ದಾವಣಗೆರೆ ಗುಂಡಿ ಮಹಾದೇವಪ್ಪ ಕಲ್ಯಾಣ ಮಂದಿರದಲ್ಲಿ ನೀವು-ನಾವು ಸಾಂಸ್ಕೃತಿಕ ವೇದಿಕೆ ಹಾಗೂ ಅನ್ವೇಷಕರು ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ನಾಟಕೋತ್ಸವದಲ್ಲಿ `ಹುತಾತ್ಮರು’ ಏಕ ವ್ಯಕ್ತಿ ಪ್ರದರ್ಶನ ಜನ ಮನ ಸೆಳೆಯಿತು.
ದಾವಣಗೆರೆ, ನ. 8- ನಿಸ್ವಾರ್ಥ ಸೇವೆ ಸಲ್ಲಿಸುವ ಮೂಲಕ ಜೀವದ ಹಂಗು ತೊರೆದು, ಕುಟುಂಬವನ್ನು ಲೆಕ್ಕಿಸದೇ ದೇಶ ರಕ್ಷಣೆಯಲ್ಲಿ ತೊಡಗಿರುವ ಸೈನಿಕರಿಗೆ ಗೌರವ ಸಲ್ಲಿಸುವುದು ಎಲ್ಲರ ಆದ್ಯ ಕರ್ತವ್ಯ ಎಂದು ಮಹಾನಗರ ಪಾಲಿಕೆ ಮಾಜಿ ಮಹಾಪೌರ ಎಸ್.ಟಿ. ವೀರೇಶ್ ಹೇಳಿದರು.
ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂದಿರದಲ್ಲಿ ನೀವು-ನಾವು ಸಾಂಸ್ಕೃತಿಕ ವೇದಿಕೆ ಹಾಗೂ ಅನ್ವೇಷಕರು ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ `ಹುತಾತ್ಮರು’ ನಾಟಕ ಪ್ರದರ್ಶನ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ದೇಶ ರಕ್ಷಣೆಯಲ್ಲಿ ತೊಡಗಿರುವ ವೀರ ಯೋಧರ ಬಿಸಿ ಉಸಿರಿನಿಂದಾಗಿ ದೆಹಲಿ ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಾಡುತ್ತಿದೆ ಎಂದು ತಿಳಿಸಿದರು.
ದೇಶ ರಕ್ಷಣೆ ನಮ್ಮ ಮೊದಲ ಆದ್ಯತೆ ಎಂದು ಸೈನಿಕರು ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ದೇಶದ ಯುವಜನರು ದೇಶಪ್ರೇಮ ಬೆಳೆಸಿಕೊಳ್ಳಬೇಕು. ಸೇನೆ ಸೇರುವ ಮೂಲಕ ದೇಶ ಸೇವೆಗೆ ಮುಂದಾಗಬೇಕು. ದೇಶಕ್ಕಾಗಿ ಮಡಿದ ಹುತಾತ್ಮರನ್ನು ಸದಾ ಸ್ಮರಿಸಬೇಕೆಂದು ಕರೆ ನೀಡಿದರು.
ಮಾಜಿ ಯೋಧ ಮಂಜಾನಾಯ್ಕ ಮಾತನಾಡಿ ಯಾವುದೇ ಜಾತಿ, ಧರ್ಮದ ಭೇದವಿಲ್ಲದೇ ಸೈನಿಕರು ದೇಶದ ಜನರ ರಕ್ಷಣೆಗಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ದೇಶದೊಳಗಿನ ಜನರು ಜಾತಿ, ಮತ, ಪಂಥ, ಧರ್ಮ, ಪಕ್ಷಗಳನ್ನು ಕಟ್ಟಿಕೊಂಡು ಬಡಿದಾಡುತ್ತಿದ್ದಾರೆಂದು ಬೇಸರ ವ್ಯಕ್ತಪಡಿಸಿದರು.
ನಮ್ಮೆಲ್ಲರ ರಕ್ಷಣೆ, ಸುಖ, ಶಾಂತಿಗಾಗಿ ಕೊರೆಯುವ ಚಳಿ, ಉರಿಯುವ ಬಿಸಿಲನ್ನೂ ಲೆಕ್ಕಿಸದೇ ದೇಶ ಸೇವೆ ಮಾಡುತ್ತಿರುವ ಯೋಧರನ್ನು ಸ್ಮರಿಸುವ ಜೊತೆಗೆ `ನನ್ನ ದೇಶ ನಮ್ಮ ಯೋಧ’ ಎಂಬ ಮನೋಭಾವನೆಯಿಂದ ನವಭಾರತ ನಿರ್ಮಾಣದ ಸಂಕಲ್ಪ ಹೊಂದಬೇಕೆಂದರು.
ನಾಟಕದ ನಿರ್ದೇಶಕ ಹನುಮಂತ ಪೂಜಾರ್, ಕಲಾ ಕಲ್ಪ ಸಂಸ್ಥೆ ಮುಖ್ಯಸ್ಥೆ ಐನಳ್ಳಿ ಶುಭ ಮತ್ತಿತರರು ಇದ್ದರು.
ಮಾಜಿ ಯೋಧರಾದ ಮಹಮ್ಮದ್ ರಫಿ, ಚಂದ್ರಪ್ಪ, ಅಜಯ್ ಕುಮಾರ್ ಅವರನ್ನು ಗೌರವಿಸಲಾಯಿತು.
ಎಸ್.ಎಸ್. ಸಿದ್ಧರಾಜು ನಿರೂಪಿಸಿದರು. ರವೀಂದ್ರ ಅರಳಗುಪ್ಪೆ ಅಭಿನಯ ಮನೋಜ್ಞವಾಗಿತ್ತು.