ದಾವಣಗೆರೆ, ಅ.29- ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿನ ಟೆನ್ನಿಸ್ ಕ್ರೀಡಾಂಗಣದಲ್ಲಿ ನಡೆದ ಐಟಿಎಫ್ ದಾವಣಗೆರೆ ಓಪನ್ ಟೆನ್ನಿಸ್ ಟೂರ್ನಿಯಲ್ಲಿ ಬಾಗ್ಡಾನ್ ಬೊಬ್ರಾವ್ ಚಾಂಪಿಯನ್ ಶಿಪ್ ಮುಡಿಗೇರಿಸಿ ಕೊಂಡರು.
ಭಾನುವಾರ ಬೆಳಿಗ್ಗೆ 10.30ಕ್ಕೆ ಆರಂಭವಾದ ಅಂತಿಮ ಹಣಾಹಣಿಯಲ್ಲಿ ಅಮೆರಿಕಾದ ನಿಕ್ ಚಾಪೆಲ್ ವಿರುದ್ಧ ಬಾಗ್ಡಾನ್ 6-3, 7-6 ನೇರ ಸೆಟ್ ಗಳ ಜಯಗಳಿಸುವ ಮೂಲಕ ಆರನೇ ಐಟಿಎಫ್ ಪ್ರಶಸ್ತಿ ಪಡೆದರು.
ಸೆಮಿಫೈನಲ್ ನಲ್ಲಿ ಬೊಬ್ರಾವ್ ಭಾರತದ ರಾಮಕುಮಾರ್ ರಾಮನಾಥನ್ ವಿರುದ್ಧ 6-4, 7-6 ರಲ್ಲಿ ಗೆದ್ದಿದ್ದರು.
ಅಮೆರಿಕಾದ ನಿಕ್ ಚಾಪೆಲ್ ಭಾರತದ ವರೇ ಆದ ನಿಕಿ ಕಲಿಯಂಡ ಪೂಣಚ್ಚ ವಿರುದ್ಧ 6-3, 6-2 ರಲ್ಲಿ ಗೆಲುವು ಸಾಧಿಸಿದ್ದರು.
ಡಬಲ್ ಜೋಡಿಯಾಗಿರುವ ನಿಕ್ ಚಾಪೆಲ್ ಮತ್ತು ಬೊಬ್ರಾವ್ ನಡುವೆ ಪ್ರಶಸ್ತಿಗಾಗಿ ರೋಚಕ ಹಣಾಹಣಿ ನಡೆಯಿತು. ಪಾಯಿಂಟ್ ಗಾಗಿ ಇಬ್ಬರೂ ಬಲದ ಹೋರಾಟ ನಡೆಸಿದರು. ಅಂತಿಮವಾಗಿ ಮೊದಲ ಸೆಟ್ ನ್ನು 6-3 ರಲ್ಲಿ ಬೊಬ್ರಾವ್ ಗೆದ್ದರು.
ಎರಡನೇ ಸೆಟ್ ನಲ್ಲಿ ನಿಕ್ ಚಾಪೆಲ್ ನಿರೀಕ್ಷೆಗೂ ಮೀರಿದ ಹೋರಾಟ ನಡೆಸಿದರು. ಪಂದ್ಯ ಟ್ರೈಬೇಕರ್ ವರೆಗೆ ಸಾಗಿತು. ಕೊನೆಗೆ ಬೊಬ್ರಾವ್ 7-6 ರಲ್ಲಿ ಸೆಟ್ ಜೊತೆಗೆ ಪಂದ್ಯ ಗೆದ್ದರು. 1.38 ಗಂಟೆಗಳ ರೋಚಕ ಪೈಪೋಟಿ ಟೆನ್ನಿಸ್ ಅಭಿಮಾನಿಗಳ ಮನಸೂರೆಗೊಂಡಿತು.