ಮೊದಲ ಮಳೆಯ ಘಮಲಿನ ಹಸಿ ಕವನಗಳು

ಮೊದಲ ಮಳೆಯ ಘಮಲಿನ ಹಸಿ ಕವನಗಳು

ಮೊದಲ ಮಳೆಯ ಘಮಲಿನ ಹಸಿ ಕವನಗಳು - Janathavaniಕಾವ್ಯವನ್ನೇ ಜೀವಿಸುತ್ತಿರುವ ದಾವಣಗೆರೆಯ ಕವಿ ಪಾಪುಗುರು ಅವರ ಎರಡನೇ ಕವನ ಸಂಕಲನವಿದು. ಮುಳ್ಳೆಲೆಯ ಮದ್ದು ಕವನ ಸಂಕಲನದ ಮೂಲಕ ಕಾವ್ಯಲೋಕದಲ್ಲಿ ಭರವಸೆ ಮೂಡಿಸಿದ್ದ ಈ ಕವಿ, ಹಲವು ವರ್ಷಗಳ ನಂತರ ಮಣ್ಣೇ ಮೊದಲು- ಕವನ ಸಂಕಲನ ಹಿಡಿದು ಸಹೃದಯರ ಮುಖಾಮುಖಿಯಾಗಿದ್ದಾರೆ.

ನಾನು ಅತ್ತಿದ್ದು ನನ್ನವ್ವನಿಗಾಗಿ
ನನ್ನವ್ವನಿಗಾಗಿ
ಅವ್ವ
ನಾನು ಹೆಣ್ಣು
ಈ ಜಗತ್ತಿನಲ್ಲಿ ಯಾರಿಗೂ ಬಸಿರಾಗಲಾರೆ
ಮತ್ಯಾರಿಗೂ ಉಸಿರಾಗಲಾರೆ (ಲಿಂಗ ರಾಜಕಾರಣ)

ಹೆಣ್ಣು ಇಂದು ಏನಾಗಿದ್ದಾಳೆ ಅನ್ನುವುದು ಎಲ್ಲರಿಗೂ ಗೊತ್ತಿದೆ. ಭ್ರೂಣದಿಂದ ಹಿಡಿದು ಮುದಿ ಅಜ್ಜಿಯ ವಯೋ ಹೆಣ್ಣಿನ ದೈಹಿಕ ಮತ್ತು ಸಾಮಾಜಿಕ ಸ್ಥಿತಿ ಶೋಚನೀಯ ಎಂಬುದನ್ನು ಕವಿ ಇಲ್ಲಿ ಎದೆ ತಟ್ಟಿ ಹೇಳುತ್ತಾರೆ.

ಉಸಿರೇ ಬಲು ಭಾರ
ಬೇಕಿದ್ದರೆ ನೀರಿಗೆ ಬಿದ್ದು ನೋಡಿ
ತಳ ಸೇರಿಕೊಳ್ಳುತ್ತದೆ
ಉಸಿರು ನಿಂತ ಮೇಲೆ ದೇಹವೇ ತೇಲುತ್ತದೆ
ತರ್ಪಣದಂತೆ (ಬಾರದ ಉಸಿರು)

ಅಪ್ಪನ ಸುಟ್ಟ ಬೂದಿ ನೀರಿಗೆ ಬಿಡುವಾಗಿನ ಉಮ್ಮಳಿಸಿದ ಬಿಕ್ಕುಗಳ ಕವಿ ಪದಮಾಲೆ ಮಾಡಿ ಓದುಗರೆದೆಗೆ ದಾಟಿಸಿ, ಮೌನ ನುಂಗಿ ನಿಲ್ಲುತ್ತಾರೆ. ದುಃಖ ಗಂಟಲಲ್ಲಿ ಗಿರಕಿ ಹೊಡೆಯುವಾಗ, ಉಸಿರು ಸರಾಗವಾಗಿ ಆಡದೇ ಹಠ ಹೂಡುತ್ತದೆ . ಅಂತಹ ಉಸಿರನ್ನು ಮತ್ತೆ ಮತ್ತೆ ಎದೆಗೆಳೆದುಕೊಂ ಡಾಗ ದೇಹವೋ ಮನಸೋ ಮಾತು ಕೇಳುತ್ತದೆ. ಆ ನಿಟ್ಟಿನಲ್ಲಿ ಪಾಪು ಕವಿತೆ ಓದುಗನನ್ನು ಕೈ ಕಟ್ಟಿ ನಿಲ್ಲಿಸುತ್ತದೆ! 

