ಬೆಣ್ಣೆದೋಸೆ ಹೋಟೆಲ್ ಮಾಲೀಕರ ಸಭೆಯಲ್ಲಿ ಜಿಲ್ಲಾಧಿಕಾರಿ ವೆಂಕಟೇಶ್
ದಾವಣಗೆರೆ, ಡಿ.1- ದಾವಣಗೆರೆ ಬೆಣ್ಣೆದೋಸೆಗೆ ಬ್ರಾಂಡಿಂಗ್ ಮಾಡುವ ಮೂಲಕ ಪ್ರವಾಸೋದ್ಯಮದ ಜೊತೆಗೆ ಜೋಡಿಸುವ ಉದ್ದೇಶ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ತಿಳಿಸಿದರು.
ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದಾವಣಗೆರೆ ಬೆಣ್ಣೆದೋಸೆಗೆ ಬ್ರಾಂಡಿಂಗ್ ಕಲ್ಪಿಸಲು ಕರೆಯಲಾದ ಬೆಣ್ಣೆದೋಸೆ ಹೋಟೆಲ್ಗಳ ಮಾಲೀಕರು ಮತ್ತು ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಾವಣಗೆರೆ ಬೆಣ್ಣೆದೋಸೆಗೆ ರಾಜ್ಯದಲ್ಲಿ ತನ್ನದೇ ಆದಂತಹ ಹೆಸರಿದೆ. ಇದನ್ನು ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಮೂಲಕ ಜಿಲ್ಲೆಯ ಹೆಸರನ್ನು ಹೆಚ್ಚಿಸ ಬೇಕಿದ್ದು, ಇಲ್ಲಿನ ಜನರಿಗೆ ಹೆಚ್ಚಿನ ಉದ್ಯೋಗ ಒದಗಿಸುವ ಚಿಂತನೆ ಮಾಡಲಾಗಿದೆ ಎಂದರು.
ಇದೇ ತಿಂಗಳು ದೋಸೆ ಹಬ್ಬ
ದಾವಣಗೆರೆ ಬೆಣ್ಣೆದೋಸೆಯ ರುಚಿಯನ್ನು ಸವಿಯುವಂತೆ ಮಾಡಲು ವಿಶೇಷ ಕಾರ್ಯಕ್ರಮ ಮಾಡಲು ಉದ್ದೇಶಿಸಲಾಗಿದೆ. ಇದೇ ಡಿಸೆಂಬರ್ನ ಮೂರನೇ ವಾರದ ಅಂತ್ಯದಲ್ಲಿ ದೋಸೆ ಹಬ್ಬವನ್ನು ಆಚರಣೆ ಮಾಡುವ ಮೂಲಕ ದಾವಣಗೆರೆ ದೋಸೆಗೆ ಮೆರಗು ನೀಡಲಾಗುತ್ತಿದೆ. ಇಲ್ಲಿನ ದೋಸೆಗೆ ಅಂತರರಾಜ್ಯ ಮಟ್ಟದಲ್ಲಿಯೂ ರುಚಿಯನ್ನು ತೋರಿಸಲು ದೆಹಲಿ, ಪಶ್ಚಿಮ ಬಂಗಾಲ, ಉತ್ತರಪ್ರದೇಶ ಸೇರಿದಂತೆ ಉತ್ತರದ ರಾಜ್ಯಗಳಲ್ಲಿ ನಡೆಯುವ ವಿಶೇಷ ಉತ್ಸವ, ಸಮ್ಮೇಳನಗಳಿಗೆ ಇಲ್ಲಿನ ಹೋಟೆಲ್ ಮಾಲೀಕರನ್ನು ಪ್ರತಿನಿಧಿಯನ್ನಾಗಿ ಕಳುಹಿಸುವ ಮೂಲಕ ಇಲ್ಲಿನ ದೋಸೆ ರುಚಿಯನ್ನು ಸವಿಯುವಂತೆ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಬೆಣ್ಣೆದೋಸೆ ಹೋಟೆಲ್ಗಳಿಗೆ ಪ್ರಮಾಣ ಪತ್ರ
