ನಗರದಲ್ಲಿ ವೀರಶೈವ ಮಹಾಸಭಾ ಅಧಿವೇಶನಕ್ಕೆ ಹಂದರ ಕಂಬದ ಪೂಜೆ

ನಗರದಲ್ಲಿ ವೀರಶೈವ ಮಹಾಸಭಾ ಅಧಿವೇಶನಕ್ಕೆ ಹಂದರ ಕಂಬದ ಪೂಜೆ

ದಾವಣಗೆರೆ, ನ. 30 –  ಇದೇ ದಿನಾಂಕ 23 ಹಾಗೂ 24ರಂದು ನಡೆಯಲಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಮಹಾ ಅಧಿವೇಶನಕ್ಕೆ ನಗರದ ಬಾಪೂಜಿ ಎಂ.ಬಿ.ಎ. ಕಾಲೇಜು ಆವರಣದಲ್ಲಿ ಹಂದರ ಕಂಬದ ಪೂಜೆಯನ್ನು ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಇಂದು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಉಪ ಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರ್ಪಡೆಗೊಳಿಸುವುದು ಸೇರಿ ಸಮಾಜದ ಅನೇಕ ವಿಚಾರಗಳ ಬಗ್ಗೆ ಚರ್ಚಿಸಿ, ನಿರ್ಣಯ ಅಂಗೀಕರಿಸಿ ಸರ್ಕಾರಕ್ಕೆ ಕಳಿಸಿಕೊಡಲಾಗುವುದು ಎಂದು ಹೇಳಿದರು.

ಸಮಾವೇಶದಲ್ಲಿ 2 ಲಕ್ಷದಷ್ಟು ಜನರು ಭಾಗಿಯಾಗಲಿದ್ದಾರೆ. ಅವರಿಗಾಗಿ ಊಟ – ವಸತಿ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಅಧಿವೇಶನಕ್ಕಾಗಿ 300 ಅಡಿ ಉದ್ದ, 140 ಅಡಿ ಅಗಲದ ಪೆಂಡಾಲ್ ಹಾಕಲಾಗುವುದು ಎಂದು ತಿಳಿಸಿದರು.

ಸಮಾವೇಶದಲ್ಲಿ ಸಮಾಜದ ಮುಖಂಡರು ಹಾಗೂ ಸ್ವಾಮೀಜಿಗಳು ಪಾಲ್ಗೊಳ್ಳಲಿದ್ದಾರೆ. ಮುಂಬರುವ ದಿನಗಳಲ್ಲಿ ಆಹ್ವಾನಿತರ ಪಟ್ಟಿ ಹಾಗೂ ಸಮಾವೇಶದ ವೇಳಾಪಟ್ಟಿಯನ್ನು ರೂಪಿಸಲಾಗುವುದು ಎಂದು ಶಿವಶಂಕರಪ್ಪ ತಿಳಿಸಿದರು.

ಇದೇ ದಿನಾಂಕ 23ರ ಬೆಳಿಗ್ಗೆ 10.30ಕ್ಕೆ ಸಮಾವೇಶದ ಅಂಗವಾಗಿ ಮೆರವಣಿಗೆ ನಡೆಸಲಾಗುವುದು. 11.30ಕ್ಕೆ ಮೆರವಣಿಗೆ ಎಂ.ಬಿ.ಎ. ಮೈದಾನಕ್ಕೆ ಆಗಮಿಸಲಿದೆ. ನಂತರ ಸಮಾವೇಶದ ವೇದಿಕೆ ಕಾರ್ಯಕ್ರಮ ಚಾಲನೆ ಪಡೆದುಕೊಳ್ಳಲಿದೆ ಎಂದರು.

ಈ ಸಂದರ್ಭದಲ್ಲಿ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಅಥಣಿ ವೀರಣ್ಣ,  ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್, ಮುಖಂಡರಾದ ಬಿ.ಸಿ. ಉಮಾಪತಿ, ಅಣಬೇರು ರಾಜಣ್ಣ, ಜಿ. ಶಿವಯೋಗಪ್ಪ, ಶ್ರೀನಿವಾಸ ಶಿವಗಂಗಾ, ಕೆ.ಆರ್. ಸಿದ್ದೇಶ್, ಪುಷ್ಪಾ ವಾಲಿ, ಶುಭಾ ಐನಳ್ಳಿ, ಕೆ.ಜಿ. ಶಿವಕುಮಾರ್  ಮತ್ತಿತರರು ಉಪಸ್ಥಿತರಿದ್ದರು.

error: Content is protected !!