ಕಾವ್ಯ- ಅನಾದಿ ಕಾಲದಿಂದಲೂ ಎದೆಯೊಳಗಣ ಅವ್ಯಕ್ತ ಮಾತುಗಳನ್ನು ಅಕ್ಷರದ ಚೌಕಟ್ಟಿನಲ್ಲಿ ಅಭಿವ್ಯಕ್ತಿಸುತ್ತಾ ತನ್ನ ಇರುವಿಕೆಯನ್ನು ಸಾಬೀತುಪಡಿಸುತ್ತಾ ಬಂದಿದೆ! ಸದ್ಯದ ಸ್ಥಿತಿಯಲ್ಲಿ ಕಾವ್ಯ ಕೈ ಹಿಡಿಯದು ಎಂಬ ಒಣ ಮಾತಿಗೆ ಪಾಪುಗುರು ಅಪವಾದವಾಗಿದ್ದಾರೆ. ತ್ರಿಲೋಕ ಸಂಚಾರಿಯಂತಹ ಈ ಕವಿ ಕಂಡುಂಡ ಸತ್ಯಗಳನ್ನು, ಜೊತೆಯಲ್ಲಿ ಎದುರಾದ ಜೀವನಾನುಭವಗಳನ್ನು ಕಾವ್ಯವಾಗಿಸಿ ಗೆಲ್ಲುತ್ತಾರೆ.

ಅಂದಿನಿಂದ ಇಂದಿನವರೆಗೂ
ಈ ಬೆತ್ತಲೆಯ
ಅರಿವೆಗೆ ಸತ್ಯವಂತರು ಬೇಕಿದೆ
ಸಮಕ್ಷಮದ ಸಾಕ್ಷಿಗೆ
ಅಂತರಾತ್ಮದ ಆತ್ಮದ ಬೆಳಕಿಗೆ (ಬೆತ್ತಲೆ) 

ಕನ್ನಡ ಕಾವ್ಯ ಲೋಕದಲ್ಲಿ ಬೆತ್ತಲೆ ಕುರಿತು ಅನೇಕ ಕವಿಗಳು ಬರೆದಿದ್ದಾರೆ. ಬೆತ್ತಲೆಯೆಂಬ ಬಯಲಲ್ಲಿ ಅಥವಾ ಬಯಲೆಂಬ ಬೆತ್ತಲೆಯಲ್ಲಿ ಸಾಕ್ಷಾತ್ಕಾರವೆಂಬುದು ಅಂತರ್-ಧ್ಯಾನದ ವಸ್ತು. ಬಟ್ಟೆಯೊಳಗೆಲ್ಲರೂ ಬೆತ್ತಲೆ ಎಂಬ ಸತ್ಯ ಅರಿವಾಗುವಷ್ಟರಲ್ಲಿ ಜೀವನದ ಕೊನೆಯ ನಿಲ್ದಾಣದಲ್ಲಿ ನಿಂತಿರುತ್ತೇವೆ! ಅಂತಹ ಅಂತಿಮ ಸತ್ಯ ದರ್ಶನ ನೀಡುವ ಪಾಪುಗುರು ಒಮ್ಮೊಮ್ಮೆ ಅಧ್ಯಾತ್ಮವಾದಿಯಂತೆ ಕಂಡರೂ ಅಚ್ಚರಿಯಿಲ್ಲ! ಕಾವ್ಯದ ಹೊಳೆಯಲ್ಲಿ ಸದಾ ತೇಲುತ್ತಾ, ಈಜುತ್ತಾ, ಮುಳುಗುತ್ತಾ ಸಾಗುವ    ಕವಿ ನೆಲದೊಡಲಿನ ಘಮದ ಕಾವ್ಯ ಕೊಟ್ಟಿದ್ದಾರೆ.

