ಖಾಸಗಿ ಬಸ್ ನಿಲ್ದಾಣ ಬಳಕೆಗೆ ಮೊದಲೇ ಬದಲಾವಣೆ

ಖಾಸಗಿ ಬಸ್ ನಿಲ್ದಾಣ ಬಳಕೆಗೆ ಮೊದಲೇ ಬದಲಾವಣೆ

ಇನ್ನೆರಡು ಬಸ್‌ಗಳ ನಿಲುಗಡೆಗಾಗಿ ಕ್ರಮ : ಸ್ಮಾರ್ಟ್‌ ಸಿಟಿ ಎಂಡಿ

ದಾವಣಗೆರೆ, ಡಿ. 7 – ಹೊಸದಾಗಿ ನಿರ್ಮಿಸಲಾ ಗಿರುವ ಖಾಸಗಿ ಬಸ್ ನಿಲ್ದಾಣದ ಬಳಕೆ ಆರಂಭ ವಾಗುವ ಮೊದಲೇ ಪರಿವರ್ತನೆಗೆ ಒಳಗಾಗಲಿದೆ.

ಪತ್ರಕರ್ತರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿರುವ ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ್ ಕುಮಾರ್, ಹೆಚ್ಚುವರಿಯಾಗಿ ಇನ್ನೆರಡು ಬಸ್‌ಗಳನ್ನು ನಿಲ್ಲಿಸಲು ನಿಲ್ದಾಣದಲ್ಲಿ ಪರಿವರ್ತನೆ ತರುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಸೂಚನೆ ನೀಡಿದ್ದಾರೆ ಎಂದು ಹೇಳಿದರು.

ಬಸ್ ನಿಲ್ದಾಣದಲ್ಲಿ ವಾಹನಗಳ ನಿಲುಗಡೆಗೆ ಜಾಗ ಕಡಿಮೆ ಇದೆ ಎಂದು ಖಾಸಗಿ ಬಸ್‌ ಮಾಲೀಕರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಟೇರ್‌ ಕೇಸ್‌ ಮುಚ್ಚಿ 2 ಹೆಚ್ಚುವರಿ ಬಸ್ ನಿಲ್ಲಿಸಲು ಕ್ರಮ ತೆಗೆದುಕೊಳ್ಳಲು ಸಚಿವರು ಸೂಚನೆ ನೀಡಿದ್ದಾರೆ ಎಂದು ಹೇಳಿದರು.

ಖಾಸಗಿ ಬಸ್‌ಗಳ ಸಂಚಾರದ ಕುರಿತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಮಾಹಿತಿ ಕೇಳಿದ್ದೇವೆ. ಅವರಿಂದ ಮಾಹಿತಿ ದೊರೆತ ನಂತರ, ಬಸ್ ನಿಲ್ದಾಣದಲ್ಲಿ ಬದಲಾವಣೆ ತರುವ ಪ್ರಸ್ತಾವನೆ ರೂಪಿಸಲಾಗುವುದು ಎಂದು ಹೇಳಿದರು.

ಪ್ರಸ್ತಾವನೆಗೆ ಅನುಮೋದನೆ ದೊರೆತ ನಂತರ ನಿಲ್ದಾಣದಲ್ಲಿ ಪರಿವರ್ತನೆ ತಂದು, ನಂತರದಲ್ಲಿ ಅದನ್ನು ಸಾರ್ವಜನಿಕರ ಬಳಕೆಗೆ ನೀಡಲಾಗುವುದು ಎಂದು ವೀರೇಶ್ ಕುಮಾರ್ ಹೇಳಿದರು.

ನಗರದಲ್ಲಿರುವ ಮೊದಲ ಹಂತದಲ್ಲಿ ನಿರ್ಮಿಸ ಲಾಗಿರುವ ಇ-ಶೌಚಾಲಯಗಳು ನಿರ್ವಹಣೆ ಇಲ್ಲದೇ ಕಾರ್ಯನಿರ್ವಹಿಸದಂತಾಗಿದೆ. ಇವುಗಳ ನಿರ್ವಹಣೆಗಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದವರು ಮತ್ತೊಂದು ಪ್ರಶ್ನೆಗೆ ಉತ್ತರಿಸಿದರು.

ಹೊಂಡದ ಸರ್ಕಲ್‌ನಲ್ಲಿ ನಿರ್ಮಿಸಲಾಗಿರುವ ಕಲ್ಯಾಣಿಗೆ ಶೀಘ್ರದಲ್ಲೇ ಸೌಂದರ್ಯೀಕರಣದ ಕಾಮಗಾರಿ ಕೈಗೊಳ್ಳಲಾಗುವುದು. ತಾಂತ್ರಿಕ ಕಾರಣಗಳಿಂದಾಗಿ ಕಾಮಗಾರಿ ತಡವಾಗಿತ್ತು ಎಂದವರು ಹೇಳಿದರು.

ಸ್ಮಾರ್ಟ್ ಸಿಟಿಯ ಎರಡನೇ ಹಂತದ ಐ.ಸಿ.ಟಿ. ಯೋಜನೆಗೆ 8 ಕೋಟಿ ರೂ. ಒದಗಿಸಲಾಗಿದೆ. ಈ ಯೋಜನೆಯಡಿ ಸಂಚಾರಿ ಪೊಲೀಸರಿಗೆ ವೃತ್ತಗಳಲ್ಲಿ ಬೂತ್ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಎರಡು ಡ್ರೋನ್‌ಗಳನ್ನು ಒದಗಿಸಲಾಗುವುದು. ಇದರಿಂದ ನಗರದ ಮೇಲೆ ಪೊಲೀಸರು ಹೆಚ್ಚಿನ ನಿಗಾ ವಹಿಸಲು ಸಾಧ್ಯವಾಗಲಿದೆ ಎಂದು ವೀರೇಶ್ ಕುಮಾರ್ ತಿಳಿಸಿದರು.

error: Content is protected !!