುಲಭದ್ದಾಗಿರಲಿಲ್ಲ. ಇವರ ಮಾವನವರಾದ ಕಂದಗಲ್ ಪಟೇಲ್ ಚನ್ನಬಸಪ್ಪನವರು ಅಳಿಯನನ್ನು ರಾಜಕೀಯ ಕ್ಷೇತ್ರಕ್ಕೆ ತರುವಲ್ಲಿ ಶ್ರಮ ವಹಿಸಿದರು. ಬ್ರಿಟೀಷರ ದಬ್ಬಾಳಿಕೆಯ ಕಾಲ ಅವರು ಪೂರ್ಣಾಧಿಕಾರವನ್ನು ತಮ್ಮಲ್ಲಿಟ್ಟುಕೊಂಡು, ಆಡಳಿತದ ನಿಬಂಧನೆಯ ಮೇರೆಗೆ ಸ್ಥಳೀಯ ರಾಜರುಗಳಿಗೆ ಆಡಳಿತವನ್ನು ವಹಿಸಿಕೊಟ್ಟಿದ್ದರ ಫಲವಾಗಿ ‘ಪ್ರಜಾ ಪ್ರತಿನಿಧಿ ಸಭೆ’ ಕಾರ್ಯೋನ್ಮುಖವಾಯಿತು. ಈ ಸಭೆಗೆ ಚನ್ನಬಸಪ್ಪನವರು ಸದಸ್ಯರಾಗಿದ್ದುದರ ಪರಿಣಾಮವಾಗಿ ಶ್ರೀಯುತರು ರಾಜಕೀಯ ರಂಗಕ್ಕೆ ಪ್ರವೇಶಿಸಲು ದಾರಿಯಾಯಿತು.

ಪ್ರಥಮ ಬಾರಿಗೆ 1943 ರಲ್ಲಿ ಚಿತ್ರದುರ್ಗ ಜಿಲ್ಲಾ ಬೋರ್ಡ್ ಹರಿಹರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನನ್ನು ಭವಿಸಿದರು. ಸೋತ ಕೊಂಡಜ್ಜಿಯವರು ಅದೇ ಕ್ಷೇತ್ರದಿಂದ ಕೆಲವೇ ದಿನಗಳಲ್ಲಿ ಜಯ ಗಳಿಸಿದರು. ಅದು ಆದದ್ದು ಹೀಗೆ! ಕಾನೂನು ಪ್ರಕಾರ ಗೆದ್ದ ಅಭ್ಯರ್ಥಿ ಕಾರಣಾಂತರಗಳಿಂದ ರಾಜೀನಾಮೆ ಕೊಟ್ಟರೆ ಮರು ಚುನಾವಣೆಯಾಗದೇ, ಸೋತ ಅಭ್ಯರ್ಥಿಗಳಲ್ಲಿ ಯಾರು ಹೆಚ್ಚು ಮತ ಪಡೆದಿರುತ್ತಾರೋ ಅವರು ತೆರವಾದ ಸ್ಥಾನ ತುಂಬಲು ಅರ್ಹರಾಗಿರುತ್ತಿದ್ದರು. ಅದರಂತೆಯೇ ಈ ಅವಕಾಶ ಶ್ರೀಯುತರಿಗೆ ಲಭಿಸಿತು. ಮುಂದೆ ಚಿತ್ರದುರ್ಗ ಜಿಲ್ಲಾ ಬೋರ್ಡ್ ಅಧ್ಯಕ್ಷರಾದರು. 28 ವರ್ಷದ ಯುವಕ ಕೊಂಡಜ್ಜಿಯವರು ಆಯ್ಕೆಯಾಗಿ ಹೊಸ ಇತಿಹಾಸ ರಚಿಸಿದ್ದು ಅವಿಸ್ಮರಣೀಯ. 