ಅಚ್ಛೇ ದಿನ್ ಆಗಯಾ
ಎನ್ನುತ್ತಲೇ ಮುಗಿಲು ನೋಡಿದೆ
ಇದ್ದಕ್ಕಿದ್ದಂತೆ ಮೋಡ ಕಪ್ಪಾಗಿ
ಚಳಿಗಾಲದಲ್ಲಿ ಮಳೆ ಬಂತು
ಕಣದಲ್ಲಿ ರಾಶಿ ಮಾಡಿದ್ದ
ತೆನೆಗಳ ಮುಚ್ಚಲು ಓಡಿದೆ
ಎಡಕ್ಕೋ ಬಲಕ್ಕೋ ತಿಳಿಯಲಿಲ್ಲ (ವಾಸ್ತವ)

ಕಾವ್ಯದಿಂದ ಸಾಮಾಜಿಕ ಬದಲಾವಣೆ ಸಾಧ್ಯ ಅನ್ನುವುದು ಇಂದಿನ ಕಾಲಕ್ಕೆ ಗುಮಾನಿಯ ಮಾತು. ಎದೆಯ ಹಾಡುಗಳ ಹಾಡಿ ಖಾಲಿಯಾಗುವ ಕವಿಗಳದು ಒಂದು ಗುಂಪು , ತಾನಿದ್ದ ಸಮಾಜವ ತನ್ನ ಮೂರನೇ ಕಣ್ಣಿಂದ ನೋಡುತ್ತಲೇ ಸಾರ್ವಕಾಲಿಕ ಸಮಸ್ಯೆಗಳಿಗೆ ಮುಖಾಮುಖಿಯಾಗುತ್ತಾ ಎದೆಕೊಡುವುದಿದೆಯಲ್ಲಾ….. ಅದು ನಿಜ ಕವಿಯ ನಿತ್ಯ  ಕರ್ಮ. ಅದನ್ನೇ ಪಾಪುಗುರು ಇಲ್ಲಿ ಈ ಕವನದೊಂದಿಗೆ ಮಾಡಿದ್ದಾರೆ.

ನನ್ನವಳ ಸಾಂತ್ವನಕ್ಕೆ
ಸಾಲಗಳು ಸರಿದು ನಿಂತಿವೆ
ಸಂಬಳ ಸಾಕಾಗಿಲ್ಲ
ಹಬ್ಬಕ್ಕೆ ಹಪ್ಪಳವಿಲ್ಲ ( ನಾನೇ…)

ನೂರಾರು ನಿರೀಕ್ಷೆಗಳು ಒಮ್ಮೊಮ್ಮೆ ಒಂದೂ ಕೈಗೂಡದೇ ಹೋಗಬಹುದು. ಆದರೆ ಸತತ ಯತ್ನ ಮತ್ತು ನಾಳಿನ ಭರವಸೆಯ ಕೋಟೆ ಕವಿ ಮಾತ್ರ ಕಟ್ಟಬಲ್ಲ. ಬಡತನವೆನ್ನುವುದು ಹಿಡಿ ಕೂಳಿಗಷ್ಟೇ ಅಂದ ವರಕವಿ ಬೇಂದ್ರೆ ಹೇಳಿ ಯಾವ ಕಾಲ? ಆ ಬಡತನವನ್ನೇ ಬಳಸಿದ್ದವರು ಅದಕು ಇದಕು ಎದಕೂ!

ಈ ಕವಿಯ ಸಾಲುಗಳು ಕೂಡಾ ಬಡತನವ ಹೆದರಿಸಲು ಹಣ ಬೇಕಿಲ್ಲ ; ಮನವರಿತ ಮಡದಿ ಮುಖ್ಯ ಅನ್ನುವ ತೆಳು ಕಾಗದದ ಅಂಚಿಗಿಂತಲೂ ಚೂಪಾದ ಸೂಕ್ಷ್ಮದಲ್ಲಿ ಕವಿ ಸಾಕ್ಷೀಕರಿಸಿದ್ದಾರೆ!

ಬೇಡವೇ ಬೇಡ…
ಬತ್ತಿದ ಬಳ್ಳಿಗೆ ನೀರೆರೆದರೆ
ಬಿಳಿ ಹೂ ಬಿಡುವುದೇ ಗುರುನಾಥ?
ಸಾರ ಬೇಕೆಂದರೆ ಸಂಸಾರ ,
ಮರ ಮುಪ್ಪಾದರೂ ಹುಳಿ ಮುಪ್ಪೇ ಸೋಮನಾಥ?
ಇಲ್ಲಿ ಎಲ್ಲವೂ ಸಪ್ಪೆ ರಾಮನಾಥ
ನಿರರ್ಥಕವಾದರೂ ಮಣ್ಣೇ ಮೊದಲು…
ಮಣ್ಣೇ ಮೂಲವೂ ಅಷ್ಟೇ! (ಮಣ್ಣೇ ಮೊದಲು…)

