ಜಿಲ್ಲೆಯ ಮೂವರು ಸಾಧಕರು, ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿ

ಜಿಲ್ಲೆಯ ಮೂವರು ಸಾಧಕರು, ಸಂಘಕ್ಕೆ ರಾಜ್ಯೋತ್ಸವ ಪ್ರಶಸ್ತಿ

ದಾವಣಗೆರೆ, ಅ.31- ಜಿಲ್ಲೆಯ ಟಿ.ಶಿವಶಂಕರ್, ಶಿವಂಗಿ ಶಣ್ಮರಿ, ಕೆ.ರೂಪ್ಲಾನಾಯಕ್ ಹಾಗೂ ಮೌಲಾನಾ ಆಜಾದ್ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘಕ್ಕೆ ಈ ಬಾರಿಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ.

ಟಿ. ಶಿವಶಂಕರ್: ದಾವಣಗೆರೆ ಸರಸ್ವತಿ ನಗರ ಬಿ ಬ್ಲಾಕ್ ವಾಸಿ ಟಿ.ಶಿವಶಂಕರ್,  ಗೋಪುರ ಹಾಗೂ ಶಿಲ್ಪ ಗಳನ್ನು ನಿರ್ಮಿಸುವುದರಲ್ಲಿ ಪರಿಣಿತರು. ಇದನ್ನು ಕಾ ಯಕದ ಕ್ಷೇತ್ರವಾಗಿರಿಸಿಕೊಂಡು ಅಲೆಮಾರಿ ಜೀವನ ಸಾಗಿ ಸುತ್ತಿದ್ದಾರೆ. ಈವರೆಗೂ 400ಕ್ಕೂ ಹೆಚ್ಚು ದೇವಾಲಯಗಳ ಗೋಪಾರ ನಿರ್ಮಿಸಿದ್ದಾರೆ. 1988ರಷ್ಟು ಹಿಂದೆಯೇ ಹರಪನಹಳ್ಳಿ ತಾಲ್ಲೂಕು ಅರಸೀಕೆರೆಯ ಶ್ರೀ ಕೋಲಶಾಂತೇ ಶ್ವರ ವಿರಕ್ತಮಠದ 75 ಅಡಿ ಎತ್ತರದ ರಾಜಗೋಪುರ ನಿರ್ಮಿಸಿ, ಸಿಂಪಿಗ ಶ್ರೇಷ್ಠ ಬಿರುದು ಪಡೆದಿದ್ದಾರೆ.

ಶ್ರೀಮತಿ ಶಿವಂಗಿ ಶಣ್ಮರಿ : ಚನ್ನಗಿರಿ ತಾಲ್ಲೂಕು ಅಸ್ತಾಪನಹಳ್ಳಿ ಗ್ರಾಮದ ಶ್ರೀಮತಿ ಶಿವಂಗಿ ಶಣ್ಮರಿ ಅವರು ಹಕ್ಕಿಪಿಕ್ಕಿ ಬುಡಕಟ್ಟು ಪಂಗಡಕ್ಕೆ ಸೇರಿದ ಜಾನಪದ ಹಾಡುಗಾರ್ತಿ.  ಇವರಿಗೀಗ 95 ವರ್ಷ.

ಲಿಪಿಯಿಲ್ಲದ ಮರುಗು ಭಾಷೆಯಾದ ವಾಗ್ರಿಬೋಲಿ ಭಾಷೆಯಲ್ಲಿ, ತಲೆ ತಲಾಂತರದಿಂದ ಹಿರಿಯರ ಕಂಠದಲ್ಲಿ ಕಂಠಸ್ಥವಾಗಿಯೇ ಉಳಿದುಕೊಂಡು ಬಂದಿರುವ, ನೂರಾರು ಹಾಡುಗಳನ್ನು ಚಿಕ್ಕಂದಿನಿಂದಲೇ ಅನುಕರಿಸಿ, ಗೆಳತಿಯರೊಂದಿಗೆ ಹಂಚಿಕೊಂಡು ಬೆಳೆಸಿದವರು. 