ಬೆಣ್ಣೆದೋಸೆ ಹೋಟೆಲ್ಗಳಿಗೆ ಗುಣಮಟ್ಟದ ಖಾತರಿಯನ್ನು ಒದಗಿಸಲು ಆಹಾರ ಸುರಕ್ಷತಾ ಕಾಯಿದೆಯನ್ವಯ ಪರಿಶೀಲನೆ ನಡೆಸಿ ದೋಸೆಗೆ ಬಳಸುವ ಧಾನ್ಯಗಳು, ಬೆಣ್ಣೆ, ಎಣ್ಣೆ ಮತ್ತು ಇತರೆ ವಸ್ತುಗಳು, ಅಲ್ಲಿನ ಆರೋಗ್ಯವಂತ ಸಿಬ್ಬಂದಿಗಳ ತಪಾಸಣೆ ಸೇರಿದಂತೆ ಸಾರ್ವಜನಿಕರ ಆರೋಗ್ಯ ಸುರಕ್ಷತೆಯ ಮಾನದಂಡಗಳನ್ನು ಪರಿಶೀಲಿಸಿ ಜಿಲ್ಲಾಡಳಿತದಿಂದ ಬ್ರಾಂಡಿಂಗ್ ಪ್ರಮಾಣ ಪತ್ರವನ್ನು ನೀಡುವ ಮೂಲಕ ಪ್ರವಾಸೋದ್ಯಮಕ್ಕೆ ಈ ಹೋಟೆಲ್ಗಳನ್ನು ಜೋಡಣೆ ಮಾಡಲಾಗುತ್ತದೆ. ಪ್ರಮಾಣ ಪತ್ರ ನೀಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಪಾಲಿಕೆ ಆಯುಕ್ತರು, ಆಹಾರ ಸುರಕ್ಷತಾ ಕಾಯಿದೆ ಅಂಕಿತ ಅಧಿಕಾರಿಗಳು, ಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರನ್ನು ಒಳಗೊಂಡ ಸಮಿತಿ ರಚಿಸಿ ಅಧ್ಯಯನ ವರದಿ ನೀಡಲು ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ವಿ. ವೆಂಕಟೇಶ್ ಹೇಳಿದರು.
ದೋಸೆಗೆ ಬಳಸುವ ಆಹಾರಧಾನ್ಯಗಳು ಮತ್ತು ಮಾಡುವ ವಿಧಾನಗಳ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸುವ ಮೂಲಕ ಗುಣಮಟ್ಟದ ಖಾತರಿಯನ್ನು ಜನರಿಗೆ ಕಲ್ಪಿಸಬೇಕಾಗಿದೆ. ದಾವಣಗೆರೆ ನಗರ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಸಂಪರ್ಕ ಹೊಂದಿದ್ದು ಗೋವಾ, ಮಹಾರಾಷ್ಟ್ರಕ್ಕೆ ಹೋಗುವ ಪ್ರವಾಸಿಗರು, ಅಂತರರಾಜ್ಯ ಪ್ರಯಾಣಿಕರು ಸಹ ದಾವಣಗೆರೆ ಬೆಣ್ಣೆದೋಸೆ ಸವಿಯುವಂತೆ ಮಾಡುವುದು ಜಿಲ್ಲಾಡಳಿತದ ಉದ್ದೇಶವಾಗಿದ್ದು ರುಚಿಕರ, ಶುಚಿಕರ, ಗುಣಮಟ್ಟದ ದೋಸೆ ಪೂರೈಕೆ ಮಾಡುವುದು ಪ್ರಮುಖ ಉದ್ದೇಶವಾಗಿದೆ ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಬೆಣ್ಣೆದೋಸೆ ಹೋಟೆಲ್ ಮಾಲೀಕರುಗಳು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.