ದಾವಣಗೆರೆ, ನ. 10- ಜಿಲ್ಲೆಯಲ್ಲಿ `ಏಮ್ಸ್’ ಮಾದರಿ ಯಲ್ಲಿ ಉತ್ತಮ ಚಿಕಿತ್ಸೆಯನ್ನು ಸರ್ವರಿಗೂ ಕಲ್ಪಿಸುವುದು, ರೈತರಿಗೆ ಸಮಗ್ರ ನೀರಾವರಿ ಯೋಜನೆಯನ್ನು ಸಮರ್ಪಕ ವಾಗಿ ಜಾರಿಗೆ ತರುವ ಕನಸನ್ನು ಹೊಂದಿದ್ದು, ಇದನ್ನು ಸಾಕಾರ ಗೊಳಿಸುವ ಸದುದ್ಧೇಶದಿಂದ ಈ ಬಾರಿಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದೇನೆಂದು ಎ.ಕೆ. ಫೌಂಡೇ ಶನ್ ಅಧ್ಯಕ್ಷ ಕೆ.ಬಿ. ಕೊಟ್ರೇಶ್ ತಿಳಿಸಿದ್ದಾರೆ.
ನಗರದ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತನಾಗಿ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ಅದರೊಟ್ಟಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ತೊಡಗಿಸಿಕೊಂಡು, ಸಂಘದ ಸಿದ್ದಾಂತ ಹಾಗೂ ಬದ್ಧತೆೆಯಿಂದ ಕೆಲಸ ಮಾಡುತ್ತಾ ಬಂದಿರುವುದಾಗಿ ಹೇಳಿದರು.
ಚುನಾವಣೆಯಲ್ಲಿ ಹಲವರ ಆಕಾಂಕ್ಷಿ ತರಿದ್ದಾರೆ. ಅದೇ ರೀತಿ ಎಂ.ಪಿ. ರೇಣುಕಾ ಚಾರ್ಯ, ಸಂಸದ ಸಿದ್ದೇಶ್ವರರ ಪುತ್ರ ಜಿ.ಎಸ್. ಅನಿತ್ ಕುಮಾರ್ ಕೂಡ ಆಕಾಂಕ್ಷಿಗಳಾಗಿದ್ದಾರೆ. ಎಲ್ಲರೂ ಸಹ ಅರ್ಹರು, ಉತ್ತಮರಿದ್ದಾರೆಂದು ತಿಳಿಸಿದರು. ಯಾರಿಗೇ ಟಿಕೆಟ್ ಕೊಟ್ಟರೂ ಬಿಜೆಪಿ ಗೆಲ್ಲಿಸುವುದು ನಮ್ಮ ಗುರಿಯಾಗಿರುತ್ತದೆ. ಇದರಲ್ಲಿ ಭೇದಭಾವ ಇಲ್ಲ. ನನಗೆ ಟಿಕೆಟ್ ನೀಡಿದರೆ ನನ್ನ ಕನಸಿನ ಗುರಿಗಳನ್ನು ಸಾಧಿಸಲು ಸಹಕಾರಿಯಾಗಲಿದೆ ಎಂದರು.
ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ನನಗೆ ಟಿಕೆಟ್ ಸಿಕ್ಕರೆ ದೆಹಲಿ ಮಾದರಿಯಲ್ಲಿ ಏಮ್ಸ್ ಆಸ್ಪತ್ರೆ ನಿರ್ಮಿಸಿ ಬಡವರಿಗೂ ವೈದ್ಯಕೀಯ ಸೌಲಭ್ಯ ಕಲ್ಪಿಸುವುದು. ಗುಡಿ ಕೈಗಾರಿಕೆಗೆ ಮಾರುಕಟ್ಟೆ ವ್ಯವಸ್ಥೆ, ಮಹಿಳೆಯರು ತಯಾರಿಸುವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಜೊತೆಗೆ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುವುದು ನಮ್ಮ ಮುಖ್ಯ ಧ್ಯೇಯವಾಗಿದೆ ಎಂದು ಹೇಳಿದರು.
ಲೋಕಸಭಾ ಚುನಾವಣೆ ಬಂದಾಗ ಮೊದಲು ದೇಶದ ಅಭಿವೃದ್ಧಿ, ಸಶಕ್ತಿ ಮತ್ತು ಸದೃಢ ಭಾರತ ನಿರ್ಮಾಣ. ಅಂತಹ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ. ಜನ ಕಾಂಗ್ರೆಸ್ ಬಗ್ಗೆ ಒಲವು ತೋರುವುದಿಲ್ಲ. ಜನರಿಗೆ ಬೇಕಾಗಿರುವುದು ಸದೃಢ ದೇಶ. ಅದು ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯ ಎಂದರು.
ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿರುವ ಮೋದಿಯವರನ್ನೇ ಮತ್ತೊಮ್ಮೆ ಪ್ರಧಾನಿಯನ್ನಾಗಿ ಆಯ್ಕೆ ಮಾಡಬೇಕಾಗಿದೆ. ಕೇಂದ್ರದ ಅನೇಕ ಯೋಜನೆಗಳೇ ನಮ್ಮ ಅಜೆಂಡಾ ಎಂದು ಹೇಳಿದರು.
ಕಾಂಗ್ರೆಸ್ ಆಕಾಂಕ್ಷಿಯಾಗಿರುವವರೇ ಕೇಂದ್ರದ ಯೋಜನೆಗಳನ್ನು ತಳಮಟ್ಟದಲ್ಲಿ ತಲುಪಿಸುವುದಾಗಿ ಹೇಳಿಕೆ ನೀಡುತ್ತಿದ್ದಾರೆ. ಇದರಿಂದಲೇ ಕೇಂದ್ರ ಯೋಜನೆಗಳ ಜನಪ್ರಿಯತೆ ಎಷ್ಟಿದೆ ಎಂಬುದನ್ನು ತಿಳಿಯಬಹುದು ಎಂದರು.
ದಾವಣಗೆರೆಗೆ ಬೃಹತ್ ಕೈಗಾರಿಕೆಗಳ ಸ್ಥಾಪನೆ ಅಗತ್ಯವಾಗಿದ್ದು, ಕೈಗಾರಿಕಾ ಕಾರಿಡಾರ್, ಸ್ತ್ರೀ ಶಕ್ತಿ ಗುಂಪುಗಳನ್ನು ಸಶಕ್ತಗೊಳಿಸಿ ಅವರಿಗೆ ಕಿರು ಸಾಲ ಯೋಜನೆ ಬಲಪಡಿಸಬೇಕಾಗಿದೆ ಎಂದು ಹೇಳಿದರು.
ಶಿಕ್ಷಣದಿಂದ ಸಮಗ್ರ ಬದಲಾವಣೆ, ದೇಶಕ್ಕೆ ಆರ್ಥಿಕ ಸ್ಥಿರತೆ ಸಾಧ್ಯ. ಎಲ್ಲದಕ್ಕೂ ಮುಖ್ಯವಾಗಿ ರೈತರಿಗೆ ಸಕಲ ರೀತಿಯ ಸೌಲಭ್ಯ ನೀಡಬೇಕಾದ ಅವಶ್ಯವಿದೆ ಎಂದರು.