ಸಮಸ್ಯೆಗಳ ಕಟ್ಟು ಬಿಚ್ಚಿಟ್ಟು ಹೆಸರಿಗೆ ಪಟ್ಟು

ಸಮಸ್ಯೆಗಳ ಕಟ್ಟು ಬಿಚ್ಚಿಟ್ಟು ಹೆಸರಿಗೆ ಪಟ್ಟು

ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ವಾರ್ಡ್ ಸಮಸ್ಯೆಗಳ ಅನಾವರಣ

ದಾವಣಗೆರೆ, ಅ.31- ಸುಮಾರು ಏಳು ತಿಂಗಳ ನಂತರ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ನೀರು, ಕಸ, ಬೀದಿ ನಾಯಿ, ಪೌರ ಕಾರ್ಮಿಕರ ಸಮಸ್ಯೆ, ಕಂದಾಯ ವಿಭಾಗದಲ್ಲಿ ಲಂಚಾವತಾರ ಹೀಗೆ ಅನೇಕ ವಿಷಯಗಳ ಕುರಿತು ಚರ್ಚೆಗಳು ನಡೆದವು. ಪಾಲಿಕೆ ಸದಸ್ಯರು ಪಕ್ಷಭೇದ ಮರೆತು ತಮ್ಮ ವಾರ್ಡುಗಳಲ್ಲಿನ ಸಮಸ್ಯೆಗಳನ್ನು ಅನಾವರಣಗೊಳಿಸಿದರು.

ಇದರ ಬೆನ್ನಲ್ಲೇ ಶಿವಪಾರ್ವತಿ ಬಡಾವಣೆ ಹಾಗೂ ಖಾಸಗಿ ಬಸ್ ನಿಲ್ದಾಣದ ಹೆಸರಿನ ವಿಷಯ ಕುರಿತು ಎರಡೂ ಪಕ್ಷದ ಸದಸ್ಯರು ಪರಸ್ಪರ ವಾಗ್ವಾದ ನಡೆಸಿದರು. ತಮ್ಮದೇ ಪಕ್ಷದ ಮುಖಂಡರ ಹೆಸರುಗಳಿಗೆ ಪಟ್ಟು ಹಿಡಿದು ಕುಳಿತ ಘಟನೆಯೂ ನಡೆಯಿತು.

ಬಿ.ಹೆಚ್. ವಿನಾಯಕ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ಮಾತಿನ ಕಾಳಗದಿಂದಲೇ ಆರಂಭವಾಯಿತು. 11 ಗಂಟೆಗೆ ಸಭೆ ನಿಗದಿಯಾಗಿತ್ತು. ಆಯುಕ್ತರು ಹಾಗೂ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಆಗಮಿಸಿದ್ದರು. ನಂತರ ಬಿಜೆಪಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ, ಕಾಂಗ್ರೆಸ್ ಸದಸ್ಯರು ಕಡಿಮೆ ಸಂಖ್ಯೆಯಲ್ಲಿ  ಆಗಮಿಸಿದರು. 

ಕೋರಂ ಕೊರತೆಯ ಮಾತುಗಳು ಕೇಳಿ ಬಂದವು. ಪಾಲಿಕೆ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ್, ಸಭೆಗೆ ಸಮಯಕ್ಕೆ ಸರಿಯಾಗಿ ಬಾರದ ಸದಸ್ಯರ ವಿರುದ್ಧ ಅಸಮಾಧಾನಗೊಂಡು, ತಡವಾಗಿ ಬರುವವರಿಗೆ ಅವಕಾಶ ನೀಡಬೇಡಿ ಎಂದಾಗ, ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಮಾತಿನ ಚಕಮಕಿಯ ನಡುವೆಯೇ ಕೋರಂ ಕೊರತೆ ನೀಗಿ 11.40ಕ್ಕೆ ಸಭೆ ಆರಂಭವಾಯಿತು.

ಸಮಸ್ಯೆಗಳ ಕುರಿತ ಚರ್ಚೆಗಾಗಿ 1 ಗಂಟೆ ಶೂನ್ಯ ಅವಧಿ ನೀಡಲಾಗಿತ್ತಾದರೂ, 2 ಗಂಟೆವರೆಗೂ ಚರ್ಚೆಗಳು ನಡೆದವು. ನಂತರವೇ ನಡಾವಳಿಕೆ ಪ್ರಕಾರ ಚರ್ಚೆಗಳು ಆರಂಭವಾದವು.

