ದಾವಣಗೆರೆ, ನ.10- ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ರಾಜ್ಯ ಸರ್ಕಾರ 2ಎ ಮೀಸಲಾತಿ ಕಲ್ಪಿಸಬೇಕು ಹಾಗೂ ಲಿಂಗಾಯತ ಉಪ ಸಮಾಜಗಳನ್ನು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿಗೆ ಶಿಫಾ ರಸ್ಸು ಮಾಡುವಂತೆ ಆಗ್ರಹಿಸಿ ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ವಿನೂತನ ಪ್ರತಿಭಟನೆ ನಡೆಸಿದರು.
ಪಂಚಮಸಾಲಿ ಸಮಾಜದ ಸಾವಿ ರಾರು ಭಕ್ತರೊಂದಿಗೆ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಇಷ್ಟಲಿಂಗ ಪೂಜೆ ನೆರವೇರಿಸಿದ ಸ್ವಾಮೀಜಿ, ಶೀಘ್ರವೇ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದರು. ಕಳೆದ ಮೂರು ವರ್ಷಗಳಿಂದ ಮೀಸಲಾತಿಗಾಗಿ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದ್ದೇವೆ. ನಮ್ಮ ಹೋರಾಟದ ಫಲವಾಗಿ ಕಳೆದ ವರ್ಷ ಸರ್ಕಾರ 2ಡಿ ಮೀಸಲಾತಿ ಘೋಷಿಸಿತ್ತು. ಆದರೆ ಅದೂ ಸಹ ಸರ್ವೋಚ್ಛ ನ್ಯಾಯಾಲಯದ ಅಂಗಳದಲ್ಲಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಮ್ಮ ಸಮಾಜಕ್ಕೆ 2 ಎ ಮೀಸಲಾತಿ ಕಲ್ಪಿಸಿ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿಗಳು ಬೆಳಗಾವಿ ಅಧಿವೇಶನ ಆರಂಭವಾಗುವ ಮುಂಚೆಯೇ ಸಮಾಜಕ್ಕೆ ಮೀಸಲಾತಿ ಘೋಷಿಸಬೇಕು. ಇಲ್ಲದಿದ್ದರೆ ಡಿಸೆಂಬರ್ 4ರಂದು ಬೆಳಗಾವಿಯಲ್ಲಿ ನಡೆಯಲಿರುವ ಸುವರ್ಣ ವಿಧಾನಸೌಧದ ಅಧಿವೇಶನದ ಒಳಗಡೆಯೇ ಇಷ್ಟಲಿಂಗ ಪೂಜೆಯೊಂದಿಗೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಗಳೂ ಆಗಿರುವ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಮಾತನಾಡಿ, ಕಳೆದ ಹತ್ತು ದಿನಗಳಿಂದ ಶ್ರೀಗಳೊಂದಿಗೆ ಜಿಲ್ಲಾದ್ಯಂತ ಸಂಚರಿಸಿ, ಹೋರಾಟಕ್ಕೆ ಸಜ್ಜುಗೊಂಡಿದ್ದೇವೆ ಎಂದರು.
ಈ ಹಿಂದೆ ನಡೆದ ಎಲ್ಲಾ ಜಿಲ್ಲೆಗಳಲ್ಲೂ ಜಿಲ್ಲಾ ಉಸ್ತುವಾರಿ ಸಚಿವರೇ ಆಗಮಿಸಿ, ಹಕ್ಕೊತ್ತಾಯ ಪತ್ರ ಸ್ವೀಕರಿಸಿದ್ದಾರೆ. ದಾವಣಗೆರೆ ಜಿಲ್ಲಾ ಸಚಿವರು ಬ್ಯುಸಿಯಾಗಿರುವ ಕಾರಣದಿಂದ ಆಗಮಿಸಿಲ್ಲ. ಅರಣ್ಯ ಸಚಿವರು, ಅಖಿಲ ಭಾರತ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಅವರೇ ಆಗಮಿಸಿ ಹಕ್ಕುಪತ್ರ ಸ್ವೀಕರಿಸಿದ್ದಾರೆ. ಅವರ ಆಗಮನದಿಂದಾಗಿ ನಮ್ಮ ಹೋರಾಟದ ಶಕ್ಕಿ ಇಮ್ಮಡಿಯಾಗಿದೆ ಎಂದರು.
