7ನೇ ವೇತನ ಆಯೋಗ, ಹಳೆ ಪಿಂಚಣಿಗಾಗಿ ನೌಕರರ ಪರ ದನಿ

7ನೇ ವೇತನ ಆಯೋಗ, ಹಳೆ ಪಿಂಚಣಿಗಾಗಿ ನೌಕರರ ಪರ ದನಿ

ದಾವಣಗೆರೆ, ನ. 27 – ಮುಂಬರುವ ಬೆಳಗಾವಿ ಅಧಿವೇಶನದಲ್ಲಿ 7ನೇ ವೇತನ ಆಯೋಗ ಹಾಗೂ ಹಳೆ ಪಿಂಚಣಿ ಯೋಜನೆ ಜಾರಿಗಾಗಿ ದನಿ ಎತ್ತುವುದಾಗಿ ಶಾಸಕ ಕೆ.ಎಸ್. ಬಸವಂತಪ್ಪ ತಿಳಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ವತಿಯಿಂದ ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಇಂದು ಆಯೋಜಿಸಲಾಗಿದ್ದ ಸಚಿವರು – ಶಾಸಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯುತ್ತಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ 7ನೇ ವೇತನ ಆಯೋಗ ಹಾಗೂ ಹಳೆ ಪಿಂಚಣಿ ಯೋಜನೆಗಳಿಗಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಈ ಬಾರಿ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಬಜೆಟ್ ಮಂಡಿಸಲು ಸಾಧ್ಯವಾಗಿಲ್ಲ. ಮುಂದಿನ ಬಜೆಟ್ ವೇಳೆ ನೌಕರರ ಬೇಡಿಕೆಗಳು ಈಡೇರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಬೆಳಗಾವಿ ಅಧಿವೇಶನದಲ್ಲಿ ನೌಕರರ ಬೇಡಿಕೆಗಳ ಪರ ದನಿ ಎತ್ತುವುದಾಗಿ ಭರವಸೆ ನೀಡಿದರು. ರೈತರ ಸಮಸ್ಯೆಗಳಿಗೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸಬೇಕು. ಇದರಿಂದ ಜನಪ್ರತಿನಿಧಿಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂದವರು ಇದೇ ಸಂದರ್ಭದಲ್ಲಿ ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಬಿ.ಪಿ. ಹರೀಶ್, ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ನೌಕರರ ಹಲವಾರು ಬೇಡಿಕೆಗಳನ್ನು ಈಡೇರಿಸಲಾಗಿತ್ತು. ಇನ್ನೂ ಕೆಲ ಬೇಡಿಕೆಗಳಿದ್ದು, ಅವುಗಳ ಈಡೇರಿಕೆಗಾಗಿ ನೌಕರರ ಪರ ಇರುವುದಾಗಿ ಭರವಸೆ ನೀಡಿದರು. ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸಿದಾಗ, ಜನಪ್ರತಿನಿಧಿಗಳಿಗೆ ಸನ್ಮಾನಿಸುವುದಕ್ಕಿಂತ ಹೆಚ್ಚಿನ ಸಂತೋಷವಾಗುತ್ತದೆ ಎಂದೂ ಅವರು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ವೀರೇಶ ಎಸ್. ಒಡೇನಪುರ, ಸರ್ಕಾರಿ ನೌಕರರು ಗ್ಯಾರಂಟಿಗಳನ್ನು ಮನೆ ಮನೆಗೆ ತಲುಪಿಸುವಲ್ಲಿ ಶ್ರಮಿಸಿದ್ದಾರೆ. ನೌಕರರ ಹಳೆಯ ಪಿಂಚಣಿ ಹಾಗೂ 7ನೇ ವೇತನ ಆಯೋಗಗಳ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಹೇಶ್ ಮಾಶ್ಯಾಳ್ ಅವರು `ಪ್ರಜಾಸ್ನೇಹಿ ಆಡಳಿತದಲ್ಲಿ ನೌಕರರ ಪಾತ್ರ’ ಎಂಬ ಕುರಿತು ಉಪನ್ಯಾಸ ನೀಡಿದರು.

ವೇದಿಕೆ ಮೇಲೆ ಶಾಸಕರಾದ ಡಿ.ಜಿ. ಶಾಂತನಗೌಡ, ಶಿವಗಂಗಾ ಬಸವರಾಜ್, ನೌಕರರ ಸಂಘದ ಪದಾಧಿಕಾರಿಗಳಾದ ಮಲ್ಲಿಕಾರ್ಜುನ ಬಳ್ಳಾರಿ, ಎಂ.ವಿ. ರುದ್ರಪ್ಪ, ಎಸ್. ಬಸವರಾಜ್, ನಲ್ಕುದುರೆ ಸದಾನಂದ, ಗುರುಮೂರ್ತಿ, ಪಿ.ಆರ್.ತಿಪ್ಪೇಸ್ವಾಮಿ, ಮಂಜಮ್ಮ, ಬಿ. ಪಾಲಾಕ್ಷಿ, ಹೆಚ್. ಬಸವರಾಜ್, ತಿಪ್ಪೇಸ್ವಾಮಿ, ಎ.ಕೆ. ಭೂಮೇಶ್, ಶಶಿಧರ, ನಾಗರಾಜ್, ನಿಂಗಪ್ಪ, ಆರ್.ಎನ್. ಪಾಟೀಲ್, ಕೆ.ಎಲ್.ಹೆಚ್. ಸ್ವಾಮಿ, ಶಿವಾನಂದ, ಸಿದ್ದಲಿಂಗ ಸ್ವಾಮಿ, ಪರಶುರಾಮಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!