ಶೇ.100 ರಷ್ಟು ಸಾಕ್ಷರತೆ ಸಾಧಿಸುವ ಸಂಕಲ್ಪ

ಶೇ.100 ರಷ್ಟು ಸಾಕ್ಷರತೆ ಸಾಧಿಸುವ ಸಂಕಲ್ಪ

ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ತರುವ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು. ಮುಂದಿನ ವರ್ಷ ಬದಲಾವಣೆಗಳನ್ನು ಗಮನಿಸಬಹುದು.

– ಮಧು ಬಂಗಾರಪ್ಪ, ಶಿಕ್ಷಣ ಸಚಿವರು

ಹೊನ್ನಾಳಿ, ಅ.29- ಕೇರಳ ಸೇರಿದಂತೆ ಕೆಲ ರಾಜ್ಯಗಳಲ್ಲಿರುವಂತೆ ರಾಜ್ಯದಲ್ಲಿಯೂ ಕೂಡ ಶೇ. 100ರಷ್ಟು ಸಾಕ್ಷರತಾ ಮಟ್ಟವನ್ನು ಸಾಧಿಸುವ ಸಂಕಲ್ಪವಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕಾರ್ಯಪ್ರವೃತ್ತವಾಗಲಿದ್ದು, ಶಾಲೆ ಬಿಟ್ಟ ಎಲ್ಲಾ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕರೆ ತರುವ ಕಾರ್ಯಕ್ರಮಗಳನ್ನು ಆಂದೋಲನದ ರೀತಿಯಲ್ಲಿ ನಡೆಸಲಾಗುವುದು ಎಂದು ಪ್ರೌಢ ಮತ್ತು ಪ್ರಾಥಮಿಕ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. 

ಮಾದನಬಾವಿಯಲ್ಲಿ ನಡೆಯುತ್ತಿರುವ ದಸರಾ ಬನ್ನಿ ಕೃಷಿ ಮೇಳ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು, ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಉಪಾಧ್ಯಕ್ಷ ಹೆಚ್.ಎ.ಉಮಾಪತಿಯವರ ಮನೆಯಲ್ಲಿ ಮಾಜಿ ಮುಖ್ಯಮಂತ್ರಿ ದಿ. ಎಸ್‌. ಬಂಗಾರಪ್ಪ ಅವರ ಹುಟ್ಟು ಹಬ್ಬವನ್ನು ಆಚರಿಸಿದ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಭೇಟಿ ನೀಡಿ ಸುದ್ದಿಗಾರರನ್ನು ಕುರಿತು ಮಾತನಾಡಿದರು. 

ಈಗಾಗಲೇ 9 ಸಾವಿರ ಶಿಕ್ಷಕರ ನೇಮಕ ಮಾಡಿ ಕೊಳ್ಳಲಾಗಿದೆ. ಇನ್ನು ಹೈದರಾಬಾದ್ ಕರ್ನಾಟಕ ಭಾಗದ 4 ಸಾವಿರ ಶಿಕ್ಷಕರ ನೇಮಕಾತಿ ಈಗಾಗಲೇ ನ್ಯಾಯಾಲಯದಲ್ಲಿದ್ದು, ಇತ್ಯರ್ಥವಾದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಾಜ್ಯದಲ್ಲಿ ಸುಮಾರು 76 ಸಾವಿರ ಶಾಲೆಗಳಿವೆ. ತಾವು ಅಧಿಕಾರಕ್ಕೆ ಬಂದು 150 ದಿನಗಳಾಗಿದ್ದು, ಮುಂದಿನ ದಿನಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣದ ವ್ಯವಸ್ಥೆ ಮಾಡಲಾಗುವುದು. ಜೊತೆಗೆ ದೇಶದಲ್ಲಿ ಪ್ರಥಮ ಎನ್ನುವಂತೆ ವರ್ಷದಲ್ಲಿ 3 ಪರೀಕ್ಷೆಗಳನ್ನು ನಡೆಸಲಾಗುವುದು. ಪಠ್ಯ ಪುಸ್ತಕಗಳ ಗಾತ್ರ ಕಡಿಮೆ ಮಾಡುವುದು, ಉತ್ತಮ ಶಾಲಾ ವಾತಾವರಣ ಒದಗಿಸುವುದು ಕೂಡ ಸರ್ಕಾರದ ಉದ್ಧೇಶವಾಗಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಶಾಸಕ ಡಿ.ಜಿ.ಶಾಂತನಗೌಡ, ಮಾಜಿ ಶಾಸಕ ಡಾ.ಡಿ.ಬಿ.ಗಂಗಪ್ಪ, ಕಾಂಗ್ರೆಸ್ ಯುವ ನಾಯಕ ಎಚ್‌.ಎಸ್‌.ರಂಜಿತ,  ಇನ್‌ಸೈಟ್ ಸಂಸ್ಥೆಯ ಅಧ್ಯಕ್ಷ ವಿನಯ್‍ಕುಮಾರ್‌ ಹಾಗು ಬಿಇಓ ನಂಜರಾಜ, ಬಿಆರ್‍ಸಿ ತಿಪ್ಪೇಶಪ್ಪ, ಅಕ್ಷರ ದಾಸೋಹ ಅಧಿಕಾರಿ ರುದ್ರಪ್ಪ ಶಿಕ್ಷಣ ಸಚಿವರನ್ನು ಅಭಿನಂದಿಸಿ, ಗೌರವಿಸಿದರು. 

error: Content is protected !!