ಮೀಟರ್ ಕಡ್ಡಾಯ ಜಾರಿಯಾಗಲೇ ಇಲ್ಲ

ಮೀಟರ್ ಕಡ್ಡಾಯ ಜಾರಿಯಾಗಲೇ ಇಲ್ಲ

ಆಟೋ ಬಾಡಿಗೆ ಕೇಳಿ ದಂಗಾಗುವುದು ತಪ್ಪಲೇ ಇಲ್ಲ

ದಾವಣಗೆರೆ, ಅ. 8- ಬಸ್ ನಿಲ್ದಾಣಗಳ ಬಳಿ ಅಥವಾ ರೈಲ್ವೇ ನಿಲ್ದಾಣಗಳ ಬಳಿಯಿಂದ ಒಂದೆರಡು ಕಿಲೋ ಮೀಟರ್ ದೂರದ ಸ್ಥಳಕ್ಕೆ ತಲುಪಲು ಆಟೋ ವಿಚಾರಿಸಿ ನೋಡಿ, ಚಾಲಕರು ಹೇಳುವ ದರಕ್ಕೆ ದಂಗಾಗಲೇಬೇಕು.

ಅಲ್ಲಿ ಬಾಡಿಗೆ ದರ ಶುರುವಾಗುವುದೇ 100 ರೂ. ಮೇಲ್ಪಟ್ಟು. ಇನ್ನು ನಗರದ ಒಳಗೆ ಒಂದು ಕಡೆಯಿಂದ ಮತ್ತೊಂದು ಕಡೆ ಸಾಗಬೇಕಾದರೆ 60, 70, 80  ಹೀಗೆ ಆಟೋ ಚಾಲಕರು ಕೇಳುವ ದರಕ್ಕೆ ಜನ ಸಾಮಾನ್ಯರು ಕೆಲ ಕ್ಷಣ ದಂಗಾಗಿ ಬಿಡುತ್ತಾರೆ. ಅಷ್ಟೊಂದಾ? ಎಂದು ಹೌಹಾರುತ್ತಾರೆ. ಕೆಲವರು  ಚೌಕಾಶಿ ಮಾಡಿದರೆ ಮತ್ತೆ ಕೆಲವರು ಬೇಡ ಎಂದು ಮುಂದೆ ಸಾಗುತ್ತಾರೆ.

ಪೊಲೀಸ್ ಇಲಾಖೆ ಆಟೋಗಳಿಗೆ ಮೀಟರ್ ಕಡ್ಡಾಯ ಎಂದು ಕಳೆದ ಇಪ್ಪತ್ತೈದು ವರ್ಷಗಳಿಂದ ಹೇಳುತ್ತಲೇ ಬಂದಿದೆ. ಆದರೆ ಇದುವರೆಗೂ ಮೀಟರ್ ಕಡ್ಡಾಯವಾಗಲೇ ಇಲ್ಲ. ಸಾರ್ವಜನಿಕರ ಸುಲಿಗೆ ತಪ್ಪಲೇ ಇಲ್ಲ.

ಈ ಹಿಂದೆ ಎಸ್ಪಿ ಸಿ.ಬಿ. ರಿಷ್ಯಂತ್ ಆಟೋಗಳಿಗೆ ಮೀಟರ್ ಕಡ್ಡಾಯಗೊಳಿಸಿ ಆದೇಶಿಸಿದ್ದರು. ಮೀಟರ್ ಇಲ್ಲದ ಆಟೋ ಡ್ರೈವರ್‌ಗಳ ಲೈಸನ್ಸ್ ರದ್ದು ಮಾಡುವ ಖಡಕ್ ಎಚ್ಚರಿಕೆಯನ್ನೂ ನೀಡಿದ್ದರು.  ಆದರೆ ಮತ್ತದೇ ಮೀಟರ್ ರಹಿತ ಆಟೋಗಳು ಸಂಚರಿಸಿದವು.

