ಮೂರು ದಿನಗಳ ಕಾಲ ಐದು ತಂಡಗಳ ಸ್ಪರ್ಧೆ
ದಾವಣಗೆರೆ, ನ. 20 – ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಮೂರು ದಿನಗಳ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು. ರಾಷ್ಟ್ರೀಯ ಖೋ ಖೋ ಕ್ರೀಡಾಪಟು ರಾಯಚೂರಿನ ಅರ್ಜುನ್ ಅವರು ಪಾರಿವಾಳ ಹಾರಿ ಬಿಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಜಿಲ್ಲಾ ಸಶಸ್ತ್ರ ಮೀಸಲು ಪಡೆ, ದಾವಣಗೆರೆ ನಗರ ಉಪ ವಿಭಾಗ, ದಾವಣಗೆರೆ ಗ್ರಾಮಾಂತರ ಉಪ ವಿಭಾಗ, ಮಹಿಳಾ ಪೊಲೀಸ್ ಹಾಗೂ ಚನ್ನಗಿರಿ ಉಪ ವಿಭಾಗ ತಂಡಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿವೆ. 130ಕ್ಕೂ ಹೆಚ್ಚು ಪೊಲೀಸರು ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್, ಈ ಕ್ರೀಡಾಕೂಟ ಸಾಂಕೇತಿಕ ಮಾತ್ರವಾಗಿದೆ. ಪೊಲೀಸರು ಆರೋಗ್ಯಕರ ಮನಸ್ಸು ಹಾಗೂ ಆರೋಗ್ಯಕರ ದೇಹಕ್ಕಾಗಿ ನಿರಂತರವಾಗಿ ಕ್ರೀಡೆಯಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಕ್ರೀಡೆಗಳಿಂದ ತಂಡ ಸ್ಫೂರ್ತಿ ಬರುತ್ತದೆ. ಭಿನ್ನತೆಯ ಮನೋಭಾವ ಹೋಗಿ ಒಗ್ಗಟ್ಟು ಬರುತ್ತದೆ. ಹೆಚ್ಚು ಮುಕ್ತ ಮನೋಭಾವ ಬರುತ್ತದೆ ಎಂದು ತಿಳಿಸಿದರು.
ರಾಷ್ಟ್ರೀಯ ಕ್ರೀಡಾಪಟು ಅರ್ಜುನ್ ಮಾತನಾಡಿ, ಮಾನಸಿಕ ಹಾಗೂ ದೈಹಿಕ ದೃಷ್ಟಿಯಿಂದ ಕ್ರೀಡೆಗಳು ಬಹು ಮುಖ್ಯ. ಅದರಲ್ಲೂ ಪೊಲೀಸರು ನಿರಂತರ ಕೆಲಸದ ಒತ್ತಡದಲ್ಲಿರುತ್ತಾರೆ. ಹೀಗಾಗಿ ಕ್ರೀಡೆಗಳು ಮನರಂಜನೆಯಾಗಿಯೂ ಕೆಲಸ ಮಾಡುತ್ತವೆ ಎಂದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯ ಕುಮಾರ್ ಎಂ. ಸಂತೋಷ ಮತ್ತಿತರರು ಉಪಸ್ಥಿತರಿದ್ದರು.
ಕ್ರೀಡಾಕೂಟದಲ್ಲಿ ಓಟ, ವಾಲಿಬಾಲ್, ಚಕ್ರ ಎಸೆತ, ಹಗ್ಗ ಜಗ್ಗಾಟ, ಕಬಡ್ಡಿ, ಭರ್ಜಿ ಎಸೆತ, ಉದ್ದ ಜಿಗಿತ ಮತ್ತಿತರೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.