ಮಾಗನೂರು ಬಸಪ್ಪ ದಾವಣಗೆರೆ ಪಾಲಿಗೆ ‘ಬಸವಣ್ಣ’

ಮಾಗನೂರು ಬಸಪ್ಪ ದಾವಣಗೆರೆ ಪಾಲಿಗೆ ‘ಬಸವಣ್ಣ’

ಶಿರಹಟ್ಟಿ-ಬಾಳೇಹೊಸೂರು ಭಾವೈಕ್ಯತಾ ಸಂಸ್ಥಾನದ ಜಗದ್ಗುರು ಶ್ರೀ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಬಣ್ಣನೆ

ದಾವಣಗೆರೆ, ಅ. 30- ಮಾಗನೂರು ಬಸಪ್ಪ ಹೆಸರಿಗೆ ತಕ್ಕ ಯೋಗ್ಯ ವ್ಯಕ್ತಿ. ದಾವಣಗೆರೆ ಪಾಲಿಗೆ `ಬಸವಣ್ಣ’ ಆಗಿದ್ರು ಎಂಬ ಭಾವನೆ ತಮ್ಮದು ಎಂದು ಶಿರಹಟ್ಟಿ-ಬಾಳೇ ಹೊಸೂರು ಭಾವೈಕ್ಯತಾ ಸಂಸ್ಥಾನದ ಜಗದ್ಗುರು ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮೀಜಿ ಹೇಳಿದರು.

ನಗರದ ತರಳಬಾಳು ಬಡಾವಣೆಯ ಶಿವಕುಮಾರಸ್ವಾಮಿ ಮಹಾಮಂಟಪದ ಆವರಣದಲ್ಲಿ ಏರ್ಪಡಿಸಿದ್ದ ಆರೂಢದಾಸೋಹಿ, ದಾನ ಚಿಂತಾಮಣಿ, ಮಹಾಶರಣ ಲಿಂ. ಮಾಗನೂರು ಬಸಪ್ಪ ಅವರ 28 ನೇ ಹಾಗೂ ಲಿಂ. ಸರ್ವಮಂಗಳಮ್ಮ ಮಾಗನೂರು ಬಸಪ್ಪ ಅವರ 15 ನೇ ವಾರ್ಷಿಕ ಪುಣ್ಯಸ್ಮರಣೆ ಹಾಗೂ ಸರ್ವ ಶರಣ ಸಮ್ಮೇಳನದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ದಲಿತ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸುವ ಮೂಲಕ ವಸತಿ ಮತ್ತು ಶಿಕ್ಷಣವನ್ನು ಕೊಟ್ಟ ಶ್ರೇಯಸ್ಸು ಮಾ ಗನೂರು ಬಸಪ್ಪ ಅವರಿಗೆ ಸಲ್ಲುತ್ತದೆ. ವ್ಯಾಪಾರದ ಜೊತೆ ಜೊತೆಗೆ ಸಮಾಜ ಸೇವಾ ಮನೋಭಾವನೆ ಯನ್ನೂ ರೂಢಿಸಿಕೊಂಡ ಬಸಪ್ಪ ಅವರು ಶಿಕ್ಷಣ, ಸಹಕಾರಿ, ವಾಣಿಜ್ಯ ಕ್ಷೇತ್ರಗಳಲ್ಲೂ ಗಣನೀಯ ಸೇವೆ ಸಲ್ಲಿಸಿದವರು ಎಂದು ಬಣ್ಣಿಸಿದರು.

ಎಲ್ಲರೂ ಓದುವಂತಹ ಪುಸ್ತಕಗಳನ್ನು ಬರೆಯಬೇಕು. ಆ ಬರವಣಿಗೆ ಶಕ್ತಿ ಇಲ್ಲದಿದ್ದರೂ ಎಲ್ಲರೂ ನಮ್ಮನ್ನು ಕುರಿತು ಬರೆಯುವಂತಹ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂದರು.

ಬಸಪ್ಪನವರು ಮಹಾ ಆದರ್ಶ ವ್ಯಕ್ತಿಯಾಗಿ ದ್ದರು. ಅವರ ಆದರ್ಶಗಳನ್ನು ಪಾಲಿಸಬೇಕು. ಇಲ್ಲಿ ಸೇರಿರುವ ಜನಸ್ತೋಮ ನೋಡಿದರೆ ಮಾಗನೂರು ಬಸಪ್ಪ ಅವರ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ ಎಂದರು.

