ದಾವಣಗೆರೆ, ಡಿ.7- ಜಾತಿ, ಧರ್ಮಗಳ ಬದಲಾಗಿ ನಿಜವಾಗಿಯೂ ಆರ್ಥಿಕವಾಗಿ ಹಿಂದುಳಿದವರಿಗೆ ಹಾಗೂ ಶಿಕ್ಷಣದಿಂದ ವಂಚಿತರಾದವರಿಗೆ ಮಾತ್ರ ಸರ್ಕಾರದ ಸೌಲಭ್ಯಗಳು ದೊರೆಯುವಂತಾಗಬೇಕು ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಹುಬ್ಬಳ್ಳಿ ಉಪ ವಲಯದ ನಿರ್ದೇಶಕ ರಾಜಯೋಗಿ ಬ್ರಹ್ಮಾಕುಮಾರ ಡಾ.ಬಸವರಾಜ ರಾಜಋಷಿ ಅಭಿಪ್ರಾಯಿಸಿದರು.
ಇಲ್ಲಿನ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ವಿದ್ಯಾನಗರ ಶಾಖಾ ಕೇಂದ್ರದ ಆವರಣದಲ್ಲಿ ಒಂದು ತಿಂಗಳ ವರೆಗೆ ನಡೆಯಲಿರುವ `ಶರಣರು ಕಂಡ ಶಿವ’ ಪ್ರವಚನ ಮಾಲೆಯ ನಾಲ್ಕನೇ ದಿನವಾದ ಗುರುವಾರದ ಸಮಾರಂಭದಲ್ಲಿ ಅವರು ಪ್ರವಚನ ನೀಡಿದರು.
ತಳವರ್ಗಕ್ಕೆ ಸೌಲಭ್ಯ ಕೊಡಬೇಕಿರುವುದು ಸ್ವಾಗತ. ಆದರೆ ಜಾತಿ ವ್ಯವಸ್ಥೆ ನೋಡಿ ಸೌಲಭ್ಯ ಕೊಡುವುದು ಸರಿಯಲ್ಲ. ಯಾವುದೇ ಜಾತಿ ಇರಲಿ, ಆರ್ಥಿಕವಾಗಿ ದುರ್ಬಲರಾಗಿದ್ದವರನ್ನು ಗುರುತಿಸಿ, ಶಿಕ್ಷಣದಿಂದ ವಂಚಿತರಾದವರನ್ನು ಗುರುತಿಸಿ ಸೌಲಭ್ಯ ಕೊಡುವುದು ಮಾನವ ಧರ್ಮ ಎಂದು ಹೇಳಿದರು.
ಆರ್ಥಿಕತೆ ಆಧಾರದ ಮೇಲೆ ಸೌಲಭ್ಯ ನೀಡುವ ಕಾಯ್ದೆಯನ್ನು ಜಾರಿಗೆ ತರುವ ಅಗತ್ಯವಿದೆ. ಆದರೆ, ಚುನಾವಣೆಯಲ್ಲಿ ಓಟು ಗಳಿಸಲು ಜಾತಿ, ಧರ್ಮಗಳ ಆಧಾರದ ಮೇಲೆ ವಿಂಗಡಿಸಿ, ಮತದಾರರನ್ನು ಓಲೈಸುವ ಪ್ರವೃತ್ತಿ ಹೆಚ್ಚಾಗಿರುವ ದಿನಗಳಲ್ಲಿ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಎಂಬಂತಾಗಿದೆ ಎಂದು ವ್ಯಾಕುಲತೆ ವ್ಯಕ್ತಪಡಿಸಿದರು. ಕಲಹಗಳಿಗೆ ಮೂಲವಾಗಿದ್ದ ಲಿಂಗಭೇದ, ವರ್ಣಭೇದ, ಜಾತಿ-ಧರ್ಮ ಭೇದ, ವಯೋಭೇದ, ಭಾಷಾ ಭೇದ, ಪ್ರಾಂತ ಭೇದ ಇವೆಲ್ಲವನ್ನೂ ಹನ್ನೆರಡನೇ ಶತಮಾನದಲ್ಲಿ ಶರಣರು ಬೇರು ಸಹಿತ ಕಿತ್ತು ಹಾಕಿದ್ದರು. ಶರಣರ ತತ್ವಗಳಲ್ಲಿ ಜಾತಿ ಭೇದಕ್ಕೆ, ಧರ್ಮ ಭೇದಕ್ಕೆ, ಕಲಹಕ್ಕೆ ಸ್ಥಾನವಿಲ್ಲ. ಆದರೆ ಇಂದು ನಾವಾಗಿಯೇ ಜಾತಿಗಳನ್ನು ಉಪ ಜಾತಿಗಳನ್ನು ಹುಟ್ಟುಹಾಕಿದ್ದೇವೆ. ಸಂಕೇತ, ವೇಷ ಭೂಷಣಗಳ ಮೂಲಕ ನಮ್ಮ ಜಾತಿಗಳನ್ನು ತೋರಿಸಿಕೊಳ್ಳಲಾರಂಭಿಸಿದ್ದೇವೆ ಎಂದರು.
