`ನಾರೀ ಶಕ್ತಿ ಸಂಗಮ’ ಮಹಿಳಾ ಸಮ್ಮೇಳನ
ದಾವಣಗೆರೆ, ನ. 3- ಸಾಕಷ್ಟು ಮಹಿಳೆಯರಲ್ಲಿ ಸಾಮರ್ಥ್ಯವಿದ್ದರೂ, ಸಹನೆ ಹಾಗೂ ತ್ಯಾಗದ ಬೇಲಿ ಹಾಕಿಕೊಂಡು ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.
ಮಹಿಳಾ ಸಮನ್ವಯ ಹಾಗೂ ಸೇವಾ ಭಾರತಿ ಟ್ರಸ್ಟ್ ವತಿಯಂದ ನಗರದ ರೇಣುಕ ಮಂದಿರದಲ್ಲಿ ಆಯೋಜಿಸಲಾಗಿದ್ದ ನಾರೀ ಶಕ್ತಿ ಸಂಗಮ ಮಹಿಳಾ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ನಾನಿದ್ದರಷ್ಟೇ ಮನೆ ನಡೆಸಲು ಸಾಧ್ಯ, ನಾನಿದ್ದರಷ್ಟೇ ಮಕ್ಕಳ ನಿಭಾಯಿಸಲು ಸಾಧ್ಯ ಎಂಬ ಚೌಕಟ್ಟನ್ನು ಮಹಿಳೆಯರೇ ಹಾಕಿಕೊಳ್ಳುತ್ತಾರೆ. ಈ ರೀತಿ ಬೇರೆಯವರಿಗೋಸ್ಕರವೇ ಬದುಕದೇ, ಸ್ವಂತಿಕೆಯನ್ನು ಕಂಡುಕೊಳ್ಳಬೇಕು ಎಂದವರು ಹೇಳಿದರು.
ಮನೆ ಜವಾಬ್ದಾರಿ ಹಾಗೂ ಹೊರಗಿನ ಕೆಲಸ ಎರಡರ ಜವಾಬ್ದಾರಿ ನಿರ್ವಹಿಸುವ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು. ಮನೆಗಷ್ಟೇ ಸೀಮಿತವಾಗದೇ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಎಸ್ಪಿ ತಿಳಿಸಿದರು.
ಮಹಿಳೆಯರು ಈ ಹಿಂದೆ ಬರಲು ಹೆದರುತ್ತಿದ್ದ ಕ್ಷೇತ್ರಗಳಿಗೂ ಕಾಲಿಟ್ಟು, ಅಲ್ಲಿನ ಸವಾಲುಗಳನ್ನು ಮೆಟ್ಟಿ ನಿಂತಿದ್ದಾರೆ. ಹೀಗಾಗಿ ಮಹಿಳೆಯರು ತಮ್ಮ ಸಾಮರ್ಥ್ಯಗಳಿಗೆ ಬೇಲಿ ಹಾಕಿಕೊಳ್ಳುವುದನ್ನು ನಿಲ್ಲಿಸಬೇಕು ಎಂದರು.
ಬಿಟ್ಟಿ ಭಾಗ್ಯಕ್ಕೆ ಕೈ ಒಡ್ಡುವವರು ಭಿಕಾರಿಗಳಾಗುತ್ತಾರೆ: ಬಾಳೇಕುಂದ್ರಿ
`ಕರಾಗ್ರೆ ವಸತೆ ಲಕ್ಷ್ಮಿ, ಕರಮಧ್ಯೇ ಸರಸ್ವತಿ, ಕರಮೂಲೇ ತು ಗೋವಿನ್ದಃ ಪ್ರಭಾತೇ ಕರದರ್ಶನಮ್’ ಎಂದು ನಾವು ಹೇಳುತ್ತೇವೆ. ನಮ್ಮ ಕೈಯಲ್ಲಿ ನಮ್ಮ ಶಕ್ತಿ ಇದೆ. ಕೈಯಲ್ಲಿ ಸರಸ್ವತಿ, ಲಕ್ಷ್ಮಿ, ದೇವಿ ಇರುತ್ತಾರೆ. ಶ್ರಮಪಟ್ಟು ಕೆಲಸ ಮಾಡುವವರು ಶಕ್ತಿವಂತರಾಗುತ್ತಾರೆ ಎಂಬುದೇ ಈ ಮಾತಿನ ಅರ್ಥ ಎಂದು ವೈದ್ಯೆ ಹಾಗೂ ಅಂಕಣಕಾರ್ತಿ ವಿಜಯಲಕ್ಷ್ಮಿ ಬಾಳೇಕುಂದ್ರಿ ಹೇಳಿದರು.
ಇಂತಹ ಶಕ್ತಿ ನಮ್ಮ ಕೈಯಲ್ಲಿದೆ ಎಂಬುದನ್ನು ಪರಿಗಣಿಸದೇ ಬಿಟ್ಟಿ ಭಾಗ್ಯಕ್ಕೆ ಕೈ ಒಡ್ಡುವವರು ಭಿಕಾರಿಗಳಾಗುತ್ತಾರೆ. ಬಿಟ್ಟಿ ಭಾಗ್ಯಕ್ಕೆ ಕೈ ಒಡ್ಡಿ ಬಿಟ್ಟಿ ಬಸ್ ಹತ್ತುತ್ತೇನೆ ಎಂದು ಹೋಗುವವರು ಇಡೀ ರಾಜ್ಯವನ್ನೇ ಮಾರಿಕೊಂಡು ಬಿಟ್ಟಿದ್ದಾರೆ ಎಂದವರು ಟೀಕಿಸಿದರು.
