ಧನ್ವಂತರಿ ಜಯಂತ್ಯುತ್ಸವದಲ್ಲಿ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ
ದಾವಣಗೆರೆ,ನ. 16- ಧನ್ವಂತರಿ ಆರಂಭಿಸಿದ ಸನಾತನ ಪಾರಂಪರಿಕ ವೈದ್ಯ ಪದ್ಧತಿಯು ಮನುಕುಲಕ್ಕೆ ದಾರಿದೀಪವಾಗಿದ್ದು, ಈ ಪದ್ಧತಿಯನ್ನು ಉಳಿಸಿ, ಬೆಳೆಸುವ ಅಗತ್ಯವಿದೆ ಎಂದು ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಹೇಳಿದರು.
ನಗರದ ಹದಡಿ ರಸ್ತೆಯ ಹಳೆಯ ವಾಣಿ ರೈಸ್ ಮಿಲ್ ಎದುರಿಗಿನ ಕಿಸಾನ್ ವರ್ಲ್ಡ್ ಸಭಾಂಗಣದಲ್ಲಿ ಪಾರಂಪರಿಕ ವೈದ್ಯ ಪರಿಷತ್-ಕರ್ನಾಟಕ ಹಾಗೂ ಪಾರಂಪರಿಕ ವೈದ್ಯ ಪರಿಷತ್ (ದಾವಣಗೆರೆ) ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಧನ್ವಂತರಿ ಜಯಂತ್ಯುತ್ಸವ ಹಾಗೂ ರಕ್ತಹೀನತೆಗೆ ಉಚಿತ ಚಿಕಿತ್ಸಾ ಶಿಬಿರದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಮನುಕುಲಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಧನ್ವಂತರಿ ಋಷಿ ಉದಯವಾದ. ಮನುಕುಲಕ್ಕೆ, ಜೀವ ಜಂತುಗಳಿಗೆ ಔಷಧಿ ನೀಡುವ ಪರಂಪರೆ ದಾರಿದೀಪವಾಗಿದೆ ಎಂದರು. ಬಾಯಿಂದ ಬಾಯಿಗೆ ಈ ಧನ್ವಂತರಿ ಚಿಕಿತ್ಸಾ ಪದ್ಧತಿಯು ರೂಢಿಗತವಾಗಿ ಬಂದಿದ್ದು, ಮನೆ ಮನೆಯಲ್ಲೂ ಮನೆ ಮದ್ದು ನೀಡುವ ಪದ್ಧತಿ ಜಾರಿಯಲ್ಲಿದೆ. ಅನೇಕ ಗಿಡಮೂಲಿಕೆಗಳಿಂದ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.
ಗಿಡ ಮೂಲಿಕೆಗಳಿ ರೋಗ ನಿವಾರಣೆ ಮಾಡುವ ಅಗಾಧ ಶಕ್ತಿ ಇದೆ. ಮುಂದಿನ ಪೀಳಿಗೆಗೆ ಪಾರಂಪರಿಕ ವೈದ್ಯ ಪದ್ಧತಿಯನ್ನು ಪರಿಚಯಿಸುವ ಅವಶ್ಯವಿದೆ. ಪಾರಂಪರಿಕ ವೈದ್ಯರು ಪ್ರಯೋಗ ಶೀಲರಾಗಬೇಕಿದೆ ಎಂದರು.
ನಮ್ಮ ಆರೋಗ್ಯ ನಮ್ಮ ಕೈಯ್ಯಲ್ಲಿಯೇ ಇದೆ. ಗಿಡಮೂಲಿಕೆಗಳನ್ನು ಬಳಸಿ ಸ್ವಸ್ಥವಾಗಿರುವುದನ್ನು ರೂಢಿ ಮಾಡಿ ಕೊಳ್ಳಬೇಕು. ದೇಸೀ ಪದ್ಧತಿಯ ಆಹಾರ, ಗೋವುಗಳ ರಕ್ಷಣೆ ಮುಖ್ಯ’ ಎಂದು ಶ್ರೀಗಳು ಹೇಳಿದರು.
ಮಹಾನಗರ ಪಾಲಿಕೆ ಮಾಜಿ ಮಹಾಪೌರರೂ, ಹಾಲಿ ಸದಸ್ಯರಾದ ಎಸ್.ಟಿ. ವೀರೇಶ್ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಪಾರಂಪರಿಕ ವೈದ್ಯರ ಕೊಡುಗೆ ಅನನ್ಯವಾದುದು ಎಂದು ಹೇಳಿದರು.