ಕೌಶಿಕ ಮಹಾರಾಜನನ್ನು ಅಕ್ಕಮಹಾದೇವಿ ಮದುವೆ ಆಗಿರಲಿಲ್ಲ
ಶರಣೆ ಅಕ್ಕಮಹಾದೇವಿ, ತಾನು ಕೌಶಿಕ ಮಹಾರಾಜನನ್ನು ಮದುವೆಯಾಗಿಲ್ಲ, ಅವನು ನನ್ನ ಗಂಡ ಅಲ್ಲ ಎಂದು ವಚನಗಳ ಮೂಲಕ ಅನುಭವ ಮಂಟಪದಲ್ಲಿ ಅಧ್ಯಕ್ಷರ ಸಮ್ಮುಖದಲ್ಲಿನ ಸಭೆಯಲ್ಲಿ ಹೇಳುತ್ತಾಳೆ. ನನ್ನ ಪತಿ ಕೇವಲ ಚನ್ನಮಲ್ಲಿಕಾರ್ಜುನ ಮಾತ್ರ ಎಂದು ಪ್ರತಿಪಾದಿಸುತ್ತಾಳೆ.
ಆದರೆ ಕೆಲವು ಸಾಹಿತಿಗಳು ಅವರ ಕಾದಂಬರಿಗಳಲ್ಲಿ ಅಕ್ಕಮಹಾದೇವಿ ಜೊತೆ ಕೌಶಿಕ ಮಹಾರಾಜನ ಮದುವೆ ಮಾಡಿದ್ದಾರೆ. ಇದು ದುಃಖದ ವಿಚಾರ ಎಂದು ರಾಜಯೋಗಿ ಬ್ರಹ್ಮಾಕುಮಾರ
ಡಾ.ಬಸವರಾಜ ರಾಜಋಷಿ ಹೇಳಿದರು.
ಅಕ್ಕನ ಬಗ್ಗೆ ನಾನು ಅತೀವ ಗೌರವ
ಹೊಂದಿದ್ದೇನೆ. ಈ ಹಿನ್ನೆಲೆಯಲ್ಲಿಯೇ ಅಕ್ಕನ ಸತ್ಯ ಜೀವನವನ್ನು ಪರಿಚಯಿಸುವ ಉದ್ದೇಶದಿಂದ `ಶಿವಯೋಗಿ ಅಕ್ಕಮಹಾದೇವಿ’
ಸಿನಿಮಾ ನಿರ್ಮಾಣ ಮಾಡಿದ್ದೆ ಎಂದು ತಿಳಿಸಿದರು.
ಮನರಂಜನೆ, ಹಾಸ್ಯ, ವಿಡಂಬನೆ, ಅಶ್ಲೀಲ ಈ ಚಿತ್ರ ದಲ್ಲಿ ಇಲ್ಲ ಎಂಬ ಕಾರಣಕ್ಕಾಗಿ ಈ ಚಿತ್ರ ಸಿನಿಮಾ ಮಂದಿರದಲ್ಲಿ ಹೆಚ್ಚು ದಿನ ಪ್ರದರ್ಶನಗೊಳ್ಳಲಿಲ್ಲ. ಇದೊಂದು ಸತ್ಯ ಶುದ್ಧ ವಚನ ಸಾಹಿತ್ಯದಿಂದ ಸಂಶೋಧಿಸಿ ನಿರ್ಮಿಸಿದ ಚಿತ್ರವಾಗಿತ್ತು. ನಂತರ ಈ ಚಿತ್ರ ದೂರದರ್ಶನದಲ್ಲಿ ಪ್ರಸಾರವಾಯಿತು. ಯೂ ಟ್ಯೂಬ್ನಲ್ಲಿ ಇಂದಿಗೂ ಅದನ್ನು ವೀಕ್ಷಿಸಹುದಾಗಿದೆ ಎಂದು ಹೇಳಿದರು.
ಅಕ್ಕಮಹಾದೇವಿ ಅವರದ್ದು ಪವಿತ್ರವಾದ ಜೀವನವಾಗಿತ್ತು. ಚರ್ಮದ ಚಲುವಿಗಾಗಿ ಮಾರು ಹೋದ ಕೌಶಿಕನನ್ನು ತಿರಸ್ಕರಿಸಿದ ಅವರು, ಉತ್ತಮ ರಸ್ತೆ, ವಾಹನಗಳಿಲ್ಲದ ಕಾಲದಲ್ಲಿಯೇ ಅರಣ್ಯದಲ್ಲಿ ಸಂಚರಿಸುತ್ತಾ, ಕಲ್ಯಾಣ ತಲುಪಿದ್ದರು ಎಂದು ರಾಜಋಷಿ ಅವರು ವಿವರಿಸಿದರು.