ಇನ್ನೊಬ್ಬರ ಭಿಕ್ಷೆಗೆ ಕೈ ಒಡ್ಡದೇ ಬದುಕಿದಾಗ ಯೋಗ್ಯ ಬದುಕಾಗುತ್ತದೆ ಎಂದ ಅವರು, ಇದಕ್ಕೆ ಶರಣೆ ಆಯ್ದಕ್ಕಿ ಲಕ್ಕಮ್ಮ ಉದಾಹರಣೆ ಎಂದರು. ನಾರಿ ಶಕ್ತಿ ಎಂದರೆ ಭಿಕ್ಷುಕರಲ್ಲ. ನಮ್ಮ ಮಕ್ಕಳನ್ನು ಭಿಕ್ಷೆ ಬೇಡುವವರನ್ನಾಗಿ ಮಾಡದೇ, ದೇಶ ಕಟ್ಟುವ ಮಕ್ಕಳನ್ನು ಬೆಳೆಸುತ್ತೇವೆ ಎನ್ನುವ ಧೈರ್ಯ ಮಹಿಳೆಯರಲ್ಲಿದೆ ಎಂದೂ ಅವರು ಹೇಳಿದರು.
ಬೆಂಗಳೂರಿನಲ್ಲಿ ಕೆಲ ಮಹಿಳೆಯರು ಸನಾತನ ಧರ್ಮದಿಂದ ಆಜಾದಿ ಎಂದು ಹೇಳುತ್ತಾ ಹರಕಲು ಜೀನ್ಸ್, ಕೂದಲು ಕತ್ತರಿಸಿಕೊಂಡು ಹೋಗುತ್ತಿದ್ದಾರೆ. ಕೈಯಲ್ಲಿ ಸಿಗರೇಟು – ವೈನ್ ಹಿಡಿದರೆ ಆಜಾದಿ ಆಗುವುದಿಲ್ಲ. ಆದು ಮುನ್ನಡೆಯುವುದೂ ಅಲ್ಲ. ನಾವು ಸನಾತನ ಧರ್ಮದ ಬೇರುಗಳ ಜೊತೆ ಹೊಸತನ ಕಂಡುಕೊಂಡು ಹೋಗಬೇಕಿದೆ ಎಂದು ಬಾಳೇಕುಂದ್ರಿ ತಿಳಿಸಿದರು.
ಮನೆಯಲ್ಲೂ ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಕೆಲಸ ಹೇಳುವಾಗ ಭೇದ ಮಾಡುತ್ತೇವೆ. ತಾಯಂದಿರು ಮಕ್ಕಳನ್ನು ಬೆಳೆಸುವಾಗ ಈ ಭೇದ ನಿಲ್ಲಿಸಬೇಕು ಎಂದು ಉಮಾ ಪ್ರಶಾಂತ್ ಕಿವಿಮಾತು ಹೇಳಿದರು.
ಮಹಿಳೆಯರು ತಮ್ಮ ಮೇಲೆ ನಡೆಯುವ ದೌರ್ಜನ್ಯಗಳ ಬಗ್ಗೆ ಮೌನ ವಹಿಸಬಾರದು. ದೌರ್ಜನ್ಯಗಳ ವಿರುದ್ಧ ಹೊಂದಿಕೊಳ್ಳುವುದು ಆದರ್ಶ ಗುಣವಲ್ಲ. ನಿಮ್ಮ ಸಮಸ್ಯೆಗಳ ಬಗ್ಗೆ ನೀವೇ ಮೊದಲು ಮಾತನಾಡಬೇಕು ಎಂದೂ ಅವರು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವೈದ್ಯೆ ಹಾಗೂ ಅಂಕಣಗಾರ್ತಿ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ, ಬೆಳವಡಿ ಮಲ್ಲಮ್ಮ, ಕೆಳದಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಅಕ್ಕ ನಾಗಮ್ಮ, ಆಯ್ದಕ್ಕಿ ಲಕ್ಕಮ್ಮ ಅಂಥವರು ನಮಗೆ ಆದರ್ಶವಾಗಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ವೈದ್ಯೆ ಡಾ. ಶಾಂತಾ ಭಟ್ ಮಾತನಾಡಿ, ಮಹಿಳೆ ತನ್ನ ಹಾಗೂ ತನ್ನ ಕುಟುಂಬವನ್ನು ಉದ್ಧಾರ ಮಾಡಿದರೆ ಸಮಾಜ ಉದ್ಧಾರವಾಗಲು ನೆರವಾದಂತೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸೇವಾ ಭಾರತಿ ಟ್ರಸ್ಟ್ ಕಾರ್ಯದರ್ಶಿ ಅರುಣ್ ಗುಡ್ಡದಕೆರೆ, ಬಡಾವಣೆ ಪೊಲೀಸ್ ಠಾಣೆ ಪಿ.ಎಸ್.ಐ. ಎಂ.ಆರ್. ಚೌಬೆ, ಸಮ್ಮೇಳನದ ಸಂಚಾಲಕಿ ಸುಧಾ ಜಯರುದ್ರೇಶ್, ಸಹ ಸಂಚಾಲಕಿ ಶೋಭಾ ಕೊಟ್ರೇಶ್, ಸ್ವಾಗತ ಸಮಿತಿ ಉಪಾಧ್ಯಕ್ಷರಾದ ಗಿರಿಜಾ ಉಮಾಪತಿ, ಎಂ.ಎನ್. ವಿಜಯಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.