ದಾವಣಗೆರೆ, ಡಿ. 8- ರಜಪೂತ್ ಕರ್ಣಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಸುಖ್ದೇವ್ ಸಿಂಗ್ ಗೋಗಾಮೆಡಿ ಹತ್ಯೆ ಖಂಡಿಸಿ ಜಿಲ್ಲಾ ರಜಪೂತ್ ಮಹಾಸಭಾ ಹಾಗೂ ವಿಷ್ಣು ಸಮಾಜದಿಂದ ನಗರದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಬೈಕ್ ಯಾನವು ಗಾಂಧಿ ವೃತ್ತದಿಂದ ಹೊರಟು ಪಿ.ಬಿ. ರಸ್ತೆ ಮೂಲಕ ಜಿಲ್ಲಾಡಳಿತ ಭವನದ ವರೆಗೂ ಸಾಗಿ ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಇದೇ ವೇಳೆ ಮಹಾಸಭಾ ಜಿಲ್ಲಾಧ್ಯಕ್ಷ ಜೆ. ಈಶ್ವರಸಿಂಗ್ ಕವಿತಾಳ್ ಮಾತನಾಡಿ, ಸುಖ್ದೇವ್ ಸಿಂಗ್ ಗೋಗಾಮೆಡಿ ಅವರನ್ನು ರಾಜಸ್ಥಾನದ ಜೈಪುರದ ಅವರ ನಿವಾಸಕ್ಕೆ ದುಷ್ಕರ್ಮಿಗಳು ನುಗ್ಗಿ ದೇಶೀ ಬಂದೂಕುಗಳಿಂದ ಹತ್ಯೆ ಮಾಡಿರುವುದು ಅತ್ಯಂತ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹತ್ಯೆ ಖಂಡಿಸಿ ಕೇವಲ ರಾಜಸ್ಥಾನ ಮಾತ್ರವಲ್ಲದೇ, ದೇಶ ಹಾಗೂ ವಿದೇಶಗಳಲ್ಲಿಯೂ ಮಾನವೀಯ ಮೌಲ್ಯಗಳ ಪ್ರತಿಪಾದಕರು ಜಾತಿ, ಪ್ರಾಂತ್ಯಗಳ ಎಲ್ಲೆ ಮೀರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮಾನವೀಯ ಅಂತಃಕರಣ, ಸಮರಸ ಬಾಳ್ವೆಯನ್ನು ಪ್ರತಿಪಾದಿಸುತ್ತಾ ಜೀವನ ನಡೆಸುತ್ತಿದ್ದ ಸುಖದೇವ್ ಸಿಂಗ್ ಹತ್ಯೆಯಿಂದ ನಾಗರಿಕ ಸಮಾಜ ತಲೆ ತಗ್ಗಿಸುವ ಕೆಲಸವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಕೃತ್ಯದ ಹಿಂದೆ ಕಾಣದ ಕೈಗಳು ಕೆಲಸ ಮಾಡಿದ್ದು, ಸಮಾಜದ ಮುಖಂಡರಿಗೆ ಜೀವ ಭಯವಿದೆ. ಇಂತಹ ಕೃತ್ಯಗಳು ಮರುಕಳಿಸದಂತೆ ಕ್ರಮಕೈಗೊಳ್ಳಬೇಕು. ಪ್ರಕರಣದಲ್ಲಿ ಭಾಗಿಯಾದ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ, ಸಮಗ್ರ ತನಿಖೆ ನಡೆಸಿ, ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಮಾಜದ ಮುಖಂಡರಾದ ಮೂಲಸಿಂಗ್ ರಾಥೋಡ್, ಅಮರ್ ಸಿಂಗ್ ಭಾಟಿ, ಸೈತನ್ ಸಿಂಗ್, ಗೋಪಾಲ್ ಸಿಂಗ್ ಭಾಟಿ, ಶ್ರೀಕಾಂತ್ ಬಗರೆ, ಗೌತಮ್ ಜೈನ್, ಗಣಪತ್ ಸಿಂಗ್ ದೇವ್ಲಾ, ರಾಕೇಶ್, ರಾಹುಲ್, ರಾಜು ಜಿ. ಪಾಟೀಲ್ ಮತ್ತಿತರರು ಭಾಗವಹಿಸಿದ್ದರು.