ಎಸ್ಸೆಸ್-ಖಂಡ್ರೆ ಮಾತಿಗೆ ಸಹಮತ
ಜಾತಿ ಗಣತಿಗೆ ನಮ್ಮ ವಿರೋಧವಿಲ್ಲ. ಆದರೆ ಕಾಂತರಾಜ್ ವರದಿಯಲ್ಲಿ ಲಿಂಗಾಯತರ ಸಂಖ್ಯೆ ಕಡಿಮೆ ಇರುವುದಾಗಿ ಹೇಳಿರುವ ಬಗ್ಗೆ ಆತಂಕವಿದೆ. ಸಮಾಜಕ್ಕೆ ಅನ್ಯಾಯವಾಗಬಾರದು. ಈ ನಿಟ್ಟಿನಲ್ಲಿ ಕಾಂತರಾಜ್ ವರದಿ ವಿರೋಧಿಸಿರುವ ಶಾಮನೂರು ಶಿವಶಂಕರಪ್ಪ ಹಾಗೂ ಈಶ್ವರ ಖಂಡ್ರೆ ಅವರ ಮಾತಿಗೆ ಸಮಾಜದ ಸಂಪೂರ್ಣ ಸಹಮತವಿದೆ ಎಂದು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಗಣತಿ ಸಂವಿಧಾನಾತ್ಮಕವಾಗಿ, ಕಾನೂನಾತ್ಮಕವಾಗಿ ಇರಲಿ. ಪ್ರಸ್ತುತ ಸಲ್ಲಿಕೆಯಾಗುವ ವರದಿ ತಿರಸ್ಕರಿಸಿ, ಮತ್ತೆ ಗಣತಿಗೆ ಮಾಡುವ ಗಟ್ಟಿ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಲಿ ಎಂದು ಒತ್ತಾಯಿಸಿದರು.
ಹೆದ್ದಾರಿಯಲ್ಲಿ ಶ್ರೀಗಳ ಕಾಲ್ನಡಿಗೆ
ನಗರದ ಹೊರ ವಲಯದಲ್ಲಿರುವ ಚಿಂದೋಡಿ ಲೀಲಾ ಸಮುದಾಯ ಭವನದಿಂದ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆವರೆಗೆ ಹೆದ್ದಾರಿಯಲ್ಲಿ ಕಾಲ್ನಡಿಗೆ ಮೂಲಕ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ತೆರಳಿದರು. ಸಮಾಳದ ಸದ್ದಿನ ಜೊತೆ ಮಹಿಳೆಯರು ಕುಂಭಮೇಳದೊಂದಿಗೆ ಹೆಜ್ಜೆ ಹಾಕಿದರು. ಶ್ರೀಗಳೊಂದಿಗೆ ಸಮಾಜದ ಮುಖಂಡರು, ಭಕ್ತರು ಇದ್ದರು.
ಬೇಡಿಕೆ ಈಡೇರಿಸಲು ಸಿಎಂಗೆ ಒತ್ತಾಯ: ಖಂಡ್ರೆ ಭರವಸೆ
2ಎ ಮೀಸಲಾತಿಗಾಗಿ ಕಳೆದ ಮೂರು ವರ್ಷಗಳಿಂದ ಸ್ವಾಮೀಜಿ ಹೋರಾಟ ನಡೆಸುತ್ತಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳಲೇ ಬೇಕಿದೆ ಎಂದು ಹೇಳಿರುವ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಈ ವಿಷಯವನ್ನು ಮುಖ್ಯಮಂತ್ರಿಗಳು ಹಾಗೂ ಪಕ್ಷದ ವರಿಷ್ಠರ ಗಮನಕ್ಕೆ ತರುತ್ತೇನೆ. ಸಚಿವ ಸಂಪುಟದಲ್ಲೂ ಬೇಡಿಕೆ ಈಡೇರಿಸಲು ಒತ್ತಾಯಿಸುತ್ತೇನೆ ಎಂದು ಭರವಸೆ ನೀಡಿದರು. ನಗರದ ಹೊರ ವಲಯದಲ್ಲಿರುವ ಚಿಂದೋಡಿ ಲೀಲಾ ಸಮುದಾಯ ಭವನದಲ್ಲಿ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಪಂಚಮ ಸಾಲಿ ಮುಖಂಡರಿಂದ ಹಕ್ಕೊತ್ತಾಯ ಪತ್ರ ಸ್ವೀಕರಿಸಿ ಅವರು ಮಾತನಾಡಿದರು. 