ದಾವಣಗೆರೆಯಲ್ಲಿ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಸಂಚಾರಕ್ಕೆ ತೊಂದರೆ ಆಗುತ್ತೆ‌. ಪೆಟ್ರೋಲ್, ಗ್ಯಾಸ್ ಬೆಲೆ ಗಗನಕ್ಕೇರಿದೆ.  ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ, ಖರ್ಚು- ವೆಚ್ಚ ನಿರ್ವಹಣೆ ಮಾಡುವುದೇ ಕಷ್ಟ. ಇಂಥ ಪರಿಸ್ಥಿತಿಯಲ್ಲಿ ಪೊಲೀಸ್ ಇಲಾಖೆ ಇಂಥ ಕಠಿಣ ನಿರ್ಧಾರಕ್ಕೆ ಬಂದರೆ ಹೇಗೆ? ಎಂದು ಆಟೋ ಚಾಲಕರು ಮೀಟರ್ ಕಡ್ಡಾಯ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಕಾನೂನು ಪ್ರಕಾರ ಆಟೋ ರಿಕ್ಷಾಗಳಲ್ಲಿ ಮೀಟರ್‌ ಅಳವಡಿಸಬೇಕು, ಅದನ್ನು ಸ್ವಾಗತಿಸುತ್ತೇವೆ. ಆದರೆ, ಈಗಾಗಲೇ ಸಾರ್ವಜನಿಕರು ಮತ್ತು ಆಟೋದವರು ಬಾಡಿಗೆಗೆ ಫಿಕ್ಸ್‌ ಆಗಿದ್ದಾರೆ. ಬೆಂಗಳೂರಿನಂತಹ ಬೆಳೆದಿರುವ ಸಿಟಿಗಳಲ್ಲಿ ಜನರು ಮೀಟರ್‌ ಬಾಡಿಗೆ ಆಧಾರದಲ್ಲಿ ಓಡಾಡುವುದನ್ನು ರೂಢಿಸಿಕೊಂಡಿದ್ದಾರೆ. ಆದರೆ ದಾವಣಗೆರೆಯಂತಹ ನಗರಗಳಲ್ಲಿ ಮೀಟರ್‌ ಬಾಡಿಗೆ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಇಂತಿಷ್ಟು ಬಾಡಿಗೆ ಎಂದು ಓಡಾಡುವುದು ಮಾಮೂಲು ಆಗಿರುವುದರಿಂದ ಮೀಟರ್‌ ಅಳವಡಿಸುವುದರಿಂದ ಜನರು ಆಟೋ ಹತ್ತಲು ಹಿಂದೇಟು ಹಾಕಲೂಬಹುದು ಮತ್ತು ಗೊಂದಲಕ್ಕೂ ಕಾರಣವಾಗಬಹುದು ಎಂಬುದು ಆಟೋ ಚಾಲಕರ ವಾದವಾಗಿದೆ.

ಆಟೋರಿಕ್ಷಾಗಳಲ್ಲಿ ಮೀಟರ್‌ ಅಳವಡಿಸಲಾಗುವುದು ಎಂಬ ಆದೇಶ ಇದೇ ಮೊದಲೇನಲ್ಲ. 1998 ರಲ್ಲಿ 5 ರೂಪಾಯಿ ಬಾಡಿಗೆ ಇದ್ದ ಸಂದರ್ಭದಲ್ಲೇ ಆಟೋರಿಕ್ಷಾಗಳಲ್ಲಿ 7 ರೂಪಾಯಿ ಕನಿಷ್ಟ ಬಾಡಿಗೆ ನಿರ್ಧರಿಸಿ ಮೀಟರ್‌ ಅಳವಡಿಕೆ ಮಾಡಲಾಗಿತ್ತು. ಆದರೆ ಹೆಚ್ಚು ದಿನ ಮೀಟರ್‌ ಬಾಡಿಗೆ ಪ್ರಕ್ರಿಯೆ ಮುಂದುವರೆಯಲೇ ಇಲ್ಲ.

ಒಟ್ಟಿನಲ್ಲಿ ಇಂದು ಬಹುತೇಕ ರಸ್ತೆಗಳು ಉತ್ತಮವಾಗಿಯೇ ಇವೆ. ಇನ್ನಾದರೂ ಮೀಟರ್ ಕಡ್ಡಾಯಗೊಳಿಸಿ ಪ್ರಯಾಣಿಕರು ಸುಲಿಗೆ ಮುಕ್ತರಾಗಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕ್ರಮ ಕೈಗೊಳ್ಳುವರೇ ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.

error: Content is protected !!