ಪ್ರೀತಿಯ ಕೊರತೆಯಿಂದ ಹಳಸುತ್ತಿರುವ ಸಂಬಂಧಗಳು

ಪ್ರೀತಿಯ ಕೊರತೆಯಿಂದ ಹಳಸುತ್ತಿರುವ ಸಂಬಂಧಗಳು

ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಚಿತ್ರದುರ್ಗ ಮುರುಘಾ ಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ

ದಾವಣಗೆರೆ, ನ. 24- ದಂಪತಿ ನಡುವಿನ ಪ್ರೀತಿಯ ಕೊರತೆಯಿಂದಾಗಿ ಸಂಬಂಧಗಳು ಹಳಸುತ್ತಿವೆ. ಹೀಗಾಗಿ ನವ ದಂಪತಿಗಳು ಪರಸ್ಪರ ಪ್ರೀತಿ, ಸಹನೆ ಸಹ ಬಾಳ್ವೆ ನಡೆಸುವ ಮೂಲಕ ಸಂಸಾರವನ್ನು ಸ್ವರ್ಗವಾಗಿಸಿಕೊಳ್ಳುವಂತೆ ಚಿತ್ರದುರ್ಗ ಮುರುಘಾ ಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಸಲಹೆ ನೀಡಿದರು.

ನಗರದ ಶಿವಯೋಗಾಶ್ರಮದ ಆವರಣದಲ್ಲಿ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಇಂದು ಹಮ್ಮಿಕೊಂಡಿದ್ದ ಸರ್ವಧರ್ಮೀಯರ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ದಂಪತಿಗಳ ನಡುವಿನ ಅಹಂಕಾರ, ಸಂಶಯಗಳಿಂದಾಗಿ ಸಂಸಾರಗಳು, ವಿವಾಹಗಳು ಮುರಿದು ಬೀಳುತ್ತಿವೆ. ಸತಿ-ಪತಿಗಳಲ್ಲಿನ ಸ್ವಪ್ರತಿಷ್ಠೆಯಿಂದಾಗಿ ಕೌಟುಂಬಿಕ ಕಲಹಗಳು ಉಂಟಾಗುತ್ತಿವೆ ಎಂದರು.

ದಂಪತಿಗಳು ಸುಖವಾಗಿ, ಅನ್ಯೋನ್ಯ ವಾಗಿ ಬಾಳಬೇಕಾದರೆ ಅವರಿಬ್ಬರ ನಡುವೆ ಪರಸ್ಪರ ಪ್ರೀತಿ ಎಂಬ ಸಂಪತ್ತು ಇದ್ದಾಗ ಮಾತ್ರ ಸಂಸಾರ ಸ್ವರ್ಗವಾಗಲು ಸಾಧ್ಯ ಎಂದು ಹೇಳಿದರು.

ಸಾಂಸಾರಿಕ ಜೀವನ ಸುಖದಿಂದ ಕೂಡಿರಲು ಭೌತಿಕ ಸಿರಿ-ಸಂಪತ್ತಿಗಿಂತ ಮನಸ್ಸಿನ ಶ್ರೀಮಂತಿಕೆ ಅಗತ್ಯ. ಸಾಂಸಾರಿಕ  ಜೀವನಕ್ಕೆ ಕಾಲಿರಿಸುತ್ತಿರುವ ದಂಪತಿಗಳ ನಡುವೆ ಪ್ರೀತಿ ಹೆಚ್ಚಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಮಾತನಾಡಿ, ಇಂದು ಜನ ಆಡಂಬರದ ವಿವಾಹಗಳಿಗೆ ಹೆಚ್ಚು ಮೊರೆ ಹೋಗಿ ಅನಾವಶ್ಯಕ ಹಣ ವ್ಯಯಿಸುತ್ತಾರೆ. ಅದಕ್ಕೆ ಕಡಿವಾಣ ಹಾಕಿ ಸಾಮೂಹಿಕ ವಿವಾಹಗಳಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

ಪ್ರತಿಷ್ಠೆ ಬಿಟ್ಟು, ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಸಾಮೂಹಿಕ ವಿವಾಹಗಳು ಹೆಚ್ಚು ಹೆಚ್ಚಾಗಿ ಹಮ್ಮಿಕೊಳ್ಳುವ ಅಗತ್ಯವಿದೆ ಎಂದರು.

ಇದೇ ವೇಳೆ ಐದು ನವ ಜೋಡಿಗಳು ದಾಂಪತ್ಯಕ್ಕೆ ಕಾಲಿರಿಸಿದವು. ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ವಿ. ಮಠದ್, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬೇಬಿ ಸುನೀತಾ, ಉಪ ಮಹಾಪೌರರಾದ ಯಶೋಧ ಹೆಗ್ಗಪ್ಪ, ಆರೈಕೆ ಆಸ್ಪತ್ರೆ ಮಾಲೀಕ ಡಾ. ಟಿ.ಜಿ. ರವಿಕುಮಾರ್,   ವರದಿಗಾರರ ಕೂಟದ ಅಧ್ಯಕ್ಷ ಕೆ. ಏಕಾಂತಪ್ಪ, ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಮಾಲಾ ನಾಗರಾಜ್, ಸಂಸ್ಥಾಪಕ ರಾಜ್ಯಧ್ಯಕ್ಷ ವಿ. ಅವಿನಾಶ್, ಹನುಮಂತಪ್ಪ, ಡಿ.ಜೆ.ಭೀಮಪ್ಪ ಪೂಜಾರಿ, ಕೊಡಗನೂರು ಗೋವಿಂದರಾಜು, ಪ್ರಸನ್ನಕುಮಾರ್ ಮತ್ತಿತರರಿದ್ದರು. 

error: Content is protected !!