12ನೇ ಶತಮಾನದಲ್ಲಿ ಶಿವಶರಣರು ಸಮಪಾಲು, ಸಮಬಾಳು ಎಂದು ಜಾತಿ ರಹಿತ ಸಮಾಜ ನಿರ್ಮಾಣದ ಕನಸು ಕಂಡಿದ್ದರು. ಜಗತ್ತಿಗೆ ಸಾಮಾಜಿಕ ನ್ಯಾಯ ಕಲ್ಪಿಸಿಕೊಟ್ಟಿದ್ದ ಲಿಂಗಾಯತ ವೀರಶೈವ ಸಮಾಜ. ಸಕಲ ಜೀವರಾಶಿಗೆ ಲೇಸು ಕಂಡ ಸಮಾಜ ಇಂದು ತನ್ನ ಸಮಾಜಕ್ಕಾಗಿ ನ್ಯಾಯ ಬೇಕು ಎಂದು ಪ್ರತಿಭಟಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಖಂಡ್ರೆ ಹೇಳಿದರು.
ದಾವಣಗೆರೆಯಲ್ಲಿ ಶಾಖಾ ಮಠ
ಪಂಚಮ ಸಾಲಿ ಸಮಾಜದ ಮೀಸಲಾತಿ ಹೋರಾಟ ಮುಗಿದ ನಂತರ, ದಾವಣಗೆರೆಯಲ್ಲಿ ಶಾಖಾ ಮಠ ನಿರ್ಮಾಣಕ್ಕೆ ಮುಂದಾಗುವುದಾಗಿ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ನಾವು ದಾವಣಗೆರೆಯಿಂದ ಕೂಡಲ ಸಂಗಮಕ್ಕೆ ಹೊರಟಾಗ ಅನೇಕ ಭಕ್ತರು ಕಣ್ಣೀರು ಹಾಕಿದ್ದರು. ನಾವು ಇಲ್ಲಿಗೆ ಬಂದಾಗ ವಸತಿ ಸೌಲಭ್ಯಕ್ಕೆಂದು ಚಿಂದೋಡಿ ಚಂದ್ರಧರ್ ಅವರು 45 ಗುಂಟೆ ಜಾಗ ದಾನವಾಗಿ ಕೊಟ್ಟಿದ್ದಾರೆ. ಸಮಾಜಕ್ಕೆ ನ್ಯಾಯ ಕಲ್ಪಿಸುವ ಹೋರಾಟವಾದ ನಂತರ. ಆದಷ್ಟು ಶೀಘ್ರ ಆ ಜಾಗದಲ್ಲಿ ಎಲ್ಲರ ಸಹಕಾರದೊಂದಿಗೆ ಶಾಖಾ ಮಠ ನಿರ್ಮಿಸೋಣ ಎಂದರು
ಮನವಿಯಲ್ಲ ಹಕ್ಕೊತ್ತಾಯ
ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ 2ಎ ಮೀಸಲಾತಿಗಾಗಿ ಮನವಿ ಸಲ್ಲಿಸಿದ್ದೆವು. ನಂತರ ಮನವಿ ಸಲ್ಲಿಸುವುದು ಬೇಡ. ಹಕ್ಕೊತ್ತಾಯ ಪತ್ರ ಕೊಡಲು ತೀರ್ಮಾನಿಸಿದ್ದೇವೆ. ಹೀಗಾಗಿ ಇಂದೂ ಸಹ ಸರ್ಕಾರಕ್ಕೆ ಸಲ್ಲಿಸುವುದು ಮನವಿಯಲ್ಲ. ಹಕ್ಕೊತ್ತಾಯ ಪತ್ರ ಎಂದು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
2ಡಿ ಮೀಸಲಾತಿ ಊಟಕ್ಕಿಲ್ಲದ ಉಪ್ಪಿನಕಾಯಿ
ಪಂಚಮಸಾಲಿ ಪೀಠದ ಪ್ರಪ್ರಥಮ ಜಗದ್ಗುರುಗಳು ಎಂದರೆ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮಾತ್ರ. ಅನೇಕ ಸ್ವಾಮೀಜಿಗಳು ಪೀಠಾಧಿಪತಿಗಳಾಗಿದ್ದಾರೆ. ಆದರೆ ಸಮಾಜಕ್ಕಾಗಿ ಹೋರಾಟ ಕೈಗೆತ್ತಿಕೊಂಡವರು ಮೃತ್ಯುಂಜಯ ಶ್ರೀಗಳು ಮಾತ್ರ ಎಂದು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಹೇಳಿದರು.
