ಅಭ್ಯರ್ಥಿ ಆಯ್ಕೆ ಸಮಾಲೋಚನಾ ಸಭೆಯಲ್ಲಿ ಸಚಿವ ಈಶ್ವರ ಖಂಡ್ರೆ
ದಾವಣಗೆರೆ, ನ. 10 – ದಾವಣಗೆರೆ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳರಲ್ಲಿ ಕಾಂಗ್ರೆಸ್ ಗೆದ್ದಿದೆ. ಎಲ್ಲರೂ ಒಂದಾಗಿ ಕೆಲಸ ಮಾಡಿದರೆ ಲೋಕಸಭಾ ಚುನಾವಣೆಯಲ್ಲೂ ಗೆಲ್ಲಲು ಸಾಧ್ಯ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.
ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗಾಗಿ ನಗರದ ಬಾಪೂಜಿ ಎಂ.ಬಿ.ಎ. ಕಾಲೇಜಿನಲ್ಲಿ ನಡೆಸಲಾದ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಈ ಹಿಂದೆ ದಾವಣಗೆರೆ ಕಾಂಗ್ರೆಸ್ ಪಕ್ಷದ ಭದ್ರ ಕೋಟೆ ಆಗಿತ್ತು. ಆದರೆ, ಕಳೆದ 4-5 ಅವಧಿಯಲ್ಲಿ ಬಿಜೆಪಿ ಗೆಲ್ಲುತ್ತಿದೆ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬಿಡಬೇಕು ಎಂದವರು ಕಿವಿಮಾತು ಹೇಳಿದರು.
ವಿಧಾನಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ಐದು ಗ್ಯಾರಂಟಿಗಳ ಭರವಸೆ ನೀಡಿತ್ತು. ನಾಲ್ಕನ್ನು ಈಗಾಗಲೇ ಜಾರಿಗೆ ತರಲಾಗಿದೆ. ಆದರೆ, ಬಿಜೆಪಿ 2014ರಲ್ಲಿ ನೀಡಿದ ಅಚ್ಛೇ ದಿನ್, ಕಪ್ಪು ಹಣ ವಾಪಸ್, ರೈತರ ಆದಾಯ ದ್ವಿಗುಣ, 2 ಕೋಟಿ ಜನರಿಗೆ ಉದ್ಯೋಗ, ಎಲ್ಲರಿಗೂ ವಸತಿ, ಭ್ರಷ್ಟಾಚಾರ ನಿಯಂತ್ರಣ, ಬೆಲೆ ನಿಯಂತ್ರಣ ಸೇರಿದಂತೆ, ಯಾವುದೇ ಭರವಸೆಗಳನ್ನು ಜಾರಿಗೆ ತಂದಿಲ್ಲ ಎಂದು ಟೀಕಿಸಿದರು.
ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನುದಾನ ಕೊಡದೇ ಹಣದ ಅಡಚಣೆ ಮಾಡುತ್ತಿದೆ. ಒಂದೆಡೆ ಕೇಂದ್ರ ಅನುದಾನ ಕೊಡುತ್ತಿಲ್ಲ, ಮತ್ತೊಂದೆಡೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜ್ಯ ದಿವಾಳಿ ಆಗಿದೆ ಎಂದು ಹೇಳುತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಸಾಕಷ್ಟು ಸಂಪನ್ಮೂಲ ಇದೆ. ಅವರು ದಿವಾಳಿ ಮಾಡಲು ಪ್ರಯತ್ನ ನಡೆಸಿದರೂ, ರಾಜ್ಯ ದಿವಾಳಿ ಆಗದು ಎಂದರು.
ಕಾಮನ್ ಸೆನ್ಸ್ ಇಲ್ಲದ ಮಂಜಪ್ಪ ಮಾತು
ಕಳೆದ ಮೂರು – ಆರು ತಿಂಗಳಿಂದ ತಾತ್ಕಾಲಿಕ ಪ್ರಚಾರ ಮಾಡುತ್ತಿರುವವರಿಗೆ ಟಿಕೆಟ್ ಕೊಡಬಾರದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ. ಮಂಜಪ್ಪ ಹೇಳಿರುವುದು §ಕಾಮನ್ ಸೆನ್ಸ್¬ ಇಲ್ಲದ ಮಾತು ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜಿ.ಬಿ. ವಿನಯ್ ಕುಮಾರ್ ಹೇಳಿದರು.
