ಶಾಸನ ಸಭೆಗಳಲ್ಲಿ ಮಸೂದೆ ಮಂಡನೆಗೂ ಮೊದಲು ಚರ್ಚೆಯಾಗಲಿ

ಶಾಸನ ಸಭೆಗಳಲ್ಲಿ ಮಸೂದೆ ಮಂಡನೆಗೂ ಮೊದಲು ಚರ್ಚೆಯಾಗಲಿ

ವಕೀಲರ ಸಂಘದ ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಸಲಹೆ

ದಾವಣಗೆರೆ, ನ. 28 – ಸರ್ಕಾರ ಶಾಸನ ಸಭೆಗಳಲ್ಲಿ ಹೊಸ ಕಾನೂನು ರಚನೆ ಜಾರಿ ಮಾಡುವಾಗ ಅಥವಾ ತಿದ್ದುಪಡಿ ಸಂದರ್ಭ ಕಾನೂನು ತಜ್ಞರಿಂದ ವಿಶ್ಲೇಷಣಾತ್ಮಕ ಅಧ್ಯಯನ ನಡೆಸಿ, ಅವರ ಸಲಹೆ ಪಡೆಯಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಸಲಹೆ ನೀಡಿದರು.

ಸಂವಿಧಾನ ದಿನಾಚರಣೆ ಅಂಗವಾಗಿ ಜಿಲ್ಲಾ ವಕೀಲರ ಸಂಘದಿಂದ ವಕೀಲರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ನಿನ್ನೆ ಏರ್ಪಡಿಸಿದ್ದ `ರಾಷ್ಟ್ರ ನಿರ್ಮಾಣದಲ್ಲಿ ವಕೀಲರ ಪಾತ್ರ’ ಕುರಿತು ಅವರು ಉಪನ್ಯಾಸ ನೀಡಿದರು.

ಈಗ ರಾಜಕೀಯ ಅಜೆಂಡಾದಿಂದ ಕಾನೂನು ತರಲಾಗುತ್ತಿದೆಯೇ ಹೊರತು ಜನರ ಹಿತದೃಷ್ಟಿ ಯಿಂದ ತರುತ್ತಿಲ್ಲ. ಯಾವುದೇ ಚರ್ಚೆ ಇಲ್ಲದೇ ಈಗಾಗಲೇ ಹಲವು ಮಸೂದೆಗಳು ಮಂಡನೆ ಯಾಗಿವೆ. ಮಸೂದೆಗಳನ್ನು ಭಾಗಿ ಸದನದಲ್ಲಿ ಮಂಡಿಸುವ ಮೊದಲು ಕಾನೂನು ಕಾಲೇಜುಗಳ ಅಧ್ಯಾಪಕರು ಹಾಗೂ ಬಾರ್ ಕೌನ್ಸಿಲ್ ಒಳಗೊಂಡಂತಹ ತಂಡ ರಚಿಸಿ ಅವರಿಂದ ವಿಶ್ಲೇಷಣಾತ್ಮಕ ಅಧ್ಯಯನ ನಡೆಸಬೇಕು. ಚರ್ಚೆಯ ಬಳಿಕ ಅವರ ಸಲಹೆ ಪಡೆಯಬೇಕು. ಇದರಿಂದ ಉತ್ತಮ ಕಾನೂನುಗಳನ್ನು ತರಬಹುದು. ವಕೀಲರು ಇದರಲ್ಲಿ ಭಾಗಿಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಾತಿ, ಅಪರಾಧ, ಭ್ರಷ್ಟಾಚಾರ ಸಮಾಜಕ್ಕೆ ಮೂರು ಶಾಪಗಳಾಗಿದ್ದು, ಜನರು ಮತ ಚಲಾಯಿಸುವಾಗ ಇವುಗಳಿಂದ ದೂರ ಇರಬೇಕು. ಇಂದು ರಾಜಕೀಯದಲ್ಲಿ ಮೌಲ್ಯಗಳು ಇಲ್ಲವಾಗಿದ್ದು, ರಾಷ್ಟ್ರ ನಿರ್ಮಾಣಕ್ಕಾಗಿ ತನು, ಮನ, ಧನಗಳನ್ನು ಅರ್ಪಿಸುವ ಲಾಲ್‍ಬಹದ್ದೂರ್ ಶಾಸ್ತ್ರಿ ಹಾಗೂ ಅಟಲ್‍ಬಿಹಾರಿ ವಾಜಪೇಯಿ ಅವರಂತಹ ರಾಜನೀತಿಜ್ಞರು ಇಂದು ಬೇಕಾಗಿದ್ದಾರೆ ಎಂದು ಹೇಳಿದರು.

