ಗ್ರಾಮೀಣರಲ್ಲಿ ಯೋಗ, ಧ್ಯಾನದ ಜಾಗೃತಿ ಅಗತ್ಯ

ಗ್ರಾಮೀಣರಲ್ಲಿ ಯೋಗ, ಧ್ಯಾನದ ಜಾಗೃತಿ ಅಗತ್ಯ

ಧನ್ವಂತರಿ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯ್ತಿ ಸಿಇಒ ಸುರೇಶ್ ಇಟ್ನಾಳ್

ದಾವಣಗೆರೆ, ನ. 12 – ಆಯುರ್ವೇದ ದಿನಾಚರಣೆ ಯನ್ನು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸದೇ ರೋಗ ತಡೆಗಟ್ಟುವಿಕೆ ಹಾಗೂ ಆರೋಗ್ಯ ರಕ್ಷಣೆಯ ಕುರಿತು ಪ್ರತಿದಿನ ಜಾಗೃತಿ ಮೂಡಿಸುವಂತಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುರೇಶ್ ಬಿ.ಇಟ್ನಾಳ್ ತಿಳಿಸಿದರು.

ನಗರದ ಕುವೆಂಪು ಕನ್ನಡ ಭವನದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಸಭಾಂಗಣದಲ್ಲಿ ಆದಿದೇವ ಧನ್ವಂತರಿ ಜಯಂತಿ ಅಂಗವಾಗಿ ಮೊನ್ನೆ ಜರುಗಿದ 8 ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂಪೂರ್ಣ ಆರೋಗ್ಯ, ರೋಗ ತಡೆಗಟ್ಟುವಿಕೆ ಹಾಗೂ ಆರೋಗ್ಯ ರಕ್ಷಣೆಯ ಆಯುರ್ವೇದ ತತ್ವಗಳ ಕುರಿತು ವಿದ್ಯಾರ್ಥಿಗಳಿಗೆ, ರೈತರಿಗೆ ಹಾಗೂ ಎಲ್ಲಾ ಸಾರ್ವಜನಿಕರಿಗೂ ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿರಬೇಕು. ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ನಂತರದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಯೋಗ ಮತ್ತು ಧ್ಯಾನಗಳ ಕುರಿತು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಜನರು ಯೋಗದಲ್ಲಿ ಆಸಕ್ತಿಯನ್ನು ಹೊಂದುತ್ತಿದ್ದಾರೆ, ಹೀಗಿದ್ದರೂ ಸಹ ಇತರೆ ಕೋರ್ಸ್‍ಗಳಿಗೆ ಇರುವ ಆದ್ಯತೆ ಆಯುರ್ವೇದ ಕೋರ್ಸ್‍ಗೆ ದೊರೆಯುತ್ತಿಲ್ಲ. ಆದ್ದರಿಂದ ಭವಿಷ್ಯದ ಪೀಳಿಗೆಗೆ ಆಯುರ್ವೇದ ಮಹತ್ವದ ಕುರಿತು ಜಾಗೃತಿ ಮೂಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಜಿಲ್ಲಾ ಆಯುಷ್ ಅಧಿಕಾರಿ ಡಾ. ಶಂಕರಗೌಡ ಮಾತನಾಡಿ, ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯವು ಆದಿದೈವ ಧನ್ವಂತರಿ ಜಯಂತಿ ದಿನವನ್ನು 2016 ರಿಂದ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರುತ್ತಿದೆ. ಪ್ರಸಕ್ತ ಸಾಲಿನ 8 ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಆರೋಗ್ಯಕ್ಕಾಗಿ ಆಯುರ್ವೇದ ಎಂಬ ಘೋಷ ವಾಕ್ಯದಡಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. 

ಆಯುರ್ವೇದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನವೆಂಬರ್ 1 ರಿಂದ ಜಿಲ್ಲೆಯ 30 ಆಯುರ್ವೇದ ಆಸ್ಪತ್ರೆಗಳಲ್ಲಿ ಸಾರ್ವಜನಿಕ ಆರೋಗ್ಯಕ್ಕಾಗಿ ಆಯುರ್ವೇದ, ವಿದ್ಯಾರ್ಥಿಗಳಿಗೆ ಆಯುರ್ವೇದ ಮತ್ತು ರೈತರಿಗೆ ಆಯುರ್ವೇದ ಎಂಬ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಗೊಳಿಸಲಾಗುತ್ತಿದೆ ಎಂದರು.

ಅಶ್ವಿನಿ, ತಪೋವನ ಮತ್ತು ಸುಶ್ರುತ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳಿಂದ ಆಯುರ್ವೇದದ ಮೂಲಕ ಆರೋಗ್ಯ ರಕ್ಷಣೆ ಕುರಿತು ಜಾಗೃತಿ ಮೂಡಿಸುವ ಕಿರು ನಾಟಕ ಪ್ರದರ್ಶನ ಹಾಗೂ ಪ್ರಾಂಶುಪಾಲರು ಉಪನ್ಯಾಸ ನೀಡಿದರು. ಆಯುಷ್ ಇಲಾಖೆಯಿಂದ ತಾತ್ಕಾಲಿಕ ಆಯುರ್ವೇದ ಔಷಧಿ ಮಳಿಗೆ ಸ್ಥಾಪಿಸಿ ಔಷಧಿ ವಿತರಿಸಲಾಯಿತು.

ಮಹಾನಗರ ಪಾಲಿಕೆ ಸದಸ್ಯರಾದ ಗೀತಾ ದಿಳ್ಳೆಪ್ಪ, ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್, ಜಿಲ್ಲಾ ಪ್ರಭಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮುರಳಿಧರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ನಾಗೇಂದ್ರಪ್ಪ, ನಿಮಾ ಸಂಘದ ಪದಾಧಿಕಾರಿ ಡಾ.ಮಂಜುನಾಥ್ ಹಾಗೂ ವೈದ್ಯಾಧಿಕಾರಿ ಡಾ. ಶಾಂತಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

error: Content is protected !!