19ನೇ ವಾರ್ಡ್ ಸದಸ್ಯ ಶಿವ ಪ್ರಕಾಶ್ ಆರ್.ಎಲ್., ನಮ್ಮ ಗಮನಕ್ಕೆ ತಾರದೆಯೇ ರೈಲ್ವೇ ಗೇಟ್ ಬಳಿ ರಸ್ತೆ ನಿರ್ಮಾಣಕ್ಕೆ ಮುಂದಾಗಿರುವುದಕ್ಕೆ ಆಕ್ಷೇಪಿಸಿದರು. ಸಾರ್ವಜನಿಕರ ಒತ್ತಾಯಕ್ಕೆ ನಿರ್ಣಯಕ್ಕೆ ಬರಲಾಗಿದೆ. ಇನ್ನೂ ಅಪ್ರೂವಲ್ ಮಾಡಿಲ್ಲ. ಸಭೆಯಲ್ಲಿ ಬೇಡ ಎಂದರೆ ಪ್ರಸ್ತಾವನೆ ಕೈ ಬಿಡುವುದಾಗಿ ಆಯುಕ್ತೆ ರೇಣುಕಾ ಹೇಳಿದರು. ವಾರ್ಡ್‌ನಲ್ಲಿ ಶೌಚಾಲಯ ನಿರ್ಮಾಣ ಮಾಡಿದ ಕಾಮಗಾರಿಗೆ ಹಣ ಬಿಡಗಡೆ ಮಾಡಿಲ್ಲ ಎಂದು ಸದಸ್ಯ ಶಿವಪ್ರಕಾಶ್ ದೂರಿದರು.

ಉಮಾ ಪ್ರಕಾಶ್, ತಮ್ಮ ವಾರ್ಡ್‌ನ ಎರಡು ಕಾಮಗಾರಿ ರದ್ದು ಮಾಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಮರು ಟೆಂಡರ್‌ಗೆ ಎರಡು ವರ್ಷಗಳು ಬೇಕೇ? ಎಂದು ಪ್ರಶ್ನಿಸಿದರು. ಕೇವಲ 15 ಲಕ್ಷ ಅನುದಾನವನ್ನು ನನ್ನ ವಾರ್ಡ್‌ಗೆ ಕೊಡಲಾಗಿದೆ. ಯಾವ ಕೆಲಸವೂ ನಡೆಯದೇ ಜನರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ ಎಂದರು.

ಹಿರಿಯ ಸದಸ್ಯ ಚಮನ್ ಸಾಬ್, 50 ವರ್ಷಗಳ ಹಿಂದಿನ ಆಸ್ತಿಗಳನ್ನು ಇ-ಖಾತೆ ಮಾಡಿಸುವಾಗ ಏನಾದರೂ ದಾಖಲೆ ವ್ಯತ್ಯಾಸವಾಗಿದ್ದರೆ, ಲಕ್ಷಗಟ್ಟಲೆ ಲಂಚ ಕೇಳುತ್ತಾರೆ ಎಂದು ಆರೋಪಿಸಿದರು. ಕೆ.ಪ್ರಸನ್ನಕುಮಾರ್ ಮಾತನಾಡಿ, ಇ ಆಸ್ತಿ ಕುರಿತು ಜನರಲ್ಲಿ ಭಯ ತುಂಬಿದ್ದಾರೆ. 7 ದಿನದೊಳಗೆ ಇ-ಖಾತೆ ಮಾಡಿಕೊಡದಿದ್ರೆ ಕ್ರಮ ತೆಗೆದುಕೊಳ್ಳಿ ಎಂದರು. ಅರ್ಜಿ ನೀಡಿದಾಗ ಟಪಾಲು ವಿಭಾಗದಲ್ಲಿಯೇ ಎಲ್ಲಾ ದಾಖಲೆ ಪರಿಶೀಲಿಸಬೇಕು. ಮೂರ್ನಾಲ್ಕು ತಿಂಗಳು ಅಲೆದಾಡಿಸಬಾರದು ಎಂದು ನಾಗರಾಜ್ ಹೇಳಿದರು.

ಖಾಸಗಿ ಬಸ್ ನಿಲ್ದಾಣವನ್ನು ಸ್ಥಳಾಂತರಿಸುವ ಕುರಿತು ಪ್ರಸನ್ನಕುಮಾರ್ ಚರ್ಚಿಸಿದಾಗ, ಕಾಂಗ್ರೆಸ್ ಸದಸ್ಯರು ಬಸ್ ನಿಲ್ದಾಣ ಅವೈಜ್ಞಾನಿಕವಾಗಿದೆ ಎಂದರು. ಬಿಜೆಪಿ ಸದಸ್ಯರು 14 ಬಸ್ ನಿಲ್ಲಲು ಅವಕಾಶವಿದೆ. ಅವೈಜ್ಞಾನಿಕವಾಗಿಲ್ಲ ಎಂದು ಸಮರ್ಥಿಸಿಕೊಂಡರು.