ಮಡಕೆ ಮಾಡುವೊಡೆ ಮಣ್ಣೇ ಮೊದಲು ಎಂದ ಅಣ್ಣ ಬಸವಣ್ಣ ನ ಮಾತು ಮರೆಯಲಾದೀತೇ? ಮಣ್ಣಿಲ್ಲದ ಜಗವ ಊಹಿಸಿಕೊಳ್ಳಲಾಗದು. ಜಗದ ಜೀವರಾಶಿಗಳಿಗೆಲ್ಲಾ ಮಣ್ಣು ಮೂಲ ಆಕರ. ಪಾಪುಗುರು ಅವರ ಈ ಕಾವ್ಯ ಲೋಕದಲ್ಲಿ ಮಣ್ಣಿನ ಗುಣವಿದೆ. ಜೀವನದ ಸಕಲ ಜಂಜಡಗಳ ಅನುಭವಿಸಿದ ನಂತರ ಹುಟ್ಟೋ ಸಿಹಿ, ಹುಳಿ, ಸಪ್ಪೆ, ಉಪ್ಪಿನ ಗುಣ-ಗ್ರಹಿಕೆಗೆ ಅಕ್ಷರ ರೂಪ ಕೊಟ್ಟು ಅನೇಕ ಪದ್ಯಗಳಲ್ಲಿ ಗೆದ್ದಿದ್ದಾರೆ. ಮೊದಲ ಮಳೆಯ ಘಮಲಿನ ಹಸಿ ಕವನಗಳು ಓದುಗರ ಮನದಲ್ಲಿ ಮನೆ ಮಾಡಿ ನಿಲ್ಲುತ್ತವೆ.

ಇಲ್ಲಿನ ಅನೇಕ ಕವನಗಳಲ್ಲಿ ಅವ್ವ ಮಾತಾಡಿದ್ದಾಳೆ, ಮಣ್ಣು ಘಂ ಎಂದಿದೆ, ಸಂಕಟಗಳು ಮೈ ಮುರಿದಿವೆ, ಒಂಟಿತನ ಕಾಲ್ಕೆರೆದಿದೆ, ರಕ್ತದ ಕಲೆ ಅಲ್ಲಲ್ಲಿದೆ, ಮೌನ ಟೂ ಬಿಟ್ಟಿದೆ, ಬದುಕೆಂಬ ಈರುಳ್ಳಿ ಸಿಪ್ಪೆ ಒಂದೊಂದೇ ಕಳಚಿ ಮೈದೆರೆದಿದೆ.

ಯಾರಿಗೂ ಯಾವುದೂ ಶಾಶ್ವತವಲ್ಲ. ಏನೇ ಬರೆದರೂ, ಹೇಗೇ ಬದುಕಿದರೂ, ಎಷ್ಟೇ ಗಳಿಸಿದರೂ ನಮ್ಮ ಒಳಗೊಂದು ಆತ್ಮಧ್ಯಾನ, ಸಾರ್ಥಕಭಾವ, ಸಮಾಜದೆಡೆಗಿನ ತಣ್ಣನೆಯ ದೃಷ್ಟಿ ಇಟ್ಟುಕೊಂಡಿದ್ದಾಗ ಕವಿಗಿಂತ ಮನುಜನಾಗಲು ಸಾಧ್ಯ. ಆ ಸಾಧ್ಯತೆ ಪಾಪುಗುರು ಅವರಿಗೆ ದಕ್ಕಿದೆ.

ಕವಿತೆಯ ಇನ್ನೊಂದು ವಿಶೇಷತೆ ಏನೆಂದರೆ ಉಪಯೋಗ ಮತ್ತು ಅನುಭವವನ್ನು ನೀಡುವುದು – ಹಂಚಿಕೊಳ್ಳುವುದು ಅಂಥ. ಕವಿತೆಯಲ್ಲಿ ವ್ಯಕ್ತವಾಗುವ ಮನುಷ್ಯ ಪ್ರೀತಿಯ ಸಂದೇಶಗಳಿಂದ ಜೀವನದಲ್ಲಿ ಪ್ರತಿ ಮನುಷ್ಯ ಸಂಸ್ಕಾರವನ್ನು ಪಡೆಯುವುದರ ಜೊತೆಗೆ ಕಾವ್ಯದೊಂದಿಗೆ ಮಾನಸಿಕವಾಗಿ ಅನುಸಂಧಾನ ಮಾಡುವುದು ಹೌದು. ಹಾಗಾಗಿ ಕವಿಗಿಂತ ಕವಿತೆ ಆಪ್ತವಾಗುತ್ತದೆ. ಹಾಗೇ ಕವಿತೆ ಏಕಮುಖವಾಗದೆ ಬಹುಮುಖ ವಾಗಿ ಓದುಗ ಕೇಳುಗರ ನಡುವೆ ಸಮಾಜಮುಖಿಯಾಗಿ ಉಳಿಯಲು, ಬೆಳೆಯಲು ಕಾರಣವಾಗುತ್ತದೆ.

