ಪರಂಪರೆ ಹೊತ್ತು ನಡೆಸುವ ಜವಾಬ್ದಾರಿ ಯುವಕರ ಮೇಲಿದೆ

ಪರಂಪರೆ ಹೊತ್ತು ನಡೆಸುವ ಜವಾಬ್ದಾರಿ ಯುವಕರ ಮೇಲಿದೆ

ದಾವಣಗೆರೆ, ನ. 2 – ಕರ್ನಾಟಕ ಏಕೀಕರಣಗೊಂಡು ಹಾಗೂ ಕರ್ನಾಟಕ ಎಂದು ಮರು ನಾಮಕರಣಗೊಂಡು 50 ವರ್ಷಗಳಾದ ಸುಸಂದರ್ಭದಲ್ಲಿ ಭದ್ರಾ ಕಾಲೇಜಿನ ಯುವ ವಿದ್ಯಾರ್ಥಿ ಸಮೂಹ ಭದ್ರಾ ಕನ್ನಡ ಹಬ್ಬ ಆಚರಿಸುತ್ತಿರುವುದು ಸಂತೋಷದಾಯಕ ಕಾರ್ಯಕ್ರಮ. ಕನ್ನಡ ಹಿರಿಯ ಪರಂಪರೆಯನ್ನು ಹೊತ್ತು ನಡೆಸುವಂತಹ ಮಹತ್ತರ ಜವಾಬ್ದಾರಿ ಇಂದಿನ ಕನ್ನಡಿಗರ ಹೆಗಲ ಮೇಲಿದೆ ಎಂದು ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ತಿಳಿಸಿದರು.

ನಗರದ ಭದ್ರಾ ಕಾಲೇಜಿನ ಆವರಣದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಭದ್ರಾ ಕನ್ನಡ ನುಡಿ ಹಬ್ಬ ಹಾಗೂ ಸ್ತಬ್ಧ ಚಿತ್ರಗಳ ಮೆರವಣಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಾನಗರ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಮಾತನಾಡಿ, ಭದ್ರಾ ಕಾಲೇಜಿನಲ್ಲಿ ಕನ್ನಡ ನುಡಿ ಹಬ್ಬವನ್ನು ವಿಶೇಷ ಹಾಗೂ ವಿಭಿನ್ನವಾಗಿ ಸ್ತಬ್ಧ ಚಿತ್ರ ಮೆರವಣಿಗೆಯ ಮೂಲಕ ಆಚರಿಸುತ್ತಿರುವುದು ಸಂತೋಷ ತಂದಿದೆ. ನಾಡು-ನುಡಿ ಸೇವೆಗೆ ಈ ರೀತಿಯ ಕಾರ್ಯಕ್ರಮಗಳನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಮೂಡಿ ಬರಲಿ ಎಂದು ಆಶಯ ವ್ಯಕ್ತಪಡಿಸಿದರು.

ಸ್ತಬ್ಧ ಚಿತ್ರ ಮೆವಣಿಗೆಯಲ್ಲಿ ಭದ್ರಾ ಕಾಲೇಜಿನ ವಿದ್ಯಾರ್ಥಿಗಳು ವಿಜಯಪುರದ ಬಸವನ ಬಾಗೆವಾಡಿ, ಮೈಸೂರು, ಕೊಡಗು, ಉಡುಪಿ, ಮಂಗಳೂರು ಕರಾವಳಿ ಹಾಗೂ ಹಂಪಿಯ ಚಿತ್ರಗಳ ಬೃಹತ್ ಮೆರವಣಿಗೆಯು ಕಾಲೇಜಿನ ಆವರಣದಿಂದ ಡಾ. ಎಂ.ಸಿ. ಮೋದಿ ವೃತ್ತ, ಮಹಾನಗರ ಪಾಲಿಕೆ ಮೂಲಕ ಜಯದೇವ ವೃತ್ತದವರೆಗೆ ಮೆರವಣಿಗೆಯ ಮೂಲಕ ತೆರಳಿತು.