ಶ್ರೀಯುತರು ಮೊದಲು ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡಿ, ಪ್ರತಿ ತಾಲ್ಲೂಕಿನಲ್ಲಿ ಪ್ರೌಢ ಶಾಲೆ ತೆರೆಯಿಸಿದರು. ಸಾರ್ವಜನಿಕ ಆಸ್ಪತ್ರೆಗಳ ಬಗ್ಗೆ ಕಾಳಜಿ ವಹಿಸಿದರು. ಪ್ರವಾಸ ಕೈಗೊಂಡಿದ್ದಾಗ ಊರ ಹೊರಗೆ ‘ಗೊಲ್ಲರ’ ಗುಡಿಸಲನ್ನು ಕಂಡು ಮನಕರಗಿ, ಕ್ರೂರ ಸಂಪ್ರದಾಯಕ್ಕೆ ತಿಳಿಹೇಳಿ ಕಂದಾಚಾರಕ್ಕೆ ತೆರೆ ಎಳೆದರು. ರೈತರ ಬೆಳೆಗಳಿಗೆ ಸರಿಯಾದ ಬೆಲೆ ದೊರಕಲು ‘ಸಹಕಾರ ಸಂಘ ಮತ್ತು ಸಹಕಾರ ಸಂಸ್ಥೆ’ಗಳನ್ನು ಕಾರ್ಯರೂಪಕ್ಕೆ ತಂದರು. ದಲಿತ ಮತ್ತು ದುರ್ಬಲ ವರ್ಗದವರ ಬಗ್ಗೆ ವಿಶೇಷ ಕಾಳಜಿ ವಹಿಸಿದರು.

1962 ರ ಸಾರ್ವಜನಿಕ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಗೆದ್ದು ಶ್ರೀ ನಿಜಲಿಂಗಪ್ಪನವರ ಮಂತ್ರಿ ಮಂಡಲದಲ್ಲಿ ಉಪಸಚಿವರಾಗಿ, ಸಹಕಾರ, ಸಮಾಜ ಮತ್ತು ಅಬಕಾರಿ ಇಲಾಖೆಗಳನ್ನು ವಹಿಸಿಕೊಂಡು ದಕ್ಷತೆಯಿಂದ ಕಾರ್ಯನಿರ್ವಹಿ ಸಿದರು. 1967 ರ ಚುನಾವಣೆಯಲ್ಲಿ ವಿಜಯಿಗಳಾಗಿ ತದನಂತರ ರಾಜೀನಾಮೆ ಕೊಟ್ಟು, 1972 ರಲ್ಲಿ ಲೋಕಸಭೆಗೆ ಚಿತ್ರದುರ್ಗ ಕ್ಷೇತ್ರದಿಂದ ವಿಜಯಿಗಳಾಗಿ ಸಂಸತ್ತಿನ ಸದಸ್ಯರಾಗಿ ಆರೋಗ್ಯ ಮತ್ತು ಕುಟುಂಬ ಯೋಜನೆಯ ಉಪ ಸಚಿವರಾಗಿ ಕಾರ್ಯನಿರ್ವಹಿಸಿ, ಕಾರಣಾಂತರಗಳಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಂಸತ್ ಸದಸ್ಯರಾಗಿ ಮುಂದುವರೆದು, ರಾಜಕೀಯದ ರಂಗು-ರಂಗಿನ-ರಿಂಗಣಗುಣಿತದಲ್ಲಿ ಯಾವ ಗಳಿಗೆಯಲ್ಲಿ ವಕ್ರವಾಗುತ್ತದೋ ತಿಳಿಯಲಾಗದು ಎಂದು ಅರಿತು ರಾಜಕೀಯ ರಂಗಕ್ಕೆ ವಿದಾಯ ಹೇಳಿ, ತಮ್ಮ ಚೈತನ್ಯದಾಯಕ ಒಲವಿನ ವಿಶ್ವ ಸ್ಕೌಟ್ಸ್ ಮತ್ತು ಗೈಡ್ಸ್ ಸೇವಾ ಸಂಸ್ಥೆ ಕೈಬೀಸಿ ಕರೆದಾಗ ‘ಊಡುತಿದೆ ತಾಯಿ ಬೇರು’ ಎಂದರಿತು ಮುಗ್ಧ ಹಸುಗೂಸಿನಂತೆ ಅಪ್ಪಿಕೊಂಡರು. ತದನಂತರ ಮಗ ಕೊ.ಬ. ಷಣ್ಮುಖಪ್ಪನವರು ಕಿಂಕರರಾಗಿ ಕೈಂಕರ್ಯದಿಂದ ‘ರಜತಗಜ’ ಭೂಷಿತರಾದದ್ದು ಅಭಿನಂದನೀಯ. 