ನಿನ್ನ ವಾಸನೆಯೇ ಅತ್ತರ್
ಅದು ಸುರಿಸುವ ಪರಿಮಳಕೆ
ಅಮಲೇರಿರುವೆ ಇನ್ನೇನು ಬೇಕು
ಮಧು ಬಟ್ಟಲು ಹಿಡಿದು ನಿಂತ
ನೀನೊಬ್ಬಳೇ ಸಾಕು (ನೀನೊಬ್ಬಳೇ ಸಾಕು)

ಎದೆಯ ಹೊಳೆಯಲ್ಲಿ ಸಣ್ಣ ಹಾಯಿದೋಣಿ ತೇಲಿಸುವ ಇಂತಹ ಕಾವ್ಯ ಸಾಲುಗಳು ಸಂಕಲನದ ಮಧ್ಯ ಸಹೃದಯನೆದೆಗೆ ಬಂದಪ್ಪಳಿಸುತ್ತವೆ.

ಒಲವ ಕಾವ್ಯದರಗಿಣಿ ಜೊತೆಯಲ್ಲಿ ಕವಿ ಮುದ್ದಾಗಿ ಮಾತಾಡಿದ ಭಾವ ಕಾವ್ಯವಾಗಿ ಅರಳಿದೆ. ಕವಿ ಇನ್ನೂ ಕಾವ್ಯದ ಹಾದಿಯಲ್ಲಿ ಹಿಂದಿನ ಕಾವ್ಯದ ಹೊತ್ತಿಗೆ ಹಿಡಿದು ಬರಿಗಾಲಲ್ಲಿ ನಡೆಯಬೇಕಿದೆ. ಹಾದಿಗೆ ಎದುರಾಗುವ ಅಗಣಿತ ಹಳೆಯ ಕವಿಗಳ ಮೈಲಿಗಲ್ಲುಗಳ ಒಳ ನೋಟಗಳನ್ನು ಕಣ್ತುಂಬಿಸಿ ಕೊಳ್ಳಬೇಕಿದೆ. ಮುಂಬರುವ ಕಾವ್ಯದ ಹುಡುಕಾಟದಲ್ಲಿ ಪಾಪುಗುರು ಎಂಬ ಪ್ರೀತಿಯ ಕವಿ ಹೊಸ ಹೊಸ ಹೊಳಹುವಿನೊಂದಿಗೆ ಕಾವ್ಯಾಸಕ್ತರನ್ನು ಖಂಡಿತವಾಗಿಯೂ ಎದರುರ್ಗೊಳ್ಳಬಲ್ಲರೆಂಬುದಕ್ಕೆ  ಈ ಕೃತಿ ಬಹಳ ಕಡೆ ಕಾಡಿ ಸಾಕ್ಷಿ ನೀಡುತ್ತದೆ.  ಈ ಕವಿಗೆ ಕಾವ್ಯದ ಸ್ವಾಗತ ಸದಾ ಇರುತ್ತೆ ಅನ್ನುವ ಭರವಸೆ ನೀಡುತ್ತಾ , ಅವರಿಂದ ಇನ್ನೂ ಉತ್ತಮೋತ್ತಮ ಕಾವ್ಯ ಕೃತಿ ರತ್ನಗಳು ಮೂಡಿಬರಲೆಂಬ ಆಶಯದೊಂದಿಗೆ………

ಶುಭ ಹಾರೈಸುತ್ತೇನೆ.

-ಸಂತೆಬೆನ್ನೂರು ಫೈಜ್ನಟ್ರಾಜ್, ಸಂತೇಬೆನ್ನೂರು

error: Content is protected !!