ಋಣ ಸಂಬಂಧವಿದ್ದೆಡೆ ಆತ್ಮ ಪ್ರವೇಶ: ಡಾ.ಬಸವರಾಜ ರಾಜಋಷಿ
ದಾವಣಗೆರೆ, ಡಿ. 6- ಆತ್ಮ ಸ್ಥೂಲವಾದದ್ದೂ ಅಲ್ಲ, ಪಂಚಭೂತಗಳಿಂದ ಮಾಡಿದ್ದೂ ಅಲ್ಲ. ಅದು ಸಚೇತನ ಶಕ್ತಿ. ಅನಾದಿ ಹಾಗೂ ಅವಿನಾಶಿಯಾದದ್ದು ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಹುಬ್ಬಳ್ಳಿ ಉಪ ವಲಯದ ನಿರ್ದೇಶಕ ರಾಜಯೋಗಿ ಬ್ರಹ್ಮಾಕುಮಾರ ಡಾ.ಬಸವರಾಜ ರಾಜಋಷಿ ಹೇಳಿದರು.
ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಸ್ಥಳೀಯ ವಿದ್ಯಾನಗರ ಶಾಖಾ ಕೇಂದ್ರದ ಆವರಣದಲ್ಲಿ ನಡೆಯುತ್ತಿರುವ ಒಂದು ತಿಂಗಳ ಕಾಲದ `ಶರಣರು ಕಂಡ ಶಿವ’ ಪ್ರವಚನ ಮಾಲೆಯ ಮೂರನೇ ದಿನವಾದ ಬುಧವಾರದ ಸಮಾರಂಭದಲ್ಲಿ ಅವರು ಪ್ರವಚನ ನೀಡಿದರು.
ಆತ್ಮ ಮನುಷ್ಯನ ಹೃದಯದಲ್ಲಿರುವು ದಿಲ್ಲ. ಅದು ಬ್ರುಕುಟಿಗಳ ಮಧ್ಯೆ ಇರುವ ಮೆದುಳಿನಲ್ಲಿರುತ್ತದೆ. ಒಂದೇ ಕಡೆ ಇರುವ ಸೂರ್ಯ ಜಗತ್ತಿಗೆಲ್ಲಾ ಬೆಳಕು, ಶಕ್ತಿಯನ್ನು ಕೊಡುವಂತೆ ಶರೀರದಲ್ಲಿ ಬ್ರುಕುಟಿಗಳ ಮಧ್ಯೆ ಹಣೆಯಲ್ಲಿ ಆತ್ಮ ವಿರಾಜಮಾನವಾಗಿದ್ದಾನೆ ಎಂದು ಅರ್ಥೈಸಿಕೊಳ್ಳಬೇಕು ಎಂದು ಹೇಳಿದರು.
ಆತ್ಮ-ಪರಮಾತ್ಮ ಬೇರೆ ಬೇರೆ
ಆತ್ಮನೇ ಬೇರೆ, ಪರಮಾತ್ಮನೇ ಬೇರೆ. ಆತ್ಮ ಮತ್ತೊಂದು ಶಕ್ತಿಯಲ್ಲಿ ಲೀನವಾಗುವುದಿಲ್ಲ ಎಂದು ರಾಜಯೋಗಿ ಬ್ರಹ್ಮಾಕುಮಾರ ಡಾ. ಬಸವರಾಜ ರಾಜಋಷಿ ಪ್ರತಿಪಾದಿಸಿದರು.
ನಾವು ಮೃತಪಟ್ಟ ಮೇಲೆ ಶಿವೈಕ್ಯರಾಗುತ್ತೇವೆ. ಲಿಂಗೈಕ್ಯರಾಗುತ್ತೇವೆ. ಕೈಲಾಸ ವಾಸಿಗಳಾಗುತ್ತೇವೆ ಅಥವಾ ಶಿವಾಧೀನರಾಗುತ್ತೇವೆ. ನಾವೆಲ್ಲಾ ಶಿವನ ಅಂಶ. ಸಾವಿನ ನಂತರ ಶಿವನಲ್ಲಿ ಲೀನವಾಗುತ್ತೇವೆ ಎಂದು ಕೆಲವರು ಹೇಳುತ್ತಾರೆ.
