ಸದಾಶಿವ ಆಯೋಗದ ವರದಿ ಜಾರಿ ತಡೆಗೆ ಸಜ್ಜಾಗೋಣ: ಇಮ್ಮಡಿ ಸಿದ್ಧರಾಮೇಶ್ವರ ಶ್ರೀ

ಸದಾಶಿವ ಆಯೋಗದ ವರದಿ ಜಾರಿ ತಡೆಗೆ ಸಜ್ಜಾಗೋಣ: ಇಮ್ಮಡಿ ಸಿದ್ಧರಾಮೇಶ್ವರ ಶ್ರೀ

ದಾವಣಗೆರೆ, ನ. 27- ನ್ಯಾಯಮೂರ್ತಿ ಎ.ಜೆ. ಸದಾಸಿವ ಆಯೋಗದ ವರದಿ ಬೆಳಗಾವಿ ಚಳಗಾಲದ ಅಧಿವೇಶದಲ್ಲಿ ಮಂಡನೆಯಾಗ ದಂತೆ ತಡೆಯಲು ಭೋವಿ, ಬಂಜಾರ, ಕೊರಚ, ಕೊರಮ ಸಮುದಾಯದವರು ಶಕ್ತಿ ಪ್ರದರ್ಶಿಸಲು  ಸಿದ್ಧರಾಗಬೇಕೆಂದು ಚಿತ್ರದುರ್ಗ ಭೋವಿ ಗುರು ಪೀಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಕರೆ ನೀಡಿದರು.

ನಗರದ ರೋಟರಿ ಬಾಲಭವನದ ಸಿ.ಕೇಶವಮೂರ್ತಿ ಸಭಾಂಗಣದಲ್ಲಿ  ಇಂದು ಏರ್ಪಾಡಾಗಿದ್ದ ಕರ್ನಾಟಕದ ಮೀಸಲಾತಿ ಸಂರಕ್ಷಣಾ ಒಕ್ಕೂಟದ ವಿಭಾಗೀಯ ಮಟ್ಟದ ಸಮಾಲೋಚನಾ ಸಭೆಯ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಭೋವಿ, ಲಂಬಾಣಿ, ಕೊರಚ-ಕೊರಮ ಸಮುದಾಯ ಸೇರಿದಂತೆ ವಿವಿಧ ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಹೊರಗಿಡಬೇಕೆಂಬುದು ಮೂಲ ಆಶಯವಾಗಿದೆ. ಆದ್ದರಿಂದ ನಾವೆಲ್ಲರೂ ಐಕ್ಯತೆ ಪ್ರದರ್ಶಿಸುವ ಅವಶ್ಯಕತೆ ಇದೆ ಎಂದರು.

ಹೈಕೋರ್ಟ್ ವಕೀಲ ಎನ್. ಅನಂತನಾಯ್ಕ ಮಾತನಾಡಿ, ಸದಾಶಿವ ಆಯೋಗದ ವರದಿಯನ್ನು ಹಿಂದಿನ ಬಿಜೆಪಿ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಮುಂದಾಗಿರುವ ಕಾರಣ ಕಳೆದ ಚುನಾವಣೆಯಲ್ಲಿ 42 ಕ್ಷೇತ್ರಗಳಲ್ಲಿ ಬಿಜೆಪಿ ಸೋಲು ಅನುಭವಿಸಿತು. ಅದೇ ತಪ್ಪನ್ನು ಈಗಿನ ಕಾಂಗ್ರೆಸ್ ಸರ್ಕಾರ ಮಾಡಲು ಮುಂದಾಗಿದೆ. ಹಾಗಾಗಿ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಸಿದ್ದರಾಗಬೇಕಿದೆ ಎಂದು ಹೇಳಿದರು.

ವಕೀಲರೂ, ಒಕ್ಕೂಟದ ರಾಘವೇಂದ್ರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಬೆಳಗಾವಿ ಅಧಿವೇಶನದಲ್ಲಿ ಈ ವಿಷಯ ಮಂಡನೆಗೆ ಬಂದರೆ ನಮ್ಮ ಪರ ಧ್ವನಿ ಎತ್ತುವಂತೆ ಎಲ್ಲಾ ಶಾಸಕರು, ಜಿಲ್ಲಾ ಮಂತ್ರಿಗಳಲ್ಲಿ ಮನವಿ ಮಾಡೋಣ ಎಂದು ಸಲಹೆ ನೀಡಿದರು.

ಮುಖ್ಯಮಂತ್ರಿ, ಉಪಮುಖ್ಯ ಮಂತ್ರಿಗಳನ್ನು ಭೇಟಿಯಾಗಿ ವರದಿ ಮಂಡನೆ ಮಾಡದಂತೆ ಒತ್ತಡ ಹಾಕೋಣ ಎಂದರು.

ಸಭೆಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಡಾ. ವೈ. ರಾಮಪ್ಪ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಎನ್. ಜಯದೇವನಾಯ್ಕ, ಶ್ರೀನಿವಾಸ, ನಂಜಾನಾಯ್ಕ, ಜಯಣ್ಣ, ಕೆ.ಆರ್. ಮಲ್ಲೇಶನಾಯ್ಕ, ಚಿನ್ನಸಮುದ್ರ ಶೇಖರನಾಯ್ಕ, ಕುಬೇರನಾಯ್ಕ, ಲಕ್ಷ್ಮಣ ರಾಮಾವತ್ ಮತ್ತಿತರರು ಭಾಗವಹಿಸಿದ್ದರು.

error: Content is protected !!