ಜೈನ ಆಚಾರ್ಯ ಅಜಿತ್ ಶೇಖರ್ ಸೂರಿ
ದಾವಣಗೆರೆ, ಅ.30- ಯುವ ಪೀಳಿಗೆಯನ್ನು ಮಾನಸಿಕ ತೊಳ ಲಾಟ ಗಳಿಂದ ಹೊರ ತರಬೇ ಕೆಂಬ ಉದ್ದೇಶ ದಿಂದ `ರಿಫ್ರೆಶ್ ಯುವರ್ ಮೈಂಡ್’ ಪುಸ್ತಕ ರಚಿಸಲಾಗಿದೆ ಎಂದು ಕೃತಿಯ ಕರ್ತೃ ಜೈನ ಆಚಾರ್ಯ ಅಜಿತ್ ಶೇಖರ್ ಸೂರಿ ತಿಳಿಸಿದರು.
ನಗರದ ಚೌಕಿಪೇಟೆಯ ಜಿನ ಮಂದಿರದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಖಿನ್ನತೆ, ಕೋಪ, ಒತ್ತಡ, ನಕಾರಾತ್ಮಕ ಆಲೋಚನೆ ಸೇರಿದಂತೆ ನಾನಾ ಮಾನಸಿಕ ಸಮಸ್ಯೆಗಳಿಗೆ ಈ ಕೃತಿ ಉತ್ತಮ ಔಷಧವಾಗಿದೆ ಎಂದರು.
ಅನೇಕ ಬಾರಿ ಯುವಜನತೆ ತಮ್ಮ ಬಳಿ ಬಂದು ಮಾನಸಿಕ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳುತ್ತಿದ್ದರು. ಖಿನ್ನತೆ, ಒತ್ತಡ, ನಕಾರಾತ್ಮಕ ಭಾವನೆ, ಅತಿಯಾದ ಆಲೋಚನೆಯಿಂದ ಜೀವನದಲ್ಲಿ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವುದು ತಿಳಿದು, ಮಾನಸಿಕ ಸಮಸ್ಯೆಗಳಿಗೆ ಪರಿಹಾರ ನೀಡುವ ಉದ್ದೇಶ ದಿಂದ ಈ ಪುಸ್ತಕ ರಚಿಸಿರುವುದಾಗಿ ಅವರು ಹೇಳಿದರು.
ಪುಸ್ತಕ ಪರೀಕ್ಷೆ
`ರಿಫ್ರೆಶ್ ಯುವರ್ ಮೈಂಡ್’ ಕೃತಿಯನ್ನು ಖರೀದಿಸಿ ಓದಲು ಪ್ರೇರೇಪಿಸುವ ಉದ್ದೇಶದಿಂದ ಆನ್ಲೈನ್ ಪರೀಕ್ಷೆ ಇರಿಸಲಾಗಿದೆ. ಡಿಸೆಂಬರ್ 1 ರಿಂದ 15 ರವರೆಗೆ ಪರೀಕ್ಷೆ ನಡೆಯಲಿದೆ. ಪ್ರಥಮ ಬಹುಮಾನ ಪಡೆದವರಿಗೆ 51 ಸಾವಿರ ನಗದನ್ನು ನೀಡಲಾಗುವುದು. 200 ಸಮಾಧಾನಕರ ಬಹುಮಾನ ವಿತರಿಸಲಾಗುವುದು. ಪುಸ್ತಕಗಳ ಪ್ರತಿಗಳನ್ನು ನಗರದ ಸುಪಾರ್ಶ್ವನಾಥ ಜೈನ ಮಂದಿರದಲ್ಲಿ ಪಡೆಯಬಹುದು ಎಂದು ಹೇಳಿದರು.
ಕನ್ನಡ, ಗುಜರಾತಿ, ಇಂಗ್ಲಿಷ್, ಹಿಂದಿ, ತೆಲುಗು ಮತ್ತು ಮರಾಠಿ ಸೇರಿದಂತೆ, ಆರು ಭಾಷೆಯಲ್ಲಿ ಪುಸ್ತಕ ಪ್ರಕಟಗೊಂಡಿದೆ. ಕನ್ನಡದಲ್ಲಿ ಪ್ರಕಟವಾದ ಪುಸ್ತಕದ ಒಂದು ಲಕ್ಷ ಪ್ರತಿಗಳು ಈಗಾಗಲೇ ಮಾರಾಟವಾಗಿವೆ ಎಂದು ಹೇಳಿದರು.
ಫಲವೃದ್ಧಿಶೇಖರ ಮಾತನಾಡಿ, ಆಚಾರ್ಯ ಅಜಿತ್ ಶೇಖರ್ ಸೂರಿ ಅವರು 22ನೇ ವಯಸ್ಸಿನಲ್ಲಿಯೇ ಸಿಎ ಪದವಿ ಬಿಟ್ಟು ಲೋಕ ಕಲ್ಯಾಣದಲ್ಲಿ ನಿರತರಾದರು. ತಾವು ಪಡೆದ ಜ್ಞಾನ, ಸಮಾಜದ ಒಳಿತಿಗೂ ಬಳಕೆಯಾಗಬೇಕೆಂಬ ಉದ್ದೇಶದಿಂದ ಪುಸ್ತಕಗಳ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. `ರಿಫ್ರೆಶ್ ಯುವರ್ ಮೈಂಡ್’ ಅವರ 101ನೇ ಕೃತಿಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನರೇಂದ್ರಕುಮಾರ್, ರಮೇಶ್ ಕುಮಾರ್, ಭರತ್‌ಕುಮಾರ್, ಕಿಶೋರ್‌ಕುಮಾರ್, ರಾಜು ಭಂಡಾರಿ ಇದ್ದರು.