ಅಲ್ಲದೇ, `ಶಿವಾಂಶ ಸಂಭೂತರು’ ಎಂಬ ಶಬ್ಧವೂ ಬಳಕೆಯಲ್ಲಿದೆ. ಆದರೆ ವೈಜ್ಞಾನಿಕ ಆಧಾರದಿಂದ ಅರ್ಥೈಸಿಕೊಂಡಾಗ ಆತ್ಮ ಸ್ವತಂತ್ರವಾದದ್ದು. ನಾವೆಲ್ಲಾ ಆತ್ಮರು, ಪರಮಾತ್ಮನ ಅಂಶವಲ್ಲ ಎಂಬುದು ಸ್ಪಷ್ಟ. ಆತ್ಮ ಹಾಗೂ ಪರಮಾತ್ಮ ಎರಡೂ ಬೇರೇ ಬೇರೆ ಎಂದು ಹೇಳಿದರು.
ಪರಮಾತ್ಮನಲ್ಲಿ ಲೀನವಾಗುವುದೇ ಆದರೆ ಮಹಾತ್ಮರ ಸಮಾಧಿಗಳನ್ನೇಕೆ ಕಟ್ಟುತ್ತೇವೆ? ಉಕ್ಕಡಗಾತ್ರಿಯಲ್ಲಿ ಕರಿಬಸಜ್ಜಯ್ಯನ ಗದ್ದುಗೆ ಇದೆ. ಮಲೆ ಮಹದೇಶ್ವರರ ಗದ್ದುಗೆ, ಎಡೆಯೂರು ಸಿದ್ಧಲಿಂಗೇಶ್ವರರ ಗದ್ದುಗೆ, ಮಂತ್ರಾಲಯದಲ್ಲಿ ರಾಘವೇಂದ್ರ ಸ್ವಾಮಿಗಳ ಗದ್ದುಗೆ ಇದೆ. ಜನರು ಅಲ್ಲಿ ಹೋಗಿ ಪ್ರಾರ್ಥನೆ ಸಲ್ಲಿಸಿ, ಆಶೀರ್ವಾದ ಪಡೆಯುತ್ತಾರೆ.
ಅದರರ್ಥ ಅಲ್ಲಿ ಅವರ ಆತ್ಮವಿದೆ, ಅವರು ಶಿವ ಸ್ವರೂಪಿಗಳಂತಿದ್ದಾರೆ ಎಂದು. ಅಲ್ಲದೇ, ಆತ್ಮ ಮತ್ತೊಂದು ಶಕ್ತಿಯಲ್ಲಿ ಲೀನವಾಗುವುದಿಲ್ಲ ಎಂಬುದಕ್ಕೆ ಇದು ಪ್ರತ್ಯಕ್ಷ ಸಾಕ್ಷಿ ಎಂದು ಹೇಳಿದರು.
`ಆತ್ಮ’ ಹೊಸ ತಾಯಿ ಗರ್ಭ ಪ್ರವೇಶಕ್ಕೆ ಮೊದಲೇ ಭೋಗ-ಭಾಗ್ಯಗಳು ನಿರ್ಣಯಿಸಲ್ಪಡುತ್ತವೆ
ಪ್ರಾರಬ್ಧ ಕರ್ಮ, ಸಂಚಿತ ಕರ್ಮ, ಅಗಾಮಿ ಕರ್ಮ ಹಾಗೂ ಭೂಮ್ರಾಗ್ ಕರ್ಮ ಎಂಬ ನಾಲ್ಕು ಬಗೆಯ ಕರ್ಮಗಳು ನಮ್ಮನ್ನು ಕಾಡುತ್ತವೆ.