ಕೊಂಡಜ್ಜಿಯವರ ಕುಟುಂಬ ದೊಡ್ಡದು. ಹಡಗಿನಂತಹ ಸಂಸಾರ, ಏಳು ಜನ ಗಂಡು ಮಕ್ಕಳು, ಓರ್ವ ಮಗಳು ಒಟ್ಟು 8 ಜನ ಮಕ್ಕಳನ್ನೊಳಗೊಂಡ ರಸೋತ್ಕಟ ಸಂಸಾರ. ಇಡೀ ಕುಟುಂಬದ ಜವಾಬ್ದಾರಿ ಶ್ರೀಮತಿ ಸರ್ವಮಂಗಳಮ್ಮ ನವರದ್ದಾಗಿತ್ತು. ಇದರಿಂದ ಕೊಂಡಜ್ಜಿಯವರಿಗೆ ವೃತ್ತಿಯ ಕಡೆ ಗಮನೀಕರಿಸಲು ಅನುಕೂಲವಾಯಿತು. 

ಶ್ರೀಯುತರು ನಿರ್ಮತ್ಸರೀಯಾಗಿ, ವಕೀಲರಾಗಿ, ಜಿಲ್ಲಾ ಬೋರ್ಡ್ ಅಧ್ಯಕ್ಷರಾಗಿ, ಶಿಕ್ಷಣ ಪ್ರೇಮಿಯಾಗಿ, ಕರುಣಾಮಯಿಯಾಗಿ, ಸಾರ್ವತ್ರಿಕ ಶಿಕ್ಷಣದ ರೂವಾರಿಯಾಗಿ, ವಸ್ತ್ರ ದಾನಿಯಾಗಿ, ಸಹಕಾರಿ ಕ್ಷೇತ್ರದ ಹೊಳೆವ ನಕ್ಷತ್ರಕರಾಗಿ, ಸ್ವಾವಲಂಬಿಯಾಗಿ, ಏಕೀಕರಣದ ಭಾಗತರಾಗಿ, ಕುಲದೈವದ ಭಕ್ತರಾಗಿ, ಸ್ಕೌಟ್ಸ್ ಸೇವೆಯ ಓಂಕಾರರಾಗಿ, ವಿದೇಶಿ ಪ್ರವಾಸಿಗರಿಗೆ, ಕೃತ ಸಂಕಲ್ಪರಾಗಿ, ಸತ್ಯ, ಧರ್ಮ, ನ್ಯಾಯ ನಿಷ್ಠುರಗಳನ್ನು ಒಪ್ಪಿ – ಅಪ್ಪಿಕೊಂಡು ಜೀವನ ಮೌಲ್ವಿಕರಾಗಿ ಅಷ್ಟೇ ಅಲ್ಲ ತಮ್ಮ ಸಂಪರ್ಕ ಹೊಂದಿದ ಎಲ್ಲರಲ್ಲಿಯೂ ಈ ಮೌಲ್ಯಗಳನ್ನು ಬಿತ್ತಿ ಬೆಳೆಯುವ ಸಂಕಲ್ಪ – ದೃಢತ್ವ ತುಂಬಿದ ತತ್ವಗಳಿಗೆ ಬದ್ಧರಾಗಿ, ಹಿಗ್ಗದೆ-ಕುಗ್ಗದೆ ಸ್ಥಿರ ಪ್ರಾಜ್ಞರಾಗಿ ಬಾಳಿನ ನಡುವೆ ಕಗ್ಗತ್ತಲೆಯಲ್ಲಿ ಹೆಜ್ಜೆಯನ್ನಿಡುತ್ತಾ, ಕಾಂತಿಕುಂಜದಲ್ಲಿ ಅಪ್ಯಾಯಮಾನಕರಾಗಿ ಅಹರ್ನಿಷಿ ಸಾತ್ವಿಕರಾಗಿ, ತಗಲೂಫಿಗೆ ಹೆದರದೆ, ಅಖಲ್ಯರಾಗದೆ, ಹಪಾಹಪಿಗೊಳಗಾದೇ, ಅಗಚಾಟಲುಗಳ ನಡುವೆ ಬದುಕಿದವರು. 