ಯುವ ವಕೀಲರಲ್ಲಿ ಕೆಲಸದ ಸಂಸ್ಕೃತಿ ಕೊರತೆ ಎದ್ದು ಕಾಣುತ್ತಿದ್ದು, ಕಕ್ಷಿದಾರರಿಗೆ ನಿಮ್ಮ ಮೇಲೆ ನಂಬಿಕೆ ಬರಬೇಕಾದರೆ ಶ್ರಮ ಸಂಸ್ಕೃತಿ ರೂಢಿಸಿ ಕೊಳ್ಳಬೇಕು. ಕಕ್ಷಿದಾರರೇ ವಕೀಲರಿಗೆ ಅನ್ನದಾತ ರಾಗಿದ್ದು, ಅವರು ಹಣದ ಜೊತೆಗೆ ಜ್ಞಾನವನ್ನೂ ನೀಡುತ್ತಾರೆ. ಪ್ರಕರಣಗಳನ್ನು ಅಧ್ಯಯನ ಮಾಡಿ ಅವರಿಗೆ ನ್ಯಾಯ ದೊರಕಿಸಿಕೊಡಬೇಕು. ಹಿರಿಯ ವಕೀಲರು ಕಿರಿಯರಿಗೆ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.

ವಕೀಲರು ವೈಯಕ್ತಿಕ ಬದುಕಿನ ಜೊತೆ ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಸತ್ಯವನ್ನು ಹುಡುಕುವ ಕೆಲಸ ಮಾಡಬೇಕು. ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳಿಗೆ ಭೇಟಿ ನೀಡಿ ಸಂವಿಧಾನದ ಬಗ್ಗೆ ಉಪನ್ಯಾಸ ನೀಡಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಕ್ರಿಯಾಶೀಲವಾಗಿದ್ದು, ಸುಭದ್ರ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ವಕೀಲರ ಪಾತ್ರ ದೊಡ್ಡದು. ನನ್ನ ದೇಶ ನನ್ನ ಆತ್ಮ ಎಂಬ ಭಾವನೆ ಬಂದಾಗ ಉತ್ತಮ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ. ಗಾಂಧೀಜಿ ಬ್ರಿಟೀಷರ ವಿರುದ್ಧ ಹೋರಾಟ ಮಾಡುವಾಗ ವಕೀಲರ ಸೈನ್ಯವೇ ಇತ್ತು ಎಂದು ಸ್ಮರಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್. ಅರುಣ್ ಕುಮಾರ್ ಅವರು, ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಲು ಶಾಸಕಾಂಗ ಮತ್ತು ಕಾರ್ಯಾಂಗಗಳು ಸಮರ್ಪಕವಾಗಿ ಕೆಲಸ ಮಾಡಲು ನ್ಯಾಯಾಂಗದ ಪಾತ್ರ ಬಹುಮುಖ್ಯವಾಗಿದೆ. ನ್ಯಾಯಾಂಗ ಸಂಸ್ಥೆಯನ್ನು ಉಳಿಸುವ ಮತ್ತು ಅದರ ಘನತೆಯನ್ನು ಹಾಗೂ ಅಭಿವೃದ್ಧಿ, ಐಕ್ಯತೆ  ಕಾಪಾಡುವ ಜವಾಬ್ದಾರಿ ನ್ಯಾಯಾಧೀಶರು ಮತ್ತು ವಕೀಲರ ಕರ್ತವ್ಯವಾಗಿದೆ ಎಂದರು.  

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಅವರು ಮಾತನಾಡಿದರು. 

ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರೆಣ್ಣನವರ್ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಎಸ್.ಬಸವರಾಜು ಕಾರ್ಯಕ್ರಮ ನಿರೂಪಿಸಿದರು.  ಉಪಾಧ್ಯಕ್ಷ ಜಿ.ಕೆ. ಬಸವರಾಜ್ ಗೋಪನಾಳ್ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಎ.ಎಸ್. ಮಂಜುನಾಥ್ ವಂದಿಸಿದರು. ವಕೀಲರಾದ ಭಾವನಾ ಪತಂಗೆ ಪ್ರಾರ್ಥಿಸಿದರು. 

ಕಾರ್ಯಕ್ರಮದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾದ ವಾಗೀಶ್ ಕಟಗಿಹಳ್ಳಿ ಮಠ್, ಎಲ್. ನಾಗರಾಜ್, ಸಂತೋಷ್ ಕುಮಾರ್, ನೀಲಕಂಠಯ್ಯ, ಚೌಡಪ್ಪ, ಭಾಗ್ಯಲಕ್ಷ್ಮಿ, ರಘು ಸೇರಿದಂತೆ, ಎಲ್ಲಾ ವಕೀಲರು ಭಾಗವಹಿಸಿದ್ದರು.

error: Content is protected !!