ಶ್ರದ್ಧೆಗೆ ಬದ್ಧನಾಗಿದ್ದಾಗ ಉತ್ತಮ ವ್ಯಕ್ತಿ

ಶ್ರದ್ಧೆಗೆ ಬದ್ಧನಾಗಿದ್ದಾಗ ಉತ್ತಮ ವ್ಯಕ್ತಿ

ಯರಗುಂಟೆ ಗ್ರಾಮದ ಕಾರ್ಯಕ್ರಮದಲ್ಲಿ ಉಜ್ಜಯಿನಿ ಶ್ರೀ ಪ್ರತಿಪಾದನೆ

ದಾವಣಗೆರೆ, ಡಿ. 10- ಮನುಷ್ಯ ನಂಬಿಕೆ, ವಿಶ್ವಾಸ, ಶ್ರದ್ಧೆಗೆ ಬದ್ಧನಾಗಿ ನಡೆದುಕೊಂಡಾಗ ಮಾತ್ರ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಬೆಳೆಯಲು ಸಾಧ್ಯವಿದೆ ಎಂದು ಉಜ್ಜಯಿನಿ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳು ಪ್ರತಿಪಾದಿಸಿದರು.

ಇಲ್ಲಿಗೆ ಸಮೀಪದ ಯರಗುಂಟೆ ಗ್ರಾಮದ ಶ್ರೀ ಕ್ಷೇತ್ರ ಅಶೋಕ ನಗರದಲ್ಲಿರುವ ಶ್ರೀ ಗುರು ಕರಿಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದು ಏರ್ಪಾಡಾಗಿದ್ದ ನೂತನ ರಥೋತ್ಸವ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.

ಗ್ರಾಮ, ಪಟ್ಟಣ, ನಗರ, ಜಿಲ್ಲೆ, ರಾಜ್ಯ, ದೇಶದ ಸರ್ವ ಜನಾಂಗದವರು, ಧರ್ಮದವರು ಅನ್ನುವುದಕ್ಕಿಂತ ನಾವೆ ಲ್ಲರೂ ಈ ದೇಶದ ಪ್ರಜೆಗಳು, ಭಾರತಾಂಬೆಯ ಮಕ್ಕಳು, ನಾವೆಲ್ಲರೂ ಭಾರತೀಯರು ಎನ್ನುವ ಸಮನ್ವಯ ಭಾವ ಎಲ್ಲರಲ್ಲೂ ಒಡಮೂಡಲಿ ಎಂದು ಹಿತನುಡಿದರು.

ಪ್ರತಿಯೊಬ್ಬ ಮನುಷ್ಯ ಧರ್ಮ, ನಂಬಿಕೆ, ವಿಶ್ವಾಸದ ಮೇಲೆ ನಡಯಬೇಕು. ಮೂರ್ತಿ ಯಾವುದೇ ಇರಲಿ, ಮನುಷ್ಯ ಹೃದಯದೊಳಗೆ ನಂಬಿಕೆ, ವಿಶ್ವಾಸ, ಭಕ್ತಿ ಇಲ್ಲದೇ ಹೋದರೆ ಕಲ್ಲಿನ ಸ್ವರೂಪದಲ್ಲಿ ಕಾಣುತ್ತದೆ. ಉತ್ಕಟ ಪ್ರೇಮ ಇದ್ದಲ್ಲಿ ಕಲ್ಲಿನ ವಿಗ್ರಹ ಭಗವಂತನ ಸ್ವರೂಪವಾಗಿ ಕಾಣುತ್ತದೆ  ಎಂದರು.

ಯಾರ ಮನಸ್ಸು ಸ್ವಚ್ಚ ಮತ್ತು ಹೃದಯ ಸ್ವಚ್ಚವಾಗಿರುತ್ದದೆಯೋ ಅಂತಹ ವ್ಕಕ್ತಿ ಯಾರಿಗೂ ಹೆದರುವ ಅವಶ್ಯಕತೆ ಇರುವುದಿಲ್ಲ ಎಂದು ಹೇಳಿದರು.ನಂಬಿದ ಭಕ್ತರನ್ನು ಶ್ರೀ ಕರಿಬಸವೇಶ್ವರ ಸ್ವಾಮಿ ಎಂದಿಗೂ ಕೈಬಿಡುವುದಿಲ್ಲ. ಭಕ್ತರ ರಕ್ಷಣೆ ಮಾಡುತ್ತಾನೆ. ಭಕ್ತರ ಸಹಕಾರದಿಂದ ಶ್ರೀಮಠ ಇನ್ನೂ ಅಭಿವೃದ್ಧಿ ಹೊಂದಲಿ ಎಂದು ಆಶಿಸಿದರು.

