ಮಕ್ಕಳು ಕೇವಲ ಮಾರ್ಕ್‌ಗೆ ಜೊತು ಬೀಳದೇ ರಿಮಾರ್ಕ್ ಇಲ್ಲದ ಜೀವನ ನಡೆಸಬೇಕು

ಮಕ್ಕಳು ಕೇವಲ ಮಾರ್ಕ್‌ಗೆ ಜೊತು ಬೀಳದೇ ರಿಮಾರ್ಕ್ ಇಲ್ಲದ ಜೀವನ ನಡೆಸಬೇಕು

ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ 60ರ ಸಂಭ್ರಮಾಚರಣೆಯಲ್ಲಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಕಿವಿಮಾತು

ದಾವಣಗೆರೆ, ಡಿ. 3- ಬಡವರು, ಶ್ರಮಿಕ ವರ್ಗದವರು, ಮಧ್ಯಮ ವರ್ಗದವರ ಮಕ್ಕಳಿಗೆ ನೀಡುತ್ತಿರುವ ಜಯವಿಭವ ವಿದ್ಯಾಸಂಸ್ಥೆಯ ಶೈಕ್ಷಣಿಕ ಸೇವೆ ಅಮೋಘವಾದುದು. ಶಿಕ್ಷಣ ಕ್ಷೇತ್ರಕ್ಕೆ ಚಿಗಟೇರಿ ಮನೆತನದವರು ನೀಡಿದ ಕೊಡುಗೆ ಅಪಾರ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಶ್ಲ್ಯಾಘಿಸಿದರು.

ವಿನೋಬನಗರದಲ್ಲಿರುವ  ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆಯ ಅಕ್ಕಮಹಾದೇವಿ ಬಾಲಿಕಾ ಪ್ರೌಢಶಾಲೆ, ಶ್ರೀ ಜಗದ್ಗುರು ಜಯದೇವ ಮುರುಘರಾಜೇಂದ್ರ ಪ್ರೌಢಶಾಲೆಗಳ 60 ರ ಸಂಭ್ರಮ ದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ದಾವಣಗೆರೆ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಯನ್ನು ನಿರ್ಮಿಸಿ ಕೊಡುವ ಮೂಲಕ ವಿಶ್ವದ ಭೂಪಟದಲ್ಲಿ ಗುರುತಿಸುವಂತಹ ಕೆಲಸವನ್ನು ಚಿಗಟೇರಿ ಮನೆತನದವರು ಮಾಡಿದ್ದಾರೆ. ಜಯವಿಭವ ವಿದ್ಯಾಸಂಸ್ಥೆಯಲ್ಲಿ ಬಹಿರಂಗ ಸಂಸ್ಕಾರದ ಜೊತೆಗೆ ಗುಣಮಟ್ಟದ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಜೀವಿಸುತ್ತಿದ್ದಾರೆ ಎಂದರು.

ಮ್ಯಾಂಚೆಸ್ಟರ್ ಎನಿಸಿಕೊಂಡಿದ್ದ ದಾವಣಗೆರೆ, ಚಳವಳಿ ನಗರಿಯಾಗಿ ನಂತರ ಶೈಕ್ಷಣಿಕ ನಗರವಾಗಿ ಪರಿವರ್ತನೆಯಾಯಿತು. ಬಹಳಷ್ಟು ವಿದ್ಯಾಸಂಸ್ಥೆಗಳು ಪ್ರಾಮಾಣಿಕ ಸೇವೆಯನ್ನು ಈ ನಾಡಿಗೆ ಸಲ್ಲಿಸುತ್ತಿವೆ. ಅದರಲ್ಲಿ ಜಯವಿಭವ ಸಂಸ್ಥೆ ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ ಎಂದು ಹೇಳಿದರು.

ಮಕ್ಕಳು ಕೇವಲ ಮಾರ್ಕ್‌ಗೆ ಜೊತು ಬೀಳದೇ ರಿಮಾರ್ಕ್ ಇಲ್ಲದ ಜೀವನ ನಡೆಸುವ ಬಗ್ಗೆ ಆಲೋಚನೆ ಮಾಡಬೇಕು. ದೇವಸ್ಥಾನದ ಗಂಟೆ ನಾದಕ್ಕಿಂತ ಶಾಲೆ ಗಂಟೆಯ ನಾದವೇ ಮುಖ್ಯ ಎಂಬ ಅಂಬೇಡ್ಕರ್ ವಾಣಿಯನ್ನು ಮರೆಯುವಂತಿಲ್ಲ. ಪ್ರಸ್ತುತ ಹೈಟೆಕ್ ಎಜುಕೇಶನ್‌ಗೆ ಪೋಷಕರು ಮಾರು ಹೋಗಿದ್ದಾರೆ. ಸಾಲ ಮಾಡಿಯಾದರೂ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕೆಂಬ ಛಲ ಬಂದಿದೆ ಎಂದರು. 