ದೇವರು ಮನುಷ್ಯನನ್ನು ಸೃಷ್ಟಸಿದ. ಆದರೆ ನಾವೆಲ್ಲಾ ಸೇರಿ ಜಾತಿ, ಧರ್ಮಗಳನ್ನು ಸೃಷ್ಟಿಸಿ ವಿಂಗಡಿಸಿಕೊಂಡಿದ್ದೇವೆ. ಸಂವಿಧಾನದಲ್ಲಿಯೇ ಜಾತ್ಯತೀತ ರಾಷ್ಟ್ರ ಎಂದು ಘೋಷಣೆಯಾಗಿದ್ದರೂ, ಶಾಲೆಗೆ ಮಗುವನ್ನು ಸೇರಿಸುವಾಗ ಜಾತಿ ನಮೂದಿಸಬೇಕಾಗಿ ಬಂದಿರುವುದು ದುರ್ದೈವ. ಇಂತಹ ಜಾತಿ, ಸೂತಕದಿಂದ ಬಿಡುಗಡೆ ಹೊಂದಿದಾಗ ಮಾತ್ರ ನಾವು ವಿಶ್ವ ಭ್ರಾತೃತ್ವ ಸಾಧಿಸಬಹುದು ಎಂದು ಅವರು ಪ್ರತಿಪಾದಿಸಿದರು.
ಜಾತಿಯ ಸೂತಕ ನಿರ್ಮಿಸಿಕೊಂಡು ಸತ್ಯಕ್ಕೆ ಶರಣಾಗುವ ವ್ಯವಸ್ಥೆಯನ್ನು ದೂರ ಇಟ್ಟಿದ್ದೇವೆ. ಶಾಲೆ, ದೇವಸ್ಥಾನ, ಪ್ರಾರ್ಥನಾ ಮಂದಿರಗಳಲ್ಲೂ ಈ ಸತ್ಯವನ್ನು ಹೇಳುತ್ತಿಲ್ಲ. ಜಾತಿ ವಾದಿಗಳನ್ನು ಜ್ಞಾನಿಗಳನ್ನಾಗಿ ಪರಿವರ್ತಿಸುವ ಸಮಾಜ ನಿರ್ಮಾಣವಾಗುವುದಾದರೂ ಎಂದು ? ಎಂದು ಅವರು ಪ್ರಶ್ನಿಸಿದರು.
ಪ್ರಸ್ತುತ ದಿನಗಳಲ್ಲಿ ಎಲ್ಲಿ ನೋಡಿದರೂ ಕಮ್ಯುನಲಿಸಂ, ಕಮರ್ಷಿಯಲಿಸಂ, ಟ್ರೆಡಿಷನಲಿಸಂ ನಡೆಯುತ್ತಿದೆ. ಇವುಗಳಿಂದ ಹೊರ ಬರಬೇಕಾದರೆ ಅಧ್ಯಾತ್ಮಿಕ ಶಿಕ್ಷಣದ ಅಗತ್ಯವಿದೆ. ಶರಣರ ಮೌಲ್ಯಗಳನ್ನು ಅರಿತು ಶ್ರೇಷ್ಟ ಹಾಗೂ ಸರಳ ಸಮಾಜ ನಿರ್ಮಾಣ ಮಾಡುವತ್ತ ಹೆಜ್ಜೆ ಹಾಕೋಣ. ಹನ್ನೆರಡನೇ ಶತಮಾನದ ಆದರ್ಶ ಜೀವನ ಅನುಕರಣೆ ಮಾಡೋಣ ಎಂದು ಕರೆ ನೀಡಿದರು.
ಈಶ್ವರೀಯ ವಿಶ್ವವಿದ್ಯಾಲಯದ ದಾವಣಗೆರೆ ಶಾಖೆಯ ಪ್ರಧಾನ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ನೇತೃತ್ವದಲ್ಲಿ ಸಂಸ್ಥೆಯ ವಿದ್ಯಾನಗರ ಶಾಖೆ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಗೀತಾಜಿ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.
ನೇರ ಪ್ರಸಾರ : ಸುದೀರ್ಘ ಒಂದು ತಿಂಗಳ ಕಾಲ ಪ್ರತಿದಿನ ಸಂಜೆ 6.30 ರಿಂದ 7.30ರವರೆಗೆ 1 ಗಂಟೆ ಸಮಯ ನಡೆಯುವ ಈ ಪ್ರವಚನವನ್ನು ನೇರ ಪ್ರಸಾರ ವೀಕ್ಷಿಸಲು ಯು ಟ್ಯೂಬ್ ಚಾನಲಾದ ರಾಜಯೋಗ ಟಿವಿ ಕನ್ನಡದಲ್ಲಿ (youtube/rajayogatvkannada) ವೀಕ್ಷಿಸಬಹುದು.