ನಮ್ಮಪ್ಪ ಸಂಸದರಂತಹ ಸ್ಥಾನದಲ್ಲಿದ್ದರೆ ನಾನೂ ಚಿಕ್ಕಂದಿನಿಂದಲೇ ರಾಜಕೀಯದಲ್ಲಿ ಇರುತ್ತಿದ್ದೆ. ಬಡತನದಿಂದ ಬಂದು ಜೀವನ ಕಟ್ಟಿಕೊಂಡು ಸಾಧನೆ ಮಾಡಲು ಸಮಯ ಬೇಕಾಯಿತು. ತಮ್ಮ ಇನ್ಸೈಟ್ಸ್ ಸಂಸ್ಥೆ ಸಾವಿರಾರು ವಿದ್ಯಾರ್ಥಿಗಳಿಗೆ ಅತಿ ಕಡಿಮೆ ವೆಚ್ಚದಲ್ಲಿ ಐ.ಎ.ಎಸ್. ತರಬೇತಿ ನೀಡುತ್ತಿದೆ. ಆ ಮೂಲಕ ಬಡವರಿಗೆ ನೆರವಾಗುತ್ತಿದೆ ಎಂದು ತಿಳಿಸಿದರು.
ವಿನಯ್ ಕುಮಾರ್ಗೆ ಟಿಕೆಟ್ ನೀಡಲು ಜೈಕಾರ, ಗೊಂದಲ
ಕಾಂಗ್ರೆಸ್ ಮುಖಂಡರು ಹಾಗೂ ಪದಾಧಿಕಾರಿಗಳ ಅಭಿಪ್ರಾಯ ಪಡೆಯಲು ವರಿಷ್ಠರು ಮುಂದಾದಾಗ ಜಿ.ಬಿ. ವಿನಯ್ ಕುಮಾರ್ ಪರ ಘೋಷಣೆಗಳು ಕೇಳಿ ಬಂದವು. ಆ ಸಂದರ್ಭದಲ್ಲಿ ಕೆಲವರು ಘೋಷಣೆ ಕೂಗದಂತೆ ಆಕ್ಷೇಪ ವ್ಯಕ್ತಪಡಿಸಿದರು.
ಮಾತಿನ ಚಕಮಕಿ ನಡೆದು ಸ್ವಲ್ಪ ಕಾಲ ಗೊಂದಲವೂ ಉಂಟಾಯಿತು. ನಂತರ ಮುಖಂಡರು ಬೆಂಬಲಿಗರನ್ನು ಸಮಾಧಾನ ಪಡಿಸಿದರು.
ಸಚಿವ ಈಶ್ವರ ಖಂಡ್ರೆ ಅವರು ಭಾಷಣ ಮುಗಿಸಿ ವೇದಿಕೆಯಿಂದ ನಿರ್ಗಮಿಸುವ ಹೊತ್ತಿನಲ್ಲಿ ವಿನಯ ಕುಮಾರ್ ಪರ ಘೋಷಣೆಗಳು ಕೇಳಿಬಂದವು. ಪೋಸ್ಟರ್ಗಳನ್ನೂ ಪ್ರದರ್ಶಿಸಲಾಯಿತು.
ಸಭೆಯ ಬಳಿಕ ಎಂಬಿಎ ಕಾಲೇಜಿನ ಕೊಠಡಿಯೊಂದರಲ್ಲಿ ಸಚಿವ ಖಂಡ್ರೆ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಲು ಆಕಾಂಕ್ಷಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು.