ನರೇಂದ್ರ ಮೋದಿ ಭಾರತದ ಪ್ರಧಾನಿಯಾದ ಮೇಲೆ, ಸನಾತನ ಪಾರಂಪರಿಕ ವೈದ್ಯ ಪದ್ಧತಿ, ಯೋಗ ಮುಂತಾದ ಆಯುರ್ವೇದ ಪದ್ಧತಿಗಳಿಗೆ ಹೆಚ್ಚು ಮಹತ್ವ ಬಂದಿದ್ದು, ಮುಂದಿನ ಪೀಳಿಗೆಗೆ ಪರಿಚಯಿಸುವ ಮೂಲಕ ಉಳಿಸಿ, ಬೆಳೆಸಬೇಕಾಗಿದೆ ಎಂದು ತಿಳಿಸಿದರು. ಪಾರಂಪರಿಕ ವೈದ್ಯ ಪರಿಷತ್ ಮಾಜಿ ಅಧ್ಯಕ್ಷ ತರಿಕೆರೆಯ ಬೈರಲಿಂಗಪ್ಪ ಮಾಕನಹಳ್ಳಿ ಮಾತನಾಡಿದರು.
ದಾವಣಗೆರೆ ತಾಲ್ಲೂಕು ಪಾರಂಪರಿಕ ವೈದ್ಯ ಪರಿಷತ್ ಅಧ್ಯಕ್ಷರಾದ ಶಿವಲಿಂಗಮ್ಮ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚನ್ನಗಿರಿ ಘಟಕದ ಅಧ್ಯಕ್ಷೆ ವಸಂತಮ್ಮ, ಚಿತ್ರದುರ್ಗ ಜಿಲ್ಲಾ ಸಂಚಾಲಕ ವೈದ್ಯ ವೀರಣ್ಣ, ಜಿಲ್ಲಾ ಸಂಚಾಲಕರಾದ ಪುಷ್ಪಾ, ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಮತಿ ಶಿವಲಿಂಗಮ್ಮ, ಚನ್ನಗಿರಿಯ ಅಧ್ಯಕ್ಷ ಶ್ರೀಮತಿ ವಸಂತಮ್ಮ ಉಪಸ್ಥಿತರಿದ್ದರು.
ಪಾರಂಪರಿಕ ವೈದ್ಯ ಪರಿಷತ್ ನಿಕಟಪೂರ್ವ ಕಾರ್ಯದರ್ಶಿ ಬಿ.ಎಂ. ಶಿವಮೂರ್ತಿ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಆರೋಗ್ಯದ ಮೂಲ ಆಹಾರ ಪದ್ಧತಿ. ಬೇರೆಯವರನ್ನು ಅನುಕರಿಸುವುದು ಬೇಡ, ನಮ್ಮ ದೇಹದ ಪ್ರಕೃತಿಯನ್ನು ಅರಿತು ಆಹಾರ ಸೇವಿಸಬೇಕು ಎಂದರು
ವಚನಾಮೃತ ಬಳಗದ ಸೌಮ್ಯ, ಮಧುಮತಿ ಮತ್ತು ರಾಜಶ್ರೀಯವರು ವಚನಗಳನ್ನು ಹಾಡಿದರು. ಪರಿಷತ್ತಿನ ನಿಕಟಪೂರ್ವ ರಾಜ್ಯಾಧ್ಯಕ್ಷ ವೈದ್ಯಶ್ರೀ ನೇರ್ಲಿಗೆ ಗುರುಸಿದ್ದಪ್ಪ ಮಾತನಾಡಿ, ಪರಿಷತ್ತಿನಿಂದ ಧನ್ವಂತರಿ ಜಯಂತಿಯನ್ನು ತಪ್ಪದೇ ಆಚರಿಸಿಕೊಂಡು ಬರಲಾಗುತ್ತಿದೆ. ಪಾರಂಪರಿಕ ವೈದ್ಯರುಗಳು ಇನ್ನಷ್ಟು ಉತ್ಸಾಹದಿಂದ ಭಾಗವಹಿಸಿ, ಈ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಲು ಕರೆ ನೀಡಿದರು. ಮಮತಾ ನಾಗರಾಜ್ ನಿರೂಪಿಸಿದರು. ಲತಾ ಕೆ.ಪಿ. ವಂದಿಸಿದರು. ನಿರ್ಮಲ ನಿರೂಪಿಸಿದರು. ಪೂಜೆಯ ನಂತರ ಧನ್ವಂತರಿ ಜಯಂತಿಯ ಅಂಗವಾಗಿ ರಕ್ತಹೀನತೆಗೆ ವೈದ್ಯೆ ಮಮತಾ ನಾಗರಾಜ್ ಔಷಧಿ ವಿತರಿಸಿದರು.