ಚುನಾವಣೆ ಹತ್ತಿರ ಬಂತು ಎಂದು ಹೇಳಿ ಅಂದಿನ ಸರ್ಕಾರ ಸಮಾಜದ ದಿಕ್ಕು ತಪ್ಪಿಸಿತು. 2ಡಿ ಮೀಸಲಾತಿ ಉಟಕ್ಕಿಲ್ಲದ ಉಪ್ಪಿನಕಾಯಿ. ಅಂತಹ ಬೇಡವಾದ ಮೀಸಲಾತಿ ಕೊಟ್ಟು ಸಮಾಜವನ್ನು ಮನೆಗೆ ಕಳುಹಿಸಲು ಪ್ರಯತ್ನಿಸಿತು. ಆದರೆ ಆ ಸರ್ಕಾರವನ್ನು ಸಮಾಜವೇ ಮನೆಗೆ ಕಳುಹಿಸಿತು.
ಕೆಲ ಸ್ವಾಮೀಜಿಗಳು ರಾಜಕೀಯ ಪ್ರೇರಿತ ಸಮಾವೇಶ ನಡೆಸುತ್ತಾರೆ. ರಾಜಕೀಯ ಪ್ರೇರಿತ ಜಾತ್ರೆ ಮಾಡಿ ಕೆಲವರನ್ನು ಮಂತ್ರಿ, ಮುಖ್ಯಮಂತ್ರಿಗಳನ್ನು ಮಾಡಲು ಪ್ರಯತ್ನಿಸುತ್ತಾರೆ. ಅದು ಯಾವತ್ತೂ ಫಲಿಸುವುದಿಲ್ಲ. ಸತ್ಯ, ನಿಷ್ಠೆ, ಸಮಾಜದ ಪರವಾಗಿ ಹೋರಾಟ ಮಾಡುವವರು ಬಸವ ಜಯಮೃತ್ಯುಂಜಯ ಶ್ರೀಗಳು ಎಂದು ಹೇಳಿದರು.
ಪಂಚಮಸಾಲಿ ಶ್ರೀಗಳ ಹೋರಾಟಕ್ಕೆ ಸಚಿವ ಶಾಮನೂರು ಶಿವಶಂಕರಪ್ಪ ಬೆಂಬಲ
ದಾವಣಗೆರೆ, ನ. 10 – ಪಂಚಮಸಾಲಿ ಸಮಾಜಕ್ಕೆ ಒ.ಬಿ.ಸಿ. ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ, ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲಿಸುವುದಾಗಿ ಶಾಸಕ ಹಾಗೂ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿರುವ ಅವರು, ಪಂಚಮಸಾಲಿ ಸಮಾಜಕ್ಕೆ ಒಳ್ಳೆಯದಾಗಲಿ ಎಂದು ಸ್ವಾಮೀಜಿ ಹೋರಾಟ ಮಾಡುತ್ತಿದ್ದಾರೆ. ಲಿಂಗಾಯತ ರನ್ನು ಒಬಿಸಿ ಪಟ್ಟಿಗೆ ಸೇರಿಸಲು ನಾವೂ ಒತ್ತಾಯ ಮಾಡುತ್ತೇವೆ. ದಾವಣಗೆರೆಯಲ್ಲಿ ಡಿಸೆಂಬರ್ 23, 24ರ ಸಮಾವೇಶಕ್ಕೆ ಎರಡು ಲಕ್ಷ ಜನ ಸೇರುತ್ತಾರೆ. ಅಲ್ಲಿಯೂ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದರು.
