ರವಿ ಕಾಣದ್ದನ್ನು ಕವಿ ಕಂಡ, ಕವಿ ಕಾಣದ್ದನ್ನು ಕಲಾವಿದರು ತೋರಿಸಿ

ರವಿ ಕಾಣದ್ದನ್ನು ಕವಿ ಕಂಡ, ಕವಿ ಕಾಣದ್ದನ್ನು ಕಲಾವಿದರು ತೋರಿಸಿ

ಕೊಂಡಜ್ಜಿಯಲ್ಲಿನ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಆಶಯ

ಹರಿಹರ,ನ. 24 – ಸಾಂಕ್ರಾಮಿಕ ಕಾಯಿಲೆಗಳ ಮತ್ತು ಅಸಾಂಕ್ರಾಮಿಕ ರೋಗಗಳ ಕುರಿತು ಆಕರ್ಷಣೀಯವಾಗಿ ಜನರ ಮನ ಮುಟ್ಟುವಂತೆ ಜಾಗೃತಿ ಮೂಡಿಸಬೇಕು. ಈ ಮೂಲಕ ರವಿ ಕಾಣದ್ದನ್ನು ಕವಿ ಕಂಡ, ಕವಿ ಕಾಣದ್ದನ್ನು ಕಲಾವಿದರು ಬೀದಿ ನಾಟಕ ಪ್ರದರ್ಶನದ ಮೂಲಕ ತೋರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್.ಎಂ.ವಿ ತಿಳಿಸಿದರು.

ಬುಧವಾರ ಹರಿಹರ ತಾಲ್ಲೂಕು ಕೊಂಡಜ್ಜಿಯಲ್ಲಿರುವ ಕೊಂಡಜ್ಜಿ ಬಸಪ್ಪ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರದಲ್ಲಿ ನಡೆದ ಬೆಂಗಳೂರು ವಿಭಾಗ ಮಟ್ಟದ ಜಾನಪದ ಕಲಾ ತಂಡಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜನರಿಗೆ ಆರೋಗ್ಯದ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಇರುವುದರಿಂದ ತಾಯಿ ಮತ್ತು ಮಗುವಿನ ಮರಣ ಪದೇ ಪದೇ ಮರುಕಳಿಸುತ್ತಿದೆ. 

ಆದ್ದರಿಂದ ತಾಯಿ ಕಾರ್ಡ್ ಬಗ್ಗೆ ಸರಿಯಾದ ಜಾಗೃತಿಯನ್ನು ಮೂಡಿಸುವುದು. ಗರ್ಭಿಣಿಯರಿಗೆ ನೀಡುವ ಲಸಿಕೆಯ ಬಗ್ಗೆ ಹಾಗೂ ತಪಾಸಣೆ, 108 ವಾಹನದ ಬಗ್ಗೆ ಆಸ್ಪತ್ರೆಯ ಹರಿಗೆಯ ಬಗ್ಗೆ ಜಾಗೃತಿ ಮೂಡಿಸಬೇಕು. ಇದರಿಂದ ತಾಯಿ ಮರಣ ಮತ್ತು ಮಗುವಿನ ಮರಣವನ್ನು ತಡೆಗಟ್ಟಲು ಮುಖ್ಯವಾದ ಅಸ್ತ್ರವಾಗುತ್ತದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಷಣ್ಮುಖಪ್ಪ ಮಾತನಾಡಿ, ರಾಷ್ಟ್ರೀಯ ಕಾರ್ಯಕ್ರಮಗಳ ಅರಿವು ಜನರಿಗಿಲ್ಲದೆ ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಆದ್ದರಿಂದ ಅನಿಮಿಯಾ ಮುಕ್ತ ಕರ್ನಾಟಕ, ಸುರಕ್ಷಿತ ಹೆರಿಗೆ, ಜೆ.ಎಸ್.ವೈ., ಅಂಗಾಂಗ ದಾನ, ಈ ವಿಷಯವು ಬೀದಿ ನಾಟಕದಲ್ಲಿ ಅಡಕವಾಗಿರಬೇಕು ಎಂದು ತಿಳಿಸಿದರು.

ಹರಿಹರ ತಾಲ್ಲೂಕು ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಮುರುಳೀಧರ ಮಾತನಾಡಿ, ಕ್ಷಯರೋಗವು ಸಾಮಾಜಿಕ ಪಿಡುಗಾಗಿದೆ ಎಂದು ತಿಳಿಸುತ್ತಾ ಕ್ಷಯರೋಗದ ಲಕ್ಷಣ ಹಾಗೂ ನಿಯಂತ್ರಣ ಮಾಡುವ ಬಗ್ಗೆ ಪ್ರದರ್ಶನ ಮಾಡಬೇಕು ಎಂದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ. ಎನ್. ಸುರೇಶ್‌ ಬಾರ್ಕಿ ಮಾತನಾಡಿದರು.

ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಗಳಾದ ಡಾ. ರಾಘವನ್, ಡಾ.ರುದ್ರಸ್ವಾಮಿ, ಡಾ.ಗಂಗಾಧರ್, ಡಾ. ಮಂಜುನಾಥ್ ಪಾಟೀಲ್, ರಾಜ್ಯ ಐ.ಇ.ಸಿ. ಕೋಶದ ಆರೋಗ್ಯ ಶಿಕ್ಷಣಾಧಿಕಾರಿ ಜ್ಞಾನೇಶ್ವರ್ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ. ಪ್ರಶಾಂತ ಕುಮಾರ್, ಪ್ರಾಥಮಿಕ ಆರೋಗ್ಯ ಕೇಂದ್ರ ಕೊಂಡಜ್ಜಿ ವೈದ್ಯಾಧಿಕಾರಿ ಡಾ.ಶಶಿಕಲಾ ಹಾಗೂ  ಇತರರು ಉಪಸ್ಥಿತರಿದ್ದರು.

error: Content is protected !!