ಸದಸ್ಯ ಶಿವಾನಂದ, ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಬಿ ಟೀಮ್ ರಚಿಸಿ ಸೂಕ್ತ ಮಾರ್ಗೋಪಾಯ ಕಂಡುಕೊಳ್ಳಬೇಕು. ಎಇಇ ತೀವ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ದೂರಿದರು. ಸದಸ್ಯ ಕೆ.ಎಂ. ವೀರೇಶ್, ಇಂಜಿನಿಯರ್ ಸೌಜನ್ಯದಿಂದ ವರ್ತಿಸುತ್ತಿಲ್ಲ. ಏನಾದರೂ ಪ್ರಶ್ನಿಸಿದರೆ ಹೊಡೆದಾಡಲು ಬರು ವಂತೆ ವರ್ತಿಸುತ್ತಾರೆ ಎಂದರು. ಸದಸ್ಯ ಎ.ನಾಗರಾಜ್, ಪಾಲಿ ಕೆಯ ಝೋನಲ್ ಆಫೀಸ್‌ಗಳಿಂದ ಸಾರ್ವಜನಿಕರಿಗೆ ಅನುಕೂ ಲವಾಗಿಲ್ಲ ಎಂದಾಗ, ಅಬ್ದುಲ್ ಲತೀಫ್ ದನಿಗೂಡಿಸಿದರು.

ಪಾಲಿಕೆಯಲ್ಲಿ ಮೇಯರ್ ಮಾತು ನಡೆಯುವುದಿಲ್ಲ. ಕಾಂಗ್ರೆಸ್ ಪರವಾದ ಕೆಲಸಗಳು ಮಾತ್ರ ಬೇಗ ಆಗುತ್ತವೆ ಎಂದು ಹೊರಗಿನಿಂದ ವರದಿಗಳು ಬರುತ್ತಿವೆ ಎಂದು ಅಜಯ್ ಕುಮಾರ್ ಹೇಳಿದಾಗ, ಎ.ನಾಗರಾಜ್ ಹಾಗೂ ಗಡಿಗುಡಾಳ್ ಮಂಜುನಾಥ್ ಆಕ್ಷೇಪಿಸಿದರು. ಸ್ಮಾರ್ಟ್ ಸಿಟಿಗೆ ನಾಮ ನಿರ್ದೇಶಿತ ಸದಸ್ಯರನ್ನು ನೇಮಿಸುವ ಕುರಿತು ಸುದೀರ್ಘ ಚರ್ಚೆ ನಡೆಯಿತು.

28 ಲಕ್ಷ ಬೆಸ್ಕಾಂ ಬಾಕಿ: ಬೆಸ್ಕಾಂ ನವರು 28 ಲಕ್ಷ ರೂ. ಪಾಲಿಕೆಗೆ ನೀಡಬೇಕಾದ ಬಾಕಿ ಉಳಿಸಿಕೊಂಡಿದ್ದಾರೆ.  ನಾವು  ವಿದ್ಯುತ್ ಬಿಲ್ ಕಟ್ಟುವುದು ತಡವಾದರೆ ದಂಡ ಹಾಕುತ್ತಾರೆ ಎಂದು ಆಯುಕ್ತೆ ರೇಣುಕಾ ಹೇಳಿದರು. ಮರದ ಕೊಂಬೆಗಳನ್ನು ಕಡಿದು ಸಾಗಿಸದ ಬೆಸ್ಕಾಂ ವಿರುದ್ಧ ಕ್ರಮ ತೆಗೆದುಕೊಳ್ಳುವ ಎಚ್ಚರಿಕೆ ನೀಡಲಾಯಿತು.

ಇಸ್ರೋಗೆ ಅಭಿನಂದನೆ: ಸಭೆಯ  ಆರಂಭದಲ್ಲಿ ಚಂದ್ರಯಾನ-3ರ ಯಶಸ್ಸಿಗೆ ಕಾರಣರಾದ ಇಸ್ರೋ ಸಂಸ್ಥೆಯ ಅಧಿಕಾರಿ-ಸಿಬ್ಬಂದಿಗಳಿಗೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚಪ್ಪಾಳೆ ಮೂಲಕ ಅಭಿನಂದಿಸಿ, ಅಭಿನಂದನಾ ಪತ್ರವನ್ನು ಇಸ್ರೋ ಮುಖ್ಯಸ್ಥರಿಗೆ ಕಳುಹಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಉಪ ಮೇಯರ್ ಯಶೋಧ ಹೆಗ್ಗಪ್ಪ, ಸ್ಥಾಯಿ ಸಮಿತಿ ಸದಸ್ಯರು, ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!