ಜಿಲ್ಲಾ ವನಿತಾ ಸಾಹಿತ್ಯ ವೇದಿಕೆ ಹಾಗೂ ಜನತಾವಾಣಿ ದಿನ ಪತ್ರಿಕೆ ಸಂಯುಕ್ತಾಶ್ರಯದಲ್ಲಿ ದಾವಣಗೆರೆ ರೋಟರಿ ಬಾಲಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹರಿಹರದ ಸಾಹಿತಿ ಶ್ರೀಮತಿ ಸೀತಾ ನಾರಾಯಣ ಅವರಿಗೆ `ವನಿತಾ ಸಾಹಿತ್ಯ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸಾಹಿತಿ ಕೆ. ಶರೀಫಾ
ದಾವಣಗೆರೆ, ನ.5- ಮಹಿಳಾ ಸಾಹಿತಿಗಳು, ಲೇಖಕಿಯರು, ಬರಹಗಾರ್ತಿಯರು ವರ್ತಮಾನದ ತಲ್ಲಣಗಳ ಕುರಿತ ಬರಹಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರೂ, ಹಿರಿಯ ಸಾಹಿತಿಗಳ ಡಾ. ಕೆ.ಶರೀಫಾ ಕರೆ ನೀಡಿದರು.
ನಗರದ ರೋಟರಿ ಬಾಲಭವನದಲ್ಲಿ ಜಿಲ್ಲಾ ವನಿತಾ ಸಾಹಿತ್ಯ ವೇದಿಕೆ ಹಾಗೂ ಜನತಾವಾಣಿ ದಿನ ಪತ್ರಿಕೆ ಸಂಯುಕ್ತಾಶ್ರಯದಲ್ಲಿ ಇಂದು ಹಮ್ಮಿಕೊಂಡಿದ್ದ 68 ನೇ ಕನ್ನಡ ರಾಜ್ಯೋತ್ಸವ, 29 ನೇ ವಾರ್ಷಿಕೋತ್ಸವ, ಪುಸ್ತಕ ಬಿಡುಗಡೆ ಹಾಗೂ `ವನಿತಾ ಸಾಹಿತ್ಯ ಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳಾ ಸಾಹಿತಿಗಳು, ಬರಹಗಾರರು ಸಮಾಜದ ಎಲ್ಲಾ ಅಡೆತಡೆಗಳನ್ನು ಮೆಟ್ಟಿ ನಿಲ್ಲುವ ಗುಣ ಮೈಗೂಡಿಸಿಕೊಳ್ಳಬೇಕು. ಭಾವನಾತ್ಮಕತೆ ವಿಷಯಗಳ ಬದಲಿಗೆ ವಾಸ್ತವಿಕ ನೆಲೆಗಟ್ಟಿನ ಸಾಹಿತ್ಯವನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕೆಂದ ಕೇವಲ ರಾಜಕೀಯ ಕ್ಷೇತ್ರದಷ್ಟೇ ಅಲ್ಲ. ಸಾಹಿತ್ಯ ಕ್ಷೇತ್ರದಲ್ಲೂ ರಾಜಕೀಯ ಇದ್ದೇ ಇರುತ್ತದೆ. ಕೇವಲ ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆಯರು ದಲಿತ, ಬಂಡಾಯ ಮತ್ತು ಸಮಕಾಲೀನ ಸಾಹಿತ್ಯ ಪ್ರವೇಶಿಸಿದ ನಂತರ ಮಹಿಳಾ ಸಾಹಿತ್ಯದ ಪಥ ಕೂಡ ಬದಲಾಗಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಮಹಿಳಾ ಲೇಖಕಿಯರು, ಸಾಹಿತಿಗಳು, ಬರಹಗಾರ್ತಿ ಯರು, ವಿಮರ್ಶಕರಾಗಿ ಹೊರ ಬರುತ್ತಿದ್ದಾರೆ. ಪ್ರತಿಯೊಬ್ಬ ಸಾಹಿತಿಗೂ ಸಾಮಾಜಿಕ ಹೊಣೆ ಗಾರಿಕೆ ಇದ್ದೇ ಇರುತ್ತದೆ. ಅದರಂತೆ ಮಹಿಳಾ ಸಾಹಿತಿಗಳಿಗೂ ಜವಾಬ್ದಾರಿ ಇರುತ್ತದೆ ಎಂದರು.