ಹೀಗೆ ಮದುವೆ ಪದ, ಸೋಬಾನೆ ಪದ, ಹಿರಿದಲೆಗಳು ಬಾಳಿ ಬದುಕಿದ ಸಾಹಸಮಯ ಗಾಥೆಗಳನ್ನು ತೃಣವೂ ವಿಚಲಿತಗೊಳಿಸದೆ, ಒಂದೆರಡು ಬಾರಿ ಕೇಳಿದೊಡನೆಯೇ ಮನದಾಳದ ಪುಟಗಳಲ್ಲಿ ಬಂಧಿಸಿಟ್ಟುಕೊಂಡು ಯಥಾವತ್ ಪುನರುಚ್ಚರಿಸುವಲ್ಲಿ ನಿಸ್ಸೀಮರು.

ಕೇ.ರೂಪ್ಲಾನಾಯಕ್ : 105 ವರ್ಷದ ಕುಡಿನೀರ್ ಕಟ್ಟೆ ಗ್ರಾಮದ ರೂಪ್ಲಾನಾಯ್ಕ ಅವರು ಸಿವಿಲ್ ಇಂಜಿನಿಯರ್. ವಿವಿಧ ಜಿಲ್ಲೆಗಳಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದರು. ನಾಡಿನ ಸಂಸ್ಕೃತಿ ಪರಿಚಯವನ್ನು ಬಂಜಾರ ಜನಾಂಗಕ್ಕೆ ಪ್ರಚುರ ಪಡಿಸಲು ಶ್ರಮವಹಿಸಿದ್ದಾರೆ. ಗುರು ಶ್ರೀ ಸಂತ ಸೇವಾಲಾಲ್ ಕುರಿತ ಇತಿಹಾಸ, ಅವರು ಬೋಧಿಸಿದ ತತ್ವ, ಆದರ್ಶ ಬೋಧನೆ ಬಗ್ಗೆ ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ಪಡಿಸಿದ್ದರು. 

ಸೂರಗೊಂಡನಕೊಪ್ಪದಲ್ಲಿ ಸಂತ ಸೇವಾಲಾಲ್ ಮೂರ್ತಿ ಪ್ರತಿಷ್ಟಾಪಿಸಿ ದೇವಸ್ಥಾನಕ್ಕೆ ಅಭಿವೃದ್ಧಿ ಸಮಿತಿ ರಚಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದವರು.

ಮೌಲಾನಾ ಆಜಾದ್ ಸಮಾಜ ಕಲ್ಯಾಣ ಮತ್ತು ವಿದ್ಯಾಸಂಸ್ಥೆ:  ಮೌಲಾನಾ ಆಜಾದ್ ಸಮಾಜ ಕಲ್ಯಾಣ ಮತ್ತು ವಿದ್ಯಾಸಂಸ್ಥೆಯು ಸಿ.ಆರ್. ನಸೀರ್ ಅಹ್ಮದ್ ಅವರ ಮಾರ್ಗದರ್ಶನದಲ್ಲಿ ಸುಶಿಕ್ಷಿತ ಶಿಕ್ಷಣ ನೀಡುವಲ್ಲಿ ಪ್ರಗತಿ ಸಾಧಿಸಿದೆ. ಎರಡೂವರೆ ದಶಕಗಳ ಕಾಲ ನಿರಂತರ ವಿದ್ಯಾದಾನ ನೀಡಿದ ಈ ಸಂಸ್ಥೆ ನೂರಾರು ಮಕ್ಕಳಿಗೆ ಅಗತ್ಯ ಪರಿಕರ ನೀಡಿ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪೂರಕವಾಗಿ ಶ್ರಮಿಸುತ್ತಿದೆ. ಇದರೊಟ್ಟಿಗೆ ಮೌಲಾನಾ ಆಜಾದ್ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಾಂಸ್ಕೃತಿಕ ಸಂಘವನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಉಳಿದಂತೆ ನೆರೆಯ ಶಿವಮೊಗ್ಗದ ಎ.ಜಿ. ಚಿದಂಬರ್ ರಾವ್ ಜಂಬೆ ಹಾಗೂ ಚಿತ್ರದುರ್ಗದ ಪಿ.ತಿಪ್ಪೇಸ್ವಾಮಿ  ರಂಗಭೂಮಿ ಕ್ಷೇತ್ರದಲ್ಲಿ, ಸಾಹಿತ್ಯ ಕ್ಷೇತ್ರದಲ್ಲಿ ಹಾವೇರಿಯ ಸತೀಶ್ ಕುಲಕರ್ಣಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ.

error: Content is protected !!