ಹಿಂದಿನ ಹಲವು ಜನ್ಮಗಳಲ್ಲಿ ಮಾಡಿದ ಪಾಪ ಪುಣ್ಯಗಳ ಮೊತ್ತ ಪ್ರಾರಬ್ಧ ಕರ್ಮ. ಕಳೆದ ಜನ್ಮದಲ್ಲಿ ಮಾಡಿದ ಪಾಪ ಪುಣ್ಯ ಸಂಚಿತ ಕರ್ಮ, ಈ ಜನ್ಮದಲ್ಲಿ ಮಾಡಿದ ಪಾಪ ಪುಣ್ಯವನ್ನು ಇಲ್ಲಿಯೇ ಅನುಭವಿಸಬೇಕಾದದ್ದು ಭೂಮ್ ರಾಗ್ ಕರ್ಮ ಹಾಗೂ ಈ ಜನ್ಮದಲ್ಲಿ ಮಾಡಿದ ಪಾಪ ಪುಣ್ಯವನ್ನು ಮುಂದಿನ ಜನ್ಮದಲ್ಲಿ ಅನುಭವಿಸಲೇ ಬೇಕಾಗಿರುವುದು ಅಗಾಮಿ ಕರ್ಮ. ಇವುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದು ರಾಜಯೋಗಿ ಬ್ರಹ್ಮಾಕುಮಾರ ಡಾ.ಬಸವರಾಜ ರಾಜಋಷಿ ವಿಶ್ಲೇಷಿಸಿದರು.
ಆತ್ಮ ಗರ್ಭಕ್ಕೆ ಹೋಗುವ ಮೊದಲು ಎಲ್ಲಿ ಜನಿಸಬೇಕು. ಕರ್ಮ ಫಲಗಳೇನು ಎಂಬುದನ್ನು ಪರಮಾತ್ಮ ಮೊದಲೇ ನಿರ್ಣಿಯಿಸಿರುತ್ತಾನೆ ಎಂದು ತಿಳಿಸಿದರು.
ಸಸ್ಯಗಳಲ್ಲಿ ಆತ್ಮ ಇರುವುದಿಲ್ಲ.
ಸಸ್ಯಗಳು ಸಜೀವ ಕೋಶಗಳಿಂದ ನಿರ್ಮಾಣವಾಗಿರುವುದು ಸತ್ಯ. ಆದರೆ ಸಸ್ಯಗಳಲ್ಲಿ ಆತ್ಮ ಇರುವುದಿಲ್ಲ. ಸಸ್ಯಗಳಿಗೆ ಸ್ಪಂದನೆಗಳಿವೆ. ಸಸ್ಯಕ್ಕೆ ಬೆಳಕು ಸಿಗದಿದ್ದರೆ ಅದು ಬೆಳಕು ಇರುವ ಕಡೆ ವಾಲುತ್ತದೆ. ನೀರು ಸಿಗುವ ಕಡೆ ಬೇರು ಹೋಗುತ್ತದೆ.
ಯಾವ ಪ್ರಾಣಿಗಳಲ್ಲಿ ಮೆದುಳಿದೆಯೋ ಅಲ್ಲಿ ಆತ್ಮದ ಪ್ರವೇಶವಾಗುತ್ತದೆ. ಮೆದುಳೇ ಇಲ್ಲದಿದ್ದಾಗ ಆತ್ಮಕ್ಕೆ ಕೆಲಸ ಮಾಡಲು ಆಗುವುದಿಲ್ಲ. ಎಲ್ಲಾ ಪ್ರಾಣಿಗಳಲ್ಲೂ ಮೆದುಳಿದೆ. ಆಯಾ ಪ್ರಾಣಿಗಳು ಆಯಾ ಮೆದುಳಿನ ಮೂಲಕ ತನ್ನ ಸಂಸ್ಕಾರ ಪ್ರಟಿಸುತ್ತವೆ. ಕ್ರಿಯೆಗಳನ್ನು ಮಾಡುತ್ತವೆ. ಹಾಗೆಯೇ ಮನುಷ್ಯನ ಶರೀರದಲ್ಲೂ ಮೆದುಳಿರುವುದರಿಂದ ಆತ್ಮ ವಾಸ ಮಾಡುತ್ತದೆ. ಈ ಸತ್ಯವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ರಾಜಯೋಗಿ ಬ್ರಹ್ಮಾಕುಮಾರ ಡಾ.ಬಸವರಾಜ ರಾಜಋಷಿ ಹೇಳಿದರು.