ವನಿತಾ ಸಮಾಜದ ಸಂಸ್ಥಾಪಕರಾದ ಮಾಜಿ ಸಚಿವೆ ಶ್ರೀಮತಿ ನಾಗಮ್ಮ ಕೇಶವಮೂರ್ತಿ ಅವರು ವನಿತಾ ಸಮಾಜದ ಮೂಲಕ 50ಕ್ಕೂ ಹೆಚ್ಚು ಅಂಗ ಸಂಸ್ಥೆಗಳನ್ನು ಪ್ರಾರಂಭಿಸಿದ್ದಾರೆ. ಜಿಲ್ಲೆಯ ಮಹಿಳಾ ಸಾಹಿತಿಗಳನ್ನು ಉತ್ತೇಜಿಸುವ ಸಲುವಾಗಿ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ. ಇದುವರೆಗೆ ವೇದಿಕೆ 40ಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿರುವುದು ಹೆಮ್ಮೆಯ ಸಂಗತಿ ಎಂದು ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸದ್ದ ಎಸ್.ಎಸ್. ಕೇರ್ ಟ್ರಸ್ಟ್‌ನ ಲೈಫ್ ಟ್ರಸ್ಟಿ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ವನಿತಾ ಸಮಾಜದ ಸಂಸ್ಥಾಪಕರಾದ ನಾಗಮ್ಮ ಕೇಶವಮೂರ್ತಿ ಅವರದು ಮೇರು ವ್ಯಕ್ತಿತ್ವ. ವನಿತಾ ಸಮಾಜದ ಅನೇಕ ಅಂಗ ಸಂಸ್ಥೆಗಳನ್ನು ಪ್ರಾರಂಭಿಸುವ ಮೂಲಕ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದಾರೆ ಎಂದು ಹೇಳಿದರು.
ನಾಗಮ್ಮ ಕೇಶವಮೂರ್ತಿ ಅವರ ಸಮಾಜ ಸೇವಾ ಕಾರ್ಯ ಶ್ಲ್ಯಾಘನೀಯ. ಅವರೊಂದು ಸಂಸ್ಥೆ ಇದ್ದಂತೆ. ಅವರ ಮಾರ್ಗದರ್ಶನ ಎಲ್ಲರ ಮೇಲಿರಲಿ, ಮುಂದಿನ ದಿನಗಳಲ್ಲಿ ವನಿತಾ ಸಮಾಜ ಇನ್ನೂ ಹೆಚ್ಚಿನ ಸೇವಾ ಕಾರ್ಯಗಳನ್ನು ಮಾಡಲಿ ಎಂದು ಶುಭ ಹಾರೈಸಿದರು.
ಕೆ. ಶರೀಫಾ ಅವರು ಮಹಿಳಾ ಸಾಹಿತಿಯಾಗಿ ಅನೇಕ ಸಾಧನೆ ಮಾಡಿರುವುದು ಸಂತಸ ತಂದಿದೆ ಎಂದು ಪ್ರಭಾ ಅವರು ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಜನತಾವಾಣಿ ಸಂಸ್ಥಾಪಕರಾಗಿದ್ದ ದಿ. ಹೆಚ್.ಎನ್. ಷಡಾಕ್ಷರಪ್ಪ ಅವರ ತಂದೆ-ತಾಯಿ `ಹೊನ್ನೇನಹಳ್ಳಿ ಹನುಮಕ್ಕ ನಂಜಪ್ಪ ಮೆಳ್ಳೇಕಟ್ಟೆ’ ಅವರ ಸ್ಮರಣಾರ್ಥ ಪ್ರತಿ ವರ್ಷ ಕೊಡ ಮಾಡುವ `ಜಿಲ್ಲಾ ಸಾಹಿತ್ಯ ವನಿತಾಶ್ರೀ’ ಪ್ರಶಸ್ತಿಯನ್ನು ಹರಿಹರದ ಸಾಹಿತಿ ಶ್ರೀಮತಿ ಸೀತಾ ನಾರಾಯಣ ಅವರಿಗೆ ಪ್ರದಾನ ಮಾಡಲಾಯಿತು.
ಡಿ.ಎಂ. ಕುಮುದ ಅವರ `ಶ್ರೀ ಕೃಷ್ಣ ಅಖಿಲಾಂಡ ಕೋಟಿ ಬ್ರಹ್ಮಾಂಡ ಪಾಲ’, ಡಾ. ರೂಪಶ್ರೀ ಶಶಿಕಾಂತ್ ಅವರ `ಶ್ರೀ ಕೃಷ್ಣ ಧ್ಯಾನಾಮೃತ’ (ಭಕ್ತಿಗೀತೆಗಳು) ಹಾಗೂ ಕೆ.ಆರ್. ಸುಮತೀಂದ್ರ ಅವರ `ಕನ್ನಡ ಕಸ್ತೂರಿ’ ಕೃತಿಗಳ ಲೋಕಾರ್ಪಣೆ ಸಹ ನಡೆಯಿತು.
ಜಿಲ್ಲಾ ವನಿತಾ ಸಾಹಿತ್ಯ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ನಾಗರಾಜ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವನಿತಾ ಸಮಾಜದ ಅಧ್ಯಕ್ಷೆ ಪದ್ಮ ಪ್ರಕಾಶ್, ಖಜಾಂಚಿ ನೀಲಗುಂದ, ಜಯಮ್ಮ, ವೀಣಾ ಕೃಷ್ಣಮೂರ್ತಿ ಮತ್ತಿತರರು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೂ ಮುನ್ನ ನಡೆದ ಕವಿಗೋಷ್ಠಿಯಲ್ಲಿ 20 ಜನ ಕವಯತ್ರಿಯರು ಹಾಗೂ ಕವಿಗಳು ಪಾಲ್ಗೊಂಡಿದ್ದರು. ಟಿ.ಎಸ್. ಶೈಲಜಾ ಸ್ವಾಗತಿಸಿದರು. ಸುನೀತ ಪ್ರಕಾಶ್, ಅನ್ನಪೂರ್ಣ ಪಾಟೀಲ್ ನಿರೂಪಿಸಿದರು.