ದಾವಣಗೆರೆ, ಡಿ.4- ಆರ್ಥಿಕ ವರ್ಷದ ಬಜೆಟ್ ಸಿದ್ಧತೆ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಮಹಾನಗರ ಪಾಲಿಕೆ ಬಜೆಟ್ ಪೂರ್ವ ಸಾರ್ವಜನಿಕ ಸಲಹಾ ಸಭೆಗೆ ಕೇವಲ ಬೆರಳೆಣಿಕೆಯಷ್ಟು ಸಾರ್ವಜನಿಕರು ಹಾಜರಿದ್ದರು.
ಆರಂಭದಲ್ಲಿ ಒಂದಿಬ್ಬರನ್ನು ಹೊರತುಪಡಿಸಿ, ಯಾವ ಸಂಘ-ಸಂಸ್ಥೆ ಪದಾಧಿಕಾರಿಗಳಾಗಲೀ, ಸಾರ್ವಜನಿಕರಾಗಲೀ ಮಹಾನಗರ ಪಾಲಿಕೆಯತ್ತ ಸುಳಿಯಲೇ ಇಲ್ಲ.
ತಡವಾಗಿಯಾದರೂ ಮೇಯರ್ ವಿನಾಯಕ ಪೈಲ್ವಾನ್, ಪಾಲಿಕೆ ಸಿಇಓ ಪ್ರಿಯಾಂಕ ಅವರ ನಾಯಕತ್ವದಲ್ಲಿ ಸಭೆ ನಡೆಯಿತಾದರೂ, ಸಭೆಯಲ್ಲಿ ಉಪಸ್ಥಿತರಿದ್ದವರು ಯಥಾಪ್ರಕಾರ ಚರಂಡಿ, ರಸ್ತೆ, ಸ್ಮಾಶನ, ಧೂಳು ಇನ್ನಿತರೆ ಸಮಸ್ಯೆಗಳ ಬಗ್ಗೆ ಮಾತನಾಡಿದರು.
ಇದೇ ವೇಳೆ ದಲಿತ ಮುಖಂಡ ಸೋಮಲಾಪುರ ಹನುಮಂತಪ್ಪ ಮಾತನಾಡಿ, ಸಾರ್ವಜನಿಕರಿಂದ ಪಡೆಯುವ ಸಲಹೆಗಳು ನೆಪ ಮಾತ್ರಕ್ಕೆ ಎನ್ನುವಂತಾಗಿದೆ. ಸಂಘ-ಸಂಸ್ಥೆ, ವಿವಿಧ ಸಂಘಟನೆಗಳ ಪದಾಧಿಕಾರಿಗಳು ನೀಡಿದ ಸಲಹೆಗಳು ಯಾವ ಬಜೆಟ್‌ನಲ್ಲಿಯೂ ಕೂಡ ಅನುಷ್ಠಾನಗೊಳ್ಳದಿರುವುದು ವಿಷಾದದ ಸಂಗತಿ ಎಂದರು.
ಹಿಂದಿನ ಸಭೆಯಲ್ಲಿ ಸಲಹೆ-ಅಹವಾಲುಗಳನ್ನು ಸ್ವೀಕರಿಸಿದ ಆಯುಕ್ತರೇ ಸಭೆಗೆ ಹಾಜರಾಗಿಲ್ಲ. ನಾವು ಸಮಸ್ಯೆಗಳನ್ನು ಯಾರ ಮುಂದಿಡಬೇಕೆಂಬುದೇ ತೋಚುತ್ತಿಲ್ಲ. ಇದೊಂದು ನೆಪ ಮಾತ್ರದ ಸಭೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಗರದೇವತೆ ಶ್ರೀ ದುರ್ಗಾಂಬಿಕ ದೇವಿ ದೇವಸ್ಥಾನದ ಧರ್ಮದರ್ಶಿ ಗೌಡ್ರು ಚನ್ನಬಸಪ್ಪ ಮಾತನಾಡಿ, ಬಹಳಷ್ಟು ಮಂದಿಗೆ ಈ ಸಭೆಯ ಮಾಹಿತಿಯೇ ಇಲ್ಲ ಎಂದರು.