ಹಿಂದಿನ ಸರ್ಕಾರ ಸಮಾಜಕ್ಕೆ 2ಡಿ ಕೊಟ್ಟು ನಮ್ಮ ಹೋರಾಟಕ್ಕೆ ಕೊಡಲಿ ಪೆಟ್ಟು ನೀಡಿತ್ತು ಎಂದ ಶಿವಶಂಕರ್, ಸಚಿವ ಈಶ್ವರ ಖಂಡ್ರೆ ಅವರು ಆದಷ್ಟು ಶೀಘ್ರ ಮಂತ್ರಿ ಮಂಡಲದಲ್ಲಿ ಚರ್ಚಿಸಿ, ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡ ತೇಜಸ್ವಿ ಪಟೇಲ್ ಮಾತನಾಡಿ, ಕೃಷಿ ಲಾಭದಾಯಕ ವೃತ್ತಿಯಾಗಿದ್ದರೆ, ಇಷ್ಟೊಂದು ಮೀಸಲಾತಿ ಹೋರಾಟಗಳು ನಡೆಯುತ್ತಿರಲಿಲ್ಲ. ಶಕ್ತಿಯೇ ಇಲ್ಲದವರು ಶಕ್ತಿ ಮೂಲಕ ಮೀಸಲಾತಿ ಪಡೆಯಬೇಕು ಎಂಬುದು ವಿಪರ್ಯಾಸ ಎಂದು ಹೇಳಿದರು.
ಚುನಾವಣಾ ಆಯೋಗದಂತೆ ಮೀಸಲಾತಿಗೆ ಸಂಬಂಧಿಸಿದಂತೆ ಒಂದು ಆಯೋಗ ಇರಬೇಕು. ಸರ್ಕಾರ ಕಾಲಕಾಲಕ್ಕೆ ಆರ್ಥಿಕ ಸಮೀಕ್ಷೆ ಮಾಡಿ ಯಾರನ್ನು ಸೇರಿಸಬೇಕು ಎಂಬುದನ್ನು ಸ್ವಯಂ ಪ್ರೇರಿತವಾಗಿ ನಿರ್ಧಾರ ತೆಗೆದುಕೊಳ್ಳುವಂತಾಗಬೇಕು. ಜನ ಬಲದ ಮೇಲೆ ಮೀಸಲಾತಿ ಅಲ್ಲ. ಸರ್ಕಾರದ ವಿವೇಚನೆಯಿಂದ ಮೀಸಲಾತಿ ಸಿಗುವಂತಾಗಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರದ ಮಟ್ಟದಲ್ಲಿ ಆಯೋಗದ ರಚನೆಯಾಗಬೇಕು ಎಂದು ಹೇಳಿದರು.
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ರಾಜ್ಯ ಯುವ ಘಟಕದ ಅಧ್ಯಕ್ಷ ಬಿ.ಜೆ. ಅಜಯ್ ಕುಮಾರ್ ಮಾತನಾಡಿ, ಪ್ರತಿ ದಿನ ಇಪ್ಪತ್ತೈದಕ್ಕೂ ಹೆಚ್ಚು ಗ್ರಾಮಗಳಿಗೆ ಭೇಟಿ ನೀಡಿ 2ಎ ಮೀಸಲಾತಿಯ ಅಗತ್ಯತೆ ಏನು ಎಂಬುದರ ಬಗ್ಗೆ ಸಮಾಜ ಬಾಂಧವರಲ್ಲಿ ಮನದಟ್ಟು ಮಾಡಿ ಇಂದು ಹೋರಾಟ ನಡೆಸಲಾಗುತ್ತಿದೆ. ತಾಯಿ ಋಣ, ಭೂಮಿ ಋಣ ಹಾಗೂ ಸಮಾಜದ ಋಣ ತೀರಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಹುಚ್ಚಪ್ಪ ಮಾಸ್ತರ್ ಮಾತನಾಡಿ, ಎಲ್ಲರನ್ನೂ ಒಗ್ಗೂಡಿಸುವ ಮಹಾನ್ ಶಕ್ತಿ ಇಷ್ಟಲಿಂಗ ಪೂಜೆಗಿದೆ. ಇದು ವಿಶ್ವಕ್ಕೇ ಮಾದರಿಯಾಗಿದೆ. ಅಂತಹ ಇಷ್ಟಲಿಂಗ ಪೂಜೆ ಮೂಲಕ ಶ್ರೀಗಳು ಸಮಾಜವನ್ನು ಸಂಘಟಿಸ ಹೊರಟಿರುವುದು ಶ್ಲ್ಯಾಘನೀಯ ಎಂದರು.
