ವಿಕಲಚೇತನರು ಸದಾ ಉತ್ಸಾಹಿಗಳಾಗಿರಬೇಕು

ವಿಕಲಚೇತನರು ಸದಾ ಉತ್ಸಾಹಿಗಳಾಗಿರಬೇಕು

ವಿಶ್ವ ವಿಕಲಚೇತನರ ದಿನಾಚರಣೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್

ದಾವಣಗೆರೆ, ಡಿ. 3- ವಿಕಲಚೇತನರು ಸದಾ ಉತ್ಸಾಹಿಗಳಾಗಿರಬೇಕು ಮತ್ತು  ಎಲ್ಲಾ ಕ್ಷೇತ್ರಗಳಲ್ಲಿಯೂ ಭಾಗವಹಿಸಿ ಸಾಧನೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್ ಕರೆ ನೀಡಿದರು.

ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾ ಖೆಯ ಸಹಯೋಗದೊಂದಿಗೆ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಜರುಗಿದ ವಿಶ್ವ ವಿಕಲಚೇತನರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಕಲಚೇತನರ ದಿನಾಚರಣೆಗೆ ವಿಶ್ವಸಂಸ್ಥೆಯು ವಿಕಲಚೇತನರಿಗಾಗಿ, ವಿಕಲ ಚೇತನರೊಂದಿಗೆ, ವಿಕಲಚೇತನ ರಿಂದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಂರಕ್ಷಿಸಲು ಮತ್ತು ಸಾಧಿಸಲು ಕಾರ್ಯಪ್ರವೃತ್ತವಾಗುವಿಕೆ ಯಲ್ಲಿ ಒಗ್ಗಟ್ಟು ಎಂಬ ಘೋಷ ವಾಕ್ಯವನ್ನು ನೀಡಿದ್ದು, ವಿಕಲಚೇತನರನ್ನು ಸಮಾಜದ ಮುಖ್ಯವಾಹಿಗೆ ತರುವ ಕುರಿತು ಜಾಗೃತಿ, ಸಮಾನ ಅವಕಾಶ ಹಾಗೂ ಸೌಲಭ್ಯ ಕಲ್ಪಿಸುವುದು ಈ ದಿನದ ಉದ್ದೇಶವಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಬಿ.ಇಟ್ನಾಳ್ ಮಾತನಾಡಿ, ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಮಾತು ನಿಜ ಆಗಬೇಕಾದರೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿಕಲಚೇತ ನರ ಕಾಯ್ದೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿದಾಗ ಮಾತ್ರ ಸಾಧ್ಯ.

ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಪಂಚಾಯಿತಿಯಲ್ಲಿರುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡುವ ನಿಟ್ಟಿನಲ್ಲಿ  62 ವಿಕಲಚೇತನರ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಿದ್ದು, ಪ್ರಥಮ ಹಂತದಲ್ಲಿ  ಅವರಿಗೆ ಉದ್ಯೋಗ ಸೃಷ್ಠಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣಾ ಇಲಾಖೆಯ ಅಧಿಕಾರಿ ಡಾ.ಕೆ.ಕೆ ಪ್ರಕಾಶ್, ಜಿಲ್ಲೆಯಲ್ಲಿ ಸುಮಾರು 24,996 ವಿಕಲಚೇತನರಿದ್ದಾರೆ. ನವೆಂಬರ್ 2023ರ ಅಂತ್ಯಕ್ಕೆ 9,144 ವಿಕಲಚೇತನರು ತಲಾ 800 ರೂ. ಗಳು, ಶೇ.75 ರಷ್ಟು ಅಂಗವೈಕಲ್ಯತೆಯನ್ನು ಹೊಂದಿರುವ ವಿಕಲಚೇತನರು 16,159 ತಲಾ ರೂ.1,400 ಗಳು ಹಾಗೂ ಬುದ್ಧಿಮಾಂದ್ಯ ಮತ್ತು ಮಾನಸಿಕ ಅಸ್ವಸ್ಥರಾದ 4,118 ವಿಕಲಚೇತನರು ತಲಾ ರೂ.2,000 ಗಳಂತೆ  ಜಿಲ್ಲೆಯಲ್ಲಿ ಒಟ್ಟು 29,421 ವಿಕಲಚೇತನರು ಖಜಾನೆ ಮೂಲಕ ಮಾಸಾಶನ ಪಡೆಯುತ್ತಿದ್ದಾರೆ ಎಂದು  ಹೇಳಿದರು.

ಇದೇ ವೇಳೆ ಮಹಂತೇಶ್ ಬ್ರಹ್ಮ  ಅವರು ರಚಿಸಿರುವ ವಿಕಲಚೇತನರ ಹಕ್ಕುಗಳು ಮತ್ತು ಸರ್ಕಾರಿ ಸೌಲಭ್ಯಗಳು ಎಂಬ ಪುಸ್ತಕ ಬಿಡುಗಡೆಗೊಳಿಸಲಾಯಿತು.  ಕ್ರೀಡಾ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪ್ರಧಾನ ಮತ್ತು ವಿಕಲಚೇತನರ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಸಾಧನೆ ಮಾಡಿದವರಿಗೆ ಸನ್ಮಿಸಲಾಯಿತು.

ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಉಪ ನಿರ್ದೇಶಕ ಕೊಟ್ರೇಶ್.ಜಿ, ಯುವ ಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮೀಬಾಯಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ವಾಸಂತಿ ಉಪ್ಪಾರ್, ಸಂಕಲ್ಪ ಸಂಸ್ಥೆಯ ಅಧ್ಯಕ್ಷ ಸುರೇಶ್ ಉಪಸ್ಥಿತರಿದ್ದರು.

error: Content is protected !!