ಸಭೆಗಳು ಪರಿವರ್ತನೆಗೆ ಕಾರಣವಾಗಬೇಕು. ಕೆಲವೊಬ್ಬ ವ್ಯಕ್ತಿಗಳಾದರೂ ಬದಲಾದರೆ ಇಂತಹ ಕಾರ್ಯಕ್ರಮ ಮಾಡಿದ್ದಕ್ಕೂ ಸಾರ್ಥಕ ಬರುತ್ತದೆ ಎಂದು ಹೇಳಿದರು. ಮಕ್ಕಳು ದೊಡ್ಡವರಾಗಬೇಕು, ಸಮಾಜದಲ್ಲಿ ಸಾಧಕ ರಾಗಬೇಕು ಎಂದಾದರೆ ಕಷ್ಟಗಳನ್ನು ಅನುಭವಿಸಲೇ ಬೇಕು. ಕಷ್ಟಕ್ಕೆ ಒಳಗಾಗುವಂತೆ ತಂದೆ-ತಾಯಿಗಳು ನೋಡಿಕೊಳ್ಳಬೇಕು ಎಂಬುದು ನನ್ನ ವೈಯಕ್ತಿಕ ಅನುಭವ ಮತ್ತು ನನ್ನ ಅಧ್ಯಯನ ಎಂದರು.

ಯಾವ ವ್ಯಕ್ತಿ ವಿಪರೀತ ತೊಂದರೆ ಅನುಭವಿಸಿದವರು ಮನುಷ್ಯನಾಗಿ ಇರಲು ಸಾಧ್ಯ. ನಾ ಹುಟ್ಟಿದ ಮೇಲೆ ಹುಟ್ಟಿದ ಮನೆಗಾದರೂ ಉಪಯೋಗವಾದರೆ ಸಾಕು. ಹೇಗೆ ಮನೆತನ ಬದಲಾಗಿದೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.

ಇಂದಿನ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಬಳಕೆಯಿಂದಾಗಿ ಮೌಲ್ಯಗಳು ಕ್ಷೀಣಿಸಿ, ನೈತಿಕ ಅಧ:ಪತನಕ್ಕೆ ಒಳಗಾಗುತ್ತಿರುವುದು ವಿಷಾದದ ಸಂಗತಿ ಎಂದರು.

ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಮಾಗನೂರು ಬಸಪ್ಪ ಅವರ ಸಮಾಜ ಸೇವಾ ಕಾರ್ಯಗಳು ಅನನ್ಯವಾದವುಗಳು. ಛಲವಾದಿ, ಭೋವಿ, ನಾಯಕ ಸಮಾಜದ ವಿದ್ಯಾರ್ಥಿ ನಿಲಯಗಳ ಸ್ಥಾಪನೆಗೆ ಹಾಗೂ ಸಹಕಾರಿ ಕ್ಷೇತ್ರದಲ್ಲೂ ಗಣನೀಯ ಸೇವೆ ಮತ್ತು ನಗರಸಭೆ ಸದಸ್ಯರಾಗಿ ನಗರದ ಅಭಿವೃದ್ಧಿಗೆ ಶ್ರಮಿಸಿದ್ದಾರೆಂದು ಸ್ಮರಿಸಿದರು.

ನಡೆಯಲ್ಲಿ ತೋರಿದ ನಯ, ವಿನಯ, ವ್ಯವಹಾರದಲ್ಲಿನ ಪಾರದರ್ಶಕತೆ, ಪ್ರಾಮಾಣಿಕತೆ ನನಗೆ ಪ್ರೇರಣೆಯಾಯಿತು. ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷರಾಗಿ ಸಮಾಜವನ್ನು ಸದೃಢವಾಗಿರುವಂತೆ ಮಾಡಿದ ಕೀರ್ತಿ ಮಾಗನೂರು ಬಸಪ್ಪನವರದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರೂ, ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷರಾದ ಹೆಚ್.ಆರ್. ಬಸವರಾಜಪ್ಪ ಮಾತನಾಡಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಅರ್ಥಿಕ ವಾಗಿ ಇಡೀ ದಾವಣಗೆೆರೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಪ್ರಯತ್ನವನ್ನು ಮಾಗನೂರು ಬಸಪ್ಪ ಮಾಡಿದ್ದರು. ಶರಣ ತತ್ವಗಳನ್ನು ಚಾಚೂ ತಪ್ಪದೇ ಪಾಲಿಸುತ್ತಾ ಬಂದು ಇತರರಿಗೆ ಮಾದರಿಯಾಗಿದ್ದರು ಎಂದು ಬಣ್ಣಿಸಿದರು.