ಗಡಿಯಾರ ಕಂಬದ ಬಳಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ನಾಯಿಗಳು ಅಟ್ಟಿಸಿಕೊಂಡು ಹೋದಾಗ ಅನೇಕ ಬೈಕ್ ಸವಾರರು ಬಿದ್ದಿರುವ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಕೂಡಲೇ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಪಾಲಿಕೆ ಮುಂದಾಗಬೇಕಾಗಿದೆ ಎಂದು ಸಲಹೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ವಿನಾಯಕ ಪೈಲ್ವಾನ್, ಬೀದಿ ನಾಯಿಗಳ ಸಂತಾನಹರಣಕ್ಕಾಗಿ ಬೆಂಗಳೂರು ಮಟ್ಟದಲ್ಲಿ 45 ಲಕ್ಷ ರೂ. ಗಳ
ಟೆಂಡರ್ ಸಹ ಕರೆಯಲಾಗಿದೆ. ಸಂತಾನಹರಣ
ಮಾಡಲು ಮೂರು ಕೊಠಡಿಗಳ ಅವಶ್ಯವಿದ್ದು,
ಈಗಾಗಲೇ ಎಪಿಎಂಸಿ ಆವರಣದಲ್ಲಿ ಎರಡು ಕೊಠಡಿಗಳನ್ನು ಗುರುತಿಸಲಾಗಿದೆ ಎಂದರು.
ಕನ್ನಡಪರ ಹೋರಾಟಗಾರ ನಾಗೇಂದ್ರ ಬಂಡೀಕರ್ ಮಾತನಾಡಿ, ಮಹಾನಗರ ಪಾಲಿಕೆ ಮುಂಭಾಗದ ರಸ್ತೆ ಬದಿ ಆಟೋಗಳು, ಬಸ್‌ಗಳ ನಿಲುಗಡೆ ಹೆಚ್ಚಾಗಿದ್ದು, ಪಾಲಿಕೆ ಪ್ರವೇಶಿಸಲು ದ್ವಿಚಕ್ರ ವಾಹನಗಳಿಗೆ ತುಂಬಾ ತೊಂದರೆಯಾಗುತ್ತಿದೆ. ಕಳೆದ ಬಾರಿ ವೈಜ್ಞಾನಿಕ ರೀತಿಯಲ್ಲಿ ಹಂಪ್ಸ್ ನಿರ್ಮಿಸಬೇಕು ಮತ್ತು ಶಾಲಾ-ಕಾಲೇಜುಗಳ ಬಳಿ ಕಡ್ಡಾಯವಾಗಿ ಹಂಪ್ಸ್ ಹಾಕಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಗಾಂಧಿನಗರದ ಬಳಿ ಇರುವ ರುದ್ರಭೂಮಿಯಲ್ಲಿ ಹೆಣಗಳನ್ನು ಊಳಲು ಜಾಗವಿಲ್ಲದಂತಾಗಿದೆ. ವಿದ್ಯುತ್ ಚಿತಾಗಾರದ ಅವಶ್ಯಕತೆ ಇದ್ದು, ಕೂಡಲೇ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಮನವಿ ಮಾಡಿದರು.
ಮುಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಮೇಯರ್ ವಿನಾಯಕ ಪೈಲ್ವಾನ್ ತಿಳಿಸಿದರು.
ಪತ್ರಕರ್ತರಾದ ಆರ್.ಎಸ್. ತಿಪ್ಪೇಸ್ವಾಮಿ, ಎ. ಫಕೃದ್ಧೀನ್, ಜೆ.ಎಸ್. ವೀರೇಶ್ ಮತ್ತಿತರರು ಸಲಹೆಗಳನ್ನು ನೀಡಿದರು.