ನಾಡು ಸಮೃದ್ಧವಾಗಿ ಒಳ್ಳೆಯ ಮಳೆ, ಬೆಳೆಯಾಗಲಿ, ಬೆಳೆಗೆ ತಕ್ಕ ಮಾರುಕಟ್ಟೆ ಮೌಲ್ಯ ಸಿಕ್ಕು, ದೇಶದ ಅನ್ನದಾತ ರೈತ, ದೇಶ ಕಾಯುವ ಸೈನಿಕನ ಬಾಳು ಹಸನಾಗಲಿ, ಮಾನವರು ಸಂಕಷ್ಟದಿಂದ ಪಾರಾಗಿ, ವ್ಯಾಪಾರ, ಉದ್ಯೋಗಗಳು ಅಭಿವೃದ್ದಿಯಾಗಲಿ, ವಧು-ವರರ ಕಲ್ಯಾಣವಾಗಲಿ, ಸಂಸ್ಕಾರವಂತ ಮಕ್ಕಳು ಜನಿಸಲಿ ಎಂದು ಜಗದ್ಗುರುಗಳು ಶುಭ ಹಾರೈಸಿದರು.

ವೀರಶೈವ ಧರ್ಮ ಸ್ಥಾಪನೆಯಾದಗಿನಿಂದಲೂ ಮಹಿಳೆಯರಿಗೆ ಪುರುಷನಷ್ಟೇ ಸಮಾನ ಅವಕಾಶ ನೀಡಲಾಗಿದೆ. ಅದರಂತೆ ಯರಗುಂಟೆ ಶ್ರೀಕ್ಷೇತ್ರದ ಶ್ರೀ ಕರಿಬಸವೇಶ್ವರ ಗದ್ದುಗೆ ಮಠದಲ್ಲಿ ವಿಶೇಷವಾಗಿ ಮಹಿಳೆಯರಿಂದಲೇ ತೇರು ಎಳೆಯುವ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಸಂಸದ ಜಿ.ಎಂ. ಸಿದ್ಧೇಶ್ವರ ಮಾತನಾಡಿ, ರಾಜಕೀಯವಾಗಿ ಶೇ. 33 ರಷ್ಟು ಮೀಸಲಾತಿಯನ್ನು ನೀಡಲು ಸಂಸತ್‌ನಲ್ಲಿ ಬಿಲ್ ಪಾಸ್ ಮಾಡಲಾಗಿದೆ. ಅನುಷ್ಠಾನಗೊಳ್ಳಬೇಕಾಗಿದೆ. ಇದು ಜಾರಿಯಾದಲ್ಲಿ ಕರ್ನಾಟಕದಲ್ಲಿ 7 ರಿಂದ 8 ಜನ ಮಹಿಳೆಯರಿಗೆ ಲೋಕಸಭೆಯಲ್ಲಿ ಸ್ಥಾನ ಸಿಗಲಿದೆ ಎಂದರು.

ಇನ್‌ಸೈಟ್ಸ್ ಐಎಎಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ.ಬಿ. ವಿನಯ್ ಕುಮಾರ್ ಮಾತನಾಡಿದರು. ಶ್ರೀ ಪರಮೇಶ್ವರ ಸ್ವಾಮೀಜಿ, ತಾವರೆಕೆೇರೆ ಶಿಲಾಮಠದ ಡಾ. ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ನುಡಿ ನೈವೇದ್ಯ ಸಮರ್ಪಿಸಿದರು.

ಪಾಲಿಕೆ ಸದಸ್ಯ ಕೆ. ಪ್ರಸನ್ನಕುಮಾರ್, ಶರಣ ಸಾಹಿತ್ಯ ಪರಿಷತ್ ಕಾರ್ಯದರ್ಶಿ  ಎನ್.ಎಸ್. ರಾಜು,  ಉಜ್ಜಿನಿ ಹಜರತ್ ಸೈಯದ್ ರಹಮತ್ ಉಲ್ಲಾ ಮತ್ತಿತರರು ಉಪಸ್ಥಿತರಿದ್ದರು.

ಮುಷ್ಟೂರು ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಚನ್ನಗಿರಿ ಶ್ರೀ ಹಾಲಸ್ವಾಮಿ ವಿರಕ್ತಮಠದ ಡಾ. ಬಸವ ಜಯಚಂದ್ರ ಸ್ವಾಮೀಜಿ, ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಖಾನಾಮಡುಗು ದಾಸೋಹ ಮಠದ ಶ್ರೀ ಶರಣಾರ್ಯರು, ನಾಗವಂದದ ಶ್ರೀ ಮರುಳಸಿದ್ಧೇಶ್ವರ ಸ್ವಾಮಿ ಹೊರಮಠದ ಶ್ರೀ ಶಿವಯೋಗಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು.

ಕಲ್ಲೂರು ಮಹಾಂತೇಶ್ ಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ಧಪ್ಪ ಸ್ವಾಗತಿಸಿದರು. ಸಮಿತಿ ಪದಾಧಿಕಾರಿಗಳಾದ ವಿಜಯಕುಮಾರ್, ಎಂ. ಮಂಂಜುನಾಥ್, ಎ.ಸಿ.ಕರಿಬಸಪ್ಪ, ಬಿ.ಲೋಹಿತ್, ಎಸ್.ಪಿ. ರಾಕೇಶ್ ಮತ್ತಿತರರು ಪಾಲ್ಗೊಂಡಿದ್ದರು. 

error: Content is protected !!