ದಾವಣಗೆರೆ, ಡಿ.5- ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವಂತೆ ಒತ್ತಾಯಿಸಿ, ರಾಜ್ಯ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಿತರಕ್ಷಣಾ ಸಮಿತಿ ಕರ್ನಾಟಕದ ನೇತೃತ್ವದಲ್ಲಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ ಸಮಿತಿ ಪದಾಧಿಕಾರಿಗಳು ಮತ್ತು ಅತಿಥಿ ಉಪನ್ಯಾಸಕರು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಅವರಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ತಮ್ಮ ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಿದರು.
ರಾಜ್ಯದ 430 ಸರ್ಕಾರಿ ಪದವಿ ಕಾಲೇ ಜುಗಳಲ್ಲಿ ಸುಮಾರು 11500 ಜನ ಅತಿಥಿ ಉಪನ್ಯಾಸಕರು ಎರಡು ದಶಕಗಳಿಂದ ನಿರಂತ ರವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು, ನಮ್ಮ ಖಾಯಂಮಾತಿಗಾಗಿ ಸರ್ಕಾರದ ಗಮನ ಸೆಳೆಯಲು ವಿವಿಧ ರೀತಿಯಲ್ಲಿ ಹೋರಾಟ ಮಾಡುತ್ತಾ ಬಂದಿದ್ದರೂ ಸಹ ಸರ್ಕಾರದಿಂದ ಯಾವುದೇ ಪ್ರತಿಫಲ ಸಿಕ್ಕಿಲ್ಲ. `ಅತಿಥಿ’ ಎಂಬ ಅವೈಜ್ಞಾನಿಕ ಪದ ಬಳಕೆಯಿಂದ ಇಂದು ನಾವು ಆಧುನಿಕ ಜೀತ ಪದ್ಧತಿಯನ್ನು ಅನುಭವಿಸು ತ್ತಿದ್ದೇವೆ. ಅನೇಕ ಸರ್ಕಾರಗಳ ನಿರ್ಲಕ್ಷ್ಯ ಧೋರಣೆಯಿಂದ ಅತಿಥಿ ಉಪನ್ಯಾಸಕರು ಅತಂತ್ರ ಜೀವನವನ್ನು ಅನುಭವಿಸಬೇಕಾಗಿದೆ ಎಂದು ಅತಿಥಿ ಉಪನ್ಯಾಸಕರು ಮನವಿ ನೀಡುವಾಗ ಅಳಲು ಹಂಚಿಕೊಂಡಿದ್ದಾರೆ.
ಈ ಹಿಂದೆ ಅರೆಕಾಲಿಕ, ಜೆ.ಓ.ಸಿ ಉಪನ್ಯಾ ಸಕರನ್ನು ಹಾಗೂ ಪ್ರಸ್ತುತ ಸರ್ಕಾರದಲ್ಲಿ ಗ್ರಾಮ ಪಂಚಾಯಿತಿ, ಸಹಕಾರ ಇಲಾಖೆ ಮುಂತಾದವುಗಳಲ್ಲಿ ಖಾಯಂ ಮಾಡಿದ ನಿದರ್ಶನಗಳಿವೆ. ಈಗಿನ ಮುಖ್ಯಮಂತ್ರಿಗಳು ಹಿಂದಿನ ವಿರೋಧ ಪಕ್ಷದಲ್ಲಿದ್ದಾಗ ಅತಿಥಿ ಉಪನ್ಯಾಸಕರ ಬಗ್ಗೆ ಸದನದಲ್ಲಿ ಧ್ವನಿ ಎತ್ತಿ ಸಹಾನುಭೂತಿ ತೋರಿಸಿದ್ದರು. ತಮ್ಮ ಚುನಾ ವಣೆ ಪ್ರಣಾಳಿಕೆಯಲ್ಲಿ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸುವಂತೆ ಹೇಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ಸಾಕಷ್ಟು ಜನ ಅತಿಥಿ ಉಪನ್ಯಾಸಕರು ನಿವೃತ್ತಿಯಾಗಿದ್ದಾರೆ. ಕೆಲವರು ನಿವೃತ್ತಿ ಅಂಚಿನಲ್ಲಿದ್ದಾರೆ. ಹಲವಾರು ಅತಿಥಿ ಉಪನ್ಯಾಸಕರು ಗಂಭೀರ ಕಾಯಿಲೆಗಳಿಂದ, ಹೃದಯಾಘಾತ, ಆತ್ಮಹತ್ಯೆಯಂತಹ ಸಂಗತಿಗಳಿಂದ ಸಾವನ್ನಪ್ಪಿದ್ದಾರೆ. ಇವರುಗಳಿಗೆ ಇದುವರೆಗೂ ಯಾವುದೇ ಪರಿಹಾರ ಸಿಕ್ಕಿಲ್ಲ. ಆದರೆ ಖಾಯಂಮಾತಿಗೊಳಪಡಿಸುವುದು, ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ಖಾಯಂ ಮಾತಿ ಇದಕ್ಕೊಂದೇ ಮಾರ್ಗ. ಅತಿಥಿ ಉಪನ್ಯಾಸಕರಿಗೆ ಶಾಶ್ವತ ಪರಿಹಾರವನ್ನು ನೀಡಿ, ಮಾನವೀಯತೆ ನೆಲೆಯಲ್ಲಿ ನೇಮಕಾತಿ ಮಾಡುವುದರೊಂದಿಗೆ ಐತಿಹಾಸಿಕ ನಿಧಾರವನ್ನು ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಒತ್ತಾಯಿಸಿದ್ದಾರೆ.