ಕೊನೆಯದಾಗಿ ಸ್ವಾಮಿ ವಿವೇಕಾನಂದರು ದಿನಾಂಕ: 22-06-1894 ರಲ್ಲಿ ಬಸ್ಟನ್‍ನಿಂದ ಇಂಗ್ಲೀಷ್‍ನಲ್ಲಿ ಮೈಸೂರು ಮಹಾರಾಜ ಚಾಮರಾಜ ಒಡೆಯರಿಗೆ ಬರೆದ ಪತ್ರದ ಒಕ್ಕಣಿಕೆ : My noble prince! This life is short, the vanities of the world are transient, but they alone live who live for others, the rest are more dead than alive  (ಉದಾತ್ತ ಸ್ವಭಾವದ ಮಹಾರಾಜರೇ! ಬದುಕು ಅಲ್ಪಕಾಲಿಕವಾದದ್ದು, ಜಗತ್ತಿನ ಆಡಂಬರಗಳೆಲ್ಲಾ ಕ್ಷಣಿಕವಾದದ್ದು, ಆದರೆ ಯಾರು ಇತರರಿಗಾಗಿ ಬದುಕುತ್ತಾರೆಯೋ ಅವರು ನಿಜವಾದ ಸಜೀವಿಗಳು. ಉಳಿದವರೆಲ್ಲಾ ಜೀವಚ್ಛವರು) ಅಂದರೆ ಸಹಾನುಭೂತಿ (Empathy)  ಗಿಂತ ಅನುಭೂತಿ ಮುಖ್ಯ, ಬನಾವಣೆ (Fabrication) ಗಿಂತ ವ್ಯವಸ್ಥಿತ ಜೋಡಣೆ (Imbrication) ಪ್ರಮುಖವೆಂಬುದನ್ನರಿತು, ಮುಪ್ಪಿನಲ್ಲಿ ಸಹಜವಾಗಿ ಉಂಟಾಗುವ ದೂರದೃಷ್ಟಿ(Epitaph) ತರಾಗಿ ನೈಜ ಬದುಕಿನ ಸರಳ-ಸುಂದರ-ಹಂದರಲ್ಲಿ ‘ಮೈಂ ಅಹಿಂಸಕ್ ಹೂಂ, ನ ಕೋಈ ಶತ್ರು ಹೈ’ (ಅಹಿಂಸಕನು ನಾನು ನನಗಿಲ್ಲ ಶತ್ರು) ಎಂದು ಬಾಳಿ ದಿನಾಂಕ: 14-11-1992 ರಂದು ಆದರವಿರದ, ಕದವಿರದ, ಹೆಸರಿರದ, ಹೋದವರು ಹಿಂದಿರುಗಿ ಬರಲು ಹಾದಿಯಿರದ, ವಿಶೇಷ ಕೊನೆಯ ನಿಲ್ದಾಣದಲ್ಲಿ ತಂಗಿ ಚೈತ್ಯೋಪಲಿಪಿ (Epitaph)  ಗ್ರಸ್ತರಾದರು.  


ನೆನಪಿನಂಗಳದಿಂದೆದ್ದು ಬಂದ ಕೊಂಡಜ್ಜಿ ಬಸಪ್ಪನವರ 108ನೇ ವರ್ಷದ ಜನ್ಮ ದಿನಕ್ಕೆ - Janathavani– ಪ್ರೊ|| ಬಾತಿ ಬಸವರಾಜ್, ಶೈಕ್ಷಣಿಕ ಸಲಹೆಗಾರರು, ದವನ ಕಾಲೇಜು, ದಾವಣಗೆರೆ. 88845 27130

error: Content is protected !!