ನಂತರ ಶ್ರೀ ಜಯದೇವ ಮುರುಘರಾಜೇಂದ್ರ ವೃತ್ತದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ. ಮಂಜುನಾಥ ಮಾತನಾಡಿ, ಇಂದಿನ ಯುವ ಜನಾಂಗ ತಾವಾಯಿತು, ತಮ್ಮ ಪಾಡಾಯಿತು ಎಂದು ಮುಳುಗಿರುವವರ ಮಧ್ಯ ಈ ರೀತಿಯ ಕನ್ನಡ ನಾಡು-ನುಡಿ, ದೇಶ ಸೇವೆಗೆ ಕಿಂಚಿತ್ತಾದರೂ ಸೇವೆ ಸಲ್ಲಿಸುತ್ತಿರುವುದು ಶ್ಲ್ಯಾಘನೀಯ ಎಂದರು.

ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ. ಹೆಚ್.ಎಸ್. ಮಂಜುನಾಥ್ ಕುರ್ಕಿ ಮಾತನಾಡಿ, ಕನ್ನಡ ನುಡಿ ನಮನ ಸ್ಲಲಿಸುತ್ತಿರುವ ವಿದ್ಯಾರ್ಥಿಗಳಿಗೆ ಶುಭಾಶಯ ಕೋರಿ, ಕನ್ನಡ ಭಾಷೆಯ ಜೀವಂತಿಕೆಯು ನಾಡಿನ ಜನರ ನಾಲಿಗೆ ಮೇಲೆ ನಿರಂತರವಾಗಿರಲಿ ಎಂದು ಆಶಿಸಿದರು.

ಕನ್ನಡ ಪರ ಹೋರಾಟಗಾರ ಬಂಕಾಪುರದ ಚನ್ನಬಸಪ್ಪ ಹಾಗೂ ಹಿರಿಯ ಸಾಹಿತಿ ಬಾ.ಮ. ಬಸವರಾಜಯ್ಯ ಅವರಿಗೆ ಈ ಸಂದರ್ಭದಲ್ಲಿ ಭದ್ರಾ ಕಾಲೇಜಿನ ಆಡಳಿತ ಮಂಡಳಿ ಪರವಾಗಿ ಸನ್ಮಾನಿಸಿ, ಗೌರವಿಸಲಾಯಿತು.

ಬಂಕಾಪುರದ ಚನ್ನಬಸಪ್ಪ ಮಾತನಾಡಿ, ವಿವಿಧ ವೇಷ-ಭೂಷಣದಲ್ಲಿ ನೆರೆದಿರುವ ಕಲಾವಿದ ವಿದ್ಯಾರ್ಥಿಗಳನ್ನು ಶ್ಲ್ಯಾಘಿಸುತ್ತಾ,  ಇದೊಂದು ಐತಿಹಾಸಿಕ ಮೆವರಣಿಗೆಯಾಗಿದೆ ಎಂದು ತಿಳಿಸಿದರು.

ಭಾರತ ಸ್ವಾತಂತ್ರ್ಯಕ್ಕೆ ಕನ್ನಡಿಗರು ತಮ್ಮದೇ ಆದ ಗುರುತರ ಕಾಣಿಕೆ ನೀಡಿದ್ದಾರೆ. ಅನೇಕ ವೀರ ಹೋರಾಟಗಾರರ ಪರಿಶ್ರಮದ ಫಲವಾಗಿ ಇಂತಹ ಭವ್ಯ ಪರಂಪರೆ ನಮ್ಮ ನಾಡಿಗೆ ಇದೆ ಎಂದು ಸ್ಮರಿಸಿದರು.

ಬಾ.ಮ. ಬಸವರಾಜಯ್ಯ ಮಾತನಾಡಿ, ಇಂದಿನ ಮಾಧ್ಯಮಗಳು ಕನ್ನಡವನ್ನು ನುಂಗಿ ಇತರೆ ಭಾಷೆಗಳಿಂದ ಪದಗಳನ್ನು ಆಮದು ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಕನ್ನಡ ಸಾಹಿತ್ಯವನ್ನು ಕುರಿತು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ಮತ್ತು ಕಾಲೇಜುಗಳ ಅಧ್ಯಾಪಕರ ಸಂಘಗಳ ಒಕ್ಕೂಟದ ಮಾಜಿ ಅಧ್ಯಕ್ಷ ಪ್ರೊ. ಸಿ.ಹೆಚ್. ಮುರುಗೇಂದ್ರಪ್ಪ, ಪ್ರಾಂಶುಪಾಲರಾದ ಪ್ರೊ.ಟಿ. ಮುರುಗೇಶ್, ಡಿ. ಚಂದ್ರಪ್ಪ, ಮ್ಯಾನೇಜಿಂಗ್ ಟ್ರಸ್ಟಿ ಎಂ. ಸಂಕೇತ್ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!