ವಿನಯಕುಮಾರ್ ಬೆಂಬಲಿಗರು ಅಲ್ಲಿಗೂ ತೆರಳಿ ಮತ್ತೆ ಘೋಷಣೆಗಳನ್ನು ಕೂಗತೊಡಗಿದರು. ಇದು ಕಾರ್ಯಕರ್ತರ ಸಭೆ ಅಲ್ಲ. ಪಕ್ಷದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಆಕಾಂಕ್ಷಿಗಳಿಂದ ಅಭಿಪ್ರಾಯ ಸಂಗ್ರಹಿಸುವ ಸಭೆಯಾಗಿತ್ತು. ಹೀಗಾಗಿ ಜನರನ್ನು ಕರೆ ತರುವ ಅಗತ್ಯ ಇರಲಿಲ್ಲ ಎಂದು ಪಕ್ಷದ ಕೆಲ ಮುಖಂಡರು ಮಾತನಾಡಿದ್ದು ಕಂಡು ಬಂತು.
ಆಕಾಂಕ್ಷಿತರಿಂದ ಅರ್ಜಿ ಸಲ್ಲಿಕೆ
ಲೋಕಸಭಾ ಟಿಕೆಟ್ಗಾಗಿ ಆಕಾಂಕ್ಷಿಗಳಾದ ಜಿಲ್ಲಾ ಅಧ್ಯಕ್ಷ ಹೆಚ್.ಬಿ. ಮಂಜಪ್ಪ, ಮಾಜಿ ಶಾಸಕ ಎಸ್. ರಾಮಪ್ಪ, ಮುಖಂಡರಾದ ಜಿ.ಬಿ. ವಿನಯ್ಕುಮಾರ್, ಶಿವಕುಮಾರ್ ಒಡೆಯರ್ ಮತ್ತು ಕಲ್ಲೇಶರಾಜ್ ಪಟೇಲ್ ಮತ್ತಿತರರು ಅರ್ಜಿ ಸಲ್ಲಿಸಿದ್ದಾರೆ.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ, ಇಲ್ಲವಾದರೆ ಅವರ ಕುಟುಂಬದವರಿಗೆ ಟಿಕೆಟ್ ನೀಡಬೇಕು ಎಂದೂ ಕೆಲ ಮುಖಂಡರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಶಾಮನೂರು ಕುಟುಂಬದವರಿಗೆ ಇಲ್ಲವೇ ನನಗೆ ಟಿಕೆಟ್ ಕೊಡಿ
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಂಜಪ್ಪ
ಜಿಲ್ಲೆಯಲ್ಲಿ ಲೋಕ ಸಭಾ ಚುನಾವಣೆಗೆ ಬಹಳ ಜನ ಆಕಾಂಕ್ಷಿಗಳು ಹುಟ್ಟಿಕೊಂಡಿದ್ದಾರೆ. ಸಂಘಟನೆಗಾಗಿ ಶ್ರಮಿಸಿದವರಿಗೆ ಟಿಕೆಟ್ ಕೊಡ ಬೇಕೇ ಹೊರತು, ಇತ್ತೀಚೆಗೆ ಬಂದು ತಾತ್ಕಾಲಿಕ ಪ್ರಚಾರ ಮಾಡಿದವರಿಗೆ ಟಿಕೆಟ್ ಕೊಡಬಾರದು ಎಂದು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹೆಚ್.ಬಿ. ಮಂಜಪ್ಪ ಹೇಳಿದರು.