ರಟ್ಟಿಹಳ್ಳಿ ತಾಲ್ಲೂಕು ಅಧ್ಯಕ್ಷ ಪರಮೇಶ್ವರಪ್ಪ ಮಾತನಾಡಿ, ಸರ್ಕಾರ ಸಮಾಜಕ್ಕೆ 2ಎ ಮೀಸಲಾತಿ ನೀಡದೇ ಇದ್ದರೆ ಅಧಿಕಾರ ಕಳೆದುಕೊಳ್ಳುವುದು ನಿಶ್ಚಿತ ಎಂದರು.
ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾದ ಜಿಲ್ಲಾಧ್ಯಕ್ಷ ಅಶೋಕ್ ಗೋಪನಾಳ್, ಜಿಲ್ಲಾ ಯುವ ಅಧ್ಯಕ್ಷ ಮಂಜುನಾಥ ಪೈಲ್ವಾನ್, ಚಿಂದೋಡಿ ಚಂದ್ರಧರ್, ದೀಟೂರು ಚಂದ್ರಶೇಖರ್, ಅಣಜಿ ಚಂದ್ರಶೇಖರ್, ಅಭಿ ಕಾಟನ್ ಬಕ್ಕೇಶ್, ಓಂಕಾರಪ್ಪ, ರವಿರಾಜ್ ಸೊನ್ನದ್, ಭರತ್, ಧನಂಜಯ ನಾಗರಸನಹಳ್ಳಿ, ಲಿಂಗಪ್ಪ ಕಿರೋಜಿ, ಮಿಟ್ಲಕಟ್ಟೆ ಚಂದ್ರಪ್ಪ, ಅಬ್ಲೂರಪ್ಪ ಗಂಗನಹರಸಿ, ಬಿ. ಕಲ್ಲೇಶಪ್ಪ ದೀಟೂರು, ಕರೇಗೌಡ್ರು ಗಂಗನಹರಸಿ, ಹಾಲೇಶಪ್ಪ ದೇವರಬೆಳಕೇರಿ, ಜಿಗಳಿ ಗಂಗಾಧರ್, ಸಿರಿಗೆರೆ ಪರಮೇಶ್ವರಗೌಡ್ರು, ಮುದ್ದೇರ ಹನುಮಂತಪ್ಪ, ತಾಪಂ ಮಾಜಿ ಸದಸ್ಯ ಜಿ.ಎಸ್. ಕೊಟ್ರೇಶ್, ಬೇವಿನಹಳ್ಳಿ ಅಂಗಡಿ ಬಸೆಟ್ಟೆಪ್ಪ, ಮಲೇಬೆನ್ನೂರು ಕರಿಬಸಪ್ಪ ಹೊಸಳ್ಳಿ, ಅಂಗಡಿ ಮಲ್ಲಿಕಾರ್ಜುನ, ಅಡಕಿ ಕುಮಾರ್, ಶಂಕ್ರಪ್ಪ ಅಮರಾವತಿ, ಕುಣೆಬೆಳಕೆರೆ ಮುರುಗೇಶ್, ಮಂಜುನಾಥ್, ದೀಟೂರು ಮಲ್ಲಿಕಾರ್ಜುನ್, ಬಿ.ಕೆ. ರುದ್ರೇಶ್, ಕೊಟ್ರೇಶ್, ಬಿ.ಎಸ್. ಕೊಟ್ರೇಶ್, ದೇವರಬೆಳಕೇರೆ ಬಸವರಾಜ್, ಕಂಚಿಕೆರೆ ಶಂಕರ್, ಗುತ್ತೂರು ಚಂದ್ರಪ್ಪ, ಮಿಟ್ಟಲಕಟ್ಟಿ ರುದ್ರೇಶ್, ಬಸವರಾಜ್ ಬನ್ನಿಕೋಡು, ಮಹೇಶ್ , ಲೋಕೇಶ್ ಬೇವಿನಹಳ್ಳಿ, ಲತಾ ಕೊಟ್ರೇಶ್, ಉಮಾ, ರಾಗಿಣಿ, ಕವಿತಾ ಇತರರು ಪ್ರತಿಭಟನೆಯಲ್ಲಿದ್ದರು.