ದಾವಣಗೆರೆ, ಡಿ.4- ನಗರದ ಅಶೋಕ ಟಾಕೀಸ್ ಬಳಿ ರೈಲ್ವೆ ಅಂಡರ್ ಬಸ್ ನಿರ್ಮಾಣಕ್ಕೆ ಅಗತ್ಯವಿರುವ ಸ್ವತ್ತುಗಳನ್ನು ಭೂ ಸ್ವಾಧೀನಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.
ಸೋಮವಾರ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಶೋಕ ಟಾಕೀಸ್ ಬಳಿ ರೈಲ್ವೆ ಅಂಡರ್ ಪಾಸ್ ನಿರ್ಮಾಣ ಕುರಿತಂತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಶೋಕ ಟಾಕೀಸ್ ಬಳಿಯ ರೈಲ್ವೆ ಅಂಡರ್ ಪಾಸ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರವು 49 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದು, ಕೂಡಲೇ ರೈಲ್ವೆ
ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಅಗತ್ಯವಿರುವ ಸ್ವತ್ತುಗಳನ್ನು ಭೂಸ್ವಾಧೀನಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ
ನೀಡಿದರು. ಉಪ ವಿಭಾಗಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಳ್ಳಬೇಕು ಎಂದರು.
ತುಮಕೂರು – ದಾವಣಗೆರೆ ನೇರ ರೈಲು ಮಾರ್ಗವು ದಾವಣಗೆರೆ ತಾಲ್ಲೂಕಿನ ತೋಳಹುಣಸೆ, ಬುಳ್ಳಾಪುರ, ಆನಗೋಡು, ನೀರ್ಥಡಿ, ಹೆಬ್ಬಾಳ, ಹುಣಸೇಕಟ್ಟೆ, ಪಂಚೇನಹಳ್ಳಿ, ಚಿಕ್ಕವ್ವನಹಳ್ಳಿ, ಕರೆಲಕ್ಕೇನಹಳ್ಳಿ, ಚಟ್ಟೋಬನಹಳ್ಳಿ, ಕೊಗ್ಗನೂರು, ಹಾಲುವರ್ತಿ ಗ್ರಾಮಗಳ ಮೂಲಕ ರೈಲು ಮಾರ್ಗ ಹಾದು ಹೋಗಲಿದ್ದು, ರಂಗವ್ವನಹಳ್ಳಿ ಹಾಗೂ ಚಟ್ಟೋಬನಹಳ್ಳಿಯಲ್ಲಿ ಬಾಕಿ ಇರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರವೇ ರೈತರ ಜಮೀನುಗಳನ್ನು ಸರ್ವೇ ಅಧಿಕಾರಿಗಳು ಪರಿಶೀಲಿಸಬೇಕು. ಸರ್ಕಾರ ನಿಗದಿಪಡಿಸಿರುವ ನಿಗದಿತ ದರವನ್ನು ಅರ್ಹ ರೈತರಿಗೆ ಪಾವತಿಸಿ, ಆರ್.ಟಿ.ಸಿ ತಿದ್ದುಪಡಿ ಮಾಡಿ ಕ್ರಯ ಮಾಡಿಕೊಳ್ಳಬೇಕು ಎಂದರು.
ರೈಲ್ವೇ ಮತ್ತು ಕಂದಾಯ ಇಲಾಖೆಗಳ ಮೂಲಕ ಈಗಾಗಲೇ ಸರ್ವೇ ಕಾರ್ಯ ಆರಂಭಗೊಂಡಿದ್ದು, ಶೀಘ್ರವೇ ಸ್ವಾಧೀನಕ್ಕೆ ಒಳಪಡುವ ಜಮೀನುಗಳ ಮೂಲ ದಾಖಲೆಗಳನ್ನು ಪರಿಶೀಲಿಸಿ ಪೋಡಿ ದುರಸ್ತಿ ಕಾರ್ಯ ನಡೆಸಬೇಕು. ರೈತರು ಯಾವುದೇ ಗೊಂದಲಕ್ಕೆ ಒಳಗಾಗದಂತೆ ನ್ಯಾಯ ಸಮ್ಮತವಾಗಿ ಭೂಸ್ವಾಧೀನ ಮಾಡಿಕೊಳ್ಳಬೇಕು. ರೈಲ್ವೆ ಮಾರ್ಗ ಹಾದು ಹೋಗಿರುವ ಜಮೀನುಗಳಲ್ಲಿ ಯಾವುದೇ ತಕರಾರು, ಇಂಡೀಕರಣ, ಪೋಡಿ ಹಾಗೂ ತಾಂತ್ರಿಕ ಸಮಸ್ಯೆಗಳಾದಲ್ಲಿ ಶೀಘ್ರವೇ ಪರಿಹರಿಸಬೇಕು ಹಾಗೂ ಅರಣ್ಯ ಪ್ರದೇಶದಲ್ಲಿ ಸಾಗುವಳಿ ಮಾಡಿದವರಿಗೆ ಬೇರೆಡೆ ಜಮೀನು ನೀಡಿ ಸಕ್ರಮಗೊಳಿಸಿಕೊಳ್ಳಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಉಪವಿಭಾಗಾಧಿಕಾರಿ ಶ್ರೀಮತಿ ಎನ್. ದುರ್ಗಾಶ್ರೀ, ಜಿಲ್ಲಾ ಭೂ ದಾಖಲೆಗಳ ಉಪನಿರ್ದೇಶಕರಾದ ಭಾವನಾ ಬಸವರಾಜ್ ಹಾಗೂ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.