ಹಳೆಯ ಬಟ್ಟೆಯನ್ನು ಬಿಟ್ಟು ಹೊಸದನ್ನು ಬದಲಿಸುವಂತೆ ಶರೀರವು ವೃದ್ಧಾವಸ್ಥೆಗೆ ಬಂದಾಗ ಆತ್ಮ ಶರೀರವನ್ನು ಬಿಡುತ್ತದೆ. ಶಿಶುವಾಗಿ ಮತ್ತೆ ಜನ್ಮ ಪಡೆಯುತ್ತದೆ ಎಂದು ಹೇಳಿದರು.
ಆತ್ಮ ಜನ್ಮ ಪಡೆಯಲು ಮುಖ್ಯ ಕಾರಣ ಋಣ ಸಂಬಂಧ. ಅದನ್ನಿಟ್ಟುಕೊಂಡೇ ಆತ್ಮವು ಶರೀರ ಪಡೆಯುತ್ತದೆ. ಅಲ್ಲಿಂದ ಜೀವನ ಸಾಗಲಾರಂಭಿಸುತ್ತದೆ. ಶರೀರದ ಒಳಗಿನ ಆತ್ಮಕ್ಕೆ ಅನುಭಾವಗಳು ಪ್ರಾಪ್ತಿಯಾಗುತ್ತವೆ. ವರ್ತಮಾನ ಜಗತ್ತಿನಲ್ಲಿ ಆತ್ಮವು ಯಾವ ಸಂಬಂಧ? ಯಾವ ಜ್ಞಾನ ಪಡೆಯಬೇಕೋ ಅದನ್ನು ಆಯಾ ಸಮಯದಲ್ಲಿ ಪಡೆಯುತ್ತದೆ ಎಂದು ವಿವರಿಸಿದರು.
ಎಲ್ಲಿ ಋಣ ಸಂಬಂಧವಿರುತ್ತದೋ ಅಲ್ಲಿ ಆತ್ಮನ ಪ್ರವೇಶವಾಗುತ್ತದೆ.ಋಣ ಸಂಬಂಧವನ್ನು ಮುಕ್ತಾಯ ಮಾಡಲು ಮತ್ತೆ ಭೂಮಿಗೆ ಬರಲೇಬೇಕಾಗುತ್ತದೆ. ತಾಯಿಯ ಗರ್ಭದಲ್ಲಿ ಶಿಶುವಿನ ಮೆದುಳಿನ ಅಭಿವೃದ್ಧಿ ಕಾರ್ಯ ನಡೆಯುತ್ತಿರುವ ವೇಳೆ ಅಂದರೆ, ಮೂರೂವರೆ ನಾಲ್ಕು ತಿಂಗಳ ಅವಧಿಯ ಸಮಯದಲ್ಲಿ ತಾಯಿ ಗರ್ಭದಲ್ಲಿ ಆತ್ಮ ಪ್ರವೇಶವಾಗುತ್ತದೆ. ಆಗ ಶಿಶುವಿನ ಚಲನವಲನ ಆರಂಭವಾಗುತ್ತದೆ ಎಂದು ಹೇಳಿದರು.
ಈಶ್ವರೀಯ ವಿಶ್ವವಿದ್ಯಾಲಯ ವಿದ್ಯಾನಗರ ಶಾಖೆ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಗೀತಾಜಿ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.
ಸುದೀರ್ಘ ಒಂದು ತಿಂಗಳ ಕಾಲ ಪ್ರತಿದಿನ ಸಂಜೆ 6.30ರಿಂದ 7.30ರವರೆಗೆ 1 ಗಂಟೆ ಸಮಯ ನಡೆಯುವ ಈ ಪ್ರವಚನವನ್ನು ನೇರ ಪ್ರಸಾರ ವೀಕ್ಷಸಲು ಯು ಟ್ಯೂಬ್ ಚಾನಲಾದ ರಾಜಯೋಗ ಟಿವಿ ಕನ್ನಡದಲ್ಲಿ (youtube/rajayogatvkannada) ವೀಕ್ಷಿಸಬಹುದು.