ತಾವು ಕೂಡ ಇದೇ ಶಾಲೆಯಲ್ಲಿ ಓದಿ, ಉತ್ತಮ ಸಂಸ್ಕಾರ ರೂಢಿಸಿಕೊಂಡಿದ್ದರಿಂದಲೇ ಒಬ್ಬ ಜಗದ್ಗುರು ಆಗಿ ವೇದಿಕೆ ಮೇಲೆ ನಿಂತು ಆಶೀರ್ವಚನ ನೀಡುತ್ತಿರುವುದು ಅತೀವ ಸಂತಸ ತಂದಿದೆ ಎಂದು ಹೇಳಿದರು.

ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಮಾತನಾಡಿ, ಯಾವುದೇ ಒಂದು ವಿದ್ಯಾಸಂಸ್ಥೆಯನ್ನು ಅದರ ಬೃಹತ್ ಕಟ್ಟಡದ ಮೂಲಕ ಅಳೆಯಲು ಸಾಧ್ಯವಿಲ್ಲ. ಬದಲಿಗೆ ಅಲ್ಲಿ ನೀಡುತ್ತಿರುವ ಸಂಸ್ಕಾರದಿಂದ ಮಾತ್ರ ಅಲ್ಲಿನ ಶಿಕ್ಷಣದ ಗುಣಮಟ್ಟ ಅಳೆಯಲು ಸಾಧ್ಯ ಎಂದರು.

ಜಯವಿಭವ ವಿದ್ಯಾಸಂಸ್ಥೆಯು ಬಡವರು, ಮಧ್ಯಮ ವರ್ಗದ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿದ್ದು, ಇಲ್ಲಿನ ಸಂಸ್ಕಾರ ಪಡೆದ ಮಕ್ಕಳು ಸಮಾಜದಲ್ಲಿ ಸತ್ಪ್ರಜೆಗಳಾಗಿದ್ದಾರೆ. ತಂದೆ-ತಾಯಿಗಳೇ ಶ್ರೇಷ್ಠರು. ಶಿಕ್ಷಣ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಸಮಾಜ ಮತ್ತು ದೇಶವನ್ನು ಕಟ್ಟಬೇಕಾಗಿದೆ ಎಂದು ಹೇಳಿದರು.

ಸಮಾಜ, ತಂದೆ-ತಾಯಿ, ಭೂಮಿಯ ಋಣವನ್ನು ತೀರಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಚಂತಿಸಬೇಕಾಗಿದೆ. ಶಾಲೆಯಲ್ಲಿ ಶಿಕ್ಷಕ ಜವಾಬ್ದಾರಿ ಕೂಡ ಹೆಚ್ಚಿದ್ದು, ಓದಿದವನು ಶ್ರೇಷ್ಠ ಎನಿಸಿಕೊಳ್ಳುತ್ತಾನೆ. ವಿದ್ಯೆಗೆ ಬೆಲೆ ಜಾಸ್ತಿ ಎಂದು ತಿಳಿಸಿದರು.

ಜಯವಿಭವ ವಿದ್ಯಾಸಂಸ್ಥೆಯ ಅಧ್ಯಕ್ಷ ಮುರುಗೇಂದ್ರ ಚಿಗಟೇರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್, ಪಾಲಿಕೆ ಸದಸ್ಯೆ ಮೀನಾಕ್ಷಿ ಜಗದೀಶ್ ಮಾತನಾಡಿದರು.

ಇದೇ ವೇಳೆ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್, ಸುಮಂಗಲಾ ಎಸ್. ಚಿಗಟೇರಿ, ಸೌಮ್ಯ ಬಸವರಾಜ್, ಕಸ್ತೂರಿ ಹಿರೇಮಠ, ಶಾಂತಕುಮಾರ್ ಅವರನ್ನು ಗೌರವಿಸಲಾಯಿತು.

ಶಿಕ್ಷಕ ಶಾಂತಯ್ಯ ಪರಡಿಮಠ ನಿರೂಪಿಸಿದರು. ಜಯವಿಭವ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಮನೋಹರ ಚಿಗಟೇರಿ ವಂದಿಸಿದರು.  

error: Content is protected !!