ಇತ್ತೀಚೆಗೆ 3-6 ತಿಂಗಳಲ್ಲಿ ಬಂದು ನಾನು ಅಭ್ಯರ್ಥಿ ಎಂದು ಫ್ಲೆಕ್ಸ್ ಹಾಕಿದರೆ, ಶಾಲಾ-ಕಾಲೇಜುಗಳಿಗೆ ಹೋಗಿ ಪೆನ್ನು, ಪುಸ್ತಕ ಕೊಟ್ಟು ತಾತ್ಕಾಲಿಕ ಪ್ರಚಾರ ಮಾಡಿದರೆ ಸಾಲದು, ಕಾರ್ಯಕರ್ತರು ಸಂಘಟನೆ, ಹೋರಾಟ ಹಾಗೂ ಶ್ರಮದಿಂದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದಾರೆ. ಪಕ್ಷಕ್ಕಾಗಿ ಈ ರೀತಿ ಶ್ರಮಿಸಿದವರಿಗೆ ಟಿಕೆಟ್ ನೀಡಬೇಕು ಎಂದವರು ತಿಳಿಸಿದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೇವಲ 20 ದಿನಗಳಿದ್ದಾಗ ಟಿಕೆಟ್ ನೀಡಿದರೂ 4.85 ಲಕ್ಷ ಮತ ದೊರೆತಿದ್ದವು. ಈ ಬಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಕುಟುಂಬ ದಿಂದ ಯಾರಿಗಾದರೂ ಟಿಕೆಟ್ ಕೊಟ್ಟರೆ ಎಲ್ಲರ ಬೆಂಬಲ ಇದೆ. ಇಲ್ಲವಾದರೆ ನನಗೇ ಟಿಕೆಟ್ ನೀಡಬೇಕು ಎಂದವರು ಬೇಡಿಕೆ ಮುಂದಿಟ್ಟರು.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೇವೆ. ಅದೇ ಹುಮ್ಮಸ್ಸಿನಲ್ಲಿ ಲೋಕಸಭಾ ಚುನಾವಣೆಯಲ್ಲೂ ಯಾರೇ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಗೆಲ್ಲಿಸುತ್ತೇವೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಜಗಳೂರು ಶಾಸಕ ದೇವೇಂದ್ರಪ್ಪ ಮಾತನಾಡಿ, ಶೇ.40 ಕಮೀಷನ್ ಪಡೆದ ಬಿಜೆಪಿಗೆ ರಾಜ್ಯದಲ್ಲಿ ಮಂಗಳಾರತಿ ಆಗಿದೆ. ಐದು ಗ್ಯಾರಂಟಿಗಳ ಕಾರಣದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದರು.
ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್ ಮಾತನಾಡಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿರುವುದನ್ನು ಬಿಜೆಪಿ ಚುನಾವಣೆಗೆ ಬಳಸಿಕೊಳ್ಳುವ ಸಾಧ್ಯತೆ ಇದೆ. ಆದರೆ, ರಾಮ ಮಂದಿರ ಕೇವಲ ಬಿಜೆಪಿಯವರಿಗೆ ಸೇರಿದ್ದಲ್ಲ. ಇಡೀ ದೇಶ ನಿರ್ಮಿಸುವ ಮಂದಿರವಾಗಿದೆ. ಮಂದಿರ ಪ್ರತಿ ಭಾರತೀಯ ಪ್ರಜೆಗೆ ಸಂಬಂಧಿಸಿದ್ದು ಎಂದೂ ಅವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ, ರಾಜ್ಯದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತೊಗೆದ ರೀತಿಯಲ್ಲೇ ಕೇಂದ್ರದಲ್ಲೂ ಭ್ರಷ್ಟ ಮೋದಿ ಸರ್ಕಾರವನ್ನು ಕಿತ್ತೆಸೆಯಬೇಕು ಎಂದು ಕರೆ ನೀಡಿದರು.
ವೇದಿಕೆಯ ಮೇಲೆ ಕಾಂಗ್ರೆಸ್ ಮುಖಂಡರಾದ ಎಸ್. ರಾಮಪ್ಪ, ಮೋಹನ್ ಕೊಂಡಜ್ಜಿ, ಅಯೂಬ್ ಪೈಲ್ವಾನ್, ದಿನೇಶ್ ಕೆ. ಶೆಟ್ಟಿ, ಮುದೇಗೌಡ್ರ ಗಿರೀಶ್, ಎಸ್. ಮಲ್ಲಿಕಾರ್ಜುನ್, ನಂದಿಗಾವಿ ಶ್ರೀನಿವಾಸ್, ವೀರಭದ್ರಪ್ಪ, ಪಾಲಯ್ಯ, ರೇವಣಸಿದ್ದಪ್ಪ, ಕಲ್ಲೇಶ್ರಾಜ್ ಪಟೇಲ್, ಮಂಜುನಾಥ್, ರಹೀಂ ಸಾಬ್, ನಿಂಗಪ್ಪ, ನಿಖಿಲ್ ಕೊಂಡಜ್ಜಿ ಮತ್ತಿತರರು ಉಪಸ್ಥಿತರಿದ್ದರು.