ಗುರುಶಾಂತೇಶ್ವರ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣ ಕಾಮಗಾರಿ ಅಪೂರ್ಣಗೊಂಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಅವರು, ಇನ್ನೂ ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ವಚನಗಳನ್ನು ಎಲ್ಲಾ ಭಾಷೆಗಳಿಗೂ ತರ್ಜುಮೆ ಮಾಡಿ, ಆಧುನಿಕ ತಂತ್ರಜ್ಞಾನಕ್ಕೆ ಅಳವಡಿಸಿ, ಕೇವಲ ಬೆರಳ ತುದಿಯಲ್ಲಿಯೇ ಎನ್ನುವಂತೆ ಮಾಡಿದ್ದು ಶ್ಲಾಘನೀಯ. ಅದರಂತೆ ಕೆರೆಗಳ ನಿರ್ಮಾಣದ ಮೂಲಕ ಬೆಳೆಗಳಿಗೆ ನೀರುಣಿಸುವ ಕಾರ್ಯವನ್ನು ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಪ್ರತಿಯೊಬ್ಬರೂ ಕೂಡ ಹಣ ಮಾಡುವ ಧಾವಂತದಲ್ಲಿದ್ದು, ಮಕ್ಕಳನ್ನು ಹೇಗೆ ಬೆಳೆಸಬೇಕೆಂಬ ಆಲೋಚನೆಯನ್ನೂ ಸಹ ಮಾಡುತ್ತಿಲ್ಲ. ಕೇವಲ ಡಾಕ್ಟರ್, ಇಂಜಿನಿಯರ್ ಮಾಡುವ ಯೋಜನೆಯಲ್ಲಿರುವ ಪೋಷಕರು ನನ್ನ ಮಗ ರೈತನಾಗಬೇಕೆಂಬ ಇಚ್ಛೆಯನ್ನು ಯಾರೂ ಹೊಂದಿಲ್ಲ ಎಂದು ಹೇಳಿದರು.

ಸನ್ಮಾನಕ್ಕೆ ಭಾಜನರಾದ ನಿವೃತ್ತ ಐಎಎಸ್ ಅಧಿಕಾರಿ ಕೆ. ಅಮರನಾರಾಯಣ, ಲೀಡ್ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಎನ್.ಟಿ. ಯರಿಸ್ವಾಮಿ, ಹವ್ಯಾಸಿ ಪಕ್ಷಿ ವೀಕ್ಷಕರೂ, ಪ್ರಾಧ್ಯಾಪಕರಾದ ಡಾ. ಶಿಶುಪಾಲ, ನೇತ್ರ ತಜ್ಞ ಡಾ. ಜಿ.ಎಸ್. ಉಮೇಶ್, ಬಾತಿ ಪ್ರಗತಿ ಪರ ರೈತ ಹೆಚ್.ಎಂ. ನಾಗರಾಜ್ ಮಾಗನೂರು ಬಸಪ್ಪ ಅವರ ಸ್ಮರಣೆ ಮಾಡಿದರು.

ಶ್ರೀಶೈಲ ಎಜುಕೇಶನ್ ಟ್ರಸ್ಟ್ ಖಜಾಂಚಿ ಜಿ.ಎಸ್. ಅನಿತ್ ಕುಮಾರ್, ನುಡಿ ನಮನ ಸಲ್ಲಿಸಿದ ನಿವೃತ್ತ ಪ್ರಾಧ್ಯಾಪಕ ಡಾ. ಗಂಗಾಧರಯ್ಯ ಹಿರೇಮಠ, ಮಾಗನೂರು ಸಂಗಮೇಶ್ವರ ಗೌಡ್ರು, ಚಂದ್ರಶೇಖರ ಗೌಡ್ರು ಸೇರಿದಂತೆ ಮಾಗನೂರು ಬಸಪ್ಪ ಪ್ರತಿಷ್ಠಾನ, ಪಬ್ಲಿಕ್ ಟ್ರಸ್ಟ್ ಪದಾಧಿಕಾರಿಗಳು, ಕುಟುಂಬ ವರ್ಗದವರು ಉಪಸ್ಥಿತರಿದ್ದರು. 

error: Content is protected !!